ಸುದ್ದಿಗಳು

‘ಕೆಜಿಎಫ್’ ಸಿನಿಮಾ ನಾಳೆಯೇ ಬಿಡುಗಡೆಯಾಗಲಿ…!.

ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ

ಬೆಂಗಳೂರು, ಡಿ.06: ‘ಕೆಜಿಎಫ್’…  ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಾಗೂ ಹಿಂದಿ ಸೇರಿದಂತೆ ಐದು ಭಾಷೆಯಲ್ಲಿ ಬಿಡುಗಡೆಯಾಗುವ ಮೂಲಕ ದಾಖಲೆ ಬರೆಯಲು ಸಜ್ಜಾಗಿರುವ ಚಿತ್ರ. ಸ್ಯಾಂಡಲ್‌ವುಡ್‌ನ ಯಾವ ಚಿತ್ರವೂ ನಿರೀಕ್ಷೆ ಹುಟ್ಟುಹಾಕದ ಮಟ್ಟಿಗೆ ಸಿನಿ ಪ್ರೇಮಿಗಳಲ್ಲಿ ಕುತೂಹಲವನ್ನು ಹುಟ್ಟಿಸಿದೆ, ‘ಕೆಜಿಎಫ್’ ಚಿತ್ರ ಬಿಡುಗಡೆಯಾಗುವುದಕ್ಕೆ ಕೌಂಟ್‌ಡೌನ್ ಶುರುವಾಗಿದ್ದು ಇದೇ ತಿಂಗಳ 21ಕ್ಕೆ ಕೆಜಿಎಫ್ ಸಿನಿಮಾ ಬಿಡುಗಡೆಯಾಗುತ್ತಿದೆ.

ಪಾತ್ರಕ್ಕೆ ಜೀವ ತುಂಬಿದ ನಟ

ಒಬ್ಬ ನಟ ಚಿತ್ರವೊಂದರ ಪಾತ್ರಕ್ಕೆ ಯಾವ ರೀತಿ ತಯಾರಿ ಮಾಡಿಕೊಳ್ಳಬೇಕು, ಆ ಚಿತ್ರದಲ್ಲಿ ತಾವು ನಟಿಸುವ ಪಾತ್ರಕ್ಕೆ ಹೇಗೆ ಜೀವ ತುಂಬಬೇಕು ಅನ್ನುವುದನ್ನು  ಚೆನ್ನಾಗಿ ಅರಿತುಕೊಂಡಿರುವ ನಟ ಯಶ್. ಈ ಚಿತ್ರಕ್ಕಾಗಿ ಸಂಪೂರ್ಣ ಎರಡು ವರ್ಷ ಸಮಯ ಮೀಸಲಿಟ್ಟಿದ್ದಾರೆ. ಅದರ ಪ್ರತಿಫಲವೇ ಈ ‘ಕೆಜಿಎಫ್’ ಚಿತ್ರ ಬಿಡುಗಡೆಗೆ ತಯಾರಾಗಿದೆ.ದಾನಿಶ್ ಟ್ವಿಟ್

ಟ್ರೇಲರ್ ನೋಡಿದ ಪ್ರತಿಯೊಬ್ಬರೂ  ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕೇಳುತ್ತಿದ್ದಾರೆ. ಕೇವಲ ಅಭಿಮಾನಿಗಳು ಮಾತ್ರವಲ್ಲದೇ ಕಲಾವಿದರ ವೃಂದದವರೂ ಕೂಡ ಸಿನಿಮಾ ಯಾವಾಗ ಬಿಡುಗಡೆ ಎಂದು ಎದುರು ನೋಡುತ್ತಿದ್ದಾರೆ. ಇವೆಲ್ಲದರ ನಡುವೆ ‘ಹಂಬಲ್ ಪೊಲಿಟೀಷಿಯನ್ ನೋಗರಾಜ್’ ನಾಯಕ ನಟ ದಾನಿಶ್ ಸೇಠ್ ಸಿನಿಮಾ ಬಿಡುಗಡೆಗೆ ಕಾದಿದ್ದಾರೆ. ಟ್ರೇಲರ್ ನೋಡಿದ ಇವರು ಟ್ವಿಟ್ ಮಾಡಿದ್ದಾರೆ. ಸಿನಿಮಾ ನಾಳೆಯೇ ಬಿಡುಗಡೆಯಾಗಲಿ ಬ್ರೋ ಎನ್ನುವ ಮೂಲಕ ಸಿನಿಮಾ ಮೇಲಿನ ಕುತೂಹಲವನ್ನು ಹೊರಹಾಕಿದ್ದಾರೆ.

ಕಾತುರತೆ ಹೆಚ್ಚಿಸಿದ ಸಿನಿಮಾ

ಪ್ರಶಾಂತ್ ನೀಲ್ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಕೆಜಿಎಫ್ ಚಿತ್ರದಲ್ಲಿ ರಾಕಿಂಗ್ ಸ್ಟಾರ್‌ಗೆ ಜೋಡಿಯಾಗಿ ಶ್ರೀನಿಧಿ ಶೆಟ್ಟಿ ಸ್ಕ್ರೀನ್ ಶೇರ್ ಮಾಡಿದ್ದಾರೆ.  ಐದು ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವುದರಿಂದ ಕನ್ನಡ ಚಿತ್ರರಂಗ ಕೂಡಾ ನಾವು ಯಾರಿಗೂ ಕಮ್ಮಿ ಇಲ್ಲ ಎನ್ನುವ ರೀತಿಯಲ್ಲಿ ಸೆಡ್ಡು ಹೊಡೆದು ನಿಲ್ಲೋಕೆ ಸಜ್ಜಾಗಿದೆ, ಸದ್ಯ ಈಗ ಎಲ್ಲಿ ನೋಡಿದ್ರು ಕೆಜಿಎಫ್ ಚಿತ್ರದ ಮಾತುಗಳೇ ಕೇಳಿಬರುತ್ತಿದ್ದು, ಸಿನಿ ಪ್ರೇಮಿಗಳು, ಅಕ್ಕ-ಪಕ್ಕದ ರಾಜ್ಯಗಳು ಕೌಂಟ್‌ಡೌನ್‌ನಲ್ಲಿ ನಿಂತು ‘ಕೆಜಿಎಫ್’ ಚಿತ್ರವನ್ನು ಎದುರು ನೋಡುತ್ತಿದ್ದಾರೆ.

 

Tags