ಚಿತ್ರ ವಿಮರ್ಶೆಗಳುಬಾಲ್ಕನಿಯಿಂದಸುದ್ದಿಗಳು

ಬಾಲ್ಕನಿ ನ್ಯೂಸ್ ಚಿತ್ರ ವಿಮರ್ಶೆ: ಮನದ ರಂಗಸ್ಥಳಕ್ಕೆ ಲಗ್ಗೆಯಿಡುವ ‘ರಂಗನಾಯಕಿ’

ಚಿತ್ರ : ರಂಗನಾಯಕಿ

ಕಲಾವಿದರು: ಎಂ.ಜಿ ಶ್ರೀನಿವಾಸ್, ತ್ರಿವಿಕ್ರಮ್, ಅದಿತಿ ಪ್ರಭುದೇವ, ಸುಚೇಂದ್ರ ಪ್ರಸಾದ್ ಹಾಗೂ ಇತರರು

ನಿರ್ದೇಶನ : ದಯಾಳ್ ಪದ್ಮನಾಭನ್

ರೇಟಿಂಗ್ : 4/5

ದಯಾಳ್ ಪದ್ಮನಾಭನ್ ನಿರ್ದೇಶನದ ‘ರಂಗನಾಯಕಿ’ ಚಿತ್ರ ನಾನಾ ದಿಕ್ಕುಗಳಿಂದ ಪ್ರೇಕ್ಷಕರ ಚಿತ್ರ ಸೆಳೆದುಕೊಂಡಿತ್ತು. ಈ ಸಿನಿಮಾ ಗೋವಾ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್‍ ಗೆ ಆಯ್ಕೆಯಾದ ಮೇಲಂತೂ ರಂಗನಾಯಕಿಯ ಬಗೆಗಿನ ನಿರೀಕ್ಷೆ ಮತ್ತಷ್ಟು ತೀವ್ರತೆ ಪಡೆದುಕೊಂಡಿತ್ತು.

 

ದಯಾಳ್ ಸಿನಿಮಾ ಎಂದ ಮೇಲೆ ಅಲ್ಲೊಂದು ಕುತೂಹಲದ ಹಾಜರಿ ಇದ್ದೇ ಇರುತ್ತದೆ. ಆದರೆ ರಂಗನಾಯಕಿಯ ವಿಚಾರದಲ್ಲಿ ಅದರ ತೀವ್ರತೆ ಹಿಂದೆಂದಿಗಿಂತಲೂ ಹೆಚ್ಚೇ ಇತ್ತು. ಅದೆಲ್ಲದಕ್ಕೆ ಪೂರಕವಾಗಿ ಈ ಸಿನಿಮಾ ಇದೀಗ ಬಿಡುಗಡೆಯಾಗಿದೆ. ಹೀಗೆ ಬಂದಿರುವ ‘ರಂಗನಾಯಕಿ’ ಸೀದಾ ಪ್ರೇಕ್ಷಕರ ಮನಸಿಗೇ ಲಗ್ಗೆಯಿಡುವಂತೆ ಮೂಡಿ ಬಂದಿದ್ದಾಳೆ.

ಬರಿಗಣ್ಣಿಗೆ ಕಾಣಿಸದ, ಸಂವೇದನಾಶೀಲ ಮನಸುಗಳಿಗಲ್ಲದೇ ಬೇರ್ಯಾರಿಗೂ ಕಾಣಿಸದಂಥಾ ಕಥೆಗಳಿಗೆ ಕಣ್ಭಣಾಗೋದರಲ್ಲಿ ನಿರ್ದೇಶಕ ದಯಾಳ್ ಪದ್ಮನಾಭನ್ ಮೊದಲಿಗರು. ಈ ಹಿಂದೆ ಅವರು ನಿರ್ದೇಶನದ ಚಿತ್ರಗಳು ಈ ಮಾತಿಗೆ ಸಾಕ್ಷಿಯೆಂಬಂತಿವೆ. ಅವರು ನಿರ್ಭಯಾ ಪ್ರಕರಣವನ್ನು ಬೇಸ್ ಆಗಿಟ್ಟುಕೊಂಡು ಈ ಸಿನಿಮಾ ನಿರ್ದೇಶನ ಮಾಡುವುದಾಗಿ ಹೇಳಿಕೊಂಡಾಗ ಎಲ್ಲರೂ ಸಹಜವಾಗಿಯೇ ಅಚ್ಚರಿಗೊಂಡಿದ್ದರು. ಅದು ಅಷ್ಟೊಂದು ಸೂಕ್ಷ್ಮವಾದ ವಿಚಾರವಾದ್ದರಿಂದ ಅದನ್ನು ಹೇಗೆ ನಿರ್ವಹಿಸಿರಬಹುದೆಂಬ ಕುತೂಹಲ ಎಲ್ಲರಲ್ಲಿಯೂ ಇದ್ದೇ ಇತ್ತು. ಆದರೆ ಈ ಕಥೆಯನ್ನು ದಯಾಳ್ ಪರಿಭಾವಿಸಿರುವ ರೀತಿಯೇ ಭಿನ್ನವೆಂಬುದು ಈ ಸಿನಿಮಾ ನೋಡಿದ ಯಾರಿಗಾದರೂ ಅನ್ನಿಸದಿರಲು ಸಾಧ್ಯವಿಲ್ಲ. ಅದುವೇ ‘ರಂಗನಾಯಕಿ’ಯ ಗೆಲುವಿನ ಗುಟ್ಟೂ ಹೌದು.

ಇಲ್ಲಿ ಅದಿತಿ ಪ್ರಭುದೇವ ಅತ್ಯಾಚಾರಕ್ಕೀಡಾದ ಹೆಣ್ಣೊಬ್ಬಳ ಪಾತ್ರಕ್ಕೆ ಜೀವ ತುಂಬಿರುವ  ರೀತಿಯೇ ಬೆರಗಾಗಿಸುವಂತಿದೆ. ಈಕೆ ಅನಾಥ ಹುಡುಗಿ. ಆದರೆ ಅದನ್ನು ಕೊರಗಾಗಿಸಿಕೊಳ್ಳದೆ ಶಕ್ತಿಯೆಂಬಂತೆ ಒಗ್ಗಿಸಿಕೊಂಡು ಸುಂದರ ಬದುಕು ಕಟ್ಟಿ ಕೊಂಡಿರುತ್ತಾಳೆ. ಸಂಗೀತ ಶಿಕ್ಷಕಿಯಾಗಿದ್ದುಕೊಂಡು ಲವಲವಿಕೆಯ ಸ್ವಭಾವದ ಈಕೆಗೆ ಹುಡುಗನೋರ್ವ ಮನಸೋತು ಇನ್ನೇನು ಅದು ಮದುವೆಯ ಹೊಸ್ತಿಲಲ್ಲಿರುತ್ತದೆ. ಅಷ್ಟರಲ್ಲಿಯೇ ಅತ್ಯಾಚಾರದಂಥಾ ಆಘಾತ ಆಕೆಗೆ ಸಿಡಿಲಿನಂತೆ ಅಪ್ಪಳಿಸುತ್ತದೆ. ಆ ನಂತರದಲ್ಲಿ ಅದುವರೆಗೆ ಆಕೆಯ ಮುಂದಿದ್ದ ಚಿತ್ರಣಗಳೆಲ್ಲವೂ ಅದಲು ಬದಲಾಗುತ್ತದೆ.

ಆ ನಂತರದಲ್ಲಿಯೇ ಅಸಲೀ ಕಥೆ ತೆರೆದುಕೊಳ್ಳುತ್ತದೆ. ಆ ಮೂಲಕವೇ ದಯಾಳ್ ಪದ್ಮನಾಭನ್ ನಿರ್ದೇಶಕನಾಗಿ ತಮ್ಮ ತಾಕತ್ತೇನೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಒಂದರೆ ಕ್ಷಣವೂ ಬೋರು ಹೊಡೆಸದಂತೆ, ಪ್ರತೀ ದೃಶ್ಯಗಳೂ ಎದೆಗೇ ನಾಟಿಕೊಳ್ಳುವಂತೆ ದಯಾಳ್ ಈ ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರೆ.

ನಾಯಕಿ ಅದಿತಿ ಪ್ರಭುದೇವ್ ಅವರಂತೂ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಳ್ಳುವಷ್ಟ ಸಶಕ್ತವಾಗಿ ನಟಿಸಿದ್ದಾರೆ. ತ್ರಿವಿಕ್ರಂ, ಶ್ರೀನಿ, ಸುಚೇಂದ್ರ ಪ್ರಸಾದ್, ಚಂದ್ರಚೂಡ್ ಸೇರಿದಂತೆ ಎಲ್ಲರ ನಟನೆಯೂ ಅಮೋಘವಾಗಿದೆ. ಈ ಚಿತ್ರ ನೋಡಿದ ಪ್ರತಿಯೊಬ್ಬರೂ ಇದನ್ನು ನೋಡಲೇಬೇಕೆಂದು ಬೇರೆಯವರಿಗೂ ಶಿಫಾರಸ್ಸು ಮಾಡುವಂತೆ ಮೂಡಿ ಬಂದಿದೆ.

ಬ್ಯುಸಿನೆಸ್ ಮ್ಯಾನ್ ನನ್ನು ಮದುವೆಯಾಗ್ತಾರಂತೆ ಕಾಜಲ್

#Ranganayaki  #RanganayakiMovie #RanganayakiReview #Movie review #SandalwoodMovies  ‍#kannadaSuddigalu

Tags