ಚಿತ್ರ ವಿಮರ್ಶೆಗಳುಬಾಲ್ಕನಿಯಿಂದಸುದ್ದಿಗಳು

‘ಕಪಟ ನಾಟಕ ಪಾತ್ರಧಾರಿ’ ರೋಚಕ ಅನುಭವದ ರೂವಾರಿ

ಚಿತ್ರ : ಕಪಟ ನಾಟಕ ಪಾತ್ರಧಾರಿ

ನಿರ್ದೇಶನ: ಕ್ರಿಶ್

ಕಲಾವಿದರು: ಬಾಲು ನಾಗೇಂದ್ರ, ಸಂಗೀತಾ ಭಟ್, ಕರಿ ಸುಬ್ಬು ಮತ್ತು ಇತರರು

ರೇಟಿಂಗ್: 3.5/5

ಒಂದು ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ ಯಾವುದೇ ನಟನ ಮತ್ತೊಂದು ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಅಗಾಧ ನಿರೀಕ್ಷೆಗಳಿರುತ್ತವೆ. ಅಂಥದ್ದೊಂದು ನಿರೀಕ್ಷೆಯನ್ನು ‘ಹುಲಿರಾಯ’ ಚಿತ್ರದ ಮೂಲಕ ಸೃಷ್ಟಿಸಿದ್ದವರು ನಟ ಬಾಲು ನಾಗೇಂದ್ರ. ಈ ಕಾರಣದಿಂದಲೇ ‘ಕಪಟ ನಾಟಕ ಪಾತ್ರಧಾರಿ’ ಚಿತ್ರ ಪ್ರೇಕ್ಷಕರ ಚಿತ್ರ ಸೆಳೆದುಕೊಂಡಿತ್ತು. ನಂತರದಲ್ಲಿ ಹಾಡುಗಳು ಮತ್ತು ಟ್ರೇಲರ್ ಮೂಲಕ ಗಾಢವಾದ ಪ್ರಭಾವ ಬೀರಿದ್ದ ಈ ಚಿತ್ರವೀಗ ಬಿಡುಗಡೆಯಾಗಿದೆ.

ನಿರೀಕ್ಷೆಯಂತೆಯೇ ಸಸ್ಪನ್ಸ್ ಹಾದಿಯಲ್ಲಿ ಹಾರರ್ ನಂತಹ ಕಥೆಯನ್ನು ಒಟ್ಟೊಟ್ಟಿಗೇ ಹೇಳುತ್ತಾ, ಕ್ಷಣ ಕ್ಷಣವೂ ಟ್ವಿಸ್ಟುಗಳ ಮೂಲಕ ಪ್ರತೀ ನೋಡುಗರನ್ನೂ ತೃಪ್ತಗೊಳಿಸುವಂತೆ ಈ ಸಿನಿಮಾ ಮೂಡಿ ಬಂದಿದೆ.

ಇಲ್ಲಿ ಆಪ್ತವಾದ ಶೈಲಿಯ, ಬಹುತೇಕರ ಬದುಕಿಗೆ ಹತ್ತಿರಾದ ಎಳೆಯೊಂದಿಗೆ ಕಥೆ ಬಿಚ್ಚಿಕೊಳ್ಳುತ್ತದೆ. ಮನಸಿನ ತುಂಬಾ ಕನಸು ತುಂಬಿಕೊಂಡು, ಆರ್ಥಿಕ ಸಂಕಷ್ಟದಿಂದ ಯಾವುದನ್ನೂ ಮಾಡಲಾಗದೆ ಕೊನೆಗೆ ಅನಿವಾರ್ಯತೆಗೆ ಬಿದ್ದು ಯಾವುದೋ ಕೆಲಸ ಹಿಡಿದು ಬದುಕುವ ಅದೆಷ್ಟು ಯುವಕರು ನಮ್ಮ ನಡುವಲ್ಲಿಲ್ಲ? ಅಂಥವರೆಲ್ಲರ ಆತ್ಮ ಕಥೆಯಂಥಾ ಎಳೆಯ ಮೂಲಕವೇ ಈ ಸಿನಿಮಾ ಚಲಿಸುತ್ತದೆ.

ಈ ಕಥೆಯ ಕೇಂದ್ರ ಬಿಂದು ಭೋಳೇ ಮನಸ್ಥಿತಿಯ ಓರ್ವ ಹುಡುಗ. ಆತ ಕೃಷ್ಣ. ಈ ಪಾತ್ರದಲ್ಲಂತೂ ಬಾಲೂ ನಾಗೇಂದ್ರ ಅದ್ಭುತ ಅನ್ನಿಸುವಂತೆ ನಟಿಸಿದ್ದಾರೆ. ಕೃಷ್ಣ ಯಾವ ಕೆಲಸವನ್ನೂ ನೆಟ್ಟಗೆ ಮಾಡಲಾರದೆ ಪ್ರತೀ ನಿತ್ಯ ಅಪ್ಪನ ಕೈಲಿ ಉಗಿಸಿಕೊಳ್ಳುವ ಹುಡುಗ. ಕಡೆಗೂ ಬೇರೆ ದಾರಿ ಕಾಣದೆ ಆಟೋ ಒಂದನ್ನು ಖರೀದಿಸಿ ಆ ಮೂಲಕವೇ ತನ್ನ ಕನಸುಗಳಲ್ಲಿ ಒಂದಷ್ಟನ್ನಾದರೂ ಈಡೇರಿಸಿಕೊಳ್ಳೋ ಸಂಕಲ್ಪ ತೊಡುತ್ತಾನೆ.

ಆದರೆ ಆ ಆಟೋ ಮೂಲಕವೇ ಆತನ ಪಾಲಿಗೆ ನಾನಾ ಅನುಭವಗಳು ಆಗಲಾರಂಭಿಸುತ್ತವೆ. ಅದೇ ಹಾದಿಯಲ್ಲೆದುರಾಗೋ ಓರ್ವ ಹುಡುಗಿ, ಲವ್ವು, ರೊಮ್ಯಾನ್ಸು… ಇದೆಲ್ಲದರ ಜೊತೆಗೇ ಒಂದು ಸಸ್ಪೆನ್ಸ್ ಕಥೆ ಸಾಗುತ್ತದೆ. ಅಲ್ಲಿ ಹಾರರ್ ಅಂಶಗಳನ್ನೂ ಇಟ್ಟಿದ್ದಾರೆ.

ಹಾಗಾದರೆ ಆ ಆಟೋ ಹತ್ತಿದವರಿಗೆಲ್ಲ ಯಾಕೆ ಚಿತ್ರ ವಿಚಿತ್ರ ಅನುಭವಗಳಾಗುತ್ತವೆ? ಅದನ್ನು ಹತ್ತಿ ಕೂತವರೇಕೆ ಕಂಗಾಲಾಗುತ್ತಾರೆಂಬ ಪ್ರಶ್ನೆಗಳಿಗೆ ಕಲ್ಪಿಸಿಕೊಳ್ಳಲೂ ಆಗದಂಥಾ ರೋಚಕ ಟ್ವಿಸ್ಟುಗಳೊಂದಿಗೆ ಇಲ್ಲಿ ಉತ್ತರ ಲಭ್ಯವಿದೆ. ಅದನ್ನು ಕಣ್ತುಂಬಿಕೊಳ್ಳೋದನ್ನೂ ಖಂಡಿತಾ ನೀವ್ಯಾರೂ ಮಿಸ್ ಮಾಡಿಕೊಳ್ಳಬೇಡಿ.

ನಿರ್ದೇಶಕ ಕ್ರಿಶ್ ಈ ಸಿನಿಮಾ ಮೂಲಕ ಮೊದಲ ಹೆಜ್ಜೆಯಲ್ಲಿಯೇ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರತೀ ಘಟ್ಟದಲ್ಲಿಯೂ ನಿರ್ದೇಶನದ ಕಸುಬುದಾರಿಕೆಯ ಅನಾವರಣವಾಗುತ್ತದೆ.

ಬಾಲು ನಾಗೇಂದ್ರ ಮಧ್ಯಮ ವರ್ಗದ ಹುಡುಗನ ಪಾತ್ರಕ್ಕೆ ಜೀವ ತುಂಬಿರೋದಲ್ಲದೇ ರೊಮ್ಯಾಂಟಿಕ್, ಆಕ್ಷನ್ ಸೀನುಗಳಲ್ಲಿಯೂ ಮಿಂಚಿದ್ದಾರೆ. ಈ ಮೂಲಕ ಮತ್ತೊಂದಷ್ಟು ಅವಕಾಶಗಳೊಂದಿಗೆ ನಾಯಕನಾಗಿ ನೆಲೆಗೊಳ್ಳುವ ಸೂಚನೆ ರವಾನಿಸಿದ್ದಾರೆ.

ಇನ್ನುಳಿದಂತೆ ಸಂಗೀತಾ ಭಟ್ ಅವರ ನಟನೆಯೂ ಚೆನ್ನಾಗಿದೆ. ಛಾಯಾಗ್ರಹಣ ಈ ಸಿನಿಮಾದ ದೊಡ್ಡ ಶಕ್ತಿ. ಅದಕ್ಕೆ ಸಂಗೀತವೂ ಸಾಥ್ ಕೊಟ್ಟಿದೆ. ಇದೆಲ್ಲದರಿಂದಾಗಿ ಈ ಸಿನಿಮಾ ಅಪರೂಪದ ಅನುಭವ ನೀಡುತ್ತದೆ. ಖಂಡಿತಾ ಚಿತ್ರಮಂದಿರಕ್ಕೇ ತೆರಳಿ ಆ ಅನುಭವವನ್ನು ನಿಮ್ಮದಾಗಿಸಿಕೊಳ್ಳಿ.

ಬಿಗ್ ಸೆಲೆಬ್ರಿಟಿಯನ್ನು ಮದುವೆಯಾಗುತ್ತಾರಂತೆ ಈ ನಟಿ

#Kapatanatakapaatradhaari #KapatanatakapaatradhaariReview #BaluNagendra #SangeethaBhat

Tags