ಚಿತ್ರ ವಿಮರ್ಶೆಗಳುಬಾಲ್ಕನಿಯಿಂದಸುದ್ದಿಗಳು

ಅದ್ಭುತ ಕಥೆಗಳೊಂದಿಗೆ ಕಾಡುವ ‘ಕಥಾ ಸಂಗಮ’

ರೇಟಿಂಗ್ 4/5

ಕಲಾವಿದರು: ರಾಜ್ ಬಿ ಶೆಟ್ಟಿ, ಅಮೃತಾ ನಾಯ್ಕ್, ಕಿಶೋರ್, ಯಜ್ಞಾ ಶೆಟ್ಟಿ, ಪ್ರಕಾಶ್ ಬೆಳವಾಡಿ, ಸೌಮ್ಯ, ಪ್ರಮೋದ್ ಶೆಟ್ಟಿ, ರಿಷಬ್ ಶೆಟ್ಟಿ, ಹರಿಪ್ರಿಯಾ ಹಾಗೂ ಇತರರು

ನಿರ್ಮಾಪಕರು: ಕೆ.ಎಚ್ ಪ್ರಕಾಶ್, ಪ್ರದೀಪ್ ಎನ್ ಆರ್ ರಿಷಬ್ ಶೆಟ್ಟಿ

ಓರ್ವ ನಿರ್ದೇಶಕರಾಗಿ ಎಂಥಾ ಕಥೆಗಳನ್ನಾದರೂ ಜನಪ್ರಿಯ ಮಾದರಿಗೆ ಒಗ್ಗಿಸಿಕೊಂಡು ದೃಶ್ಯ ಕಟ್ಟುವ ಛಾತಿ ಹೊಂದಿರುವವರು ನಿರ್ದೇಶಕ ರಿಷಬ್ ಶೆಟ್ಟಿ. ಅವರು ಏಳು ಮಂದಿ ಪ್ರತಿಭಾವಂತ ನಿರ್ದೇಶಕರ ತಂಡದೊಂದಿಗೆ ಅಖಾಡಕ್ಕಿಳಿದು ‘ಕಥಾ ಸಂಗಮ’ ಎಂಬ ಚಿತ್ರವನ್ನು ರೂಪಿಸಲು ಮುಂದಾದಾಗಲೇ ಅದರತ್ತ ಎಲ್ಲ ಕುತೂಹಲದ ದೃಷ್ಟಿ ಹೊರಳಿಕೊಂಡಿತ್ತು. ಆ ನಂತರದಲ್ಲಿ ಈ ಬಗ್ಗೆ ಹೊರ ಬೀಳಲಾರಂಭಿಸಿದ್ದ ಚೇತೋಹಾರಿ ಸಂಗತಿಗಳೆಲ್ಲವೂ ಎಲ್ಲ ವರ್ಗದ ಪ್ರೇಕ್ಷಕರೂ ಕೂಡಾ ‘ಕಥಾ ಸಂಗಮ’ದತ್ತ ಆಕರ್ಷಿತರಾಗುವಂತೆ ಮಾಡಿ ಬಿಟ್ಟಿತ್ತು.

ಇಂತಹ ಸಕಾರಾತ್ಮಕ ವಾತಾವರಣದಲ್ಲಿಯೇ ಈ ಚಿತ್ರವೀಗ ತೆರೆ ಕಂಡಿದೆ. ಇದನ್ನು ನೋಡಿದ ಎಲ್ಲರೂ ಕೂಡಾ ಈ ಹಿಂದೆಂದೂ ನೋಡಿರದಂಥಾ ಒಂದೊಳ್ಳೆ ಪ್ರಯತ್ನವನ್ನು ಕಂಡು ಮೆಚ್ಚಿ ಕೊಂಡಾಡಲಾರಂಭಿಸಿದ್ದಾರೆ. ಅಲ್ಲಿಗೆ ರಿಷಬ್ ಶೆಟ್ಟಿ ಸೂತ್ರಧಾರಿಕೆಯ ಈ ಪ್ರಯೋಗ ರೋಮಾಂಚಕವಾಗಿಯೇ ಗೆಲುವು ಕಂಡಂತಾಗಿದೆ.

ಈ ಚಿತ್ರ ಏಳು ಕಥೆಗಳ ಮಹಾ ಸಂಗಮದಂತೆ ಮೂಡಿ ಬಂದಿದೆ. ರೈನ್‍ ಬೋ ಲ್ಯಾಂಡ್ ಎಂಬ ಕಥಾನಕದ ಮೂಲಕ. ಅಪ್ಪ ಮಗಳ ಬಾಂಧವ್ಯದ ಮುದ ನೀಡುವ ಕಥೆಯೊಂದಿಗೆ ತೆರೆದುಕೊಳ್ಳುವ ಈ ಸಿನಿಮಾದಲ್ಲಿ  ಸತ್ಯಕಥಾ ಪ್ರಸಂಗ, ಗಿರ್‍ಗಿಟ್ಲೆ, ಉತ್ತರ, ಪಡುವಾರಹಳ್ಳಿ, ಸಾಗರ ಸಂಗಮ್ಮ ಮತ್ತು ಲಚ್ಚವ್ವ ಎಂಬ ಕಥೆಗಳ ಮೂಲಕ ಸಾಗುತ್ತದೆ.

ಈ ಒಂದೊಂದು ಕಥೆಗಳು, ಅದರಲ್ಲಿನ ಪಾತ್ರಗಳನ್ನು ಕಟ್ಟಿ ಕೊಟ್ಟಿರುವ ರೀತಿಗಳೆಲ್ಲವೂ ಹೊಸತನದಿಂದ ಮೇಳೈಸಿವೆ. ಒಂದಕ್ಕೊಂದು ಸಂಬಂಧವೇ ಇಲ್ಲದ ಏಳು ಕಥೆಗಳು ಇಲ್ಲಿದ್ದರೂ ಬಿಡಿ ಬಿಡಿ ಕಥೆಗಳನ್ನು ನೋಡಿದ ಭಾವ ಕಾಡುವುದಿಲ್ಲ. ಏಳು ವಿಭಿನ್ನ ಕಥೆಗಳನ್ನು ನೋಡಿದರೂ ಕೂಡಾ ಕಡೆಯದಾಗಿ ಒಂದೊಳ್ಳೆ ಸಿನಿಮಾ ನೀಡಿದಂಥಾ ಅನುಭೂತಿಯನ್ನು ಕೊಡ ಮಾಡುವುದೇ ಈ ಸಿನಿಮಾದ ನಿಜವಾದ ಸಾರ್ಥಕತೆ ಎಂದರೂ ತಪ್ಪಿಲ್ಲ.

ಇದು ರಿಷಬ್ ಶೆಟ್ಟಿ ಅವರ ಕ್ರಿಯೇಟಿವ್ ಆಲೋಚನೆಯಿಂದಲೇ ಸಾಧ್ಯವಾದಂಥಾ ಅಚ್ಚರಿ. ಈಗಲೇ ನಾಲಕ್ಕು ದಶಕಗಳ ಹಿಂದೆ ಚಿತ್ರ ಬ್ರಹ್ಮ ಪುಟ್ಟಣ್ಣ ಕಣಗಾಲ್ ‘ಕಥಾ ಸಂಗಮ’ವೆಂಬ ದೃಶ್ಯ ಕಾವ್ಯವನ್ನು ರೂಪಿಸಿದ್ದರು. ಈ ಮೂಲಕವೇ ಬೇರೆ ಭಾಷೆಗಳ ಮಂದಿಯೂ ಕೂಡಾ ಕನ್ನಡ ಚಿತ್ರರಂಗದತ್ತ ಕಣ್ಣರಳಿಸಿ ನೋಡುವಂತೆ ಮಾಡಿದ್ದರು. ಅದೇ ಸ್ಫೂರ್ತಿಯಿಂದ ರಿಷಬ್ ಈ ‘ಕಥಾ ಸಂಗಮ’ವನ್ನು ಅತ್ಯಂತ ಪರಿಣಾಮಕಾರಿಯಾಗಿ ರೂಪಿಸಿದ್ದಾರೆ.

ಇಲ್ಲಿ ಏಳು ಮಂದಿ ಯುವ ಪ್ರತಿಭಾವಂತ ನಿರ್ದೇಶಕರು ಏಳು ಕಥೆಗಳ ಮೂಲಕ ಏಳು ಲೋಕಗಳನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟಿದ್ದಾರೆ. ಇದರ ಸೂತ್ರ ಹಿಡಿದ ರಿಷಬ್ ಶೆಟ್ಟಿ ಎಲ್ಲವನ್ನೂ ಸಮರ್ಥವಾಗಿಯೇ ನಿರ್ವಹಿಸಿದ್ದಾರೆ.

ಇಲ್ಲಿನ ಏಳು ಕಥೆಗಳನ್ನು ಏಳು ಮಂದಿ ನಿರ್ದೇಶಕರುಗಳು ರೂಪಿಸಿರುವ ರೀತಿಯೇ ಎಲ್ಲರಲ್ಲಿಯೂ ಅಚ್ಚರಿ ಹುಟ್ಟಿಸುತ್ತದೆ. ಅದರಲ್ಲಿನ ಪ್ರತೀ ಪಾತ್ರಗಳನ್ನು ರೂಪಿಸಿರುವ ರೀತಿ ಕೂಡಾ ಮಜವಾಗಿದೆ. ಆ ಪಾತ್ರಗಳಲ್ಲಿ ರಿಷಬ್ ಶೆಟ್ಟಿ, ಪ್ರಕಾಶ್ ಬೆಳವಾಡಿ, ಹರಿಪ್ರಿಯಾ, ಯಜ್ಞಾ ಶೆಟ್ಟಿ, ಹರಿ ಸಮಷ್ಠಿ, ಅವಿನಾಶ್, ಪ್ರಮೋದ್ ಶೆಟ್ಟಿ, ಬಾಲಾಜಿ ಮನೋಹರ್ ಮುಂತಾದವರು ಸಮರ್ಥವಾಗಿಯೇ ನಿಭಾಯಿಸಿದ್ದಾರೆ.

ಇಲ್ಲಿನ ಪ್ರತೀ ಕಥೆ ಮತ್ತು ಪಾತ್ರಗಳೂ ಕೂಡಾ ಥೇಟರಿನಿಂದ  ಹೊರ ಬಂದ ಮೇಲೆಯೂ ಕಾಡುತ್ತವೆ. ಒಂದು ಸಿನಿಮಾ ಸಾರ್ಥಕತೆ ಕಾಣುವುದು ಇಂಥಾದ್ದರಲ್ಲಿಯೇ. ‘ಕಥಾ ಸಂಗಮ’ ಎಂಬುದೊಂದು ಚೆಂದದ ಪ್ರಯೋಗ. ಇದನ್ನು ನೋಡುವ ಸುಯೋಗವನ್ನು ಮಿಸ್ ಮಾಡಿಕೊಳ್ಳಬೇಡಿ.

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಬಾಲಿವುಡ್ ಸುಲ್ತಾನ್

#RishbShetty #KathaSangama #KannadaMovie #KannadaMovieReview

Tags