ಉದಯೋನ್ಮುಖರುಬಾಲ್ಕನಿಯಿಂದಮಕ್ಕಳುಮಹಿಳೆಸಂದರ್ಶನಸಂಬಂಧಗಳುಸುದ್ದಿಗಳು

ಅಮ್ಮ-ಮಗಳ ಸಂಬಂಧದ ತುಡಿತ..’ಮಹಿರ’ದಲ್ಲಿ..! ಹೀರೋನೇ ಇಲ್ಲಾ..!?!??!

ಎರಡು ಷೆಡ್ಯೂಲ್ ಗಳಲ್ಲಿ, 38 ದಿನಗಳಲ್ಲಿ ಚಿತ್ರೀಕರಣ ಮುಗಿಸಿಯೇಬಿಟ್ಟರು ಮಹೇಶ್!

                                                                                                                                                         

ಸಂದರ್ಶನ 

ಅತಿ  ವೈಶಿಷ್ಟ್ಯಪೂರ್ಣ-ತಾಂತ್ರಿಕತೆಯುಕ್ತ ಫೈಟ್ಸ್ಗಳೇ ‘ಮಹಿರ’ ಪ್ರಮುಖ ಹೆಗ್ಗುರುತು!

ಮಹಿರ…! …ಅರೆ..! ಏನಿದೇನಿದು ಹೊಸಾ ನಾಮಕರಣವೇ..! ಮಹಿರ ಮೂಲತಃ ಸಂಸ್ಕೃತದಲ್ಲಿ ಸ್ತ್ರೀಯ ಧೀಶಕ್ತಿ, ಯಾ ಮಹಿರ ಅಂದರೆ ಮಹಿಳೆಯ ಬುದ್ಧಿಶಕ್ತಿ ಕುರಿತಾದ ಗುಣವಿಶೇಷಣೆ!  ಹಾಗಂತ  ಮಹೇಶ್ ಗೌಡ ನಿರ್ದೇಶಿತ ಈ ಕನ್ನಡ ಸಿನೆಮಾ ಒಂದು  ಸಸ್ಪೆನ್ಸ್ ಥ್ರಿಲ್ಲರ್  ಆಗಿದ್ದು ಇಬ್ಬರು ನಾಯಕಿಯರು ಇಲ್ಲಿ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿದ್ದಾರೆ. ಮಹಿರ ಗೆ ಒಂದು ಅರ್ಥವಿದೆ. ಭೂತಕಾಲದ ಒಂದು ಘಟನೆಯ ವರ್ತಮಾನವೂ, ವರ್ತಮಾನದ  ಒಂದು ಘಟನೆಯ ಹಿಂದಿನ ಭೂತಕಾಲವೂ ಮಹೀರಾವನ್ನು ಸಂಪನ್ನಗೊಳಿಸುತ್ತದೆಯಂತೆ. ಅದನ್ನು ಸಿನೆಮಾ ಬಿಡುಗಡೆಯಾದ ಮೇಲೆ ಮಾತ್ರ ನೀವು ಪ್ರೇಕ್ಷಕರು ಗ್ರಹಿಸಬೇಕಿದೆ ಎಂದು ಸವಾಲೊಡ್ಡುತ್ತಾರೆ ಮಹಿರ-ಮಹೇಶ್…!   

ಚಂದನವನಕ್ಕೆ ಹೊಚ್ಚ ಹೊಸ ಪ್ರತಿಭೆ, ಮುಂಬೈನ ರಂಗಭೂಮಿಯಲ್ಲಿ ಹೆಸರುಮಾಡಿರುವ ನಟಿ, ಕನ್ನಡತಿ, ಬೆಂಗಳೂರಿನವರೇ ಆದ, ಕೊಂಕಣಿ  ಮೂಲದ  ವರ್ಜೀನಿಯಾ ರಾಡ್ರಿಗ್ಸ್. ಮತ್ತೋರ್ವ ನಟಿ  ಚೈತ್ರ ಜಗದೀಶ್.  ಲಂಡನ್ ರಿಟ‍ರ್ನ್ಡ್ ಸೃಜನಶೀಲ ನಿರ್ದೇಶಕ ಮಹೇಶ್ ಗೌಡ, ತಮ್ಮ ಲೆಕ್ಕಾಚಾರಯುಕ್ತ ಕಲಿಕೆ-ನಡೆಗಳ ಹೊತ್ತು ‘ಮಹಿರ’ ನಿರ್ಮಿಸಲು ಸರೀ ಹೆಜ್ಜೆ ಇಟ್ಟಾಗ ಅದೇ ಲಂಡನ್ ಮೂಲದ ನಿರ್ಮಾಪಕರು ವಿವೇಕ್ ಕೊಡಪ್ಪಾ ಹಾಗೂ ಅವರ ಜೊತೆಗಾರರು ಈ ಸಿನೆಮಾದ ಹೂಡಿಕೆದಾರರಾಗಿ ನಿಂತರು. ಮೂಲತಃ ನೆಲಮಂಗಲದವರೇ ಆದ ವಿವೇಕ್ ರವರಿಗೆ ಮಹೇಶ್,  ‘ಕೊಡಪ್ಪಾ.. ಕೊಡಪ್ಪಾ… ಅಂತಂತಂದ್ರೆ(!)… ಲಕ್ಷ ಕೊಟ್ಟುಬಿಡೋರು’.

 

ಇರಲಿ, ರಂಗಭೂಮಿ ಹಿನ್ನೆಲೆಯಿಂದ ಬಂದ ವರ್ಜೀನಿಯಾ ರಾಡ್ರಿಗ್ಸ್ ಮತ್ತು ಚೈತ್ರ ಜಗದೀಶ್ ಮುಂದಿಟ್ಟುಕೊಂಡು ‘ಒಂದು ಮೊಟ್ಟೆಯ ಕಥೆ’ಯ ರಾಜ್. ಬಿ.ಶೆಟ್ಟಿ ಇವರನ್ನೆಲ್ಲಾ ಕಲೆಹಾಕಿ ‘ಮಹಿರ’ ನಿರ್ಮಿಸುವಲ್ಲಿ ‘ಕಯೋಸ್ ಫ್ಯಾಕ್ಟರಿ’ಯ ಚೇತನ್ ಡಿಸೋಜಾರವರಿಂದ  ಪಾರ್ಕೂರ್ ಕಲೆ ಯಾ ‘ಕ್ರಾಸ್ ಫಿಟ್’ ಎಂಬ ತಾಂತ್ರಿಕ ಫೈಟ್ಗಳ ಆಧಾರವಾಗಿಟ್ಟುಕೊಂಡು ‘ಅಮ್ಮ-ಮಗಳು’ ನಿರೂಪಿಸುವ ಕಥೆಯನ್ನು ಹೇಳಿದ್ದಾರೆ ಮಹೇಶ್. ಎರಡನೇ ದೃಶ‍್ಯದಲ್ಲೇ ಕತೆಯಾರಂಭವಾಗಿ ಯಾವುದೇ ದೃಶ್ಯ ‘ಬೇಕಾರ್’ ಆಗದೆ, ಮತ್ಯಾವುದೇ ಸಾಮಾಜಿಕ ಸಂದೇಶ ಕೊಡಲು ಹೋಗದೆ ಓರ್ವ ಹೀರೋನ ಅಗತ್ಯವೂ ಇಲ್ಲದೆ ವಿಭಿನ್ನ ಚಿತ್ರ ನಿರ್ಮಾಣ ಮಾಡಲು ಕೇವಲ ಎರಡು ಷೆಡ್ಯೂಲ್ ಗಳಲ್ಲಿ,  38 ದಿನಗಳ ಒಳಗೇ ಚಿತ್ರೀಕರಣ ಮುಗಿಸಿಯೇಬಿಟ್ಟರು ಮಹೇಶ್! ಅವರ ಹಿನ್ನೆಲೆಯನ್ನು ಅವರದೇ ಮಾತಿನಲ್ಲಿ ಕೇಳಿ…

ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದು, ಅಂತಾರಾಷ್ಟ್ರೀಯ ವ್ಯವಹಾರದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆಯಲು ಹೋದದ್ದು ಇಂಗ್ಲೆಂಡಿಗೆ! ಅದಾದ ಬಳಿಕ ಒಂದಷ್ಟು ದಿನ ಅಲ್ಲೇ ಕೆಲಸ ಮಾಡಿ  ಬಹು ದಿನದ ಕನಸಾದ ಫಿಲಂ ಮೇಕಿಂಗ್ ಬಗ್ಗೆ ಅಭ್ಯಸಿಸಲು, ಲಂಡನ್ ಫಿಲ್ಮ್ ಅಕ್ಯಾಡೆಮಿಯೊಳಗೇ ನಿರ್ದೇಶನದಲ್ಲಿ ಡಿಪ್ಲೊಮಾ ಪಡೆದಾನಂತರ, ಅಲ್ಲೇ 7-8 ಕಿರುಚಿತ್ರ ತಯಾರಿಸಿದ್ದೇನೆ. ಅಲ್ಲಿಂದ ಭಾರತಕ್ಕೆ ಮರಳಿದಾಗ ಮೊದಲಿಗೆ  ಸ್ವ-ಇಚ್ಛೆಯಿಂದ ನಾನು ಸುನೀಲ್ ಕುಮಾರ್ ದೇಸಾಯಿಯವರ ಸಹಾಯಕನಾಗಿ ದುಡಿದೆ. ರಮೇಶ್ ಅರವಿಂದ್ ರವರ ‘ರೇ’ ಮೊದಲ ಚಿತ್ರ. ಹೀಗೆ ಒಂದಷ್ಟು ಅನುಭವ ಗಳಿಸಿ ಮತ್ತೆ ಮರಳಿದ್ದೆ ಲಂಡನ್ ಗೆ, 2016 ಡಿಸೆಂಬರ್ ನಲ್ಲಿ. ಅಲ್ಲಿ ಈ ಬಾರಿ ನಮ್ಮ ಮಿತ್ರರಾದ ವಿವೇಕ್ ಕೊಡಪ್ಪಾರವರಿಗೆ ನನ್ನ ನೂತನ ಕಥೆಯೊಪ್ಪಿಸಿ 2017ರ ಫೆಬ್ರವರಿಯಲ್ಲೇ ಸಕಲ ಸವಲತ್ತುಗಳ ಹೊಂದಿಸಿಕೊಂಡು ಭಾರತಕ್ಕೆ ವಾಪಾಸಾದೆ.

ನಾನೊಬ್ಬ ಫಿಲಂಮೇಕರ್..! ನಾನು ಯಾರಿಗೂ ಮೇಲಲ್ಲ….! ನನಗಿಂತ ತಿಳಿದವರಿಂದ ಕಲಿತುಕೊಳ್ಳುವ, ನನ್ನಷ್ಟೂ ಅರಿಯದವರಿಗೆ ಕಲಿಸುವ ಸೌಜನ್ಯ-ಸಾಮರ್ಥ್ಯ ಮೈಗೂಡಿಸಿಕೊಂಡಿದ್ದೇನೆ ನನ್ನ ಈ 34 ವರ್ಷಗಳ ಬಾಳ ಪಯಣದನುಭವದಿಂದ, ಎನ್ನುತ್ತಾ ಆತ್ಮಸ್ಥೈರ್ಯದಿಂದ ಅಂತರಾಳವ ಸರಾಗವಾಗಿ ಬಿಚ್ಚಿಕೊಳ್ಳುವ ಮಹೇಶ್ ಸೀದಾ-ಸಾದಾ ಯುವ ನಿರ್ದೇಶಕರೇ!

ಇನ್ನು ನಿಮ್ಮ ಚಿತ್ರ ಶುರುವಾದಾಗಲೂ ಸೆನ್ಸಾರ್ ಗೆ ಪ್ರಸ್ತುತಪಡಿಸುತ್ತಿರುವ ಈ ವೇಳೆಯಲ್ಲೂ ನಿರಾಸೆ-ಹತಾಶೆ-ವಿಷಾದಗಳೇನಾದರೂ ಕಾಡಿವೆಯೇನು..ಎಂದಾಗ…ಮಹೇಶ್…, “..ಈ ವಿಚಾರದಲ್ಲಿ ನಾನು ಬಹಳ ಅದೃಷ್ಟ ಮಾಡಿದವನೆಂದು ಭಾವಿಸುತ್ತೇನೆ. ಮೊದಲಿಂದ ಕೊನೆಯ ತನಕ ನನಗೆ ಯಾವುದೇ ತೊಂದರೆಗಳಾಗಿಲ್ಲ. ನನ್ನ ಟೀಮ್ ಬಹಳ ಬೆಂಬಲಿಸಿದೆ ನನ್ನನ್ನು. ಚಿತ್ರೀಕರಣ ಮಾಡುವಾಗ ನನ್ನದೇ ಒಂದು ಫಾರ್ಮೆಟ್ ಇದೆ. ನಟ-ನಿರ್ದೇಶಕರಾದ ರವಿಚಂದ್ರನ್ ಹೇಳುವ ಹಾಗೇ ಯಾವುದೇ ನಿರ್ದೇಶಕ ತನಗೆ ಹ್ಯಾಗೆಲ್ಲಾ ಬೇಕೋ ಹಾಗೆ ಮಾತ್ರ ತನ್ನ ಚಿತ್ರವನ್ನು ನಿರ್ಮಾಣ ಮಾಡುತ್ತಾನೆ. ಬೇರೆಯವರ, ಪ್ರೇಕ್ಷಕರ ಆಶಯಕ್ಕೆ, ಲೆಕ್ಕಾಚಾರಕ್ಕೆ ಅನುಗುಣವಾಗಿ ತಾನು ಚಿತ್ರಮಾಡಲು ಸಾಧ್ಯವಿಲ್ಲ. ನನ್ನ ಸಮಕಾಲೀನರೂ ಬಹಳಷ್ಟು ನಿರ್ದೇಶಕರು ಇಂದು ಒಬ್ಬರಿಗೊಬ್ಬರು ಅರಿತು ನಡೆಯುವ, ರಾಜಿ ಮಾಡಿಕೊಳ್ಳುವವರೇ ಆಗಿದ್ದಾರೆ. ನಮ್ಮಲ್ಲಿ ಸ್ಪರ್ಧೆಯ ಮನೋಭಾವ ಇಲ್ಲ. ಯಶಸ್ಸು ಸಿಗುತ್ತೋ ಬಿಡುತ್ತೋ, ಆ ಚಿಂತೆ ನಮಗೇಕೆ ..?!?.., ದೇವರಿಗೆ ಬಿಡೋಣಾ ಎನ್ನುವ ಮಹೇಶ್ ಗೆ ‘ಮಹಿರ’ ಮಾಡುವಲ್ಲಿ ಕಥೆ-ಚಿತ್ರಕಥೆ-ನಿರ್ದೇಶನ-ಸಂಭಾಷಣೆ ನನ್ನ ಹೊಣೆಗಾರಿಕೆ. ಗೆಳೆಯ ಪ್ರಶಾಂತ್ ಪಿ.ಎಮ್ಕೂಡಾ ಬಹಳ ಮುಖ್ಯವಾದ ಸಹಾಯಹಸ್ತ ನೀಡಿದ್ದಾರೆ.

ಇನ್ನು ಕಲಾವಿದರಾಗಿ, ರಾಜ್. ಬಿ.ಶೆಟ್ಟಿ., ಬಾಬು ಹಿರಣ್ಣಯ್ಯನಂಥ ಹಿರಿಯರು, ಬಾಲಾಜಿ ಮನೋಹರ್, ಕೆ.ಪಿ.ಶ್ರೀಧರ್,  ಇವರೆಲ್ಲಾ ನನ್ನ ಸೆಟ್ ಗೆ, ಶೂಟಿಂಗ್ ಗೆ ಲೋಕೇಶನ್ ಗಳಿಗೆ ಮಗುವಾಗಿ ಬಂದು ಹುಲಿಯಾಗಿ ನಟಿಸಿ, ನಗುನಗುತ್ತಾ ಮರಳುತ್ತಿದ್ದವರು. ನಾನು ಶೂಟ್ ಶುರು ಮಾಡಿದೆ ಎಂದರೆ ಅಲ್ಲಿ ಶಿಸ್ತು ಇದ್ದೇ ಇರುತ್ತೆ. ಅನಾವಶ್ಯಕ ಮಾತುಗಳಿರುವುದಿಲ್ಲ.  ‘’ಐ ಯಾಮ್ ಸೀರಿಯಸ್ ಇನ್ ಟು ಮೈ ಬಿಸಿನೆಸ್..!’’, ಎಂದುಸುರುವ ಮಹೇಶ್.[7975037001]. 

ನಮ್ಮ ಚಿತ್ರಕ್ಕೆ ನನ್ನ ಸ್ಕ್ರಿಪ್ಟ್ ಒಂದು ಶಕ್ತಿ. ಈಗ ಚಿತ್ರೀಕರಣದ ಆನಂತರ 90% ಸಂತೃಪ್ತಿ ದೊರಕಿದೆ. ನಮ್ಮ ಸಿನೆಮಾದ ನೋಡುಗರ ತಲೆಗೆ ಯಾವುದೇ ವಿಚಾರವನ್ನು ತುರುಕಲು ನಾನಂತೂ ಯತ್ನಿಸಿಲ್ಲ. ಪುತ್ತೂರು-ಮಂಗಳೂರು-ಹೊನ್ನಾವರದ ಸುಂದರ ತಾಣಗಳಲ್ಲಿ ಮೊದಲನೇ ಷೆಡ್ಯುಲ್ ಮುಗಿಸಿ, ಎರಡನೇ ಷೆಡ್ಯೂಲ್ ಬೆಂಗಳೂರಿನಲ್ಲಿ ಸಂಪೂರ್ಣಗೊಳಿಸಿದೆ. ಇನ್ನು ನೀಲಿಮಾ-ರಾಕೇಶ್ ಸಂಗೀತ ‘ಮಹಿರ’ ಗೆ ದೊರಕಿದೆ. ಸಂಗೀತದಲ್ಲಿ ನೀಲಿಮಾ ಲಂಡನ್ ನಲ್ಲಿ ನನ್ನ ಒಳ್ಳೆಯ ಸ್ನೇಹಿತೆ, ಅವರ ಮೂಲ ಸಂಯೋಜನೆಗೆ ಬೆಂಗಳೂರಿನ ಪಕ್ಕಾ ತಂತ್ರಜ್ಞ- ಪ್ರೋಗ್ರಾಮಿಂಗ್ ತಜ್ಞ ರಾಕೇಶ್ ಕೈಜೋಡಿಸಿ  ಉತ್ತಮ ಸಂಗೀತ ನೀಡಿದ್ದಾರಂತೆ. ಮಣಿರತ್ನಂರವರ ಪ್ರಪ್ರಥಮ ಚಿತ್ರ ‘ಪಲ್ಲವಿ-ಅನುಪಲ್ಲವಿ’ಯಲ್ಲಿರುವಂತೆ ‘ಮಹಿರ’ದಲ್ಲೂ ಒಂದೇ ಹಾಡಿನಲ್ಲಿ ಅಮ್ಮ-ಮಗಳ ಸಂಬಂಧ-ದಿನಚರಿ ಎಲ್ಲವೂ ನಿರೂಪಿತವಾಗಿದೆಯಂತೆ ಎನ್ನುತ್ತಾ ಕುತೂಹಲ ಮೂಡಿಸುತ್ತಾರೆ ಮಹೇಶ್. ಮಿದುನ್-ಮುಕುಂದನ್ ರೀ-ರೆಕಾರ್ಡಿಂಗ್ ಮುಗಿದಿದ್ದು ಸೆನ್ಸಾರ್ ಎದುರು ಹೋಗುತ್ತಿರುವ  ಈ ಇಡೀ ಸಿನೆಮಾ ಎರಡೂವರೆ ಕೋಟಿಯ ವೆಚ್ಚದ್ದಾಗಿದ್ದು ಬಿಡುಗಡೆಯಾದಾಗ ಮಲ್ಟಿಪ್ಳೆಕ್ಸ್ ವೀಕ್ಷಕರೇ ತಮ್ಮ ನೋಡುಗರೆಂದು ಖಾತ್ರಿಯಾಗಿ ಪ್ರಚಾರದಲ್ಲಿ ಮುಂದಿರುವ ‘ಮಹಿರ’ ಚಿತ್ರದ ಮಹೇಶ್, ಸಿಇಒ ಕೂಡಾ…ಕಾರಣ ಅವರ ನಿರ್ಮಾಪಕರೋ ಲಂಡನ್ ವಾಸಿ..!! ಅವರದೇ ಆದ ‘ಹೊನ್ನುಡಿ’ ಪ್ರೊಡಕ್ಷನ್ಸ್ ವ್ಯವಸ್ಥಾಪಕ ನಿರ್ದೇಶಕರೂ ಇವರೇ.

‘‘ನನ್ನ ತಂದೆ-ತಾಯಿ ಚೆನ್ನಾಗಿ ಬೆಳೆಸಿ-ಓದಿಸಿ ಧರ್ಮದ ಹಾದಿಯನ್ನು ಪರಿಚಯಿಸಿಕೊಟ್ಟರು… ನಾನು ಶ‍್ರಮವಹಿಸಿ ಅಧ್ಯಯನ ಮಾಡಿ, ಇಂಗ್ಲೆಂಡ್ ನಲ್ಲೂ ವ್ಯಾಸಂಗ ಮಾಡಿ ನನ್ನ ಬದುಕಿನ ಗುರಿ ಬಲವಾಗಿರಿಸಿ ಒಂದು ಸದೃಢ ತಂಡದೊಂದಿಗೆ ಒಂದು ಸಿನೆಮಾ ಪೂರೈಸಿದ್ದೇನೆ.., ಇದೇ ನನ್ನ ಸತ್ಕರ್ಮ..!” ನಮ್ಮಲ್ಲಿ ಯಾವುದೇ ದುರುದ್ದೇಶಗಳಿಲ್ಲ. ಬಹಳ ನಿಸ್ಪೃಹತೆಯಿಂದ, ನಿರ್ದಿಷ್ಟ ಹೆಜ್ಜೆಗಳಲ್ಲಿ ಬರೇ 38 ದಿವಸಗಳಲ್ಲಿ ಎರಡೂ ಷೆಡ್ಯೂಲ್ ಚಿತ್ರೀಕರಣ ಮುಗಿಸಿ ಇನ್ನೇನು ನವೆಂಬರ್ ನಲ್ಲೇ ತೆರೆಗೆ ಬರುತ್ತದೆ ‘ಮಹಿರ’..! ಎಂದ ಮಹೇಶ್ ಕಣ್ಣಲ್ಲಿ ಹುರುಪು-ನಿರೀಕ್ಷೆ-ಆತ್ಮವಿಶ್ವಾಸ ಮೇಳೈಸಿತ್ತು. ಬಾಲ್ಕನಿಯಿಂದ ಸದಾಶಯವಿಷ್ಟೇ…ಲಂಡನ್ ನಿರ್ಮಾಪಕರು ಇನ್ನೂ ಹತ್ತಾರು ಚಿತ್ರಗಳನ್ನು ಇವರಿಂದ ಪೂರೈಸಲಿ, ಈ ಯುವ ನಿರ್ದೇಶಕನ ಬಾಳು ಬಂಗಾರವಾಗಲಿ..!   ಇದು ಬಾಲ್ಕನಿ ಸದಾಶಯ.

-ಡಾ|| ಸುದರ್ಶನ ಭಾರತೀಯ, 7022274686, editor@balkaninews.com

 

Tags

Related Articles