ಸುದ್ದಿಗಳು

ಹಿರಿಯ ನಟ ಬಾಲಕೃಷ್ಣ ರವರ ಜನುಮದಿನದ ಸಂಭ್ರಮ

ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ಕಲಾವಿದರಲ್ಲಿ ಹಿರಿಯ ನಟ ದಿ. ಬಾಲಕೃಷ್ಣ ಅವರೂ ಸಹ ಒಬ್ಬರು. ಅಂದಿನ ಕಾಲದಲ್ಲಿ ಅವರ ಪಾತ್ರಗಳಿಲ್ಲದೇ ಸಿನಿಮಾಗಳು ತಯಾರಾಗುತ್ತಿರಲಿಲ್ಲ ಎಂದೇ ಹೇಳಬಹುದು.

ನಾಟಕ ಕಂಪನಿಯ ಗೇಟು ಕಾಯುವುದು, ಬೋರ್ಡು ಬರೆಯುವುದು, ಪೋಸ್ಟರ್ ಅಂಟಿಸುವುದು ಹೀಗೆ ಆರಂಭವಾಯಿತು ಬಾಲಣ್ಣನವರ ವೃತ್ತಿ ಜೀವನ. ಮುಂದೆ ರಂಗಭೂಮಿಯ ನಟನೆ ಅವರ ಪಾಲಿಗೆ ಬಂತು. ನಂತರ  ಚಿತ್ರರಂಗಕ್ಕೆ ಬಂದು ನಟನೆಯಲ್ಲಿ ತಮ್ಮದೇ ಆದಂತ ಛಾಪನ್ನು ಮೂಡಿಸಿದರು.

1943ರಲ್ಲಿ ‘ರಾಧಾರಮಣ’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಬಾಲಣ್ಣ 500ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದರು. ಹಾಸ್ಯ ನಟ, ಖಳ ನಟ, ಪೋಷಕ ನಟ ಹೀಗೆ ಬಾಲಣ್ಣ ಹಲವು ಬಗೆಯ ವಿವಿಧ ಅವತಾರಗಳನ್ನು ತಾಳಿದರು.

ವಿಶೇಷವೆಂದರೆ ಅಂದಿನ ದಿನಗಳಲ್ಲಿ ರಾಜ್ ಕುಮಾರ್, ಬಾಲಣ್ಣ, ಜಿ.ವಿ. ಅಯ್ಯರ್ ಮತ್ತು ನರಸಿಂಹರಾಜು ಒಟ್ಟಿಗೆ ಗುಬ್ಬಿ ಕಂಪನಿಯಲ್ಲಿ ಇದ್ದು, ಬಹುಶಃ ಒಂದೇ ಸಮಯದಲ್ಲಿ ಚಿತ್ರರಂಗಕ್ಕೂ ಬಂದರು. ಈ ನಾಲ್ವರು ಒಟ್ಟಿಗೆ ಸೇರಿ ‘ರಣಧೀರ ಕಂಠೀರವ’ ನಿರ್ಮಿಸಿ, ಸಿನಿಮಾ ನಿರ್ಮಾಣ ಎಂದರೆ ಅತೀ ಕಷ್ಟ ಎನ್ನುವ ಕಾಲದಲ್ಲಿ ದೊಡ್ಡ ಸಾಹಸ ಮೆರೆದರು.

ನವೆಂಬರ್ 2, 1911ರಂದು ಅರಸೀಕೆರೆಯಲ್ಲಿ ಜನ್ಮತಾಳಿದ ಬಾಲಣ್ಣನವರು  ಜುಲೈ 19, 1995ರಂದು ನಿಧನರಾದರು. ಈಗ ಅವರು ದೈಹಿಕವಾಗಿ ಇರದಿದ್ದರೂ ಮಾನಸಿಕವಾಗಿ ಅಭಿಮಾನಿಗಳ ಮನಸ್ಸಿನಲ್ಲಿದ್ದಾರೆ. ಇವರ ಜನುಮದಿನಕ್ಕೆ ಎಲ್ಲರೂ ಇವರನ್ನು ನೆನಪಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

ಹೊಸ ಅವತಾರದಲ್ಲಿ ‘ರಾಧಾ ಮಿಸ್’ ಶ್ವೇತಾ ಪ್ರಸಾದ್

#KannadaMovie #OldActor #Balakrishna #BalakrishnaBirthday #SandalwoodMovies  ‍#kannadaSuddigalu

Tags