ಚಿತ್ರ ವಿಮರ್ಶೆಗಳುಬಾಲ್ಕನಿಯಿಂದಸುದ್ದಿಗಳು

Review: ಕಾಡಿನ ನಿಗೂಢದೊಂದಿಗೆ ತೆರೆದುಕೊಳ್ಳುವ ಥ್ರಿಲ್ಲರ್ ‘ಮನರೂಪ’

ರೇಟಿಂಗ್ : 3.5/5

ಚಿತ್ರ: ಮನರೂಪ

ಕಲಾವಿದರು: ದಿಲೀಪ್ ಕುಮಾರ್, ಅನುಷಾ ರಾವ್, ನಿಶಾ ಬಿ.ಆರ್, ಆರ್ಯನ್, ಅಮೋಘ ಸಿದ್ದಾರ್ಥ್, ಪ್ರಜ್ವಲ್ ಗೌಡ ಹಾಗೂ ಇತರರು

ನಿರ್ದೇಶನ: ಕಿರಣ್ ಹೆಗ್ಡೆ

ಹೊಸ ಅಲೆಯ ಚಿತ್ರವಾಗಿ ಗುರುತಿಸಿಕೊಂಡು ಆ ಮೂಲಕವೇ ಭಾರೀ ನಿರೀಕ್ಷೆಗೆ ಕಾರಣವಾಗಿದ್ದ ಚಿತ್ರ ‘ಮನರೂಪ’. ಕಿರಣ್ ಹೆಗ್ಡೆ ನಿರ್ದೇಶನದ ಈ ಸಿನಿಮಾವೀಗ ತೆರೆ ಕಂಡಿದೆ. ಆರಂಭದಿಂದ ಇಲ್ಲಿಯವರೆಗೂ ಯಾವ್ಯಾವ ರೀತಿಯಲ್ಲಿ ಈ ಸಿನಿಮಾ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತೋ, ಪ್ರೇಕ್ಷಕರೆಲ್ಲ ಇದರ ಬಗ್ಗೆ ಯಾವ ಥರದ ನಿರೀಕ್ಷೆಗಳನ್ನಿಟ್ಟುಕೊಂಡಿದ್ದರೋ ಅದೆಲ್ಲವನ್ನು ಮೀರಿದ ಕಂಟೆಂಟಿನೊಂದಿಗೆ ಎಲ್ಲರನ್ನೂ ಖುಷಿಗೊಳಿಸಿದೆ.

ಕಾಡು ಮತ್ತು ಅದರೊಳಗಿನ ನಿಗೂಢ, ಅದರ ಜೊತೆ ಜೊತೆಗೇ ಅನಾವರಣಗೊಳ್ಳುವ ಐದು ಮಂದಿಯ ಮನೋಲೋಕ… ಈ ಜುಗಲ್ಬಂಧಿಯೊಂದಿಗೆ ಇಡೀ ಸಿನಿಮಾವನ್ನು ಕಟ್ಟಿಕೊಟ್ಟಿರುವ ನಿರ್ದೇಶಕರು ಒಂದರೆಕ್ಷಣವೂ ಬಿಗುವು ಸಡಿಲಗೊಳ್ಳದಂತೆ ನೋಡಿಕೊಂಡಿದ್ದಾರೆ. ಅದು ‘ಮನರೂಪ’ದ ಅಸಲೀ ಶಕ್ತಿಯೆನ್ನಲಡ್ಡಿಯಿಲ್ಲ.

ಕಾಡು ಮತ್ತು ಮನುಷ್ಯನ ಮನಸು ಇವೆರಡಕ್ಕೂ ಅವಿನಾಭಾವ ಸಂಬಂಧಗಳಿವೆ. ‘ಮನರೂಪ’ ಚಿತ್ರದಲ್ಲಿ ಅವೆರಡನ್ನೂ ಬ್ಲೆಂಡ್ ಮಾಡಿರುವ ಕಿರಣ್ ಹೆಗ್ಡೆ ಎಲ್ಲ ಸೂತ್ರಗಳನ್ನು ಮೀರಿಕೊಂಡ ಚೆಂದದ ಕಥೆ ಹೇಳಿದ್ದಾರೆ. ಕಾಡಿನ ಕಥೆ ಎಂದರೇನೇ ಥ್ರಿಲ್ ಆಗಿ ನೋಡಲು ತುದಿಗಾಲಲ್ಲಿ ನಿಲ್ಲುವ ಪ್ರೇಕ್ಷಕರ ಸಂಖ್ಯೆ ಕನ್ನಡದಲ್ಲಿ ಗಣನೀಯವಾಗಿದೆ. ಆ ಪ್ರೇಕ್ಷಕ ವಲಯ ‘ಮನರೂಪ’ದತ್ತ ಆಸಕ್ತಿ ಹೊಂದಿದ್ದದ್ದೂ ಕೂಡಾ ಆ ಕಾರಣದಿಂದಲೇ. ಆದರಿಲ್ಲಿ ಅದೆಲ್ಲದರಾಚೆಗೂ ಬೆರಗು ಬಚ್ಚಿಟ್ಟುಕೊಂಡಿರೋ ಕಥೆಯನ್ನೇ ಕಿರಣ್ ಹೆಗ್ಡೆ ಅನಾವರಣಗೊಳಿಸಿದ್ದಾರೆ. ಎಲ್ಲ ವರ್ಗಗಳ ಪ್ರೇಕ್ಷಕರೂ ನೋಡಿ ಎಂಜಾಯ್ ಮಾಡುವ ರೀತಿಯಲ್ಲಿ ‘ಮನರೂಪ’ ಮೂಡಿ ಬಂದಿದೆ.

ಐದು ಪಾತ್ರಗಳ ಮೂಲಕ ಇಲ್ಲಿ ಎಲ್ಲರ ಮನೋಲೋಕವನ್ನು ತೆರೆದಿಡುತ್ತಲೇ ಒಂದು ಜನರೇಷನ್ನಿನ ಮೆಂಟಾಲಿಟಿಯ ಮೇಲೆ ಬೆಳಕು ಚೆಲ್ಲುವ ಪ್ರಯತ್ನವನ್ನಿಲ್ಲಿ ಮಾಡಲಾಗಿದೆ. ಈ ಸಿನಿಮಾ ಬಹುತೇಕ ಕಾಡಲ್ಲಿಯೇ ನಡೆಯುತ್ತದೆ. ಅದೆಲ್ಲವನ್ನೂ ಕಣ ಮನ ಸೆಳೆಯುವಂತೆಯೇ ಕಟ್ಟಿ ಕೊಡಲಾಗಿದೆ.

ಇಂತಹ ಕಥೆಗಳಲ್ಲಿ ಸಾಮಾನ್ಯವಾಗಿ ಉದ್ದೇಶಪೂರ್ವಕವಾಗಿಯಾದರೂ ಹಾರರ್ ಅಂಶಗಳನ್ನು ಸೇರಿಸಲಾಗುತ್ತದೆ. ಆದರೆ ‘ಮನರೂಪ’ ಅದಕ್ಕಿಂತ ಭಿನ್ನವಾಗಿದೆ. ಇಲ್ಲಿನ ದೃಶ್ಯಗಳು ಹಾರರ್ ಸನ್ನಿವೇಶಗಳಿಲ್ಲದೆಯೂ ಬೆಚ್ಚಿ ಬೀಳಿಸುತ್ತವೆ, ಕ್ಷಣ ಕ್ಷಣವೂ ತುದೀ ಸೀಟಿಗೆ ತಂದು ಕೂರಿಸಿ ಕುತೂಹಲಕ್ಕೆ ಕೆಡವುತ್ತವೆ.

ಐದು ಜನರ ತಂಡ ಕಾಡೊಂದಕ್ಕೆ ಹೋದಾಗ ಅಲ್ಲೆದುರಾಗುಬ ವಿದ್ಯಮಾನಗಳೇ ಈ ಸಿನಿಮಾದ ಜೀವಾಳ. ಅದರೊಂದಿಗೆ ಮನುಷ್ಯನ ನಾನಾ ಹಳವಂಡ, ಮನಸ್ಥಿತಿಗಳನ್ನೂ ಕೂಡಾ ಜಾಹೀರು ಮಾಡಲಾಗಿದೆ. ನಿರ್ದೇಶಕರು ಎಲ್ಲ ಸೂತ್ರಗಳನ್ನು ಮೀರಿಕೊಂಡು ಹೊಸತೇನನ್ನೋ ಸೃಷ್ಟಿಸ ಬೇಕೆಂಬ ಹಂಬಲದಿಂದಲೇ ಇಲ್ಲಿ ದೃಶ್ಯ ಕಟ್ಟಿದ್ದಾರೆ. ಈ ಕಾರಣದಿಂದಲೇ ಈ ಸಿನಿಮಾ ಪ್ರತೀ ಫ್ರೇಮುಗಳಲ್ಲಿಯೂ ತಾಜಾತನದಿಂದ ನೋಡುಗರ ಮನ ಮುಟ್ಟುತ್ತದೆ.

ಗೋವಿಂದ ರಾಜ್ ಅವರ ಕ್ಯಾಮೆರಾ ಕುಸುರಿ ಕಾಡಿನ ನಾನಾ ಚಹರೆಗಳನ್ನು ಕಣ್ಣಿಗೆ ಹಬ್ಬವೆಂಬಂತೆ ಕಟ್ಟಿ ಕೊಟ್ಟಿದೆ. ಪ್ರತೀ ಪಾತ್ರಗಳೂ ಮುಖ್ಯವೆನಿಸುತ್ತವೆ. ಪ್ರತೀ ಕಲಾವಿದರೂ ಆಯಾ ಪಾತ್ರಗಳಿಗೆ ಜೀವ ತುಂಬಿರುವ ರೀತಿ ಆಪ್ತವೆನ್ನಿಸುತ್ತೆ. ಅನುಷಾ ರಾವ್, ದಿಲೀಪ್ ಕುಮಾರ್, ನಿಶಾ, ಆರ್ಯನ್ ಮತ್ತು ಶಿವಪ್ರಸಾದ್ ಮುಂತಾದವರೆಲ್ಲ ತಂತಮ್ಮ ಪಾತ್ರಗಳಿಗೆ ಸಮರ್ಥವಾಗಿ ಜೀವ ತುಂಬಿದ್ದಾರೆ. ಮಹಾಬಲ ಸೀತಾಳಬಾವಿ ಸಂಭಾಷಣೆಯೂ ಸಮರ್ಥವಾಗಿದೆ. ಒಟ್ಟಾರೆಯಾಗಿ ಹೊಸಾ ಬಗೆಯ ಥ್ರಿಲ್ ಗಾಗಿ ಈ ಸಿನಿಮಾವನ್ನು ನೋಡಲೇ ಬೇಕಿದೆ.

ಸಾರ್ವಜನಿಕರಿಗೆ ಸುವರ್ಣಾವಕಾಶ: ವೈರಲ್ ಆಯ್ತು ಪುನೀತ್ ಹಾಡಿದ ಸಾಂಗು

#Manaroopa #ManaroopaMovie  #ManaroopaReview #KannadaSuddigalu

Tags