ಸುದ್ದಿಗಳು

ಭಟ್ಟರ ‘ಪಂಚತಂತ್ರ’ದ ಮೊದಲ ನೋಟಕ್ಕೆ ಹ್ಯಾಟ್ರಿಕ್ ಹೀರೋ ಶಿವಣ್ಣ

ವಿಹಾನ್, ಅಕ್ಷರಾ ಗೌಡ, ಸೋನಾಲ್ ನಟಿಸಿರುವ ಸಿನಿಮಾ ‘ಪಂಚತಂತ್ರ’

ಬೆಂಗಳೂರು, ಸೆ. 21: ವಿಕಟ ಕವಿ, ಚಂದನವನದ ವಿಶಿಷ್ಟ ವೈಪರೀತ್ಯಗಳ ಮನದಾಕಾಶದಲ್ಲಿ ತುಂಬಿಕೊಂಡ ವಿನೂತನ  ಮಾದರಿಯ ನಿರ್ದೇಶಕ ಯೋಗರಾಜ್ ಭಟ್ಟರ ‘ಪಂಚತಂತ್ರ’ ಚಿತ್ರದ ಮೊದಲ ನೋಟವನ್ನು ಡಾ. ಶಿವರಾಜ್ ಕುಮಾರ್ ಇದೀಗ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಈ ಚಿತ್ರದಲ್ಲಿ ವಿಹಾನ್, ಅಕ್ಷರಾ ಗೌಡ, ಸೋನಾಲ್ ಅಭಿನಯಿಸಿದ್ದು, ಈಗಾಗಲೇ ಈ ಚಿತ್ರದ ಸ್ಟಿಲ್ ಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.

ಮೊದಲ ನೋಟ

‘ಪಂಚತಂತ್ರ.. ಗುಡ್ ಲಕ್..  ಆಲ್ ದಿ ಬೆಸ್ಟ್.. ಚಿತ್ರದ ಮೊದಲ ಆಕರ್ಷಕವಾಗಿದೆ. ಈ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದಕ್ಕೆ ತುಂಬಾ ಖುಷಿಯಾಯಿತು. ನಾಯಕ ವಿಹಾನ್ ಆಕರ್ಷಕವಾಗಿ ಕಾಣಿಸುತ್ತಾರೆ. ಸಿನಿಮಾಗೆ ಶುಭವಾಗಲಿ’ ಎಂದ ಶಿವರಾಜ್ ಕುಮಾರ್ ಶುಭ ಹಾರೈಸುತ್ತಾ, ಚಿತ್ರದ ಮೊದಲ ಪೋಸ್ಟರ್ ಅನ್ನು ಬಿಡುಗಡೆ ಮಾಡಿದರು.

ಇತ್ತ ಶಿವಣ್ಣನಿಗೆ ಭಟ್ಟರ ಹೊಸ ಚಿತ್ರದ ಫಸ್ಟ್ ಲುಕ್ ಲೋಕಾರ್ಪಣೆ ಮಾಡುವುದಕ್ಕಿಂತಲೂ ಹೆಚ್ಚಿನ ಹುರುಪು ನಿನ್ನೆ ಭಟ್ಟರು ಶಿವಣ್ಣನ ಹೊಸ ಚಿತ್ರಕ್ಕೆ ದಿಗ್ದರ್ಶಕರಾಗುವುದಕ್ಕೆ ಒಪ್ಪಿದ ಬಗ್ಗೆ ಲೋಕಕ್ಕೆ ಹೇಳಿಕೊಳ್ಳುವುದರಲ್ಲೇ ತುಂಬಿತ್ತು…!! ಎಳೆಯ ಹುಡುಗನಂತೆ ಕೇಕೆ ಹಾಕುತ್ತಾ ಒಂದೇ ನಿಮಿಷದಲ್ಲಿ ‘ಲುಕ್’  ಬಿಡುಗಡೆ ಮಾಡಿ ಇನ್ನೊಂದು ನಿಮಿಷ ತಮ್ಮ ಹಾಗೂ ಭಟ್ಟರ ಹೊಸ ಚಿತ್ರದ ಕುರಿತು ಹೇಳಿಕೊಂಡು ಬೈ ಬೈ ಎಂದಿದ್ದರು ಶಿವಣ್ಣ…!!!

‘ಯುಥ್ ಪುಲ್’ ಕಥಾ ಹಂದರ

ನಿರ್ದೇಶಕ ಯೋಗರಾಜ್ ಭಟ್ ಈ ಚಿತ್ರದ ಮೂಲಕ ಈಗಿನ ಯುವ ಜನಾಂಗದ ಕಥೆಯನ್ನು ಹಾಸ್ಯದೊಂದಿಗೆ ನವಿರಾದ ಪ್ರೇಮಕಥೆಯನ್ನು ಹೇಳ ಹೊರಟಿದ್ದಾರೆ. ಚಿತ್ರದಲ್ಲಿ ಸಾಕಷ್ಟು ನೈಜತೆಗೆ ಹತ್ತಿರವಾಗಿರುವ ಅಂಶಗಳನ್ನು ಕಾಣಬಹುದು. ಹಾಗಂತಾ ಕೇವಲ ಯೂಥ್ಸ್ ಅಷ್ಟೇ ಅಲ್ಲ, ಇಡೀ ಕುಟುಂಬದವರೂ  ಕೂಡ ನೋಡುವಂತಹ ಹೊಸಬಗೆಯ ಕಥೆ ಹೆಣೆದು ತೆರೆಯ ಮೇಲೆ ತರುವ ಪ್ರಯತ್ನ ಮಾಡುತ್ತಿದ್ದಾರೆ.

 

ಚಿತ್ರದ ಬಗ್ಗೆ ಒಂದಿಷ್ಟು

ಈ ಚಿತ್ರವು ಯೋಗರಾಜ್‌ ಮೂವೀಸ್‌ ಬ್ಯಾನರ್‌ ನಲ್ಲಿ ತಯಾರಾಗುತ್ತಿದೆ. ಎಂದಿನಂತೆ ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ, ಸುಜ್ಞಾನ್‌ ಛಾಯಾಗ್ರಹಣ, ಶಶಿಧರ್‌ ಅಡಪ ಕಲಾನಿರ್ದೇಶನ, ಸುರೇಶ್‌ ಆರ್ಮುಗನ್‌ ಸಂಕಲನವಿದೆ.

‘ಪಂಚತಂತ್ರ’ಕ್ಕೆ ಒಗ್ಗೂಡಿರುವ ಸಕಲ ತಂತ್ರಜ್ಞರನ್ನು ಗಮನಿಸಿದರೆ ಈ ಬಾರಿ ಶತಾಯ ಗತಾಯ ಗೆಲ್ಲಲೇ ಬೇಕೆಂಬ ಪಣ ತೊಟ್ಟಂತೆ ತೋರುತ್ತಿದೆ. ಇದೇ ತಂಡ ಈ ಹಿಂದೆ ನಾಲ್ಕಾರು ಯಶಸ್ವಿ ಚಿತ್ರಗಳನ್ನು ಕೊಟ್ಟಿದ್ದು, ಆನಂತರದಲ್ಲಿ ಅಷ್ಟಾಗಿ ಪ್ರಭಾವ ಬೀರದ ಒಂದೆರಡು ಫಿಲಂಗಳಿಂದ ಹೊಸ ಪಾಠಗಳ ಕಲಿತರು ಭಟ್ಟರು! ಈ ಬಾರಿ ಪ್ರಾಯಶಃ ಭಟ್ಟರ ಲೆಕ್ಕಾಚಾರ ತಲೆಕೆಳಕಾಗಬಾರದು ಎಂಬ ಎಚ್ಚರದ ನಡೆ ಪಂಚತಂತ್ರದಲ್ಲಿ ಭಟ್ಟರು ಹೂಡಿದ್ದಾರೆ. ಸದ್ಯದಲ್ಲಿಯೇ ಈ ಚಿತ್ರದ ಟ್ರೈಲರ್ ಹಾಗೂ ಹಾಡುಗಳು ಬಿಡುಗಡೆಯಾಗಲಿವೆ.

ಒಟ್ಟಾರೆ ಭಟ್ಟರ ಒಂದೊಂದು ಪಗಡೆಯಾಟವೂ ಕುತೂಹಲಕಾರಿ, ವಿಸ್ಮಯಕಾರಿ, ಆಹ್ಲಾದಕಾರಿ…

ಕಾದು ನೋಡಿ ಅವರ ಅಪರೂಪದ ತಂತ್ರಗಳ ಈ “ಪಂಚತಂತ್ರ”ದಲ್ಲಿ..!

 

Tags