ಸುದ್ದಿಗಳು

ಕನ್ನಡದ ಮೊದಲ ಮಹಿಳಾ ನಿರ್ಮಾಪಕಿ

ಕನ್ನಡದ ಖ್ಯಾತ ನಟಿ,ನಿರ್ಮಾಪಕಿ,ಹಿನ್ನೆಲೆ ಗಾಯಕಿ ಎಮ್.ವಿ.ರಾಜಮ್ಮ

ಬೆಂಗಳೂರು, ಸೆ.22: ಹೆಣ್ಣುಮಕ್ಕಳು ಹೊರಗೆ ಕಾಲಿಟ್ಟರೆ ಅಪಚಾರ ಅಂತಿದ್ದ ಕಾಲವದು. ಮನೆಯೊಳಗೆ ಇದ್ದುಕೊಂಡು ಸಂಸಾರ, ಗಂಡ , ಮಕ್ಕಳ ಜವಾಬ್ದಾರಿ ನೋಡಿಕೊಳ್ಳುವುದಷ್ಟೆ ಹೆಣ್ಣಿನ ಕರ್ತವ್ಯ, ಕೆಲಸ ಎನ್ನುವ ಧೋರಣೆ ಎಲ್ಲರಲ್ಲೂ ಇತ್ತು.

ಅಂತಹ ಕಾಲದಲ್ಲಿ ಯಾರಾದರೂ ಹೆಣ್ಣುಮಕ್ಕಳು ಮಗಳು ನಾಟಕ,ಕಲೆ, ಸಾಹಿತ್ಯ ಅಂತೇನಾದರೂ‌ ಹೊರಜಗತ್ತಿಗೆ ಕಾಲಿಟ್ಟರೆ ಮುಗಿತು.ಸಮಾಜ ಅವರನ್ನು ಬೇರೆ ರೀತಿಯಲ್ಲಿ ನೋಡಿ ಅವಮಾನಿಸುತ್ತಿತ್ತು.ಸಾಮಾನ್ಯ ಹೆಣ್ಣೊಬ್ಬಳ ಅಗಾಧ ಸಾಧನೆ

ಹಾಗಿದ್ದಾಗ ಒಂದು ಸಂಪ್ರದಾಯಸ್ಥ ಮನೆತನದಲ್ಲಿ ಹುಟ್ಟಿದ ಹೆಣ್ಣುಮಗಳೊಬ್ಬಳು ಓದಿದ್ದು ಕೇವಲ ಎಂಟನೇ ತರಗತಿಯವರೆಗೆ  ಆದರೆ ಅದರ ನಂತರ ಸಾಧಿಸಿದ್ದು ಮಾತ್ರ ಇಂದಿಗೂ, ಮುಂದಿನ ತಲೆಮಾರುಗಳು ನೆನಪಿಸಿಕೊಳ್ಳುವಂತಹ ಸಾಧನೆ.

ಸಮಾಜದ ಯಾವ ಅಣಕದ ಮಾತುಗಳಿಗೂ, ಅವಮಾನಗಳಿಗೂ ಹೆದರದೇ ಅನನ್ಯವಾದುದನ್ನು ಸಾಧಿಸಿದ ಮಹಿಳೆಯೇ ಕನ್ನಡದ ಖ್ಯಾತ ನಟಿ,ನಿರ್ಮಾಪಕಿ,ಹಿನ್ನೆಲೆ ಗಾಯಕಿ ಎಮ್.ವಿ.ರಾಜಮ್ಮ.ಕನ್ನಡದ ಅಪ್ಪಟ ಕಲಾವಿದೆ

ಹುಟ್ಟಿದ್ದು ಈಗಿನ‌ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿದ ಅಗಂಡನಹಳ್ಳಿ ಎಂಬ ಕುಗ್ರಾಮದಲ್ಲಿ. 8 ನೇ ತರಗತಿಯವರೆಗೆ ಓದಿದ ನಂತರ ಅವರನ್ನು ಸೆಳೆದು ಅಪ್ಪಿಕೊಂಡಿದ್ದು ಕಲಾದೇವಿ. ಬೆಂಗಳೂರಿನ ಆರ್ಯ ಬಾಲಿಕಾ ಶಾಲೆಯಲ್ಲಿ ಓದನ್ನು ಪೂರ್ಣಗೊಳಿಸಿ ನಾಟಕಗಳಲ್ಲಿ ನಟಿಸುವ ಆಸಕ್ತಿಯಿಂದ ಚಂದ್ರಕಲಾ ಥಿಯೇಟರ್ ಗೆ ಸೇರಿದರು. ಅಲ್ಲಿ ಹಲವು‌ ನಾಟಕಗಳಲ್ಲಿ‌ ಅಭಿನಯಿಸಿ ಎಲ್ಲರಿಂದ ಪ್ರಶಂಸಿಸಲ್ಪಟ್ಟರು. ನಂತರ 1936 ರಲ್ಲಿ ತೆರೆಕಂಡ ‘ಸಂಸಾರ ನೌಕೆ’ ಸಿನಿಮಾದಲ್ಲಿ ಬಿ.ಆರ್.ಪಂತುಲು ಜೊತೆ ನಟಿಸಿ ಮೊದಲ ಬಾರಿಗೆ ಬೆಳ್ಳಿತೆರೆಗೆ ಕಾಲಿಟ್ಟರು. ಅಲ್ಲಿಂದ ಅವರ ಪಯಣ ನಾಗಲೋಟದಲ್ಲಿ ಓಡತೊಡಗಿತು.


ನಾನಾ ಭಾಷೆಯಲ್ಲಿ ನಟನೆ

ಕನ್ನಡ ಮಾತ್ರವಲ್ಲದೆ ತಮಿಳಿನ ಅಂದಿನ ಎಲ್ಲಾ ಖ್ಯಾತ ನಾಯಕ  ನಟರೊಂದಿಗೆ ನಟಿಸಿದ ಕೀರ್ತಿ ಇವರದ್ದು. ಕನ್ನಡದ ಸಂಸಾರ ನೌಕೆ,  ರತ್ನಗಿರಿ ರಹಸ್ಯ, ಸ್ಕೂಲ್ ಮಾಸ್ಟರ್ ಸೇರಿದಂತೆ ಸುಮಾರು 60 ಸಿನಿಮಾಗಳು, ತಮಿಳಿನಲ್ಲಿ 80, ಹಿಂದಿಯಲ್ಲಿ1, ತೆಲುಗಿನಲ್ಲಿ 20 ಚಿತ್ರಗಳಲ್ಲಿ ನಟಿಸಿದ್ದಾರೆ.ಕನ್ನಡದ ಮೊದಲ ‌ಮಹಿಳಾ ನಿರ್ಮಾಪಕಿ

ತಮ್ಮ 76ವರ್ಷಗಳ ಜೀವಿತಾವಧಿಯಲ್ಲಿ ನಟಿಯಾಗಿ ಮಾತ್ರವಲ್ಲದೆ ಕನ್ನಡ ಸಿನಿಮಾ ಚಿತ್ರರಂಗದಲ್ಲಿ ಸಿನಿಮಾ ನಿರ್ಮಾಣ ಮಾಡಿದ ಮೊದಲ ಮಹಿಳಾ ನಿರ್ಮಾಪಕಿ ಕೂಡ ರಾಜಮ್ಮನವರು. 1943 ರಲ್ಲಿ ತಮ್ಮದೇ ಆದ ವಿಧ್ಯಾ ಫಿಲ್ಮ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ ” ರಾಧ ರಮಣ” ಚಿತ್ರವನ್ನು ಜ್ಯೋತೀಸ್ ಸಿನ್ಹಾ ಎಂಬುವವರು ನಿರ್ದೇಶನ ಮಾಡಿದ್ದರು. ಪಂತುಲು ನಾಯಕ ನಟರಾಗಿದ್ದ ಈ ಸಿನಿಮಾದ ಮೂಲಕ ಬಾಲಕೃಷ್ಣ ಮತ್ತು ಜಿ.ವಿ.ಅಯ್ಯರ್ ಸಿನಿಮಾರಂಗಕ್ಕೆ ಪ್ರವೇಶ ಪಡೆದರು.

ಹೀಗೆ ಸಾಮಾನ್ಯ ಹೆಣ್ಣುಮಗಳೊಬ್ಬಳು ಧೈರ್ಯದಿಂದ ಬರೀ ಗಂಡಸರೇ ಆಳುತ್ತಿದ್ದ ಕನ್ನಡ ಚಿತ್ರರಂಗದಲ್ಲಿ ಸಿನಿಮಾ ನಿರ್ಮಾಣದಂತಹ ದೊಡ್ಡ ಸಾಹಸಕ್ಕೆ ಕೈ ಹಾಕಿ ,ಯಶಸ್ವಿಯಾಗಿದ್ದು ಮಾತ್ರ ಅದ್ಭುತವೇ.

ಇಂದು ಚಿತ್ರರಂಗದಲ್ಲಿ ಮಿಂಚುತ್ತಿರುವ ಎಷ್ಟೋ ಹೆಣ್ಣುಮಕ್ಕಳಿಗೆ ರಾಜಮ್ಮನವರು ಮಾದರಿ ಎಂದರೆ ತಪ್ಪಾಗಲಾರದು.

@ ನಾಗೇಶ್ ಕಾರ್ತಿ

Tags