ಸುದ್ದಿಗಳು

‘ಪುಟ 109’ ರಲ್ಲಿ ಹಲವಾರು ಕುತೂಹಲಗಳು

ಸದ್ದು ಮಾಡುತ್ತಿರುವ ಟ್ರೈಲರ್

ಬೆಂಗಳೂರು,ಸ.11: ‘ಆ ಕರಾಳ ರಾತ್ರಿ’ ಚಿತ್ರದ ನಂತರ ಮತ್ತೊಮ್ಮೆ ನಿರ್ದೇಶಕ ದಯಾಳ್, ನಟರಾದ ಜೆ.ಕೆ ಮತ್ತು ನವೀನ್ ಕೃಷ್ಣ ಜೋಡಿಗಳು ಒಂದಾಗಿ ಮಾಡಿರುವ ಚಿತ್ರ ‘ಪುಟ 109”. ನಾಟಕಾಧಾರಿತ ಕ್ರೈಂ ಸಸ್ಪೆನ್ಸ್ ಕಥೆಯುಳ್ಳ ಈ ಚಿತ್ರದ ಟ್ರೈಲರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಸಾಕಷ್ಟು ಸದ್ದು ಮಾಡುತ್ತಿದೆ.

ಕಾಣೆಯಾದ ಪುಟ 109

ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆಯೇ ಫೋರೆನ್ಸಿಕ್ ಎನ್ನುವ ಪುಸ್ತಕದಲ್ಲಿ ಕಾಣೆಯಾದ 109ನೇ ಪುಟದ ಸುತ್ತ ಚಿತ್ರದ ಕಥೆ ತಿರುಗುತ್ತದೆ. ನಿಗೂಢ ಕೆೊಲೆಯೊಂದರ ಹಿಂದೆ ಬಿದ್ದ ಸ್ಮಾರ್ಟ್ ಆ್ಯಂಡ್ ಇಂಟೆಲಿಜೆಂಟ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಜಯರಾಮ್ ಕಾರ್ತಿಕ್ (ಜೆ.ಕೆ) ಕಾಣಿಸಿಕೊಂಡರೆ, ನೆಗೆಟಿವ್ ಶೇಡ್ ಇರುವ ಬರಹಗಾರನ ಪಾತ್ರದಲ್ಲಿ ನವೀನ್ ಕೃಷ್ಣ ಕ್ಯೂರಿಯಾಸಿಟಿ ಹೆಚ್ಚಿಸುತ್ತಾರೆ. ನವೀನ್ ಕೃಷ್ಣರ ಪತ್ನಿಯಾಗಿ ವೈಷ್ಣವಿ ಚಂದ್ರನ್ ನಟಿಸಿದ್ದಾರೆ.

ನಿರ್ದೇಶಕ ದಯಾಳ್

ನಿರ್ದೇಶಕ ದಯಾಳ್ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಎರಡು ಕಥೆಯನ್ಬನು ಸಿದ್ಧಪಡಿಸಿಕೊಂಡು ಒಂದೇ ದಿನ ಮುಹೂರ್ತವನ್ನು ಕೂಡ ನೆರವೇರಿಸಿದರು. ತದನಂತರ ಅಂದುಕೊಂಡಂತೆ ಚಿತ್ರೀಕರಣವನ್ನು ಆರಂಭಿಸಿ 2 ಚಿತ್ರ ಚಿತ್ರವನ್ನು ಸಿದ್ಧಪಡಿಸುತ್ತಾ ಬಂದಿದ್ದರು. ಮೊದಲು ಬಿಡುಗಡೆಗೊಂಡ ‘ಆ ಕರಾಳ ರಾತ್ರಿ’ ಚಿತ್ರ ಅವರ ಚಿತ್ರ ಜೀವನಕ್ಕೆ ಮರುಜೀವ ನೀಡಿ ಚೈತನ್ಯ ಕೊಟ್ಟಂತಾಗಿತ್ತು. ಈಗ ಎರಡನೇ ಚಿತ್ರವಾಗಿ ‘ಪುಟ 109’ ಟ್ರೈಲರ್ ಬಿಡುಗಡೆಯಾಗುವ ಮೂಲಕ ಭಾರಿ ಸದ್ದನ್ನು ಮಾಡಲು ಸನ್ನದ್ಧವಾಗಿದೆ.

ತಾಂತ್ರಿಕ ವರ್ಗ

ದಯಾಳ್ ಪದ್ಮನಾಭನ್ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಸಿದ್ಧವಾಗಿರುವ ಈ ಚಿತ್ರಕ್ಕೆ ಸಹ ನಿರ್ಮಾಪಕರಾಗಿ ಅವಿನಾಶ್. ಯು .ಶೆಟ್ಟಿ ಸಾಥ್ ನೀಡಿದ್ದಾರೆ. ಈ ಚಿತ್ರಕ್ಕೆ ಪಿ.ಕೆ.ಎಚ್ ದಾಸ್ ಛಾಯಾಗ್ರಹಣ ಮಾಡಿದ್ದು , ಗಣೇಶ್ ನಾರಾಯಣ್ ಸಂಗೀತವನ್ನು ನೀಡಿದ್ದಾರೆ. ನವೀನ್ ಕೃಷ್ಣ ನಟನೆಯ ಜೊತೆಗೆ ಸಿನಿಮಾಕ್ಕೆ ಸಂಭಾಷಣೆಯನ್ನೂ ಬರೆದಿದ್ದಾರೆ.

ಈಗಾಗಲೇ ಈ ಜೋಡಿಯು ‘ಹಗ್ಗದ ಕೊನೆ’ ಹಾಗೂ ‘ಆ ಕರಾಳ ರಾತ್ರಿ’ ಚಿತ್ರಗಳ ಮೂಲಕ ಸಿನಿಪ್ರೇಮಿಗಳನ್ನು ರಂಜಿಸಿದ್ದರು. ಇದೀಗ ‘ಪುಟ 109’ ರ ಮೂಲಕ ಮತ್ತೊಮ್ಮೆ ಮೋಡಿ ಮಾಡಲು ತಯಾರಾಗಿದೆ. ಅವರಿಗೆ ಬಾಲ್ಕನಿ ನ್ಯೂಸ್ ನಿಂದ ಶುಭ ಹಾರೈಕೆಗಳು.

Tags