ಸುದ್ದಿಗಳು

ಕುಚ್ಚಿಕು ಸಿನಿಮಾದ ವಿತರಣೆ ಹಕ್ಕು ಜಯಣ್ಣ ಫಿಲಂಸ್ ತೆಕ್ಕೆಗೆ…

ಕೆಲವು ವರ್ಷಗಳ ಹಿಂದೆ ಖ್ಯಾತ ನಿರ್ದೇಶಕ ದಿವಂಗತ ಡಿ.ರಾಜೇಂದ್ರ ಬಾಬು ನಿರ್ದೇಶನ ಮಾಡಿದ್ದ ಕುಚ್ಚಿಕೂ -ಕುಚ್ಚಿಕೂ ಸಿನಿಮಾ ಹಲವಾರು ವಿಶೇಷತೆಗಳಿಂದಾಗಿ ಸಾಕಷ್ಟು ಪ್ರಚಾರ ಪಡೆದಿತ್ತು. ಬಹುಷಃ ನಿರ್ದೇಶಕರು ಬದುಕಿರುತ್ತಿದ್ದರೆ ಈ ಸಿನಿಮಾದ ಯಶಸ್ಸು ಬೇರೊಂದು ಮಜಲಿಗೆ ಹೋಗುತ್ತಿತ್ತು. ಆದರೂ ಅವರ ಗೈರಿನಲ್ಲಿ  ಅವರ ಕನಸಿನ ಸಿನಿಮಾ ಕಮರಿ ಹೋಗದಂತೆ ಆಸಕ್ತಿ ವಹಿಸಿ ಅವರ ಒಂದೊಳ್ಳೆ ಉದ್ದೇಶವನ್ನು ಜನರಿಗೆ ತಲುಪಿಸುವ ಹಠಕ್ಕೆ ಬಿದ್ದಿರುವ ಆ ಚಿತ್ರದ ನಿರ್ಮಾಪಕ ಕೃಷ್ಣಮೂರ್ತಿ ಹಾಗು ಛಾಯಾಗ್ರಹಕರಾದ ಜೋಗಯ್ಯ ಸಿನಿಮಾ ಖ್ಯಾತಿಯ ನಂದಕುಮಾರ್  ರವರ ಶ್ರಮ ನಿಜಕ್ಕೂ ಶ್ಲಾಘನೀಯ.

ಅವರಿಬ್ಬರ ಪರಿಶ್ರಮದಿಂದಾಗಿ ಕುಚ್ಚಿಕೂ ಕುಚ್ಚಿಕೂ ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ತೆರೆಗೆ ಬರಲು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದೆ.

ಅದರ ಪ್ರಮುಖ ಕೆಲಸವಾದ ವಿತರಣೆ ಹಕ್ಕನ್ನು ಜಯಣ್ಣ ಫಿಲಂಸ್ ಪಡೆದಿರುವುದು ಚಿತ್ರತಂಡಕ್ಕೆ ಎಲ್ಲಿಲ್ಲದ ಹರ್ಷವನ್ನುಂಟು ಮಾಡಿದೆ.

ಈ ಹಿಂದೆ ಡಿ.ರಾಜೇಂದ್ರ ಬಾಬು ನಿರ್ದೇಶನ ಮಾಡಿದ್ದ ಹಲವಾರು ಸಿನಿಮಾಗಳನ್ನು ಜಯಣ್ಣ ಫಿಲಂಸ್  ವಿತರಣೆ ಹಕ್ಕನ್ನು ಪಡೆದು ರಾಜ್ಯಾದ್ಯಂತ ಬಿಡುಗಡೆಗೊಳಿಸಿತ್ತು.ಈಗ ಅವರ ನೆನಪಿಗಾಗಿ , ಗೌರವ ಸೂಚಿಸಿ,ಅವರ ಕೊನೆ ಸಿನಿಮಾವನ್ನು ನಾವೇ ರಿಲೀಸ್ ಮಾಡುತ್ತೇವೆ ಎಂದು ಸ್ವತಃ ಜಯಣ್ಣನವರೇ ಕೇಳಿ ತೆಗೆದುಕೊಂಡಿರುವುದು ನಿರ್ದೇಶಕರ ಮೇಲಿನ ಪ್ರೀತಿ ಗೌರವಕ್ಕೆ ಸಿಕ್ಕ ಮನ್ನಣೆ ಎಂದೇ ಹೇಳಬಹುದು.

ಪ್ರವೀಣ್, ಜೆ.ಕೆ. ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಕುಚ್ಚಿಕೂ ಕುಚ್ಚಿಕೂ ಚಿತ್ರಕ್ಕೆ ನಕ್ಷತ್ರ ನಾಯಕಿಯಾಗಿದ್ದಾರೆ. ಈ ಚಿತ್ರ ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಾಣುವುದು ಪಕ್ಕಾ ಆಗಿದೆ.

ನಿರ್ದೇಶಕರ ಮಹತ್ವಕಾಂಕ್ಷೆಯ ಕೊನೆ ಸಿನಿಮಾ ಗೆಲ್ಲಲಿ. ಅವರ ಕನಸುಗಳು ಅವರಿಲ್ಲದಿದ್ದರೂ ನನಸಾಗಲಿ ಎಂಬುದೇ ಎಲ್ಲರ ಆಶಯ..

 

 

 

 

Tags