ಸುದ್ದಿಗಳು

ಕೊನೆಯ ಹಂತದ ಚಿತ್ರೀಕರಣ ಮುಗಿಸಿದ ‘ಕಥಾ ಸಂಗಮ’

ಏಳು ವಿವಿಧ ಸಣ್ಣ ಕಥೆಗಳ ಸಂಕಲನವಾಗಿರುವ ಸಿನಿಮಾ

ಬೆಂಗಳೂರು, ಸೆ. 26: ‘ಕಥಾ ಸಂಗಮ’ ಚಿತ್ರ ನಾನಾ ಕಾರಣಗಳಿಂದಾಗಿ ಕುತೂಹಲ ಮೂಡಿಸಿದೆ. ಏಳು ಕತೆಗಳ ಸಂಗಮ ಸಿನಿಮಾದಲ್ಲಿದ್ದು, ಒಂದು ಕಥೆಗೆ ನಿರ್ದೇಶಕ ರಿಷಭ್ ಶೆಟ್ಟಿ ನಾಯಕನಾಗಿ ನಟಿಸಿದ್ದಾರೆ. ಹರಿಪ್ರಿಯಾ ನಾಯಕಿಯಾದರೆ ಮತ್ತೊಂದು ಪ್ರಮುಖ ಪಾತ್ರದಲ್ಲಿ ಬೀದಿ ನಾಯಿಯೊಂದು ಕಾಣಿಸಿಕೊಂಡಿದೆ.

ಚಿತ್ರದ ಬಗ್ಗೆ

1975ರಲ್ಲಿ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಮೂರು ಕತೆಗಳನ್ನು ಒಟ್ಟಾಗಿಸಿ, ‘ಕಥಾ ಸಂಗಮ’ ಸಿನಿಮಾ ಮಾಡಿದ್ದರು. ಇದೀಗ ರಿಷಬ್ ಶೆಟ್ಟಿಯವರು ಏಳು ಕತೆಗಳನ್ನು ಸಿನಿಮಾಗಾಗಿ ಒಟ್ಟಾಗಿಸಿದ್ದಾರೆ. ಚಿತ್ರದಲ್ಲಿ ಹರಿಪ್ರಿಯಾ, ಯಜ್ಞಾ ಶೆಟ್ಟಿ, ಕಿಶೋರ್, ಸೇರಿದಂತೆ ಏಳು ನಾಯಕಿಯರು ಮತ್ತು ಏಳು ನಾಯಕರು ಪ್ರಮುಖ ಪಾತ್ರಗಳಿವೆ.

ಕೊನೆಯ ಹಂತದ ಚಿತ್ರೀಕರಣ

ಆಂಥಾಲಜಿ(ಹಲವು ಕಥೆಗಳಿರುವ ಸಿನಿಮಾ) ಚಿತ್ರಗಳು ಹೊಂದುವ ಪತ್ರಿಯೊಂದು ಕಥೆಗೂ ಜಸ್ಟಿಫಿಕೇಶನ್ ಕೊಡಬೇಕಾದ ದೊಡ್ಡ ಚಾಲೆಂಜ್ ನಿರ್ದೇಶಕರಿಗಿರುತ್ತದೆ. ರಿಷಬ್ ತಮ್ಮ ಪ್ರಧಾನ ನಿರ್ದೇಶನದಲ್ಲಿ ನಿರ್ಮಾಣ ಮಾಡುತ್ತಿರುವ ‘ಕಥಾ ಸಂಗಮ’ದಲ್ಲಿ ಏಳು ಕಥೆಗಳಿಗೆ ಏಳು ನಿರ್ದೇಶಕರು ಆಕ್ಷನ್ ಕಟ್ ಹೇಳಲಿದ್ದಾರೆ. ಅಲ್ಲದೇ ಏಳು ಸಂಗೀತ ನಿರ್ದೇಶಕರು, ಏಳು ಛಾಯಾಗ್ರಾಹಕರು ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ.

ಹೊಸ ಕಲಾವಿದರು

‘ಲಚ್ಚವ್ವ’ ಎಂಬ ಹೆಸರಿನ ಕಥೆಯನ್ನು ನವ ನಿರ್ದೇಶಕ ಜೈಶಂಕರ್ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಈ ಭಾಗದಲ್ಲಿ ನಟನೆಯ ಬಗ್ಗೆ ಗೊತ್ತಿರದ ಕಲಾವಿದರು ನಟಿಸಿದ್ದಾರೆ. “ತಿಥಿ ಚಿತ್ರದಂತೆ ಇದರಲ್ಲಿ ಕಲಾವಿದರಲ್ಲದವರನ್ನು ಆಯ್ಕೆ ಮಾಡಿ ಸಿನಿಮಾದಲ್ಲಿ ಅಭಿನಯ ಮಾಡಿಸಲಾಗಿದೆ”ಎಂದು ನಿರ್ದೇಶಕ ಜೈ ಶಂಕರ್ ಹೇಳುತ್ತಾರೆ.

ಕೊನೆಯ ಹಂತದಲ್ಲಿ

‘ಕಥಾ ಸಂಗಮ’ ಚಿತ್ರವು ‘ಲಚ್ಚವ್ವ’ ಭಾಗದ ಚಿತ್ರೀಕರಣವನ್ನು ಮುಗಿಸಿಕೊಳ್ಳುತ್ತಿದೆ. ಇದರ ನಂತರ ಚಿತ್ರವು ಪೂರ್ಣಗೊಳ್ಳಲಿದೆ. ಇನ್ನು ಸಂಕಲನ, ಡಬ್ಬಿಂಗ್ ಸೇರಿದಂತೆ ಇತರೇ ಹಂತಗಳು ಪೂರ್ಣಗೊಂಡ ನಂತರ, ಚಿತ್ರವು ನವ್ಹೆಂಬರ್ ಅಥವಾ ಡಿಸೆಂಬರ್ ನಲ್ಲಿ ತೆರೆಗೆ ಬರಲಿದೆ.

Tags