ಪುರುಷಮಕ್ಕಳುಮಹಿಳೆಲುಕ್ಸ್ಸುದ್ದಿಗಳು

ಪಾಕೆಟ್ ಮನಿ : ಇದು ಉಳಿತಾಯದ ವಿಷಯಗಳು

ಪಾವನಿಗೆ ಬೆಳೆದು ನಿಂತಿರುವ ಮಗನದ್ದೇ ಯೋಚನೆ. ಹೈಸ್ಕೂಲ್ ನಲ್ಲಿ ಕಲಿಯುತ್ತಿರುವ ಅವಳ ಮಗ ಬೇಕಾಬಿಟ್ಡಿ ಖರ್ಚು ಮಾಡುತ್ತಾನೆ. ಮೊದಲಿಗೆ ತಿಂಗಳಿಗೆ ಇಷ್ಟು ಎಂದು ಲೆಕ್ಕದ ಪಾಕೆಟ್ ಮನಿ ಕೊಡುತ್ತಿದ್ದ ಪಾವನಿ ಈಗ ಪ್ರತಿ ವಾರ ತನ್ನ ಮಗನ ಪಾಕೆಟ್ ಭರ್ತಿ ಮಾಡಬೇಕಾಗಿದೆ. ಹೋಗಲಿ, ಯಾವುದಕ್ಕೆ ಖರ್ಚು ಮಾಡುತ್ತಿದ್ದೀಯಾ ಎಂದು ಕೇಳಿದರೆ ಹಾರಿಕೆಯ ಉತ್ತರ ನೀಡುತ್ತಾನೆ.

ಲೆಕ್ಕ ಬರೆಯುವ ಅಭ್ಯಾಸವೂ ಇಲ್ಲ. ಕೇಳಿದರೆ ನಾಳೆಯಿಂದ ಬರೆಯುತ್ತೇನೆ ಬಿಡು ಎಂದು ಸಲೀಸಾಗಿ ಹೇಳಿಬಿಡುವ ಮಗ.. ಅದೆಷ್ಟೋ ನಾಳೆಗಳು ಕಳೆದು ಹೋಗುತ್ತಿವೆ. ಜೊತೆಗೆ ಹಣವೂ ಕೂಡಾ! ಒಬ್ಬನೇ ಮಗ ಎಂದು ಮುದ್ದು ಮಾಡಿ, ಕೇಳಿದಾಗಲೆಲ್ಲಾ ಒಂದೂ ಪ್ರಶ್ನೆ ಮಾಡದೇ ಹಣ ಕೊಡುತ್ತಿದ್ದ ಪಾವನಿ ಈಗ ತನ್ನ ತಪ್ಪಿಗೆ ಪ್ರತಿಕ್ಷಣ ಮರುಗುತ್ತಿದ್ದಾಳೆ. ಮಗನಿಗೆ ಉಳಿತಾಯ ಮಾಡುವುದು ಹೇಳಿ ಕೊಡುವುದಾದರೂ ಹೇಗೆ ಎಂದು ಕಂಗಲಾಗಿದ್ದಾಳೆ.

ಪಾಕೆಟ್ ಮನಿ ಯನ್ನು ಲೆಕ್ಕಕ್ಕಿಂತ ಜಾಸ್ತಿ ಖರ್ಚು ಮಾಡದೇ ಉಳಿತಾಯ ಮಾಡುವುದನ್ನು ಮಕ್ಕಳಿಗೆ ಸಣ್ಣ ವಯಸ್ಸಿನಲ್ಲೇ ಕಲಿಸಬೇಕು. ಇಷ್ಟು ಬೇಗ ಉಳಿತಾಯದ ವಿಷಯ ಮಕ್ಕಳಿಗೆ ಯಾಕೆ ಎಂದು ಆಲೋಚನೆ ಮಾಡುತ್ತಿದ್ದೀರಾ? ಎಳವೆಯಲ್ಲಿ ಅಂಥ ವಿಚಾರಗಳು ಅಭ್ಯಾಸವಾಗದಿದ್ದರೆ ಮುಂದೆ ಅಭ್ಯಾಸವಾಗುವುದು ತುಂಬಾ ಕಷ್ಟ. ಮಕ್ಕಳು ಬೆಳೆದಂತೆ ಅವರಿಗೆ ಉಳಿತಾಯದ ಅರಿವು ಆಗುವುದು ತುಂಬಾ ಕಷ್ಟ. ಬದಲಿಗೆ ತಮ್ಮ ಹೆತ್ತವರು ಕಷ್ಟಪಟ್ಟು ದುಡಿದ ಹಣವನ್ನು ಮನಸ್ಸಿಚ್ಛೆ ಖರ್ಚು ಮಾಡಿ ಮಜಾ ಮಾಡುವುದು ಮಾತ್ರ ತಿಳಿದಿರುತ್ತದೆ.

ಉಳಿತಾಯ ಮಾಡುವುದು ಒಂದು ಒಳ್ಳೆಯ ಅಭ್ಯಾಸ. ಮೊದಲಿಗೆ ತಮ್ಮ ಪಾಕೆಟ್ ಮನಿ ಯನ್ನು ಯಾವ ರೀತಿಯಾಗಿ ಖರ್ಚು ಮಾಡಬೇಕು ಎಂಬುದನ್ನು ಮಕ್ಕಳಿಗೆ ತಿಳಿಸಬೇಕು. ಅಗತ್ಯ ಇರುವ ವಸ್ತುಗಳನ್ನು ಪಟ್ಟಿ ಮಾಡಿ ಒಮ್ಮೆಯೇ ತೆಗೆದುಕೊಳ್ಳಬೇಕು. ಮತ್ತು ತೆಗೆದಂತಹ ವಸ್ತುಗಳನ್ನು ಹಾಳಾಗದಂತೆ ಜೋಪಾನ ಮಾಡುವುದನ್ನು ಕಲಿಸಬೇಕು. ಇನ್ನು ಮುಖ್ಯವಾದ ವಿಷಯ ಎಂದರೆ ಲೆಕ್ಕ ಬರೆದಿಡುವುದು. ಮಕ್ಕಳಿಗೆ ಏನೇ ಖರ್ಚು ಮಾಡಿದರೂ ಕಡ್ಡಾಯವಾಗಿ ಅದನ್ನು ಬರೆದಿಟ್ಟುಕೊಳ್ಳುವಂತೆ ಹೇಳಬೇಕು.

ಉದಾಹರಣೆಗೆ ಪೆನ್ನು, ರಬ್ಬರ್, ಚಾಕಲೇಟ್, ಐಸ್ ಕ್ರೀಮ್ ಹೀಗೆ ಏನೇ ತೆಗೆದುಕೊಂಡಿರಲಿ, ಅದನ್ನು ಬರೆಯಬೇಕು. ಹಾಗೆ ಬರೆಯುವುದರಿಂದ ತಾನು ಮಾಡಿದ ಖರ್ಚುಗಳ ವಿವರ ಮಗುವಿಗೆ ದೊರೆಯುತ್ತದೆ ಮತ್ತು ತಾನು ಅನಾವಶ್ಯಕವಾಗಿ ಎಲ್ಲಿ ಖರ್ಚು ಮಾಡಿದ್ದೇನೆ, ಎಲ್ಲಿ ಮಾಡಬಾರದಿತ್ತು ಎಂದು ತಿಳಿಯಲೂ ಕೂಡಾ ಬರೆದಿಟ್ಟ ಲೆಕ್ಕ ಉಪಯೋಗವಾಗುತ್ತದೆ.

ಸಾಮಾನ್ಯವಾಗಿ ಮಕ್ಕಳು ಮನೆಯ ಹಿರಿಯರನ್ನು ಅಥವಾ ಹೆತ್ತವರನ್ನು ಅನುಸರಿಸಿಕೊಂಡು ಹೋಗುತ್ತಾರೆ. ಸದಾ ಕಾಲ ನಿಮ್ಮ ರೀತಿ ನೀತಿಗಳನ್ನು ಗಮನವಿಟ್ಟು ನೋಡುತ್ತಿರುತ್ತಾರೆ. ನೀವು ಯಾವ ಥರ ಮಾತನಾಡುತ್ತೀರಿ, ಹೇಗೆ ವ್ಯವಹರಿಸುತ್ತೀರಿ ಹೀಗೆ ಎಲ್ಲಾ ವಿಷಯಗಳಲ್ಲಿ ಅವರಿಗೆ ನೀವೇ ಮಾದರಿ. ಉಳಿತಾಯದ ವಿಷಯದಲ್ಲೂ ಇಷ್ಟೇ. ಆದುದರಿಂದ ನೀವು ಉಳಿತಾಯ ಮಾಡುವುದು, ನೀವು ಲೆಕ್ಕಾಚಾರ ಬರೆದಿಡುವುದು ಇದೆಲ್ಲವೂ ಮಗುವಿನ ಮೇಲೆ ಪ್ರಭಾವ ಬೀರುತ್ತದೆ.

ನೀವು ಯಾವ ರೀತಿಯಲ್ಲಿ ಹಣವನ್ನು ಉಳಿತಾಯ ಮಾಡುತ್ತೀರಿ, ಯಾವ ರೀತಿ ಖರ್ಚು ಮಾಡುತ್ತೀರಿ ಎಂದೆಲ್ಲಾ ನಿಖರವಾಗಿ ಮಗುವಿಗೆ ತಿಳಿಯುತ್ತದೆ. ಕ್ರಮೇಣವಾಗಿ ಮಗುವಿಗೂ ಕೂಡ ಅದು ಅಭ್ಯಾಸವಾಗುತ್ತದೆ.

ಇನ್ನು ನೀವು ಕೊಟ್ಟಂತಹ ಪಾಕೆಟ್ ಮನಿ ಯನ್ನು ಮಗು ಯದ್ವಾತದ್ವಾ ಖರ್ಚು ಮಾಡುತ್ತಿದ್ದರೆ ದಯವಿಟ್ಟು ಗದರಿಸಬೇಡಿ. ಬದಲಿಗೆ ಯಾವುದಕ್ಕೆಲ್ಲಾ ಖರ್ಚು ಮಾಡುತ್ತಿದ್ದಾನೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿ. ನಂತರ ಅದು ಅನಿವಾರ್ಯವೇ? ಅಗತ್ಯಕ್ಕಿಂತ ಜಾಸ್ತಿ ಖರ್ಚು ಮಾಡಿದರೆ ಭವಿಷ್ಯಕ್ಕೆ ಕಷ್ಟ ಎಂಬ ವಿಚಾರ ಮಗುವಿಗೆ ಅರ್ಥ ಮಾಡುವ ರೀತಿಯಲ್ಲಿ ತಿಳಿಸಿ. ಇದರಿಂದ ಮಕ್ಕಳ ಮನಸ್ಸಿಗೆ ಘಾಸಿಯಾಗುವುದು ತಪ್ಪುತ್ತದೆ ಮತ್ತು ಉಳಿತಾಯ ಪಾಠವನ್ನು ತಿಳಿಸಿದ ಹಾಗೂ ಆಗುತ್ತದೆ. ಉಳಿತಾಯ ಮಾಡುವುದರ ಮೂಲಕ ಮಗುವಿಗೆ ಉತ್ತಮ ಭವಿಷ್ಯ ರೂಪಿಸುವಲ್ಲಿ ಸಹಕರಿಸಿ.

ಅನಿತಾ ಬನಾರಿ

ರಶ್ಮಿಕಾ ಹುಟ್ಟುಹಬ್ಬಕ್ಕೆ ವಿಜಯ ದೇವರಕೊಂಡ ಕೊಟ್ಟ ಭರ್ಜರಿ ಗಿಫ್ಟ್ ಏನು!!

#pocketmoney, #balkaninews

Tags