ಚಿತ್ರ ವಿಮರ್ಶೆಗಳುಬಾಲ್ಕನಿಯಿಂದಸುದ್ದಿಗಳು

ಹದ ಮುದವಾದ ಹಾಸ್ಯದೊಂದಿಗೆ ಬಂದವನು ‘ಬ್ರಹ್ಮಚಾರಿ’

ರೇಟಿಂಗ್: 4/5

ನಿರ್ದೇಶಕ: ಚಂದ್ರಮೋಹನ್

ನಿರ್ಮಾಪಕ: ಉದಯ್ ಕೆ ಮೆಹ್ತಾ

ಕಲಾವಿದರು: ಸತೀಶ್ ನೀನಾಸಂ, ಅದಿತಿ ಪ್ರಭುದೇವ, ಅಚ್ಯುತ್ ಕುಮಾರ್, ದತ್ತಣ್ಣ, ಶಿವರಾಜ್ ಕೆ ಆರ್ ಪೇಟೆ, ಅಶೋಕ್ ಮತ್ತು ಇತರರು.

ಕೊಂಚವೇ ಆಚೀಚೆ ಆದರೂ ಆಶ್ಲೀಲತೆಯ ಆರೋಪಕ್ಕೀಡಾಗಬಹುದಾದ ದೃಶ್ಯಗಳನ್ನು ಬರೀ ಹಾಸ್ಯಕ್ಕೆ ರೂಪಾಂತರಿಸುವುದು ನಿಜಕ್ಕೂ ಕಲಾತ್ಮಕ ಕೆಲಸ. ಅದನ್ನು ನಿರ್ದೇಶಕ ಚಂದ್ರಮೋಹನ್ ‘ಬ್ರಹ್ಮಚಾರಿ’ ಚಿತ್ರದ ಮೂಲಕ ಮಾಡಿದ್ದಾರೆ. ಈ ಸಿನಿಮಾ ಟೀಸರ್ ಮತ್ತು ಟ್ರೇಲರ್ ನೊಂದಿಗೆ ಈ ಕಥೆಯ ಕೇಂದ್ರಬಿಂದುವೇನು ಎಂಬುದರ ಸ್ಪಷ್ಟ ಸುಳಿವನ್ನು ನೀಡಿತ್ತು. ಆದರೆ ಕಥಾ ಸಾರದ ಬಗ್ಗೆ ಒಂದು ಗೌಪ್ಯತೆಯನ್ನು ಸದಾ ಕಾಯ್ದುಕೊಳ್ಳಲಾಗಿತ್ತು. ಅದೆಲ್ಲವೂ ಇದೀಗ ಎಲ್ಲ ವರ್ಗದ ಪ್ರೇಕ್ಷಕರೂ ಥ್ರಿಲ್ ಆಗುವಂತೆ ಅನಾವರಣಗೊಂಡಿದೆ.

ಕೆಲವು ಹುಡುಗರು ಹುಡುಗಿಯರ ಸಾಮಿಪ್ಯಕ್ಕಾಗಿ ಹಂಬಲಿಸುತ್ತಾ ಹುಡುಗಿಯರಿಗೆ ಹತ್ತಿರವಾಗಲು ಹರಸಾಹಸ ಪಡುತ್ತಾರೆ. ಮತ್ತೆ ಕೆಲವೇ ಕೆಲ ಹುಡುಗರು ಹುಡುಗೀರೇ ಹತ್ತಿರಾದರೂ ಜಿರಲೆ ಕಂಡಂತೆ ಬೆಚ್ಚಿ ಬಿದ್ದು ದೂರ ಸರಿಯುತ್ತಾರೆ. ಇಲ್ಲಿರುವುದು ಹಾಗೆಯೇ.

ಹುಡುಗಿಯರನ್ನು ಮಡಿವಂತಿಕೆಯಿಂದಲೇ ದೂರವಿಡುತ್ತಾ ಬಂದ ನಾಯಕ ಮದುವೆಯಾದ ನಂತರದಲ್ಲಿ ಪಡುವ ಮುಜುಗರ, ಪಡಿಪಾಟಲುಗಳ ಕಥೆಯೇ ಈ ಚಿತ್ರದ ಕೇಂದ್ರ ಬಿಂದು. ಆದರೆ ಅದನ್ನು ಒಂದರೆಕ್ಷಣವೂ ಬಿಗುವು ಸಡಿಲಿಸದ ಗಟ್ಟಿ ಕಥೆ ಮತ್ತು ಹಾಸ್ಯದೊಂದಿಗೆ, ಗೊತ್ತೇ ಆಗದಂಥಾ ಟ್ವಿಸ್ಟುಗಳೊಂದಿಗೆ ನಿರ್ದೇಶಕರು ಪರಿಣಾಮಕಾರಿಯಾಗಿಯೇ ಕಟ್ಟಿ ಕೊಟ್ಟಿದ್ದಾರೆ. ಕೊಂಚವೇ ಗೆರೆ ದಾಟಿದ್ದರೂ ಮುಜುಗರಕ್ಕಿಡಾಗುವಂಥಾ ದೃಶ್ಯಗಳನ್ನೂ ಸಹ ಸಭ್ಯತೆಯ ಹಾದಿಯಲ್ಲಿಯೇ, ಭರ್ಜರಿ ಹಾಸ್ಯದ ಮೂಲಕ ಕಟ್ಟಿ ಕೊಟ್ಟಿರುವುದು ಈ ಚಿತ್ರದ ನಿಜವಾದ ಪ್ಲಸ್ ಪಾಯಿಂಟು.

ಇಲ್ಲಿ ನೀನಾಸಂ ಸತೀಶ್ ರಾಮು ಎಂಬ ಪಾತ್ರವನ್ನು ನಿರ್ವಹಿಸಿದರೆ ಅದಿತಿ ಪ್ರಭುದೇವ, ಸುನಿತಾ ಕೃಷ್ಣಮೂರ್ತಿ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ರಾಮು ಹೆತ್ತವರ ಮುಖವನ್ನೂ ನೋಡದೆ ಅಜ್ಜಿಯ ಆಶ್ರಯದಲ್ಲಿ ಬೆಳೆದ ಹುಡುಗ. ಶಾಲಾ ದಿನಗಳಲ್ಲಿಯೇ ಈತನಿಗೆ ಹುಡುಗೀರೆಂದರೆ ಅಲರ್ಜಿ. ತನ್ನ ಸುತ್ತ ಹುಡುಗಿಯರಿಗಾಗಿ ತಿಪ್ಪರಲಾಗ ಹಾಕುವ ಗೆಳೆಯರಿದ್ದರೂ ರಾಮು ಮಾತ್ರ ಹುಡುಗಿಯರೇ ಬಳಿ ಬಂದರೂ ಕೊಸರಿಕೊಳ್ಳುತ್ತಾನೆ. ಶ್ರೀರಾಮಚಂದ್ರನ ಪರಮ ಭಕ್ತನಾದ ಈತ ರಾಮನ ಆದರ್ಶಗಳನ್ನು ಪರಿಪಾಲಿಸುತ್ತಾ ಬ್ರಹ್ಮಚಾರಿಯಾಗುವ ಪ್ರತಿಜ್ಞೆಯನ್ನೂ ಕೈಗೊಳ್ಳುತ್ತಾನೆ.

ಬೆಳೆದು ದೊಡ್ಡವನಾದ ನಂತರವೂ ಅದೇ ಮನಸ್ಥಿತಿ ರೂಢಿಸಿಕೊಳ್ಳುವ ರಾಮುಗೆ ಚೆಂದದ ಹುಡುಗಿ ಸುನೀತಾ ಎದುರಾಗ್ತಾಳೆ. ಆ ಸ್ನೇಹ ಮದುವೆಯ ಹಂತ ತಲುಪಿಸುತ್ತೆ. ಈ ಜೋಡಿ ಪ್ರಸ್ಥದ ಕೋಣೆ ತಲುಪುತ್ತಲೇ ಈ ಕಥೆ ಮನೋರಂಜನೆಯ ಉತ್ತಂಗ ಸೇರಿಕೊಳ್ಳುತ್ತದೆ.

ಈ ಕಥೆಯನ್ನು ಎಲ್ಲಿಯೂ ಮುಜುಗರವಾಗದಂತೆ, ನಗುವಿಗೆ ತತ್ವಾರವಾಗದಂತೆ ಕಟ್ಟಿ ಕೊಡುವಲ್ಲಿ ನಿರ್ದೇಶಕ ಚಂದ್ರಮೋಹನ್ ಗೆದ್ದಿದ್ದಾರೆ. ನೀನಾಸಂ ಸತೀಶ್ ಮತ್ತು ಅದಿತಿ ಪ್ರಭುದೇವ ಒಬ್ಬರಿಗೊಬ್ಬರು ಜಿದ್ದಿಗೆ ಬಿದ್ದಂತೆ ನಟಿಸಿದ್ದಾರೆ. ಇಡೀ ಸಿನಿಮಾ ಉದಯ್ ಮೆಹ್ತಾರಿಂದಾಗಿ ಅದ್ದೂರಿಯಾಗಿ ಮೂಡಿ ಬಂದಿದೆ. ‘ಉಳಿದ ತಾರಾಗಣವೂ ನಟನೆಯಲ್ಲಿ ಸಂಪೂರ್ಣ ಸಾಥ್ ನೀಡಿದೆ. ಛಾಯಾಗ್ರಹಣ, ಸಂಗೀತಗಳೆಲ್ಲವೂ ಬ್ರಹ್ಮಚಾರಿ’ಯ ನಗೆಹಬ್ಬವನ್ನು ಜೋರಾಗಿಸಿದೆ. ಇದು ಮನಸಾರೆ ನಕ್ಕು ನಲಿಯುವ ಅವಕಾಶಕ್ಕಾಗಿ ಎಲ್ಲರೂ ನೋಡಲೇ ಬೇಕಾದ ಚಿತ್ರ.

ಯಾರಿಗೂ ಇಲ್ಲದ ಬ್ಲಡ್ ಗ್ರೂಪ್ ರಣ್ವೀರ್ ಸಿಂಗ್ ನಲ್ಲಿ ಕಂಡು ಬಂದಿದೆಯಂತೆ !?

#Brahmachari #BrahmachariMovie #BrahmachariReview #SathishNinasam ‍#KannadaSuddigalu

Tags