ಸುದ್ದಿಗಳು

ಬರುತ್ತಿದೆ ಮತ್ತೊಂದು ‘ಸ್ನೇಹಮಯ’ ಚಿತ್ರ : ಕುಚ್ಚಿಕೂ ಕುಚ್ಚಿಕು

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕರಲ್ಲಿ ಒಬ್ಬರಾಗಿದ್ದ ದಿವಂಗತ ಡಿ. ರಾಜೇಂದ್ರ ಬಾಬು ಅವರ ಕೊನೆಯ ಚಿತ್ರ, ಜುಲೈ ತಿಂಗಳ ಮೊದಲ ವಾರ ತೆರೆಗೆ ಬರಲು ಸಿದ್ದತೆ ನಡೆಸಿದೆ. ಎಲ್ಲರೂ ‘ಆರ್ಯನ್’ ಚಿತ್ರವೇ ನಿರ್ದೇಶಕರ ಕೊನೆಯ ಚಿತ್ರವೆಂದುಕೊಂಡಿದ್ದರು. ಆದರೆ ಆರ್ಯನ್ ಚಿತ್ರದ ಜೊತೆ ಜೊತೆಗೆ ‘ಕುಚ್ಚಿಕೂ ಕುಚ್ಚಿಕು’ ಸಹ ಸಿದ್ದತೆ ನಡೆಸಿತ್ತು. ಆದರೆ ದುರದೃಷ್ಟವಶಾತ್, ಚಿತ್ರದ ಪ್ರಥಮ ಪ್ರತಿ ನೋಡಿದ ಸ್ವಲ್ಪ ದಿನಗಳಲ್ಲೇ ಅವರು ನಿಧನರಾದರು.

ಈ ಹಿಂದೆ ಡಿ. ರಾಜೇಂದ್ರ ಬಾಬು ಅವರು ‘ದಿಗ್ಗಜರು’ ಚಿತ್ರದಲ್ಲಿ ಸ್ನೇಹದ ಮಹತ್ವವನ್ನು ಹೇಳಿದ್ದರು. ಇದೀಗ ಮತ್ತೆ ಸ್ನೇಹದ ಮಹತ್ವವನ್ನು ಸಾರುವ “ಕುಚ್ಚಿಕೂ ಕುಚ್ಚಿಕು” ಟೈಟಲ್ ಇಟ್ಟುಕೊಂಡು ಚಿತ್ರವನ್ನು ಮಾಡಿ ಮುಗಿಸಿದ್ದಾರೆ. ಹಾಗೂ ಈ ಚಿತ್ರವನ್ನು ನೋಡಿದ ಜಯಣ‍್ಣ-ಬೋಗೇಂದ್ರ ಅವರು ತಾವಾಗಿಯೇ ಖುಷಿಯಿಂದ ಚಿತ್ರದ ವಿತರಣೆ ಮಾಡುತ್ತಿರುವುದು ವಿಶೇಷ.

‘ದಿಗ್ಗಜರು’ ಸಿನಿಮಾದಲ್ಲಿ ಅಂಬರೀಷ್ ಮತ್ತು ವಿಷ್ಣುವರ್ಧನ್ ಜೋಡಿ ‘ಕುಚ್ಚಿಕೂ ಕುಚ್ಚಿಕು ಜೀವಕ್ಕಿಂತ ಜಾಸ್ತಿ ಕಣೋ ಕುಚ್ಚಿಕು…’ ಎಂದು ಸ್ನೇಹದ ಕಡಲಲ್ಲಿ ವಿಹರಿಸಿದ ಅಂದು ಈ ಜೋಡಿಯ ಸ್ನೇಹಕ್ಕೆ ಅಂಬಿಗನಾಗಿ ನಿಂತಿದ್ದು ನಿರ್ದೇಶಕ ಡಿ. ರಾಜೇಂದ್ರ ಬಾಬು ಮತ್ತು ಸಂಗೀತ ನಿರ್ದೇಶಕ ಹಂಸಲೇಖ. ಬಾಬು ‘ದಿಗ್ಗಜರು’ ಚಿತ್ರವನ್ನು ನಿರ್ದೇಶಿಸಿದ್ದರೆ, ಹಂಸಲೇಖ ಸಂಗೀತ ಸಂಯೋಜಿಸಿದ್ದರು. ಇದೀಗ ಈ ಚಿತ್ರಕ್ಕೂ ಸಹ ಹಂಸಲೇಖಾ ಅವರೇ ಸಂಗೀತ ಸಂಯೋಜಿಸಿದ್ದು, ಇದೊಂದು ಸ್ವಮೇಕ್ ಕಥೆಯಾಗಿರುವುದು ವಿಶೇಷ.

ಚೂರಿಕಟ್ಟೆ ಚಿತ್ರದ ನಾಯಕ ಪ್ರವೀಣ್ ಮತ್ತು ಕಾರ್ತಿಕ್ ಜಯರಾಂ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದು, ನಿರ್ದೇಶಕರ ಎರಡನೇ ಪುತ್ರಿ ನಕ್ಷತ್ರ ಈ ಚಿತ್ರಕ್ಕೆ ನಾಯಕಿಯಾಗಿ ನಟಿಸಿದ್ದು, ಬಾಬು ಅವರ ಪತ್ನಿ ಸುಮಿತ್ರಾ ಅವರೂ ಕೂಡ ನಟಿಸಿದ್ದಾರೆ. ಚಿತ್ರವನ್ನು ಎನ್.ಕೃಷ್ಣಮೂರ್ತಿ ಅವರು ನಿರ್ಮಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *