ಸುದ್ದಿಗಳು

ಅತ್ಲಾಗೋದ್ರೆ ಅತ್ಲಾಗೆ, ಇತ್ಲಾಗ್ ಬಂದ್ರೆ ಇತ್ಲಾಗೆ: ಭಟ್ಟರ ಮತ್ತೊಂದು ಕಚಗುಳಿ ಸಾಂಗ್

ಗಮನ ಸೆಳೆದ ‘ಪ್ರೀಮಿಯರ್ ಪದ್ಮಿನಿ’ ಸಾಂಗ್

ಬೆಂಗಳೂರು, ಡಿ.6: ಈಗಾಗಲೇ ಚಂದನವನದಲ್ಲಿ ‘ಪದ್ಮಾವತಿ’ ಎಂಟ್ರಿ ಕೊಟ್ಟಿದ್ದಾಯ್ತು, ಇದೀಗ ‘ಪದ್ಮಿನಿ’ ಬರುತ್ತಿದ್ದಾಳೆ. ಈ ಹೊಸ ಪದ್ಮಿನಿಯನ್ನು ಕಂಟ್ರೋಲ್ ಮಾಡುತ್ತಿರುವವರು ನವರಸ ನಾಯಕ ಜಗ್ಗೇಶ್.

ಚಿತ್ರದ ಬಗ್ಗೆ

ಇತ್ತೀಚಿನ ದಿನಗಳಲ್ಲಿ ಹೊಸ ರೀತಿಯ ಪಾತ್ರಗಳ ಮೂಲಕ ಸದ್ದು ಮಾಡುತ್ತಿರುವ ಜಗ್ಗೇಶ್, ಈಗ ‘ಪ್ರೀಮಿಯರ್ ಪದ್ಮಿನಿ’ ಎಂಬ ವಿಶಿಷ್ಟ ಟೈಟಲ್ ಇರುವ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಚಿತ್ರದ ಟೈಟಲ್ ಟ್ರ್ಯಾಕ್ ಲಿರಿಕಲ್ ವಿಡಿಯೋ ಹಾಡು ಬಿಡುಗಡೆಯಾಗಿದೆ.

ಅತ್ಲಾಗೋದ್ರೆ ಅತ್ಲಾಗೆ, ಇತ್ಲಾಗೋದ್ರೆ ಇತ್ಲಾಗೆ

ಈ ಅಪರೂಪದ  ವೇದಾಂತ ಸಾರುವ, ಜೀವನ್ಮರಣಗಳ ಗುಟ್ಟು ರಟ್ಟಾಗಿಸುವ ಹಾಡನ್ನು ಬರೆದ ವಿಕಟಕವಿ ಯೋಗರಾಜ್ ಭಟ್ಟರು ತಮ್ಮ ವಿಶಿಷ್ಟ ಬರವಣಿಗೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅದರಂತೆಯೇ ಸಂದೇಶ ಸಾರುವ ಸಾಲುಗಳೊಂದಿಗೆ ಕುಚೇಷ್ಟೆಯನ್ನೂ ಸೇರಿಸುತ್ತಾರೆ. ಅದರಂತೆಯೇ ಇದೀಗ ಅವರು ‘ಪ್ರೀಮಿಯರ್ ಪದ್ಮಿನಿ’ ಚಿತ್ರಕ್ಕಾಗಿ ‘ಅತ್ಲಾಗೋದ್ರೆ ಅತ್ಲಾಗೆ, ಇತ್ಲಾಗ್ ಬಂದ್ರೆ ಇತ್ಲಾಗೆ’ ಎಂಬ ಸಾಲಿನ ಹಾಡನ್ನು ಬರೆದಿದ್ದಾರೆ. ಈ ಹಾಡಿಗೆ ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ.

ಕಾರು ಈ ಚಿತ್ರದ ಪ್ರಮುಖ ಆಕರ್ಷಣೆ

ಈ ಚಿತ್ರದಲ್ಲಿ ಕಾರಿನ ಜೊತೆಗೆ ಅವಿನಾಭಾವ ಸಂಬಂಧ ಹೊಂದಿರುವ ವ್ಯಕ್ತಿಯೊಬ್ಬನ ಕಥೆ ಇರಲಿದ್ದು, ಅದನ್ನು ಕಾಮಿಡಿಯ ದೃಶ್ಯಗಳ ಜೊತೆಗೆ ತೋರಿಸಲಿದ್ದಾರೆ ನಿರ್ದೇಶಕ ರಮೇಶ್ ಇಂದ್ರ. ಇನ್ನು ಈ ಚಿತ್ರದಲ್ಲಿ ಜಗ್ಗೇಶ್ ರೊಂದಿಗೆ ಸುಧಾರಾಣಿ, ಮಧುಬಾಲಾ, ಹಿತಾ ಚಂದ್ರಶೇಖರ್ ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸುತ್ತಿದ್ದಾರೆ.

ಜಗ್ಗೇಶ್ ಇದ್ದ ಮೇಲೆ ಕಾಮಿಡಿ ಇದ್ದೇ ಇರುತ್ತದೆ. ಹೀಗಾಗಿ ಈ ಚಿತ್ರವು ಈ ಭರ್ಜರಿ ಮನರಂಜನೆಯ ಸಿನಿಮಾ ಆಗುವುದರಲ್ಲಿ ಅನುಮಾನವೇ ಇಲ್ಲ ಅಂತ ಹೇಳಬಹುದು. ಇನ್ನು ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದ್ದು, ಶೃತಿ ನಾಯ್ಡು ನಿರ್ಮಿಸುತ್ತಿದ್ದಾರೆ.

ಬಾಲ್ಕನಿ ಉವಾಚ: ನಿಮಗೆ ತಿಳಿದಿರಬಹುದು.., ಒಂದು ವೇಳೆ ಮರೆತಿದ್ದರೆ ನೆನಪಿಸುವುದಕ್ಕೆ ಮಾತ್ರ..!!

ಈಗಾಗಲೇ ಶರಣ್, ಶೃತಿ ಹರಿಹರನ್, ಶುಭಾ ಪೂಂಜಾ ನಟಿಸಿದ್ದ ‘ಜೈ ಮಾರುತಿ 800’ ಎಂಬ ಹೆಸರಿನ ಸಿನಿಮಾ ಪ್ರಾಯಶಃ ‘ಪ್ರೀಮಿಯರ್ ಪದ್ಮಿನಿ’ ನಿರ್ಮಾಣಕ್ಕೆ ಸ್ಪೂರ್ತಿದಾಯಕವಾಗಿದ್ದಿರಬಹುದು ..ಅಂತದ್ರೆ ತಪ್ಪು ತಪ್ಪು…!! …ಅಲ್ಲಿ ಮಾರುತಿ ಅಂದ್ರೆ ಕಾರಲ್ಲ, ಜೈ ಆಂಜನೇಯ..!!

1968 ರಿಂದ 2000 ತನಕ ಅಂದರೆ 32 ವರ್ಷಗಳ ಕಾಲ ಭಾರತದ ರಸ್ತೆ ಬೀದಿಗಳ ಉದ್ದಗಲಕ್ಕೂ ಪುಟ್ಟದಾಗಿ,  ಮುದ್ದುಮುದ್ದಾಗಿ,  ಅಡ್ಡಾಡಿದ್ದ ಕಾರು ‘ಪ್ರೀಮಿಯರ್ ಪದ್ಮಿನಿ’ ಕಾರು..!!! ಉತ್ತರ ಭಾರತದ ವಾಲ್ ಚಂದ್  ಗ್ರೂಪ್ ಅವರಿಂದ ಹುಟ್ಟು ಹಾಕಲ್ಪಟ್ಟ ಪ್ರೀಮಿಯರ್ ಆಟೋ ಮೊಬೈಲ್ಸ್ ಕಂಪನಿಯು ಇಟಲಿಯ ಫಿಯೆಟ್ ಕಂಪನಿಯೊಡನೆ ಹೊಂದಾಣಿಕೆ ಮಾಡಿಕೊಂಡು ಹೊರ ಬಿದ್ದ ಕಾರೇ ಫೀಯಟ್ ಡಿಲೈಟ್ ಕಾರುಗಳು. ಫೀಯಟ್ …??!!…”ಫ್ಯಾಬ್ರಿಕಾ  ಇಟಾಲಿಯಾನ ಆಟೊಮೊಬಿಲಿ ಟೋರಿನೊ “, ಅರ್ಥಾತ್, ಇಟಲಿಯ ಟ್ಯುರಿನ್ ನಲ್ಲಿ ನಿರ್ಮಿತವಾದ  ಕಾರು ಇದು,

 

ಸರಿಸುಮಾರು 10 ವರ್ಷಗಳಲ್ಲೇ ಇದೇ ಕಂಪನಿ ‘ಪ್ರೀಮಿಯರ್ ಪದ್ಮಿನಿ’ ಎಂಬ ಹೊಸ ಹೆಸರಿನ ಕ್ಯೂಟ್ ಕಾರುಗಳನ್ನು ಭಾರತೀಯ ರಸ್ತೆಗಳಿಗೆ ಹರಿಬಿಟ್ಟಿತು. ಕನ್ನಡದ ಚಿತ್ರಗಳಲ್ಲಂತೂ 1950, 60, 70 ರ ದಶಕಗಳಲ್ಲಿ ಬಳಸಲಾದ ಕಾರು…ಕಾರೆಂದರೆ ಅಂಬಾಸೆಡರ್ ಕಾರು…!

ಬೆಂಗಳೂರಿನಲ್ಲಂತೂ ಹೆಜ್ಜೆ ಹೆಜ್ಜೆಗೂ 1980-90 ರ ಸುಮಾರಿಗೆ ಫಿಯೇಟ್ ಟ್ಯಾಕ್ಸಿಗಳೇ ಹರಿದಾಡುತ್ತಿದ್ದವು. ಇನ್ನು ಭಾರತದ ವ್ಯಾಪಾರಿ ನಗರ ಮುಂಬೈನಲ್ಲೋ 1980 ರಿಂದ 40 ವರ್ಷಗಳ ಕಾಲ, ….ಸಾಲದಂತೆ ಇಂದಿಗೂ ಟ್ಯಾಕ್ಸಿಗಳೆಂದರೆ ಫಿಯೇಟ್ ಟ್ಯಾಕ್ಸಿಗಳೇ. ಆ ಮರಾಠಿಗರಿಗೆ ಇಂದಿಗೂ ಪ್ರೀಮಿಯರ್ ಪದ್ಮಿನಿ ಬಹಳ ಖುಷಿ ಕೊಡುವ  ಟ್ಯಾಕ್ಸಿ, ಮುಂಬೈ ತುಂಬ ತುಂಬಿವೆ ಪ್ರೀಮಿಯರ್ ಪದ್ಮಿನಿ ಟ್ಯಾಕ್ಸಿ..

  

1975 ರ ನಂತರ ಮುಂದಿನ 25 ವರ್ಷಗಳು ಕನ್ನಡದ ಎಲ್ಲಾ ಸಿನಿಮಾಗಳಲ್ಲಿ ಪ್ರೀಮಿಯರ್ ಪದ್ಮಿನಿ ದಾಳಿ ಮಾಡಿದ್ದಾಗಿತ್ತು. 1985 ರ ಸುಮಾರಿಗೆ ಜಪಾನಿನ ಸುಜೂಕಿ ಹಾಗೂ ದೆಹಲಿಯ ಮಾರುತಿ ಉದ್ಯೋಗ್ ಸಹಯೋಗದಲ್ಲಿ ಹೊರ ಬಿದ್ದ ಬೆಂಕಿ ಪಟ್ಟಣದ ಮಾದರಿಯ ಗೂನು ಬೆನ್ನಿನ ಮಾರುತಿ ಕಾರುಗಳು ಹಂತ ಹಂತವಾಗಿ ಪದ್ಮಿನಿಯನ್ನು ಮೂಲೆಗೆ ತಳ್ಳಿದ್ದವು.

ಈಗ ಮತ್ತೆ 18, 20 ವರ್ಷಗಳ ನಂತರ ನಿಮಗೆಲ್ಲಾ ನೆನಪಿಸಲೋ ಎಂಬಂತೆ ಅದೇ ‘ಪ್ರೀಮಿಯರ್ ಪದ್ಮಿನಿ’ಯನ್ನು ಅಪ್ಯಾಯಮಾನವಾದ ಕಥಾನಕಗಳಲ್ಲಿ ಮೂಡಿಸಿ ಚಿತ್ರೀಸಲಾಗುತ್ತಿದೆ. ನೀವು ಒಂದ್ಸಲ ಡ್ರೈವ್ ಮಾಡಿ ಮಜಾ ತೊಗೊಳಿ..

.

Tags