ಸುದ್ದಿಗಳು

ನಟ ಸಾರ್ವಭೌಮ ಹಾರರ್ ಸಿನಿಮಾವಲ್ಲ: ಪವನ್ ಒಡೆಯರ್

ಸ್ಯಾಂಡಲ್ವುಡ್ ನಲ್ಲಿ ನಟ ಸಾರ್ವಭೌಮ ಚಲನಚಿತ್ರ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ. ಈ ಚಿತ್ರವನ್ನು ಗೂಗ್ಲಿ ಖ್ಯಾತಿಯ ಪವನ್ ಒಡೆಯರ್ ನಿರ್ದೇಶಿಸುತ್ತಿದ್ದಾರೆ.

ಈ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರು ಹೊಸ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ವಿಷಯ ಎಲ್ಲರಿಗೂ ಗೊತ್ತೇ ಇದೆ ಹಾಗೂ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಈ ಮಧ್ಯೆ ಪುನೀತ್ ಅವರು ತಮ್ಮ ಕೈಯಲ್ಲಿ ಕಪ್ಪದಾರವನ್ನು ಕಟ್ಟಿಕೊಂಡಿದ್ದನ್ನು ಕಂಡು ನಟಸಾರ್ವಭೌಮ ಚಿತ್ರ ಹಾರರ್ ಚಿತ್ರವೇ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡತೊಡಗಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ನಿರ್ದೇಶಕ ಪವನ್ ಇದು ಹಾರರ್ ಚಿತ್ರವಲ್ಲ ಎಂದು ಹೇಳಿದ್ದಾರೆ

ಪುನೀತ್ ರಾಜಕುಮಾರ್ ಓರ್ವ ಟ್ರೆಂಡ್ ಸೆಟ್ಟರ್ ನಟ. ಹೀಗಾಗಿ ವಿಭಿನ್ನ ಗೆಟಪ್ ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಒಂಬತ್ತು ರತ್ನಗಳ ಕಲ್ಲಿನ ಆಭರಣವನ್ನು ಕೈಬೆರಳು ಅಥವಾ ಕುತ್ತಿಗೆಗೆ ಧರಿಸುತ್ತಾರೆ. ಆದರೆ ಪುನೀತ್ ಇದರಲ್ಲಿ ವಿಶೇಷವಾಗಿ ಕೈಗೆ ಕಟ್ಟಿಕೊಂಡಿದ್ದಾರೆ ಅಷ್ಟೇ ಎಂದು ಪವನ್ ಹೇಳಿದ್ದಾರೆ.

ನಟಸಾರ್ವಭೌಮ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರು ಪರ್ತಕರ್ತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಪುನೀತ್ ಗೆ ತಂದೆ ಪಾತ್ರದಲ್ಲಿ ಅಭಿನಯಿಸಿರುವ ಶ್ರೀನಿವಾಸ್ ಮೂರ್ತಿ ಅವರು ತಮ್ಮ ನೆನಪಿಗಾಗಿ ಈ ಆಭರಣವನ್ನು ನೀಡಿರುತ್ತಾರೆ. ತಂದೆಯ ನೆನಪಿಗಾಗಿ ಪುನೀತ್ ಈ ಆಭರಣವನ್ನು ತಮ್ಮ ಕೈಗೆ ಕಟ್ಟಿಕೊಂಡಿರುತ್ತಾರೆ ಎಂದು ಪವನ್ ವಿವರಿಸಿದ್ದಾರೆ.

ಈ ಚಿತ್ರವನ್ನು ರಾಕ್ ಲೈನ್ ವೆಂಕಟೇಶ್ ನಿರ್ಮಿಸುತ್ತಿದ್ದು ಪುನೀತ್ ಗೆ ಜೋಡಿಯಾಗಿ ರಚಿತಾ ರಾಮ್ ಮತ್ತೋರ್ವ ನಟಿ ಅಭಿನಯಿಸಲಿದ್ದಾರೆ. ಚಿತ್ರಕ್ಕೆ ಡಿ ಇಮಾಮ್ ಸಂಗೀತ ಸಂಯೋಜಿಸುತ್ತಿದ್ದು ವೈಧಿ ಅವರ ಛಾಯಾಗ್ರಹಣವಿರಲಿದೆ.

 

Tags