ಸುದ್ದಿಗಳು

ಮಯೂರಿ ಇದೀಗ ‘ಹರಿಕೃಷ್ಣ ನಾರಾಯಣಿ’

ನಟಿ ಮಯೂರಿ ಇದೀಗ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದು, ಚಿತ್ರಕ್ಕೆ ‘ಹರಿಕೃಷ್ಣ ನಾರಾಯಣಿ’ ಅಂತ ಹೆಸರಿಟ್ಟಿದ್ದಾರೆ. ಮತ್ತು ಈ ತಿಂಗಳ ವರಮಹಾಲಕ್ಷ್ಮಿ ಹಬ್ಬದ ದಿನ ಚಿತ್ರದ ಮುಹೂರ್ತ ನಡೆಯಲಿದೆ.

ಬೆಂಗಳೂರು, ಆ. 06: ‘ಕೃಷ್ಣಲೀಲಾ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿರಿಸಿದ ಮುದ್ದು ಮುಖದ ಚೆಲುವೆ ಮಯೂರಿ. ಈ ಚಿತ್ರದ ಯಶಸ್ಸಿನ ನಂತರ ಹಿಂತಿರುಗಿ ನೋಡದ ಅವರು ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ‘ಇಷ್ಟಕಾಮ್ಯ’, ‘ನಟರಾಜ ಸರ್ವೀಸ್’, ‘ಕರಿಯಾ-2’ ಚಿತ್ರಗಳ ನಂತರ ಇದೀಗ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ’ರುಸ್ತುಂ’, ‘ನನ್ನ ಪ್ರಕಾರ’ ಹಾಗೂ ‘8 ಎಂ ಎಂ’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅದರೊಂದಿಗೆ ಮತ್ತೊಂದು ಸೇರ್ಪಡೆ ‘ಹರಿಕೃಷ್ಣ ನಾರಾಯಣಿ’

ಹರಿಕೃಷ್ಣ ನಾರಾಯಣಿ

ಚಿತ್ರದ ಹೆಸರಿಗೆ ತಕ್ಕಂತೆ ಇಲ್ಲಿ ಮಯೂರಿ ಅವರು ‘ನಾರಾಯಣಿ’ ಹೆಸರಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘ಕೃಷ್ಣ ಲೀಲಾ’ ಚಿತ್ರದ ನಂತರ ಚಿತ್ರದ ಶೀರ್ಷಿಕೆಯ ಹೆಸರಿನಲ್ಲಿ ಅವರು ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಈ ಚಿತ್ರವನ್ನು ಡಾ. ಗಿರಿಧರ್ ನಿರ್ದೇಶನ ಮಾಡುತ್ತಿದ್ದಾರೆ.

ಮುಹೂರ್ತ

ಮಯೂರಿ ಅಭಿನಯದ ಈ ಹೊಸ ಚಿತ್ರದ ಮುಹೂರ್ತ ಸಮಾರಂಭವು ಇದೇ ತಿಂಗಳು ವರಮಹಾಲಕ್ಷ್ಮಿ ಹಬ್ಬದ ದಿನ ನಡೆಯಲಿದೆ. ಇನ್ನು ಚಿತ್ರದ ನಿರ್ಮಾಪಕರಾದ ಸುಶೀಲ್ ಅವರೂ ಸಹ ಈ ಚಿತ್ರದ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.

ಅತಿಥಿ ಪಾತ್ರದಲ್ಲೂ ನಟನೆ

ನಟಿ ಮಯೂರಿ ಅವರು ನಾಯಕಿಯಾಗಿ ಮಾತ್ರವಲ್ಲದೇ ‘ಜಾನಿ ಜಾನಿ ಎಸ್ ಪಪ್ಪ’ ಚಿತ್ರದಲ್ಲಿ ಪ್ರೇಮಿಗಳನ್ನು ಒಂದು ಮಾಡುವ ‘ಪ್ರೇಮದೇವತೆ’ ಪಾತ್ರದಲ್ಲಿ ನಟಿಸಿ, ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದ್ದರು. ಇದೀಗ ಅವರು ಒಂದರ ಮೇಲೊಂದರಂತೆ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ ಸದಾ ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯರಾಗಿರುವುದು ಖುಷಿ ಪಡೋ ವಿಷಯ. ಅವರ ಮುಂದಿನ ಚಿತ್ರಕ್ಕೆ ಶುಭವಾಗಲಿ.

 

@ sunil Javali

Tags