ಉದಯೋನ್ಮುಖರುಜೀವನ ಶೈಲಿಫ್ಯಾಷನ್ಬಾಲ್ಕನಿಯಿಂದಸುದ್ದಿಗಳುಸೌಂದರ್ಯ

ನೃತ್ತಕ್ಕೂ ಸೈ, ಅಭಿನಯಕ್ಕೂ ಸೈ

ಈ ಸಮಾಜಕ್ಕೆ ಲಕ್ಷ್ಮಿಶ್ರೀಯ ರಂಗಪ್ರವೇಶದ ಕೊಡುಗೆ..!

ಬಾಲ್ಕನೀ ನೃತ್ಯ ಜಗತ್                                                                            ರಂಗಪ್ರವೇಶ

ಬೆಂಗಳೂರು, ಡಿ.11: ಕಳೆದ ವಾರ ರಾಜಧಾನಿಯ ಮಲ್ಲೇಶ್ವರದ  ‘’ಸೇವಾ ಸದನ’’ ಸಭಾಂಗಣ ನೃತ್ಯಕ್ಕೆ ಸಜ್ಜಾಗಿತ್ತು. ಅತಿಥಿಗಳ ಉಪಸ್ಥಿತಿಯಲ್ಲಿ ನಿಗಧಿತ ವೇಳೆಗೆ ಕಾರ್ಯಕ್ರಮ ಸಂಜೆ ೫.೩೦ಕ್ಕೆ ಆರಂಭಗೊಂಡು  ಒಂಭತ್ತನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಆರ್. ಲಕ್ಷ್ಮೀಶ್ರೀ  ಲಾಲಿತ್ಯಪೂರ್ಣವಾಗಿ  ತಮ್ಮ ಭರತನಾಟ್ಯ ರಂಗಪ್ರವೇಶವನ್ನು ಪ್ರದರ್ಶಿಸಿದಳು. ಬೆಂಗಳೂರಿನ ವಿಜಯನಗರದ ಸಂಗೀತ-ನೃತ್ಯ ಭಾರತಿ ಅಕಾಡೆಮಿಯ ಗುರು ಪದ್ಮಹೇಮಂತ್ ರಲ್ಲಿ ತಮ್ಮ ನೃತ್ಯಾಭ್ಯಾಸ ಆರಂಭಿಸಿ ಇಂದು ತಮ್ಮ ರಂಗಪ್ರವೇಶವನ್ನು ಪ್ರದರ್ಶಿಸುವ ಮಟ್ಟಿಗೆ ಸಿದ್ದರಾಗಿದ್ದುದರ ಹಿಂದೆ ಗುರುಗಳ ಪಾಠಾಂತರದ ಜೊತೆಗೆ ಆಕೆಯ ಶ್ರದ್ಧೆ, ನೃತ್ಯದಲ್ಲಿ ಆಸಕ್ತಿ ಎದ್ದು ಕಾಣುತ್ತಿತ್ತು.

ಕಾರ್ಯಕ್ರಮದ ಆರಂಭದ ಆರಭಿ ರಾಗ-ಪುಷ್ಪಾಂಜಲಿಯಲ್ಲೇ ತಮ್ಮ ಲಯದ ಹಿಡಿತದ ರುಚಿ ತೋರಿದ ಲಕ್ಷ್ಮಿ,  ಇನ್ನು ಸಾವೇರಿ ರಾಗದ ಜತಿಸ್ವರದ ಅಭಿವ್ಯಕ್ತಿಯಲ್ಲಿ ನಿಲುಗಡೆಗಳು, ಕ್ಲಿಷ್ಟಕರ ಅಡವುಗಳ ಜೋಡಣೆಯನ್ನು ಅನಾಯಾಸವಾಗಿ ಪ್ರದರ್ಶಿಸಿ ತಮ್ಮ ಅಭ್ಯಾಸ ಮತ್ತು ಆ ದಿನಕ್ಕೆಂದು ನಡೆಸಿದ್ದ ತಯಾರಿಯನ್ನು ನಿರೂಪಿಸಿದರು.  ಮುಂದುವರೆದು ಪದ್ಮ ಚರಣ್ ರವರ ಅಮೋಘ ಕೃತಿಗಳಲ್ಲೊಂದಾದ ’ಶೃಂಗಪುರಾಧೀಶ್ವರಿ’ದಲ್ಲಿ ಮಹಾಮಾತೆ ಶಾರದೆ ಆದಿ ಶಂಕರರಿಗೆ ಒಲಿದ ಪರಿಯನ್ನು ಸಂಚಾರಿ ಭಾವದಲ್ಲಿ ಅಭಿನಯಿಸಿದರು.

ಮುಂದಿನ ವರ್ಣಕ್ಕೆಂದು ಆರಿಸಿಕೊಂಡ ಶ್ರೀ ಪಾಪನಾಶಂ ಶಿವಂ ರವರ ಪದವರ್ಣ, ’ನೀ ಇಂದ ಮಾಯಂ…’! “ನೀನು ಏನೆಲ್ಲ ಮಾಯೆ ಮಾಡುತ್ತೀಯೆಂದು ನನಗೆ ತಿಳಿಯದೇ?.. ಅಂದು ಕುಚೇಲನಿತ್ತ ಹಿಡಿ ಅವಲಕ್ಕಿ ಜಗಿದು ಅಷ್ಟೈಷ್ವರ್ಯಗಳನ್ನೂ ಕೇಳದೆ ಕರುಣಿಸಿದವನು ನೀನು ಇಂದು ನಾನು ಈ ಪರಿಯಲ್ಲಿ ಮನ್ಮಥನ ಹೂ ಬಾಣಕ್ಕೆ ಸಿಕ್ಕಿ ನಲುಗುತ್ತಿದ್ದೇನೆ. ಆದರೂ, ಒಂದು ಕಿರುನೋಟವನ್ನೂ ನನ್ನೆಡೆಗೆ ಬೀರುತ್ತಿಲ್ಲವಲ್ಲ. ಇದು ಸರಿಯೇ? ಗೋಕುಲದ ಜನ- ಜಾನುವಾರನ್ನು ರಕ್ಷಿಸಲು ಗೋವರ್ಧನ ಗಿರಿಯನ್ನೇ ಎತ್ತಿದವನು ನೀನು, ಯದುಕುಲವನ್ನೇ ಬೆಳಗುವವ ನನ್ನ ಮೊರೆ ಕೇಳಲಾರದಷ್ಟು ಮನಸ್ಸನ್ನು ಕಲ್ಲಾಗಿಸಿಕೊಂಡಿರುವೆಯಾ?…” ಎಂದು ಬೇಡುವ ಅಭಿನಯದಲ್ಲಿ ಮನೋಜ್ಞವಾಗಿ ಅಭಿನಯಿಸಿದಳು ಲಕ್ಷ್ಮಿಶ‍್ರೀ.

 

ಗುರುವಂದನೆಯ ನಂತರ ’ಇಡತ್ತ ಪದಂ..’ ಎಂಬ ಪದಂ ನಿಂದ ಆರಂಭಗೊಂಡು ಅದರಲ್ಲಿ ಮೀನಾಕ್ಷಿ – ಸುಂದರೇಶ್ವರರ ಕಲ್ಯಾಣದ ಭಾಗವನ್ನು ಸಂಚಾರಿ ರೂಪದಲ್ಲಿ ಪ್ರದರ್ಶಿಸಿದರು ಲಕ್ಷಿಶ್ರೀ. ನಂತರದ ಕೃಷ್ಣನ ಕುರಿತಾದ ಶ್ರೀ ಪುರಂದರ ದಾಸರ ’ಆಡ ಹೋದಲ್ಲೇ ಮಕ್ಕಳು…’ ದೇವರನಾಮವನ್ನು ಅದ್ಭುತವಾಗಿ ಪ್ರದರ್ಶಿಸಿ ಸಭೆಯ ಕರತಾಡನವನ್ನು ಗಿಟ್ಟಿಸಿಕೊಂಡಳು ಲಕ್ಷ್ಮಿಶ್ರೀ.  ಕಾರ್ಯಕ್ರಮದ ಕೊನೆಯ ಭಾಗವಾಗಿ ಖಂಡ ಏಕ ತಾಳ-ಹಿಂದೋಳ ರಾಗದಲ್ಲಿನ  ಶ್ರೀ ತಂಜಾವೂರು ಸಹೋದರರ ತಿಲ್ಲಾನವನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಿ ಮಂಗಳದೊಂದಿಗೆ ಕಾರ್ಯಕ್ರಮವನ್ನು ಸಂಪನ್ನಗೊಳಿಸಲಾಯ್ತು.

ನಟ್ಟುವಾಂಗದಲ್ಲಿ ಲಕ್ಷ್ಮಿಶ್ರೀ ಗುರು ಪದ್ಮ ಹೇಮಂತ್, ಗಾಯನದಲ್ಲಿ ವಿ.ಬಾಲಸುಬ್ರಮಣ್ಯ ಶರ್ಮ, ಕೊಳಲಿನಲ್ಲಿ ವಿ. ಕಾರ್ತಿಕ್ ಕಾತವಳ್ಳಿ, ಪಿಟೀಲಿನಲ್ಲಿ ವಿ. ಬಿ.ಆರ್. ಹೇಮಂತ್ ಕುಮಾರ್  ಈ ಬಾಲಕಲಾವಿದೆಯ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು. ರಂಗಪ್ರವೇಶದ ಅತಿಥಿಗಳಾಗಿದ್ದ ನೃತ್ಯ ಗುರು ಕುಮಾರಿ ಕನಕಲತ, ಆ ಕಾರ್ಯಕ್ರಮದ ಗಾಯಕರಾದ ವಿ|| ಬಾಲಸುಬ್ರಮಣ್ಯ ಶರ್ಮ, ಗುರು ಪದ್ಮ ಹೇಮಂತ್ ಮತ್ತು ವಿ|| ಬಿ. ಆರ್. ಹೇಮಂತ್ ಕುಮಾರ್ ಲಕ್ಷಿಶ್ರೀ ನೃತ್ಯ ಪಯಣಕ್ಕೆ ಶುಭ ಕೋರಿದರು.

-ಸಾರಗ್ರಾಹಿ. editor@balkaninews.com, 7022274686

Tags

Related Articles