ಬಾಲ್ಕನಿಯಿಂದಸುದ್ದಿಗಳು

ಭಟ್ಟರ ‘ಪಂಚತಂತ್ರ’ಕ್ಕೆ ‘ಕುಂಬಳಕಾಯಿ’

ನಿನ್ನೆಯಷ್ಟೇ ಚಿತ್ರಕ್ಕೆ ನೆರವೇರಿದ 'ಕುಂಬಳಕಾಯಿ' ಪೂಜೆ

ಬೆಂಗಳೂರು,ಡಿ.5: ‘ಮುಗುಳುನಗೆ’, ‘ದನಕಾಯೋನು’ ಚಿತ್ರಗಳ ನಂತರ ಯೋಗರಾಜ್ ಭಟ್ ನಿರ್ದೇಶನ ‘ಪಂಚತಂತ್ರ’ ಚಿತ್ರದ ಚಿತ್ರೀಕರಣ ನಿನ್ನೆಯಷ್ಟೇ ಮುಕ್ತಾಯವಾಗಿದ್ದು, ಚಿತ್ರತಂಡದವರು ಕುಂಬಳಕಾಯಿ ಒಡೆದಿದ್ದಾರೆ.

ಚಿತ್ರದ ಬಗ್ಗೆ

ಈಗಾಗಲೇ ಚಿತ್ರದ ಪೋಸ್ಟರ್ ಮತ್ತು ಟೀಸರ್ ಎಲ್ಲರ ಗಮನ ಸೆಳೆದಿದ್ದು, ಚಿತ್ರದಲ್ಲಿ ವಿಹಾನ್, ಸೋನಲ್ ಮೊಂಥೆರೋ, ಅಕ್ಷರ ಗೌಡ, ರಂಗಾಯಣ ರಘು ಸೇರಿದಂತೆ ಹಲವರ ಅಭಿನಯವಿದೆ. ಚಿತ್ರದಲ್ಲಿ ಎರಡು ತಲೆಮಾರಿನ ನಡುವಿನ ಅಂತರದ ಕಹಾನಿಯನ್ನು ನೋಡಬಹುದು.

ರಂಗಪ್ಪ ಕಾಂಪ್ಲೆಕ್ಸ್ ಮತ್ತು ಬಾಂಡ್ ಗ್ಯಾರೇಜ್ ಎಂಬ ಎರಡು ತಾಣಗಳನ್ನು ಮುಖ್ಯವಾಗಿ ಉಲ್ಲೇಖಿಸಿ ಭಟ್ಟರು ಮಾಡಿದ್ದಾರೆ. 

ಯೂಥ್ ಫುಲ್ ಕಥಾಹಂದರ

‘ಪಂಚತಂತ್ರ’ ಯೂಥ್ ಫುಲ್ ಕಥೆಯಾಗಿದ್ದು, ಹಾಸ್ಯದೊಂದಿಗೆ ನವಿರಾದ ಪ್ರೇಮಕಥೆಯೂ ಸಹ ಚಿತ್ರದಲ್ಲಿದೆ. ಹಾಗೆಯೇ ಸಾಕಷ್ಟು ನೈಜತೆಗೆ ಹತ್ತಿರವಾಗಿರುವ ಅಂಶಗಳು ಚಿತ್ರದ ಮತ್ತೊಂದು ಹೈಲೈಟ್ ಆಗಿದ್ದು, ಯುವಜನತೆಯೊಂದಿಗೆ ಫ್ಯಾಮಿಲಿ  ಫ್ಯಾಮಿಲಿ ಪ್ರೇಕ್ಷಕರು ಸಹ ಸಿನಿಮಾ ನೋಡಬಹುದು..

ನಾಯಕ ಇಲ್ಲಿ ರೇಸ್ ಪ್ರಿಯ

ಚಿತ್ರದಲ್ಲಿ ನಾಯಕ ವಿಹಾನ್ ಓರ್ವ ಓರ್ವ ಕಾರ್ ರೇಸಿಂಗ್ ಪ್ರಿಯ ಹುಡುಗನಾಗಿ ಕಾಣಿಸಿಕೊಂಡಿದ್ದು, ಅವನ ಬದುಕಿನ ರೇಸ್ ನಲ್ಲಿ ಸ್ಪೀಡ್‌ ಬ್ರೇಕರ್ ಆಗಿ ಸೋನಲ್ ಮೊಂಥೆರೊ ಇರಲಿದ್ದಾರೆ.

ಇನ್ನು ಯೋಗರಾಜ್ ಭಟ್ ಮತ್ತು ಜಯಂತ ಕಾಯ್ಕಿಣಿ ಬರೆದಿರುವ ಹಾಡುಗಳಿಗೆ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದು, ಮಾಸ್ತಿ ಮತ್ತು ಕಾಂತರಾಜ್ ಅವರ ಕಥೆಯನ್ನು ಭಟ್ಟರೇ ಚಿತ್ರಕಥೆಯಾಗಿಸಿದ್ದಾರೆ. ಹರಿಪ್ರಸಾದ್ ಜಯಣ್ಣ ಹಾಗೂ ಹೇಮಂತ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಬಾಲ್ಕನಿ ಉವಾಚ: ನಿಜಕ್ಕೂ ಭಟ್ಟರು ನಿರ್ದೇಶಕರಾಗಿ ಸದಾ ಕಾರ್ಯೋನ್ಮುಖರಾಗಿರುವುದು ಚಂದನವನದ ಸುಯೋಗವೇ ಸರಿ!  ನೋಡಿ..! ‘ಪಂಚತಂತ್ರ’ ಭರತವರ್ಷದ ಪುರಾಣಗಳಲ್ಲಿ ಜನಜನಿತ ನೀತಿಕಥೆಗಳಲ್ಲಿ ಅದ್ವಿತೀಯವೇ. ಅತ್ತ ಅದನ್ನೂ ಸ್ಮರಿಸಿದ್ಹಾಂಗಾಯ್ತು , ಇತ್ತ ತಮ್ಮ ಯಾವತ್ತಿನ  ಅಪ್ಪಟ  ಸಾಮಾಜಿಕ ಕಥೆಗೆ  ಗ್ರಾಸ  ಒದಗಿಸಿದಂತೆಯೂ ಆಯ್ತು ಎಂದು ಸ್ವತಃ ಅವರೇ ಹೆಣೆದ ಚಿತ್ರಕಥೆ ಇನ್ನೇನು ಬೆಳ್ಳಿತೆರೆಯ ಮೇಲೆ ಹರವಿಕೊಳ್ಳಲಿದೆ. ಇಂದಿನ ಮಟ್ಟಿಗೆ ಹೇಳುವುದಾದರೆ, ಭಟ್ಟರಂಥಾ ‘ಜೀನಿಯಸ್’ ಸಿನಿಮಾಕರ್ತ ಅಪರೂಪವೇ!

ಒಟ್ಟಾರೆ 11 ಸ್ಮರಣೀಯ ಸಿನಿಮಾಗಳನ್ನು ಚಂದನವನಕ್ಕೆ ನೀಡಿದ ಭಟ್ಟರಿಗೆ ‘ಪಂಚತಂತ್ರ’ ವೈಶಿಷ್ಠಮಯ 12 ನೇ ಚಿತ್ರ. ಭರ್ಜರಿ ಒಂದು ಡಜನ್ ಚಿತ್ರಗಳ ಗುಚ್ಚವನ್ನೇ ಕನ್ನಡ ಕುಲ ಕೋಟಿಗೆ ಕೊಡುಗೆಯಾಗಿತ್ತ ಯೋಗರಾಜರ ಸೃಜನಾತ್ಮಕ ಚಿಂತನೆಗಳಿಗೆ ಎಣೆಯಿಲ್ಲ. ಅಂತೆಯೇ ಒಂದೊಂದು ಸಿನಿಮಾದಲ್ಲೂ ಅವರ ಭಾಷಾ ಪ್ರಯೋಗ, ಹಾಡುಗಳ ರಚನೆ, ತನ್ಮೂಲಕ ಪ್ರೇಕ್ಷಕರಿಗೆ ಸೂಚ್ಯವಾಗಿ ತಮ್ಮ ಮನದಾಳದ ಸಂದೇಶಗಳನ್ನು ರವಾನಿಸುವ ಪರಿ ಬಹುವೈಶಿಷ್ಟ್ಯಮಯ, ಕುತೂಹಲಕಾರಿ…!!

ಸದ್ಯ ‘ಪಂಚತಂತ್ರ’ದಲ್ಲೂ ಯೋಗರಾಜರ ವಿಶಿಷ್ಠ ‘ತಂತ್ರಗಾರಿಕೆ ಪಣಕ್ಕೆ ಒಡ್ಡಲ್ಪಟ್ಟಿವೆ. ಚಿತ್ರ ಸಂಗೀತದ ಮಟ್ಟಿಗೆ ಮತ್ತೊಮ್ಮೆ ಭಟ್ಟರು ಅವರ ನೆಚ್ಚಿನ ಸಂಯೋಜಕ ಹರಿಕೃಷ್ಣರಿಗೆ ಅಲವತ್ತುಕೊಂಡಿದ್ದಾರೆ. ಸತ್ಯವೇನೆಂದರೆ, ಚಂದನವನದಲ್ಲಿ ಭಟ್ಟರ ಒಡಲಾಳದ ಗೀತೆಗಳಿಗೆ ಹೆಚ್ಚಿನಂಶ ಧ್ವನಿಯಾದವರು ಸ್ವತಃ ಹರಿಕೃಷ್ಣರೇ ವಿನಃ ಬೇರೊಬ್ಬ ಸಂಗೀತ ಸಂಯೋಜಕರಲ್ಲ.

ಹೇಗೆ ಬಾಲಿವುಡ್ ನ ರಾಜ್ ಕಪೂರ್ ಗೆ ಮಹಾನ್ ಹಿನ್ನೆಲೆ ಗಾಯಕ ಮುಖೇಶ್ ಮೂಗಿನಲ್ಲಿ ಹಾಡಿದರೆ ಪ್ರೇಕ್ಷಕರಲ್ಲಿ ಸಂಚಲನ ಉಂಟಾಗುತ್ತಿತ್ತೋ, ಪ್ರಾಯಶಃ ಅದೇ ಮಟ್ಟಕ್ಕೆ ಚಂದನವನದ  (ಸು)ಯೋಗರಾಜ  ಭಟ್ಟರ  ಅಂತರ್ಧ್ವನಿಗೆ, ಟೀನೇಜ್ ಕುಚೇಷ್ಟೆಗಳಿಗೆ, ಸಮಾಜದ ಸೋಗಲಾಡಿತನವನ್ನು ಹಳಿಯುವ ತೆರನಾಗಿ ಪ್ರಸ್ತುತಿ ಪಡಿಸುವ ಕೊಂಚ ಉಡಾಫೆಯ ಭಾವ ಸೂಸುವ ಹರಿಕೃಷ್ಣರ ಕಂಠ ಸಿರಿ ಪರಿಣಾಮಕಾರಿಯಾದೀತು ಎಂಬ ಲೆಕ್ಕಾಚಾರ ..??

‘ಪಂಚತಂತ್ರ’ದ ಮೂಲಕ ಭಟ್ಟರು ತಮ್ಮ ಸಿನಿಮಾದ ಪ್ರಸ್ತುತಿ-ಪ್ರಚಾರಗಳಲ್ಲೂ ಪ್ರಸಕ್ತ ಚೌಕಟ್ಟನ್ನು ಮೀರಿದಂತೆ ಹೊಸ ಆಯಾಮಗಳನ್ನು ಮುಟ್ಟುತ್ತಿದ್ದಾರೆ. ಯೋಗರಾಜರ ಎಲ್ಲಾ ತಂತ್ರಗಳು ಫಲಿಸಲಿ ಎಂದು ಬಾಲ್ಕನಿ ನ್ಯೂಸ್ ಹಾರೈಸುತ್ತದೆ.

editor@balkaninews.com

Tags