ಸುದ್ದಿಗಳು

ಹಿರಣ್ಯಕಶ್ಯಪುನಾದ ನವೀನ್ ಕೃಷ್ಣ ಮತ್ತು ಪ್ರಹ್ಲಾದನಾಗಿ ಅಚಿಂತ್ಯ

“ಶ್ರೀ ವಿಷ್ಣು ದಶಾವತಾರ” ಧಾರಾವಾಹಿಯಲ್ಲಿ ನಟಿಸಲಿರುವ ನವೀನ್ ಕೃಷ್ಣ ಮತ್ತು ಅಚಿಂತ್ಯ

ಬೆಂಗಳೂರು, ಜ.03: ಜೀ ಕನ್ನಡ ವಾಹಿನಿಯಲ್ಲಿ ಸೋಮ-ಶುಕ್ರ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತಿರುವ ‘ಶ್ರೀ ವಿಷ್ಣು ದಶಾವತಾರ’ ಧಾರಾವಾಹಿಯು ಹಲವು ವೈಶಿಷ್ಟ್ಯಗಳಿಂದ ಗಮನ ಸೆಳೆಯುತ್ತಿದೆ. ಪುರಾಣ ಕತೆಯ ಹೊಸಬಗೆಯ ನಿರೂಪಣೆ ಜನಮೆಚ್ಚುಗೆ ಗಳಿಸಿದೆ. ಮತ್ಸ್ಯಾವತಾರ, ಕೂರ್ಮಾವತಾರ, ವರಾಹಾವತಾರಗಳು ಮುಗಿದು ಇದೀಗ ದಶಾವತಾರಗಳಲ್ಲಿ ಮುಖ್ಯ ಹಾಗೂ ಜನಜನಿತವಾಗಿರುವ ‘ನರಸಿಂಹಾವತಾರ’ದ ವೈಭವ ಆರಂಭವಾಗುತ್ತಿದೆ.

ನರಸಿಂಹಾವತಾರದಲ್ಲಿ ಬರುವ ಅತಿಮುಖ್ಯ ಮತ್ತು ರೌದ್ರ ಪಾತ್ರ ಹಿರಣ್ಯಕಶ್ಯಪುವಿನದು. ಬೆಳ್ಳಿತೆರೆಯಲ್ಲಿ ಹಿರಣ್ಯಕಶ್ಯಪು ಎಂದರೆ ಡಾ.ರಾಜಕುಮಾರ್ ಒಬ್ಬರೇ. ಅಂಥ ಸವಾಲಿನ ಪಾತ್ರವನ್ನು ಕಿರುತೆರೆಯಲ್ಲಿ  ನಟ, ನಿರ್ದೇಶಕ ನವೀನ್ ಕೃಷ್ಣ ಅವರು ನಿರ್ವಹಿಸುತ್ತಿದ್ದಾರೆ.

ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ನವೀನ್ ಕೃಷ್ಣ

ಪಾತ್ರಕ್ಕೆ ತಕ್ಕ ದೇಹದಾಢ್ರ್ಯತೆ, ಉಗ್ರ ನೋಟ, ಭಾಷಾ ಶುದ್ಧತೆ, ಅಭಿನಯ ಕೌಶಲ್ಯ ಹೊಂದಿರುವ ನವೀನ್ ಕೃಷ್ಣ ಅವರು ಈ ಅವಕಾಶವನ್ನು ಸವಾಲಾಗಿ ಸ್ವೀಕರಿಸಿದ್ದಾರೆ. ಈಗಾಗಲೇ ಡಾ.ರಾಜ್ ಕುಮಾರ್ ಅವರು ಈ ಪಾತ್ರದಲ್ಲಿ ಛಾಪೊತ್ತಿರುವುದರಿಂದ, ಅವರಿಂದ ಸ್ಫೂರ್ತಿಗೊಂಡು ಈ ಪಾತ್ರ ನಿರ್ವಹಿಸುವುದಾಗಿ ವಿನಮ್ರವಾಗಿ ಹೇಳುತ್ತಾರೆ.

‘ಕದಂಬ’ ಚಿತ್ರದಲ್ಲಿ ಡಾ. ವಿಷ್ಣುವರ್ಧನ್‍ ರಂತಹ ಮೇರುನಟರ ಎದುರು ಸಲೀಸಾಗಿ ನಟಿಸಿ ಸೈ ಎನ್ನಿಸಿಕೊಂಡಿರುವ ನವೀನ್‍ ಕೃಷ್ಣ ಹಿರಿಯ ಕಲಾವಿದ ಶ್ರೀನಿವಾಸಮೂರ್ತಿ ಅವರ ಪುತ್ರ. ಧಾರಾವಾಹಿ, ಸಿನಿಮಾಗಳಲ್ಲಿ ನಟನೆ ಮಾತ್ರವಲ್ಲ, ನಿರ್ದೇಶನದಲ್ಲೂ ತಮ್ಮದೇ ಛಾಪು ಮೂಡಿಸಿದವರು. ಜೀ ಕನ್ನಡ ವಾಹಿನಿಯಲ್ಲಿ ಮೂಡಿಬಂದ ‘ಪತ್ತೇದಾರಿ ಪ್ರತಿಭಾ’ ಧಾರಾವಾಹಿ ನಿರ್ದೇಶಿಸಿದ್ದರು. ಪ್ರಸ್ತುತ ಕನ್ನಡ ಜಾನಪದ ಮಹಾಕಾವ್ಯ ಆಧಾರಿತ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದು ಯಶಸ್ವಿ ಎನ್ನಿಸಿಕೊಂಡಿದ್ದಾರೆ.

ಡ್ರಾಮ ಜ್ಯೂನಿಯರ್ಸ್ ಖ್ಯಾತಿಯ ಅಚಿಂತ್ಯ ಪ್ರಹ್ಲಾದನ ಪಾತ್ರದಲ್ಲಿ ಗಮನ ಸೆಳೆಯಲಿದ್ದಾನೆ . ಕಿರುತೆರೆ ನಟನೆಯಲ್ಲಿ ಖ್ಯಾತಿ ಪಡೆದ ಅರ್ಚನ ಅವರು ಕಯಾದು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ‘ಶ್ರೀ ವಿಷ್ಣು ದಶಾವತಾರ’ ಧಾರಾವಾಹಿಯಲ್ಲಿ ನರಸಿಂಹಾವತಾರದ ಸಂಚಿಕೆಗಳು ಇದೇ ಜನವರಿ 8 ಮಂಗಳವಾರದಿಂದ ಪ್ರಸಾರಗೊಳ್ಳಲಿದೆ.

Tags

Related Articles