ಸುದ್ದಿಗಳು

‘ರಣವಿಕ್ರಮ’ ನಿರ್ದೇಶಕನ ವಿವಾಹ ಬಂಧನ, ಆರತಕ್ಷತೆ…

ಪವನ್-ಅಪೇಕ್ಷ ಆರತಕ್ಷತೆಯಲ್ಲಿ ತಾರೆಯರು ಹಾಜರು!!

ಆರತಕ್ಷತೆ ಸಮಾರಂಭವು ನಿನ್ನೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಸಮಾರಂಭದಲ್ಲಿ ಚಂದನವನದ ದಿಗ್ಗಜರು ನವಜೋಡಿಗೆ ಹರಸಿಹಾರೈಸಿದರು.
ಬೆಂಗಳೂರು,ಆ.27: ಇತ್ತೀಚೆಗಷ್ಟೆ ನಿರ್ದೇಶಕ ಪವನ್​ ಒಡೆಯರ್ ವಿವಾಹ ಮಹೋತ್ಸವ ಬಾಗಲಕೋಟೆಯಲ್ಲಿ ನಡೆದಿತ್ತು. ಕುಟುಂಬಸ್ಥರ ಸಮ್ಮುಖದಲ್ಲಿ ಪವನ್​, ಗೆಳತಿ ಅಪೇಕ್ಷಾ ಜೊತೆಗೆ ಸಪ್ತಪದಿ ತುಳಿದಿದ್ದರು. ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ನಡೆದ ಗೂಗ್ಲಿ ಖ್ಯಾತಿಯ ನಿರ್ದೇಶಕ ಪವನ್ ಒಡೆಯರ್ ಮದುವೆ ಸಮಾರಂಭದಲ್ಲಿ ನಟ ಪುನೀತ್ ರಾಜ್‍ಕುಮಾರ್ ಭಾಗವಹಿಸಿ ನವ ದಂಪತಿಗೆ ಶುಭಕೋರಿದ್ದರು. ದೂರದ ಬಾಗಲಕೋಟೆಯಲ್ಲಿ ಮದುವೆಯಾದ್ದರಿಂದ ಚಂದನವನದ ಮಂದಿ ಹೆಚ್ಚಾಗಿ ಭಾಗವಹಿಸಿರಲಿಲ್ಲ. ಹೀಗಾಗಿ, ಆರತಕ್ಷತೆ ಸಮಾರಂಭವು ನಿನ್ನೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಈ ಸಮಾರಂಭದಲ್ಲಿ ಚಂದನವನದ ದಿಗ್ಗಜರು ನವಜೋಡಿಗೆ ಹರಸಿ-ಹಾರೈಸಿದರು.

ನಟ ,ನಿರ್ದೇಶಕರು ಹಾಜರು!!

ಪವನ್ ಒಡೆಯರ್ ಆರತಕ್ಷತೆ ಸಮಾರಂಭದಲ್ಲಿ ಖ್ಯಾತ ನಿರ್ದೇಶಕರು, ನಟರು ಹಾಜರಿದ್ದರು. ಹಿರಿಯ ನಟರಾದ ಅನಂತ್​ನಾಗ್​, ಗಾಯತ್ರಿ, ನಟರಾದ ವಿನಯ್ ರಾಜ್​ಕುಮಾರ್​, ಚಿಕ್ಕಣ್ಣ, ನಿರ್ದೇಶಕರಾದ ನಂದಕಿಶೋರ್​, ಸಂತೋಷ್ ಆನಂದ್​ರಾಮ್​, ನಟ ಜಗ್ಗೇಶ್‌, ಯೋಗರಾಜ್‌ ಭಟ್‌, ನಿರ್ಮಾಪಕರಾದ ರಾಕ್​ಲೈನ್ ವೆಂಕಟೇಶ್​, ಸೂರಪ್ಪ ಬಾಬು ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು..

ಡಿಸೆಂಬರ್ ನಲ್ಲಿ ನಡೆದ ನಿಶ್ಚಿತಾರ್ಥ

ಅಂದಹಾಗೇ ಕಳೆದ ಡಿಸೆಂಬರ್ ತಿಂಗಳಲ್ಲಿ ನಿರ್ದೇಶಕ ಪವನ್ ಒಡೆಯರ್ ಹಾಗೂ ನಟಿ ಅಪೇಕ್ಷಾ ಪುರೋಹಿತ್ ರವರ ನಿಶ್ಚಿತಾರ್ಥ ಸಮಾರಂಭ ಬಾಗಲಕೋಟೆಯ ಹರಿಪ್ರಿಯಾ ಹೋಟೆಲ್‍ನಲ್ಲಿ ನೆರವೇರಿತ್ತು. ಇಬ್ಬರ ಕುಟುಂಬದ ಆಪ್ತರ ಮಧ್ಯೆ ಸರಳವಾಗಿ ನಿಶ್ಚಿತಾರ್ಥ ನಡೆದಿದ್ದು, ಪರಸ್ಪರ ಇಬ್ಬರು ಉಂಗುರವನ್ನು ಬದಲಾಯಿಸಿಕೊಂಡಿದ್ದರು.

ನಿರ್ದೇಶಕ ಪವನ್ ಒಡೆಯರ್ `ರಣವಿಕ್ರಮ’, `ನಟರಾಜ ಸರ್ವಿಸ್’, `ಗೂಗ್ಲಿ’ ಹಾಗೂ `ಗೋವಿಂದಾಯ ನಮಃ’ ಸಿನಿಮಾಗಳನ್ನು ಮಾಡಿದ್ದಾರೆ. ಪವನ್ ಒಡೆಯರ್ ಸದ್ಯ ಪುನೀತ್ ರಾಜ್ ಕುಮಾರ್ ಅವರ `ನಟ ಸಾರ್ವಭೌಮ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

 

Tags