ಸುದ್ದಿಗಳು

ಮೂಕಿಯಾಗಿ ಎಂಟ್ರಿ ಕೊಟ್ಟ ರಾಘವಿ

ಸ್ಯಾಂಡಲ್ ವುಡ್ ನಲ್ಲಿ ಇತ್ತೀಚಿನ ದಿನಗಳಲ್ಲಿ ವಿನೂತನ ಪ್ರಯತ್ನಗಳು ಆಗುತ್ತಿವೆ. ಆ ವಿನೂತನ ಪ್ರಯತ್ನಗಳನ್ನು ಜನರೂ ಸಹ ಸ್ವೀಕರಿಸುತ್ತಿದ್ದಾರೆ. ಅಂತಹ ಪ್ರಯತ್ನ ಈಗ ಹೊಸ ತಂಡದಿಂದ ನಡೆಯುತ್ತಿದೆ. ಹಾಗಂತಾ ಇಲ್ಲಿ ಬರೀ ಹೊಸಬರೇ ಇಲ್ಲ.

ಜೋಗಿ ಚಿತ್ರದ ನಿರ್ಮಾಪಕ ಹಾಗೂ ಕ್ಯಾಸೆಟ್ ಮತ್ತು ಆಡಿಯೋ ಲೋಕದಲ್ಲಿ ತಮ್ಮದೇ ಆದ ಛಾಪು ಹೊಂದಿರುವ ಅಶ್ವಿನಿ ರಾಮ್ ಪ್ರಸಾದ್ ಅವರ ಪುತ್ರ ಅರುಣ್ ರಾಮ್ಪ್ರಸಾದ್, ಘಾರ್ಗ ಎಂಬ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ.

ಈ ಚಿತ್ರದಲ್ಲಿ ಹಿಂದೆಂದೂ ನೋಡಿರದ , ವಿಶ್ಯೂವಲ್ ಎಫೆಕ್ಟ್ ಗಳನ್ನು ಪ್ರೇಕ್ಷಕರಿಗೆ ಕೊಡಲಿದ್ದಾರಂತೆ ನಿರ್ದೇಶಕರಾದ ಎಂ. ಶಶಿಧರ. ಇವರು ಎ.ಪಿ.ಅರ್ಜುನ್ ಬಳಿ ಕೆಲಸ ಮಾಡಿ ಇದೀಗ ‘ಘಾರ್ಗಾ’ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.

ಇನ್ನು ಘಾರ್ಗದ ಬಗ್ಗೆ ಹೇಳುವುದಾದರೆ ‘ಘಾರ್ಗ ಎಂಬುದು ಈ ಚಿತ್ರದಲ್ಲಿ ಬರುವ ಒಂದು ಊರಿನ ಹೆಸರು. ಕಾಡಿನಿಂದ ಸುತ್ತುವರೆದ ಆ ಊರಿನಲ್ಲಿ ನಡೆಯುವ ಚಿತ್ರ ವಿಚಿತ್ರ ಸನ್ನಿವೇಶಗಳೇ’ ಚಿತ್ರದ ಕಥೆಯಾಗಿದೆಯಂತೆ.

ಇನ್ನು ಚಿತ್ರಕ್ಕೆ ನಾಯಕಿಯಾಗಿ ಮಾಡೆಲಿಂಗ್ ಮೂಲಕ ರಾಘವಿ ಗೌಡ ಆಯ್ಕೆಯಾಗಿದ್ದಾರೆ. ವಿಶೇಷವೆಂದರೆ ಈ ಚಿತ್ರದಲ್ಲಿ ಅವರು ಭರತನಾಟ್ಯ ಕಲಿಸುವ ಮೂಕ ಶಿಕ್ಷಕಿಯಾಗಿ ಕಾಣಿಸಿಕೊಂಡಿದ್ದಾರಂತೆ.

ಮೊದಲ ಚಿತ್ರದಲ್ಲೇ ಮೂಕಿ ಪಾತ್ರ ಪೋಷಿಸುವ ಅವಕಾಶ ಸಿಕ್ಕ ಖುಷಿಯೂ ರಾಘವಿ ಗೌಡ ಅವರಿಗೆ. ‘ನಾನು ಈ ರೀತಿಯ ಪಾತ್ರವನ್ನು ನಿರೀಕ್ಷಿಸಿದ್ದೆ. ಮೂಕಿ ಪಾತ್ರ ನಿಭಾಯಿಸುವುದು ಅಂದುಕೊಂಡಷ್ಟು ಸುಲಭವೂ ಅಲ್ಲ. ಅದಕ್ಕಾಗಿಯೇ ತರಬೇತಿ ಪಡೆದುಕೊಂಡೆ. ಮೂಕಿ ಸಿನಿಮಾಗಳನ್ನು ನೋಡಿದೆ. ಕೈಸನ್ನೆ ಮೂಲಕ ಮಾತನಾಡುವುದನ್ನು ಕಲಿತೆ. ಅದಾದ ಬಳಿಕವೇ ಚಿತ್ರೀಕರಣ ಆರಂಭಿಸಿದೆವು’ ಎಂದು ಪಾತ್ರಕ್ಕೆ ತಯಾರಾದ ಬಗ್ಗೆ ಹೇಳಿಕೊಳ್ಳುತ್ತಾರೆ.

Tags