ಸುದ್ದಿಗಳು

ಕನ್ನಡ ಚಿತ್ರರಂಗದಲ್ಲೊಂದು ವಿಭಿನ್ನ ಪ್ರಯತ್ನ…!!!

ನೂರು ಜನ ನಿರ್ದೇಶಕರು ಸೇರಿ ನಿರ್ದೇಶನ ಮಾಡುತ್ತಿರುವ ಕನ್ನಡದ ವಿಶಿಷ್ಟ ಚಿತ್ರ

ಈಗಾಗಲೇ ಚಂದನವನದಲ್ಲಿ ಅನೇಕ ದಾಖಲೆಗಳು ಆಗಿ ಹೋಗಿವೆ. ಅಂತಹ ಸಾಲಿನಲ್ಲಿ ಮತ್ತೊಂದು ಚಿತ್ರವು ಸೇರ್ಪಡೆಗೊಳ್ಳಲು ಸಿದ್ದತೆ ನಡೆಸಿದೆ.

ಬೆಂಗಳೂರು, ಆ. 22: ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಬೆಂಬಲದೊಂದಿಗೆ ನಿರ್ದೇಶಕ ಸುನೀಲ್ ಹುಬ್ಬಳ್ಳಿಯವರು ಹೊಸ ದಾಖಲೆಯನ್ನು ಮಾಡಲು ಹೊರಟಿದ್ದಾರೆ. ಒಟ್ಟು ನೂರು ಜನ ನಿರ್ದೇಶಕರು ಸೇರಿಕೊಂಡು ಒಂದು ಚಿತ್ರವನ್ನು ನಿರ್ದೇಶನ ಮಾಡುವ ಮೂಲಕ ವಿಶಿಷ್ಟ ದಾಖಲೆಯನ್ನು ಬರೆಯುವುದಕ್ಕೆ ಸಿದ್ದತೆ ನಡೆಸಿಕೊಳ್ಳುತ್ತಿದ್ದಾರೆ.

ಪ್ರೊಡಕ್ಷನ್ ನಂಬರ್ 1

‘ಪ್ರಪಂಚದಲ್ಲಿ ಮೊಟ್ಟ ಮೊದಲ ಬಾರಿಗೆ 100 ಜನ ನಿರ್ದೇಶಕರು ಸೇರಿ ನಿರ್ದೇಶಿಸುತ್ತಿರುವ ವಿಭಿನ್ನ ಪ್ರಯತ್ನದ ಮೊದಲ ಚಿತ್ರಕ್ಕೆ ನಿರ್ದೇಶಕರ ತಂಡ ಸಜ್ಜಾಗಿದೆ. ವಿಶ್ವದಾಖಲೆ ಸೃಷ್ಟಿಸಲು ಹೊರಟಿರುವ ನಮ್ಮ ಈ ಚಿತ್ರತಂಡಕ್ಕೆ ಎಲ್ಲಾ ಅಸಮಾನ್ಯ ಶ್ರೀಮಂತ ಕನ್ನಡಿಗರ ಸಹಕಾರ, ಆಶೀರ್ವಾದವಿರಲಿ’ ಎಂದು ‘ಪ್ರೊಡಕ್ಷನ್ ನಂಬರ್ 1’ ಹೆಸರಿನ ಚಿತ್ರತಂಡವು ಹೇಳಿಕೊಂಡಿದೆ.

ದಾಖಲೆಯ ಸಿನಿಮಾಗಳು

ಈ ಹಿಂದೆ ನಟ-ನಿರ್ದೇಶಕ ದಿ. ಶಂಕರ್ ನಾಗ್ ಅವರ ಅಭಿನಯದಲ್ಲಿ ಮೂಡಿ ಬಂದಿದ್ದ ‘ಇದು ಸಾಧ್ಯ’ ಚಿತ್ರವು 24 ಘಂಟೆಗಳಲ್ಲಿ ಚಿತ್ರೀತವಾಗಿತ್ತು. ನಂತರ ಬಂದಿದ್ದ ಶಿವಣ್ಣ ಅಭಿನಯದ ‘ಸುಗ್ರೀವ’ ಚಿತ್ರವು ಕೇವಲ 18 ಘಂಟೆಗಳಲ್ಲಿ ತಯಾರಿಗೊಂಡು ದಾಖಲೆ ನಿರ್ಮಿಸಿತ್ತು. ಇವೆಲ್ಲದರೊಂದಿಗೆ ನಿರ್ದೇಶಕ ಎಸ್. ನಾರಾಯಣ್ ಅವರು ‘ಯಕ್ಷ’ ಚಿತ್ರವನ್ನು ಸಿಂಗಲ್ ಟೇಕ್ ನಲ್ಲಿಯೇ ನಿರ್ಮಿಸಿದ್ದರು. ಇದೇ ರೀತಿಯ ದಾಖಲೆಯನ್ನು ಹೆಸರಿಡದ ಈ ಚಿತ್ರವು ಸಹ ಮಾಡಲು ಹೊರಟಿದೆ.

ಚಿತ್ರದ ಬಗ್ಗೆ

ಈ ಹಿಂದೆ ‘ಪಾರು-ಐಲವ್ ಯೂ’ ಚಿತ್ರವನ್ನು ನಿರ್ದೇಶನ ಮಾಡಿದ್ದ ಸುನೀಲ್ ಹುಬ್ಬಳ್ಳಿ ಈ ಚಿತ್ರದ ಪ್ರಧಾನ ನಿರ್ದೇಶಕರಾಗಿದ್ದು, ಚಿತ್ರಕ್ಕೆ ‘ಕೊಟ್ಲಲ್ಲಪ್ಪೋ ಕೈ’ ಚಿತ್ರದ ಧನುಶ್ ನಾಯಕರಾಗಿ ಅಭಿನಯಿಸುತ್ತಿದ್ದಾರೆ. ಇದೀಗ ಇಂತಹದೊಂದು ದಾಖಲೆಯ ಚಿತ್ರ ಅತೀ ಶೀಘ್ರದಲ್ಲಿ ಮೂಡಿ ಬರಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

Tags

Related Articles