ಸುದ್ದಿಗಳು

ಸಸ್ಯಕಾಶಿಯಲ್ಲೊಂದು ಹೃದಯಸ್ಪರ್ಶಿ ಪ್ರದರ್ಶನ

ಮಕರಂಧ ಅರಸಿ ಹೊರಟ ದುಂಬಿಗೆ ಅರಳಿ ನಿಂತ ಹೂಗಳ ಚುಂಬಕ!!!

ಕಣ್ಹಾಯಿಸಿದಷ್ಟು ದೂರದವರೆಗೂ ಕಾಂಕ್ರೀಟ್ ಕಟ್ಟಡಗಳಿಂದ ಬೆಳೆದು ನಿಂತಿರುವ ಆಧುನಿಕ ನಗರಿ! ಕಿವಿಗಡಚಿಕ್ಕುವ ವಾಹನಗಳ ಆರ್ಭಟದ ಕಿರಿಕಿರಿ, ಉಸಿರಾಡಲೂ ಪರದಾಡುವಂತಹ ಕಲುಷಿತ ವಾತಾವರಣ, ಇನ್ನು ಜನಜಂಗುಳಿಯೋ..!, ಮಾನವೀಯತೆಯ ಪದವನ್ನೇ ಮರೆತಂತೆ ನಟಿಸುವ, ಸ್ಪಂದನ ಕಳೆದುಕೊಂಡ ಜೀವಚ್ಛವಗಳು..!! ಇವೆಲ್ಲರ ನಡುವೆಯೂ ಶತಮಾನದಷ್ಟು ಹಳೆಯದಾದ ಕೆಂಪುತೋಟದ ಭರ್ತಿ ಹಸಿರು ಸಸ್ಯಸಂಕುಲ!

ಮಹಾನಗರದಲ್ಲೊಂದು ಪುಟ್ಟ ಹಸಿರು ಕಾನನ

ಮಹಾಪುರುಷನೊಬ್ಬ ನಿರ್ಮಿಸಿದ ಈ ನಗರದ ಮಧ್ಯಭಾಗದಲ್ಲೊಂದು ಮರ ಗಿಡಗಳಿಂದ ತುಂಬಿದ ಕೆಲವು ಎಕರೆಗಳಷ್ಟು ಜಾಗ. ಕಾಂಕ್ರೀಟ್ ಜಂಗಲ್ ಎಂಬೋ ಮರುಭೂಮಿಯಲ್ಲಿ ಓಯಸೀಸ್ ಸಿಕ್ಕಂತಹ ಅನುಭವ! ಒಮ್ಮೆ ಒಳ ಹೊಕ್ಕರೆ ಸಾಕು, ಕಳೆದುಕೊಂಡ ತಾಯಿಯನ್ನು ಮರಳಿ ಪಡೆದ ಮಗುವಿಗಾಗುವಂತಹ ಮಹದಾನಂದ! ಬಾಲ್ಯದಲ್ಲೆಲ್ಲೋ ಕೇಳಿದ ಹಕ್ಕಿಗಳ ಚಿಲಿಪಿಲಿ ನಾದ, ಪಕ್ಕದಲ್ಲೊಂದು ಚಿಕ್ಕದಾದರೂ ಚೊಕ್ಕವಾದ ಕೆರೆಯಂಗಳ, ಸ್ವಚ್ಚಂದವಾಗಿ ಆನಂದಿಸುತ್ತಿರುವ ಬಾತುಕೋಳಿಗಳ ದಂಡು, ಮಧ್ಯಭಾಗದಲ್ಲಿ ನಿಂತು ಸುತ್ತ ಕಣ್ಹಾಯಿಸಿದಷ್ಟು ಕಣ್ಣಿಗೆ ರಾಚುವ ಹಸಿರಿನ ಸೊಬಗು.

ಬಾಯಾರಿ ಬಳಲಿದವನಿಗೆ ನೀರೆಂಬ ಅಮೃತ ಸಿಕ್ಕಂತೆ.., ತಮಗೆ ಸಿಕ್ಕ ವಾರಾಂತ್ಯದ ರಜಾ ದಿನವನ್ನು ಅರ್ಥಪೂರ್ಣವಾಗಿಸಲು ದಾಂಗುಡಿ ಇಟ್ಟಿರೋ ಸಿಲಿಕಾನ್ ಸಿಟಿಯ ಲಕ್ಷ ಮಂದಿ. ವಯಸ್ಸಾದವರಿಗೆ ಹಿತವಾದ ಗಾಳಿ ಸೇವಿಸುತ್ತಾ , ಮೃದು ನಡಿಗೆಯಲ್ಲಿ ಪ್ರಕೃತಿಯ ಸೊಬಗಿನಲ್ಲಿ ನಡೆದಾಡುವ ಖುಷಿ. ಮಕ್ಕಳಿಗೆ ಮೈದಾನದಂತಿರುವ ಹಸಿರು ಹುಲ್ಲು ಹಾಸಿನ ಮೇಲೆ ಹೊರಳಾಡುತ್ತಾ, ಕುಣಿದು ಕುಪ್ಪಳಿಸುವ ಆಸೆ. ಯುವಕ ಯುವತಿಯರಿಗೆ ತಣ್ಣನೆಯ ವಾತಾವರಣದಲ್ಲಿ ಮೈ ಕೈ ತಾಗಿಸುತ್ತಾ ಸ್ಪರ್ಶ ಸುಖದ ಜೊತೆ , ಅರಳಿದ ಹೂಗಳನ್ನು ನೋಡುತ್ತಾ ಕನಸಿಗೆ ಜಾರುವ ತವಕ. ಇಷ್ಟೆಲ್ಲಾ ಹೊಗಳಿಕೆಗೆ, ಸುಂದರ ಸೊಗಸಿಗೆ, ಆನಂದಕ್ಕೆ ಸಾಕ್ಷಿಯಾದದ್ದು ಸಸ್ಯಕಾಶಿ ಎಂದೇ ಹೆಸರಾದ “ಲಾಲ್ ಬಾಗ್” ಎಂಬ ಕಾಂಕ್ರೀಟ್ ಪಟ್ಟಣದೊಳಗಿನ ಪುಟ್ಟ ಕಾನನ.

ಸೇನೆಯೊಂದಿಗೆ ಸಿನಿಮಾಕ್ಕೂ ಗೌರವ

ಹೌದು ..ಈ ವಾರಾಂತ್ಯದಿಂದ ಲಾಲ್ ಬಾಗ್ ಅನ್ನೋ ಸಸ್ಯಕಾಶಿ ವಿವಿಧ ಫಲ ಪುಷ್ಪಗಳಿಂದ ಅಲಂಕೃತಗೊಂಡು ಸ್ವಾತಂತ್ರ್ಯದಿನಾಚರಣೆಯ ಆಗಮನಕ್ಕೆ ಸುಸ್ವಾಗತ ಕೋರುವುದರ ಜೊತೆಗೆ ನಗರದ ಜನರನ್ನು ಉಲ್ಲಸಿತಗೊಳಿಸುತ್ತಿದೆ.

ಪ್ರತಿ ವರ್ಷ ಕರ್ನಾಟಕ ಸರ್ಕಾರ ತೋಟಗಾರಿಕೆ ಇಲಾಖೆ ವತಿಯಿಂದ ಸ್ವತಂತ್ರ ದಿನಾಚರಣೆಯ ಅಂಗವಾಗಿ ವಿವಿಧ ರೀತಿಯಲ್ಲಿ ಪುಷ್ಪಾಲಂಕಾರೋತ್ಸವ ಕಾರ್ಯಕ್ರಮ ನಡೆಸುತ್ತದೆ. ಅದೇ ರೀತಿ ಈ ಸಲದ ಪುಷ್ಪಾಲಂಕಾರೋತ್ಸವ ಕೂಡ ವಿಶೇಷವಾಗಿದೆ. ಹಗಲಿರುಳು ದೇಶ ಸೇವೆಗಾಗಿ ತಮ್ಮ ಇಡೀ ಜೀವನವನ್ನು ಮುಡುಪಾಗಿಟ್ಟಿರುವ ಭಾರತೀಯ ಸೇನೆ ಮತ್ತು ಸೈನಿಕರ ಬಗ್ಗೆ ಹಾಗೂ ವಾಸ್ತವ, ಕಾಲ್ಪನಿಕ ಕಥೆಗಳಿಗೆ ಜೀವ ತುಂಬಿ ದೃಶ್ಯ ಮಾಧ್ಯಮದ ಮೂಲಕ ಜನರಿಗೆ ತಲುಪಿಸಿ ಮನರಂಜನೆ ನೀಡುತ್ತಿರುವ ಕನ್ನಡ ಚಿತ್ರೋದ್ಯಮಕ್ಕೆ ಗೌರವ ಸಲ್ಲಿಸಿದ್ದಾರೆ.

ಅತ್ತ, ಸತತ 85 ವರ್ಷಗಳ ಇತಿಹಾಸವುಳ್ಳ ನಮ್ಮ ಕನ್ನಡ ಚಿತ್ರರಂಗದ ಸಾಧನೆಗಳೂ ಅಪಾರ. ಇಷ್ಟು ವರ್ಷಗಳಲ್ಲಿ ನಮ್ಮ ಚಿತ್ರರಂಗ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುವಂತಹ ಸಾಧನೆ ಮಾಡಿರುವುದು ಉಲ್ಲೇಖನೀಯ. ಇಂತಹ ನಮ್ಮ ಕನ್ನಡ ಚಿತ್ರರಂಗಕ್ಕೆ ಗೌರವ ಸಲ್ಲಿಸಿ ಲಾಲ್ ಬಾಗ್ ನ ಗಾಜಿನ ಮನೆಯ ಅಂಗಳದಲ್ಲಿ ಚಿತ್ರರಂಗದ ಪರಿಕರಗಳಾದ ‘ರೀಲ್’ ಮಾದರಿಯನ್ನು ಹೂವಿನಿಂದ ಅಲಂಕಾರ ಮಾಡಿರುವುದು, ಕ್ಯಾಮರ ಮಾದರಿಯನ್ನು, ಹಾಗೂ ಕ್ಲಾಪ್ ಬೋರ್ಡ್ ಮಾದರಿಯನ್ನೂ ಕೂಡ ವಿಧ ವಿಧದ ಹೂವುಗಳಿಂದ ಅಲಂಕಾರ ಮಾಡಿರುವುದು ಎಲ್ಲರನ್ನೂ ಆಕರ್ಷಿಸುತ್ತಿದೆ.

ಅದರ ಜೊತೆಗೆ ಅಲ್ಲಲ್ಲಿ ಸಿನಿಮಾರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬ ತಂತ್ರಜ್ಙನಿಗೂ ಗೌರವ ಸಲ್ಲಿಸುವಂತಹ ಬರವಣಿಗೆಯುಳ್ಳ ನಾಮ ಫಲಕಗಳೂ ಕೂಡ ಅರ್ಥಪೂರ್ಣವಾಗಿವೆ.

ಅರ್ಥಪೂರ್ಣ ಪ್ರದರ್ಶನ

ಒಟ್ಟಿನಲ್ಲಿ ಸ್ವತಂತ್ರ ದಿನಾಚರಣೆಯ ಅಂಗವಾಗಿ ತೋಟಗಾರಿಕಾ ಇಲಾಖೆ ಏರ್ಪಡಿಸಿರುವ ಈ ಪುಷ್ಪೋತ್ಸವ ನಿಜಕ್ಕೂ ಸುಂದರ ಮತ್ತು ಅರ್ಥಪೂರ್ಣ. ಆಧುನಿಕರಣದ ಫಲವಾಗಿ ಅಳಿವಿನ ಅಂಚಿಗೆ ತಲುಪಿರುವ ರೀಲ್ ಹಾಗೂ ಕ್ಲಾಪ್ ಬೋರ್ಡ್ ನ್ನು ಮತ್ತೆ ನೆನಪಿಸಿರುವುದು ಸಿನಿಮಾಸಕ್ತರಿಗೆ ಖುಷಿ ನೀಡಿದೆ. ಇನ್ನು ಹತ್ತು ದಿನಗಳ ಕಾಲ ಇರುವ ಈ ಫಲ ಪುಷ್ಪ ಪ್ರದರ್ಶನಕ್ಕೆ ಬಿಡುವು ಮಾಡಿಕೊಂಡು ಕುಟುಂಬ ಸಮೇತರಾಗಿ ಹೋಗಿ ಬನ್ನಿ. ಸೈನಿಕರ ತ್ಯಾಗ-ಬಲಿದಾನದ ಬಗ್ಗೆ, ಕನ್ನಡ ಚಿತ್ರರಂಗದ ಇತಿಹಾಸ,ಸಾಧನೆಗಳ ಬಗ್ಗೆ ಒಮ್ಮೆ ತಿಳಿದುಕೊಳ್ಳಿ. ನಿಮ್ಮ ಮನೆಯ ಚಿಣ್ಣರಿಗೂ ತಿಳಿಸಿ.

 

@ ನಾಗೇಶ್ ಕಾರ್ತಿ

Tags