ಸುದ್ದಿಗಳು

‘ಕಪಟ ನಾಟಕ ಪಾತ್ರಧಾರಿ’ಯ ಹಾರರ್ ಮ್ಯಾಟರ್…!

ಸಿನಿಮಾವನ್ನು ಎಲ್ಲ ವರ್ಗದವರಿಗೂ ಇಷ್ಟವಾಗುವಂತೆ ಕಟ್ಟಿ ಕೊಡಬೇಕೆಂಬುದು ಅನೇಕ ನಿರ್ದೇಶಕರ ಕನಸು. ಆದರೆ ಒಂದು ಕಥೆ, ಸೀಮಿತ ಅವಧಿಯಲ್ಲಿ ಎಲ್ಲವನ್ನೂ ಬೆರೆಸಲು ಹೋದರೆ ಕಲಸುಮೇಲೋಗರವಾದೀತೆಂಬ ಭಯ ಎಲ್ಲರಲ್ಲಿಯೂ ಇದ್ದೇ ಇದೆ. ಆದರೆ ಕಥೆ ಕಟ್ಟುವ ಕಾಲದಲ್ಲಿಯೇ ಅಂಥಾ ಎಚ್ಚರ ವಹಿಸಿದ್ದ ಕ್ರಿಶ್ ‘ಕಪಟ ನಾಟಕ ಪಾತ್ರಧಾರಿ’ಯಲ್ಲಿ ಅದನ್ನು ಸಾಧ್ಯವಾಗಿಸಿದ್ದಾರಂತೆ. ಆದ್ದರಿಂದಲೇ ಈ ಕಥೆ ಸಸ್ಪೆನ್ಸ್ ಥ್ರಿಲ್ಲರ್, ಲವ್ ಸೇರಿದಂತೆ ನಾನಾ ಅಂಶಗಳೊಂದಿಗೆ ರೆಡಿಯಾಗಿ ನಿಂತಿದೆ. ಇದು ಇದೇ ನವೆಂಬರ್ 8 ರಂದು ಬಿಡುಗಡೆಗೊಳ್ಳಲಿದೆ.

ಹಾಡುಗಳು ಮತ್ತು ಟ್ರೇಲರ್ ಮೂಲಕ ಹಂತ ಹಂತವಾಗಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ‘ಕಪಟ ನಾಟಕ ಪಾತ್ರಧಾರಿ’ ಚಿತ್ರ ಯಶಸ್ಸು ಕಂಡಿದೆ. ಆರಂಭದಿಂದ ಇಲ್ಲಿಯವರೆಗೂ ಈ ಬಗ್ಗೆ ಚಿತ್ರತಂಡ ಸಾವಧಾನದಿಂದಲೇ ಒಂದಷ್ಟು ಕುತೂಹಲದ ಸಂಗತಿಗಳನ್ನು ಬಿಚ್ಚಿಡುತ್ತಾ ಬಂದಿದೆ. ಆದರೆ ಆ ಬೆರಗುಗಳು ಸಿನಿಮಾ ಮಂದಿರದಲ್ಲಿಯೂ ಕೂಡಾ ಪ್ರತೀ ಕ್ಷಣದಲ್ಲಿಯೂ ಕಾಡುವಂಥಾ ರೀತಿಯಲ್ಲಿ ಕ್ರಿಶ್ ಈ ಸಿನಿಮಾವನ್ನು ಕಟ್ಟಿ ಕೊಟ್ಟಿದ್ದಾರಂತೆ. ಆಟೋ ಡ್ರೈವರ್ ಒಬ್ಬನ ಆತ್ಮಕಥೆಯಂಥಾ ‘ಕಪಟ ನಾಟಕ ಪಾತ್ರಧಾರಿ’ ಥ್ರಿಲ್ ಕೊಡುವುದರ ಜೊತೆಗೆ ಬೆಚ್ಚಿ ಬೀಳಿಸಿದ್ದಾನೆಂಬ ಮತ್ತೊಂದು ಅಂಶವನ್ನೂ ಈಗ ಚಿತ್ರತಂಡ ಬಿಚ್ಚಿಟ್ಟಿದೆ.

ಸರಿಕಟ್ಟಾಗಿ ಯಾವ ಕೆಲಸವನ್ನೂ ಮಾಡದೆ, ಮಾಡೋ ಕೆಲಸದಲ್ಲಿ ಮೂರೇ ದಿನದಲ್ಲಿ ಬೋರು ಹೊಡೆಸಿಕೊಳ್ಳುವ ಸೋಮಾರಿಯ ಅವತಾರ ನಾಯಕನದ್ದು. ಆದರೆ ಜೀವನ ನಡೆಸಲೇ ಬೇಕಾದ ಅನಿವಾರ್ಯತೆಯಿಂದ ಆತ ಆಟೋ ಡ್ರೈವರ್ ಕಾಯಕ ಆರಂಭಿಸುತ್ತಾನೆ. ಈ ಹಾದಿಯಲ್ಲಿ ಎದುರಾಗುವ ಚಿತ್ರ ವಿಚಿತ್ರವಾದ ಸನ್ನಿವೇಶಗಳಲ್ಲಿ ಹೇಗೆ ನಾಯಕ ಕಪಟ ನಾಟಕ ಪಾತ್ರಧಾರಿಯಾಗುತ್ತಾನೆಂಬುದುಈ ಸಿನಿಮಾ ಕಥಾ ಹಂದರದ ಮೂಲ ಬಿಂದು.

ಹೀಗೆ ಯಾವುದೋ ಸಿಕ್ಕಿಗೆ ಸಿಲುಕಿಕೊಂಡು ಒದ್ದಾಡುವ ನಾಯಕನ ಮಜವಾದ ಕಥೆ ಹೇಳಲಿರುವ ಈ ಚಿತ್ರದಲ್ಲಿ ಹಾರರ್ ಸನ್ನಿವೇಶಗಳೂ ಇವೆಯಂತೆ. ಅದೇನೆಂಬುದು ಇದೇ ನವೆಂಬರ್ 8 ರಂದು ಗೊತ್ತಾಗಲಿದೆ.

‘ಕಪಟ ನಾಟಕ ಪಾತ್ರಧಾರಿ’ಗೆ ಜೊತೆಯಾದ ಸಂಗೀತಾ ಭಟ್

#KapataNatakaPaathradaari #KapataNatakaPaathradaariMovie  #BaluNagendra #SangeethaBhat

Tags