ಸುದ್ದಿಗಳು

ಶಿವಣ‍್ಣನಿಗೆ ಮತ್ತೊಂದು ಸಿನಿಮಾ ಮಾಡುತ್ತಿರುವ ಆರ್ ಚಂದ್ರು

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಚಿತಾ ರಾಮ್ ನಟನೆಯ ‘ಐ ಲವ್ ಯೂ’ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ನಿರ್ದೇಶಕ ಆರ್ ಚಂದ್ರುಗೆ ಬಾರೀ ಅವಕಾಶಗಳು ಅರಸಿ ಬರುತ್ತಿವೆ. ಬಲ್ಲ ಮೂಲಗಳ ಪ್ರಕಾರ ಅವರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

ಹೌದು, ಆರ್ ಚಂದ್ರು ಇದೀಗ ಶಿವಣ್ಣನ ಚಿತ್ರವೊಂದಕ್ಕೆ ಆ್ಯಕ್ಷನ್ ಕಟ್ ಹೇಳಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಅಂದಹಾಗೆ ಇದು ಈ ಜೋಡಿಯ ಎರಡನೇ ಸಿನಿಮಾವಾಗಿದೆ. ಈ ಕಾಂಭಿನೇಷನ್ ನಲ್ಲಿ ‘ಮೈಲಾರಿ’ ಸಿನಿಮಾ ಮೂಡಿ ಬಂದಿತ್ತು.

ಇನ್ನು ಈ ಚಿತ್ರದ ಒನ್ ಲೈನ್ ನ ಕತೆಯನ್ನು ನಿರ್ದೇಶಕರು ಶಿವಣ್ಣನಿಗೆ ಹೇಳಿದ್ದಾರಂತೆ. ಅವರು ಸಹ ಒಪ್ಪಿಕೊಂಡಿದ್ದು, ಚಿತ್ರಕ್ಕೆ ‘ಜಂಗಮ’ ಎಂಬ ಹೆಸರು ಅಂತಿಮವಾಗಿದೆ. ಸದ್ಯ ಶಿವಣ್ಣ ಲಂಡನ್ ನಲ್ಲಿರುವುದರಿಂದ ಅವರು ಹಿಂತಿರುಗಿ ಬಂದ ಬಳಿಕ ಚಿತ್ರದ ಕುರಿತಂತೆ ಮತ್ತಷ್ಟು ಮಾಹಿತಿ ನೀಡಲಿದ್ದಾರೆ.

ಇನ್ನು ಈ ಚಿತ್ರಕ್ಕೆ ‘ಐ ಲವ್ ಯೂ’ ಖ್ಯಾತಿಯ ಸಂಗೀತ ನಿರ್ದೇಶಕ ಕಿರಣ್ ತೊಟಂಬೈಲ್ ಈ ಚಿತ್ರಕ್ಕೂ ಸಂಗೀತ ನೀಡುತ್ತಿದ್ದು, ಚಿತ್ರದ ಕುರಿತಂತೆ ನಾಳೆ (ಜುಲೈ 12) ಅಧಿಕೃತ ಘೋಷಣೆಗಳು ಹೊರ ಬರಲಿವೆ.

ಸದ್ಯ ಶಿವಣ್ಣ ನಟನೆಯ ‘ರುಸ್ತುಂ’ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹಾಗೆಯೇ ‘ದ್ರೋಣ’, ‘ಆನಂದ್’ ಚಿತ್ರಗಳ ಶೂಟಿಂಗ್ ಸಹ ನಡೆಯುತ್ತಿದೆ. ಈ ನಡುವೆ ಭುಜದ ಸರ್ಜರಿಗಾಗಿ ಲಂಡನ್ ಗೆ ತೆರಳಿರುವ ಶಿವಣ್ಣ, ಪೂರ್ಣಗುಣಮುಖರಾದ ಬಳಿಕ ಈ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.

ಹಾಗೆಯೇ ಎ. ಹರ್ಷ ಆ್ಯಕ್ಷನ್ ಕಟ್ ಹೇಳುತ್ತಿರುವ ‘ಭಜರಂಗಿ-2’ ಚಿತ್ರದ ಶೂಟಿಂಗ್ ಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಲಾಗಿದೆ. ಇನ್ನು ಈಗಾಗಲೇ ಹತ್ತು ಹಲವು ವಿಭಿನ್ನ ಶೇಡ್ ಗಳಲ್ಲಿ ಕಾಣಿಸಿಕೊಂಡಿರುವ ಶಿವಣ್ಣ, ಚಂದ್ರು ನಿರ್ದೇಶನದ ಚಿತ್ರದಲ್ಲಿ ಹೇಗೆಲ್ಲಾ ಕಾಣಲಿದ್ದಾರೆ ಎನ್ನುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

ಚಂದನವನದಲ್ಲಿ ಮತ್ತೆ ಕಾಣಿಸಿಕೊಂಡ ‘ಮೋಹಿನಿ’

#rchandru #directed #shivanna #movie #balkaninews #iloveyou, #mailari, #filmnews

Tags