ಸುದ್ದಿಗಳು

ದೊಡ್ಡ ಪರದೆಯ ಮೇಲೆ ಮತ್ತೆ ಅಣ್ಣಾವ್ರು

.ಡಾ ರಾಜ್ ಕುಮಾರ್ ಅವರ ಚಿತ್ರಗಳು ಮರು ಬಿಡುಗಡೆ

ವರನಟ ಡಾ. ರಾಜ್ ಕುಮಾರ್ ಅವರು ಅಭಿನಯಿಸಿರುವ ‘ಎರಡು ಕನಸು’ ಚಿತ್ರವು ನಿನ್ನೆಯಷ್ಟೇ ಮರು ಬಿಡುಗಡೆಯಾಗಿ, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದರೊಂದಿಗೆ ಮತ್ತೆರೆಡು ಚಿತ್ರಗಳು ಡಿಜಿಟಲ್ ನ ಹೊಸ ರೂಪದಲ್ಲಿ ಮತ್ತೆ ತೆರೆ ಮೇಲೆ ಸಿದ್ದತೆ ನಡೆಸುತ್ತಿವೆ.

ಬೆಂಗಳೂರು,ಸ.08: ಡಾ. ವಿಷ್ಣುವರ್ಧನ್ ಅವರ ಚೊಚ್ಚಲ ಚಿತ್ರ ‘ನಾಗರಹಾವು’ ಮರು ಬಿಡುಗಡೆಗೊಂಡು ಮತ್ತೊಮ್ಮೆ ಭರ್ಜರಿ ಯಶಸ್ಸನ್ನು ಗಳಿಸಿತು. ಇದಾದ ಬೆನ್ನಲ್ಲೇ 70 -80 ರ ದಶಕದ ಅನೇಕ ಸಿನಿಮಾಗಳು ಹೊಸ ರೂಪದಲ್ಲಿ ಮರು ಬಿಡುಗಡೆಗೆ ಸಿದ್ದತೆ ನಡೆಸುತ್ತಿವೆ.

ಮೂರು ಚಿತ್ರಗಳು

ಇದೀಗ ನಟಸಾರ್ವಭೌಮ ಡಾ. ರಾಜ್ಕುಮಾರ್ ಅಭಿನಯದ ‘ಎರಡು ಕನಸು’ ಚಿತ್ರ, ನಿನ್ನೆಯಷ್ಟೇ ರಾಜ್ಯಾದ್ಯಂತ 50ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ. ಈ ಚಿತ್ರವನ್ನು ದೊರೆ –ಭಗವಾನ್ ನಿರ್ದೇಶನ ಮಾಡಿದ್ದು, 1974 ರಲ್ಲಿ ಬಿಡುಗಡೆಯಾಗಿ ಅಂದಿನ ಕಾಲಕ್ಕೆ ದೊಡ್ಡ ಮಟ್ಟದ ಹಿಟ್ ಆಗಿತ್ತು. ಆನಂತರ ಮರುವರ್ಷವೇ ತೆಲುಗಿಗೆ ‘ಪೂಜ’ ಹೆಸರಿನಲ್ಲಿ ರಿಮೇಕ್ ಆಗಿತ್ತು. ಇದರೊಂದಿಗೆ ಇನ್ನೂ ಎರಡು ಚಿತ್ರಗಳು ಮರು ಬಿಡುಗಡೆಗೆ ಸಿದ್ದವಾಗುತ್ತಿವೆ.

ಗಂಧದ ಗುಡಿ

ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿರುವ ಚಿತ್ರಗಳಲ್ಲಿ ‘ಗಂಧದ ಗುಡಿ’ ಚಿತ್ರವೂ ಒಂದು. ಈ ಚಿತ್ರದಲ್ಲಿ ಡಾ. ರಾಜ್ ಕುಮಾರ್ ಮತ್ತು ಡಾ. ವಿಷ್ಣುವರ್ಧನ್ ಒಟ್ಟಿಗೆ ನಟಿಸಿದ್ದರು. ಈಗ ಈ ಚಿತ್ರವು ಅತ್ಯಾಧುನಿಕ ಡಿಜಿಟಲ್ ಡಿಟಿಎಸ್ ಸೌಂಡ್ ಹಾಗೂ ಡಿಜಿಟಲ್ ಕಲರ್ ಗ್ರೇಡಿಂಗ್ ತಂತ್ರಜ್ಞಾನವೊಂದಿಗೆ ಅದ್ದೂರಿಯಾಗಿ ಗಣೇಶ ಹಬ್ಬದಂದು (ಸ. 13) ರಂದು ತೆರೆಗೆ ಬರಲಿದೆ.

ಈ ಚಿತ್ರವನ್ನು ನಿರ್ಮಾಪಕ ಎಂ.ಪಿ ಶಂಕರ್ ಅವರು ತಮ್ಮ ಭರಣಿ ಚಿತ್ರ ಸಂಸ್ಥೆಯ ಮೂಲಕ ನಿರ್ಮಿಸಿದ್ದರು. ಈ ಚಿತ್ರದಲ್ಲಿ ಡಾ. ರಾಜ್ ಕುಮಾರ್, ಡಾ. ವಿಷ್ಣುವರ್ಧನ್, ಕಲ್ಪನಾ, ಎಂ.ಪಿ ಶಂಕರ್, ಬಾಲಕೃಷ್ಣ, ನರಸಿಂಹರಾಜು, ಲಕ್ಷ್ಮಿ ದೇವಿ ಸೇರಿದಂತೆ ಇತರರು ಅಭಿನಯಿಸಿದ್ದು, ಚಿತ್ರವನ್ನು ವಿಜಯ್ ನಿರ್ದೇಶನ ಮಾಡಿದ್ದರು. ಈ ಚಿತ್ರವು 1973 ರಲ್ಲಿ ತೆರೆಗೆ ಬಂದಿತ್ತು. ಈ ಚಿತ್ರದ ಹಾಡುಗಳೆಲ್ಲವೂ ಯಶಸ್ವಿಯಾಗಿದ್ದು, ಚಿತ್ರಕ್ಕೆ ರಾಜನ್ – ನಾಗೇಂದ್ರ ಸಂಗೀತ ನೀಡಿದ್ದಾರೆ.

ಇಮ್ಮಡಿ ಪುಲಕೇಶಿ 

ಸಂಗೀತ ನಿರ್ದೇಶಕ ಜಿ.ಕೆ.ವೆಂಕಟೇಶ್ ನಿರ್ಮಿಸಿದ ಈ ಚಿತ್ರವು ಕನ್ನಡ ಚಿತ್ರರಂಗದಲ್ಲಿನ ಐತಿಹಾಸಿಕ ಚಿತ್ರಗಳಲ್ಲೊಂದು. ಚಾಲುಕ್ಯರ ದೊರೆ ಇಮ್ಮಡಿ ಪುಲಿಕೇಶಿಯ ಜೀವನವನ್ನಾಧರಿಸಿದ ಈ ಚಿತ್ರದಲ್ಲಿ, ಪುಲಿಕೇಶಿಯ ಪಾತ್ರವನ್ನು ರಾಜಕುಮಾರ್ ನಿರ್ವಹಿಸಿದ್ದಾರೆ. ಪುಲಿಕೇಶಿಯ ಸಹೋದರ ವಿಷ್ಣುವರ್ಧನನ ಪಾತ್ರದಲ್ಲಿ ಉದಯಕುಮಾರ್ ನಟಿಸಿದ್ದಾರೆ.

1967 ರಲ್ಲಿ ತೆರೆ ಕಂಡಿದ್ದ ಈ ಚಿತ್ರವನ್ನು ಎನ್ ಸಿ ರಾಜನ್ ನಿರ್ದೇಶನ ಮಾಡಿದ್ದರು. ಚಿತ್ರದಲ್ಲಿ ಜಯಂತಿ, ಮಂಗಲೇಶರಾಗಿ ಶಕ್ತಿಪ್ರಸಾದ್,ನರಸಿಂಹರಾಜು,ಬಾಲಕೃಷ್ಣ, ವಿಶೇಷ ಪಾತ್ರದಲ್ಲಿ ಕಲ್ಪನ, ಹರ್ಷವರ್ಧನನ ಪಾತ್ರದಲ್ಲಿ ಅಶ್ವಥ ಮುಂತಾದವರಿದ್ದಾರೆ.

ಈ ಮೂರು ಚಿತ್ರಗಳೊಂದಿಗೆ ‘ನಾನಿನ್ನ ಮರೆಯಲಾರೆ’,’ಕುಲಗೌರವ’,ಚಿತ್ರಗಳು ಸಹ ಡಿಜಿಟಲ್ ನ ಹೊರ ರೂಪದಲ್ಲಿ ತೆರೆಗೆ ಬರುತ್ತಿವೆ. ಅಂದಿನ ಕಾಲಕ್ಕೆ ದೊಡ್ಡ ಮಟ್ಟದ ಹಿಟ್ ಆಗಿದ್ದ ಈ ಚಿತ್ರಗಳು ಹೊಸ ಅವತಾರದಲ್ಲಿ ಪ್ರೇಕ್ಷಕರ ಎದುರು ಬರುತ್ತಿದೆ. ನಾಲ್ಕು ದಶಕಗಳ ನಂತರ ಚಿತ್ರ ಮರುಬಿಡುಗಡೆ ಆಗುತ್ತಿರುವುದಕ್ಕೆ ರಾಜ್ ಅಭಿಮಾನಿಗಳು ಖುಷಿಯಲ್ಲಿದ್ದಾರೆ.

Tags