ಸುದ್ದಿಗಳು

ಹಲವಾರು ವೈಶಿಷ್ಟತೆಗಳ ಮೂಲಕ ಗಮನ ಸೆಳೆಯುತ್ತಿರುವ ಹೊಸಬರ ಸಿನಿಮಾ ‘ಪಂಚಮುಖಿ’

ದೊಡ್ಡ ಜ್ಞಾನಿಯ ಪಾತ್ರವನ್ನು ‘ತಿಥಿ’ ಗಡ್ಡಪ್ಪ ಮಾಡಿರುವುದು ಚಿತ್ರದ ಪ್ರಮುಖ ಆಕರ್ಷಣೆ

ಬೆಂಗಳೂರು.ಜ.17:

ಸಿನಿಮಾರಂಗಕ್ಕೆ ಅನೇಕ ಪ್ರತಿಭಾವಂತರು ಬರುತ್ತಿದ್ದಾರೆ. ಹೀಗೆ ಇಲ್ಲೊಂದು ಉತ್ಸಾಹಿ ತಂಡವೊಂದು ‘‘ಪಂಚಮುಖಿ’’ ಹೆಸರಿನ ಸಿನಿಮಾ ಮಾಡುತ್ತಿದ್ದು, ಈಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಸದ್ಯ ಚಿತ್ರೀಕರಣದ ಹಂತದಲ್ಲಿರುವ ಈ ಚಿತ್ರದಲ್ಲಿ ‘ತಿಥಿ’ ಖ್ಯಾತಿಯ ಗಡ್ಡಪ್ಪ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟು ದಿನ ಬರೀ ಡಬಲ್ ಮೀನಿಂಗ್ ಡೈಲಾಗ್ ದೃಶ‍್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಇವರು ಚಿತ್ರದಲ್ಲಿ ದೊಡ್ಡ ಜ್ಞಾನಿಯ ಪಾತ್ರವನ್ನು ನಿರ್ವಹಿಸಿದ್ದಾರೆ.

ಚಿತ್ರದ ಬಗ್ಗೆ

ಶಾಂತಕುಮಾರ ಸ್ವಾಮಿಕಟ್ಟೆ ನಿರ್ದೇಶನ ಮಾಡುತ್ತಿರುವ ‘ಪಂಚಮುಖಿ’ ಚಿತ್ರದಲ್ಲಿ ‘ತಿಥಿ’ ಗಡ್ಡಪ್ಪ ಚಿತ್ರದಲ್ಲಿ ಅಘೋರಿ ಪಾತ್ರದಲ್ಲಿ ನಟಿಸುತ್ತಿರುವುದು ಚಿತ್ರದ ವಿಶೇಷವಾಗಿದ್ದು, ಈಗಾಗಲೇ ಇವರ ಭಾಗದ ಚಿತ್ರೀಕರಣ ನಡೆದಿದೆ. ಚಿತ್ರದ ನಾಯಕನಟರಾಗಿ ವಿಲಾಸ್ ರಾವ್ ಹಾಗೂ ನಾಯಕಿಯಾಗಿ ಪ್ರೀತಿ ನಟಿಸುತ್ತಿದ್ದು ನಿರ್ದೇಶಕ ಶಾಂತಕುಮಾರ ಸ್ವಾಮಿಕಟ್ಟೆ ಚಿತ್ರದಲ್ಲೊಂದು ವಿಶಿಷ್ಟ ಪಾತ್ರವನ್ನು ನಿರ್ವಹಿಸಿದ್ದಾರೆ.

 

ಗಡ್ಡಪ್ಪನ ಪಾತ್ರದಿಂದಲೇ ಚಿತ್ರಕ್ಕೊಂದು ತಿರುವು

ವಿಶೇಷವೆಂದರೆ, ಇಡೀ ಸಿನಿಮಾದ ಕಥೆ ನಡೆಯುವುದು ನಾಯಕ ಮತ್ತು ಮಂಗಳ ಮುಖಿ ಪಾತ್ರಗಳ ಮೂಲಕವಾದರೂ ಸಹ ಅದಕ್ಕೊಂದು ಸ್ಪಷ್ಟ ಚಿತ್ರಣ ಸಿಗುವುದು ಅಘೋರಿ ಪಾತ್ರ ಮಾಡಿರುವ ಗಡ್ಡಪ್ಪ ಪಾತ್ರದಿಂದ. ಚಿತ್ರದಲ್ಲಿ ಅಘೋರಿ ಪಾತ್ರಕ್ಕೆ ಹೆಚ್ಚಿನ ಮಹತ್ವವಿದ್ದು, ಇವರು ಹೇಳುವ ಹಾಗೆಯೇ ಸಿನಿಮಾದ ಕಥೆ ನಡೆಯುವುದು ಚಿತ್ರದ ವಿಶೇಷತೆಗಳಲ್ಲೊಂದು.

ಇವರೊಂದಿಗೆ ನಾಯಕನ ಪಾತ್ರವೂ ಸಹ ವಿಭಿನ್ನವಾಗಿದ್ದು, ನಾಯಕ ವಿಲಾಸ್ ರಾವ್ ಬೇರೆ ಬೇರೆ ಶೇಡ್ ಗಳಲ್ಲಿ ನಟಿಸಿದ್ದಾರೆ.

ಚಿತ್ರದಲ್ಲಿವೆ ಹಲವಾರು ವಿಶೇಷತೆಗಳು

‘ಪಂಚಮುಖಿ’ ಚಿತ್ರದ ಕಥೆ ವಿಭಿನ್ನವಾಗಿದ್ದು, ಸಂಭಾಷಣೆಯೂ ಸಹ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ. ಮೂಲತಃ ಕೃಷಿಕರಾಗಿರುವ ಕಾಂತರಾಜ್ ಸ್ವಾಮಿಕಟ್ಟೆ, ಇದೀಗ ಉದ್ಭವ ಪಿಕ್ಚರ್ಸ್ ಬ್ಯಾನರ್ ಮೂಲಕ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಉಳಿದಂತೆ ವಿಹಾನ್ ಸತೀಶ್ ಛಾಯಾಗ್ರಹಣವಿದ್ದು, ವಸಂತ್ ಹಾಗೂ ಶಾಂತಕುಮಾರ ಸ್ವಾಮಿಕಟ್ಟೆ ಸಂಭಾಷಣೆ ಬರೆದಿದ್ದಾರೆ.

ಹೀಗೆ ವಿಭಿನ್ನ ಕಥಾಹಂದರದೊಂದಿಗೆ ಗಮನ ಸೆಳೆಯುತ್ತಿರುವ ‘ಪಂಚಮುಖಿ’ ಸಿನಿಮಾ ಸದ್ಯ ಚಿತ್ರೀಕರಣದ ಹಂತದಲ್ಲಿದೆ.

 

#panchamukhi, #balkaninews #vilasrao, #preethi, #gaddappa

Tags