ಸುದ್ದಿಗಳು

ನಾಟಕ ನೋಡಿ, ಕೇರಳ , ಕೊಡಗು ಪ್ರವಾಹಕ್ಕೆ ದೇಣಿಗೆ ನೀಡಿ

ನಾಟಕದ ಮೂಲಕ ಪ್ರವಾಹ ಸಂತ್ರಸ್ತರಿಗೆ ಧನ ಸಹಾಯ

ಹೆಣ್ಣೊಬ್ಬಳ ಸಲಿಂಗಪ್ರೇಮದ ಬಗ್ಗೆ ಬಂದಿರುವ ಮೊದಲ ನಾಟಕ ಇದಾಗಿದ್ದು, ಇದೇ ತಿಂಗಳು, ಕಲಾಗ್ರಾಮ ಮತ್ತು ರಂಗಶಂಕರದಲ್ಲಿ ಪ್ರದರ್ಶನವಿರುತ್ತದೆ.

ಬೆಂಗಳೂರು, ಆ.22: ಬೆಂಗಳೂರು ಥಿಯೇಟರ್ ಕಲೆಕ್ಟಿವ್ ತಂಡದ ವತಿಯಿಂದ ‘ಒಂದು ಪ್ರೀತಿಯ ಕಥೆ’ ನಾಟಕವು ಬೆಂಗಳೂರು ನಗರದ ಎರಡು ಕಡೆಗಳಲ್ಲಿ ಪ್ರದರ್ಶನಗೊಳ್ಳಲಿದೆ. ರಂಗಕರ್ಮಿ ವೆಂಕಟೇಶ್ ಪ್ರಸಾದ್ ಅವರ ನೇತೃತ್ವದ ಈ ನಾಟಕ ಪ್ರದರ್ಶನದಿಂದ ಬರುವ ಹಣವನ್ನು ಕೇರಳ ಹಾಗೂ ಕೊಡಗು ಪ್ರವಾಹ ಸಂತ್ರಸ್ತರಿಗೆ ನೀಡುವುದಾಗಿ ನಾಟಕ ತಂಡ ಪ್ರಕಟಿಸಿದೆ.

ಸಂತ್ರಸ್ತರ ನಿಧಿಗೆ ಅಲ್ಪ ಕಾಣಿಕೆ

“ಕೊಡಗು, ಕೇರಳ ಸಂತ್ರಸ್ತರ ನಿಧಿಗೆ ನಮ್ಮ ‘ಒಂದು ಪ್ರೀತಿಯ ಕಥೆ’ ನಾಟಕದ ಮುಂದಿನ ಎರಡು ಪ್ರದರ್ಶನಗಳ ಟಿಕೆಟ್ ಹಣವನ್ನು ಪೂರ್ತಿಯಾಗಿ ನೀಡಲು ನಿರ್ಧರಿಸಿದ್ದೇವೆ.ಒಂದು ರಂಗತಂಡವಾಗಿ ಇದಷ್ಟೇ ನಾವು ಮಾಡಲು ಸಾಧ್ಯ. ದಯವಿಟ್ಟು ಇದನ್ನು ಹೆಚ್ಚು ಜನರಿಗೆ ತಲುಪಿಸಿ. ಎಷ್ಟು ಹಣ ಒಟ್ಟಾಗುತ್ತದೋ ಅಷ್ಟನ್ನು ನಾವು ತಲುಪಿಸಬಹುದು” ಎಂದು ವೆಂಕಟೇಶ್ ಪ್ರಸಾದ್ ಅವರು ಹೇಳಿದ್ದಾರೆ.

ಸಲಿಂಗ ಪ್ರೇಮದ ಕಥೆ

ಒಂದು ಪ್ರೀತಿಯ ಕಥೆ, ಸಲಿಂಗ ಪ್ರೀತಿ ಮತ್ತು ಈ ಪ್ರೇಮಿಗಳ ಜೀವನದಲ್ಲಿ ಸಮಾಜ ಸೃಷ್ಟಿಸುವ ತಲ್ಲಣಗಳ ಕಥೆ. 1982ರಲ್ಲಿ ವಿಜಯ್ ತೆಂಡೂಲ್ಕರ್ ಅವರು ರಚಿಸಿದ ‘ಮಿತ್ರಾಚಿ ಗೋಶ್ಟ್’ ನಾಟಕವನ್ನು ವೆಂಕಟೇಶ್ ಪ್ರಸಾದ್ ‘ಒಂದು ಪ್ರೀತಿಯ ಕಥೆ’ ಎಂಬ ಹೆಸರಿನೊಂದಿಗೆ ಕನ್ನಡಕ್ಕೆ ರೂಪಾಂತರಿಸಿ ನಿರ್ದೇಶಿಸಲಿದ್ದಾರೆ.

ಪ್ರದರ್ಶನದ ದಿನಾಂಕ

ಈ ‘ಒಂದು ಪ್ರೀತಿಯ ಕಥೆ’ ನಾಟಕವು ಆಗಸ್ಟ್ 26 ರಂದು ಕಲಾಗ್ರಾಮ ಮಲ್ಲತ್ ಹಳ್ಳಿಯಲ್ಲಿ ಹಾಗೂ ಆಗಸ್ಟ್ 29 ರಂದು ರಂಗಶಂಕರದಲ್ಲಿ ಸಂಜೆ 7.30ಕ್ಕೆ ಪ್ರದರ್ಶನವಿದೆ. ಟಿಕೆಟ್ ಗಳು ರಂಗಶಂಕರ ಹಾಗೂ ಬುಕ್ ಮೈಶೋದಲ್ಲಿ ಲಭ್ಯವಿದ್ದು, ಪ್ರವೇಶ ದರ 150 /- ರೂಪಾಯಿ ವಿಧಿಸಲಾಗಿದೆ.

ಪ್ರೀತಿಯ ಪರಿಭಾಷೆಗಳು

ಪ್ರೀತಿ ಎಂಬುದು ಅನಾದಿಕಾಲದಿಂದಲೂ ಬಂದಿದ್ದರೂ ಪ್ರೀತಿಯ ಪರಿಭಾಷೆಗಳು ಕಾಲ ಕಾಲಕ್ಕೆ ಬದಲಾಗುತ್ತಿದ್ದರೂ, ಪ್ರೀತಿಗಂಟಿದ ಪೂರ್ವಾಗ್ರಹಗಳು ಇಂದು ನಿನ್ನೆಯದಲ್ಲ. ಅವುಗಳಲ್ಲಿ ಬಹಳ ಮುಖ್ಯವಾದುದು, ಗಂಡು ಹೆಣ್ಣಿನ ನಡುವಿನ ಪ್ರೀತಿಯೇ ಸಹಜ ಪ್ರೀತಿ, ಉಳಿದಿದ್ದೆಲ್ಲ ಅಸಹಜ ಪ್ರೀತಿ ಎಂಬುದು. ಸಂತಾನೋತ್ಪತ್ತಿಯೇ ಪ್ರೀತಿಯ ಬಹುಮುಖ್ಯ ಅಗತ್ಯ ಎಂಬ ಸಾಮಾಜಿಕ, ಧಾರ್ಮಿಕ ಕಾರಣಗಳೂ ಈ ಪೂರ್ವಾಗ್ರಹವನ್ನು ಬೆಳೆಸಿವೆ, ಪೋಷಿಸಿವೆ, ನಮ್ಮೆಲ್ಲರಲ್ಲಿ ಬೇರುಬಿಟ್ಟ ಮರವಾಗಿಸಿವೆ.

ಸಹಜ ನಿರೂಪಣೆಯ ನಾಟಕ

ಸಲಿಂಗ ಕಾಮ ವೈಯಕ್ತಿಕ ಆಯ್ಕೆಯಲ್ಲ. ನೈಸರ್ಗಿಕವಾಗಿಯೇ ಈ ರೀತಿಯ ಆಸಕ್ತಿಗಳು ಮೂಡುತ್ತವೆ ಎಂದು ವೈದ್ಯಕೀಯ ವಿಜ್ಞಾನ ತಿಳಿಸುತ್ತದೆ. ಪ್ರಾಣಿಗಳಲ್ಲಿಯೂ ಈ ಬಗೆಯ ಸಂಬಂಧಗಳನ್ನು ಕಾಣಬಹುದು. ಸಲಿಂಗವು ಅಸಾಮಾನ್ಯ ಪ್ರವೃತ್ತಿಯಲ್ಲ. ಗಂಡು ಹೆಣ್ಣಿನ ಪ್ರೀತಿ ಹೇಗೆ ಸಾಗುತ್ತದೆಯೋ ಹಾಗೆಯೇ ಇಬ್ಬರು ಹೆಣ್ಣು ಮಕ್ಕಳ ಪ್ರೇಮವನ್ನೂ ನಾಟಕದಲ್ಲಿ ಹೆಣೆಯಲಾಗಿದೆ.

ಸಲಿಂಗಿಗಳ ವಿವಾಹ ವಿಷಯ ಕುರಿತು ರಂಗಪ್ರಯೋಗಗಳಾಗಿದ್ದು ವಿರಳ. ಸಲಿಂಗ ವಿವಾಹ ಹಾಗೂ ಸಲಿಂಗ ಪ್ರೀತಿ ಅತಿ ಸಹಜವಾದುದು ಎನ್ನುವುದನ್ನು ಪ್ರತಿಪಾದಿಸಲು ಬೆಂಗಳೂರು ಥಿಯೇಟರ್ ಕಲೆಕ್ಟಿವ್’ ಈ ಪ್ರಯೋಗದ ಮೂಲಕ ಪ್ರಯತ್ನ ಪಡುತ್ತಿದೆ.

 

@ sunil Javali

Tags