ಸುದ್ದಿಗಳು

ರೀಲ್ ನಲ್ಲಿ ಚಿತ್ರೀತಗೊಂಡ ಕೊನೆಯ ಸಿನಿಮಾ “ಕುಚ್ಚಿಕೂ ಕುಚ್ಚಿಕು”

ಕನ್ನಡ ಚಿತ್ರರಂಗದ ಶ್ರೇಷ್ಟ ನಿರ್ದೇಶಕರಲ್ಲಿ ಒಬ್ಬರಾದ ದಿವಂಗತ ಡಿ. ರಾಜೇಂದ್ರ ಬಾಬು ಅವರ ಕೊನೆಯ ಚಿತ್ರವಾದ “ಕುಚ್ಚಿಕೂ ಕುಚ್ಚಿಕು” ಚಿತ್ರವು ಇದೇ ಶುಕ್ರವಾರ (ಜುಲೈ 6) ದಂದು ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.

ಈಗಾಗಲೇ ಚಿತ್ರದ ಟ್ರೈಲರ್ ಮತ್ತು ಹಾಡುಗಳು ಸಾಮಾಜಿಕ ಜಾಲತಾಣದಲ್ಲಿ ನೋಡುಗರಿಂದ ಮೆಚ್ಚುಗೆ ಗಳಿಸುತ್ತಿದ್ದು ಟ್ರೆಡಿಂಗ್ ನಲ್ಲಿವೆ. ಚಿತ್ರಕ್ಕೆ ನಾದಬ್ರಹ್ಮ ಹಂಸಲೇಖಾ ಅವರೇ ಸಾಹಿತ್ಯ ಬರೆದು ಸಂಗೀತ ಸಂಯೋಜನೆ ಮಾಡಿದ್ದು ಎಲ್ಲಾ ಹಾಡುಗಳು ಮತ್ತು ಟ್ರೈಲರ್ ಜನರ ಮೆಚ್ಚುಗೆ ಪಡೆದಿವೆ.

ಈ ಚಿತ್ರದಲ್ಲಿ ಜೆ.ಕೆ ಮತ್ತು ಪ್ರವೀಣ್ ಕುಮಾರ್ ಅವರುಗಳು ನಾಯಕನಟರಾಗಿ ಅಭಿನಯಿಸಿದ್ದು, ಬಿಗ್ ಬಾಸ್ ಸ್ಪರ್ಧಿಯಾದ ಭುವನ್ ಗೌಡ ಸಹ ಈ ಚಿತ್ರದಲ್ಲಿದ್ದಾರೆ. ಚಿತ್ರಕ್ಕೆ ನಾಯಕಿಯಾಗಿ ಡಿ. ಬಾಬು ಅವರ ಮಗಳಾದ ನಕ್ಷತ್ರಾ ಅವರೇ ಅಭಿನಯಿಸಿದ್ದು, ನಿಜ ಜೀವನದಲ್ಲಿ ತಾಯಿಯಾಗಿರುವ ಸುಮಿತ್ರಾ ದೇವಿ ಅವರೇ ಈ ಚಿತ್ರದಲ್ಲಿ ‘ತಾಯಿಯ ಪಾತ್ರ’ದಲ್ಲಿ ನಟಿಸಿದ್ದಾರೆ.

ಈ ಚಿತ್ರವು ನೆಗೆಟಿವ್ ರೀಲ್ ನಲ್ಲಿ ಚಿತ್ರಿತಗೊಂಡ ಕೊನೆಯ ಸಿನಿಮಾವಾಗಿರುವುದು ಚಿತ್ರದ ಮತ್ತೊಂದು ವಿಶೇಷವಾಗಿದ್ದು, ಶ್ರೀ ಚಲುವರಾಯಸ್ವಾಮಿ ಮೂವೀಸ್ ಬ್ಯಾನರ್ ನಡಿಯಲ್ಲಿಎನ್ ಕೃಷ್ಣಮೂರ್ತಿ ಅವರು ಬಂಡವಾಳ ಹೂಡಿದ್ದಾರೆ. ಚಿತ್ರದ ಕುರಿತಂತೆ ‘ನಿರ್ಮಾಪಕರಿಗೆ ಲಾಭ ಬರಲಿ. ಇದು ಸ್ವಮೇಕ್ ಕಥೆಯಾದ್ದರಿಂದ ಇಲ್ಲಿ ಹುಟ್ಟಿದ ಮಗುವಿಗೆ ಯಶಸ್ಸು ಸಿಗಲಿ. ಹೊಸ ಹೊಸ ಕಥೆ ಹುಟ್ಟುವುದನ್ನು ನಾಯಕರು ಗುರ್ತಿಸಬೇಕು. ಆಗ ಕನ್ನಡದಲ್ಲಿ ದೊಡ್ಡ ಕಥಾಭಂಡಾರ ಸಾಧ್ಯವಿದೆ. ಇದರಿಂದ ರೀಮೇಕ್ ಹಾವಳಿ ತಪ್ಪುತ್ತದೆ. ಸುಮಾರು 50 ಮಂದಿ ರಂಗಭೂಮಿ ಕಲಾವಿದರನ್ನು ರಾಜೇಂದ್ರ ಬಾಬು ಸಿನಿಮಾ ರಂಗಕ್ಕೆ ಕರೆತಂದರು. ರವಿಚಂದ್ರನ್ ಸೇರಿದಂತೆ ನನ್ನನ್ನೂ ಪ್ರಮೋಟ್ ಮಾಡಿ ಸಪೋರ್ಟ್ ಮಾಡಿದರು’ ಎಂದು ಹಂಸಲೇಖ ಅವರು ಚಿತ್ರದ ಬಗ್ಗೆ ಹಾಗೂ ನಿರ್ದೇಶಕರ ಬಗ್ಗೆ ಹೇಳಿದ್ದಾರೆ.

ತುಂಬಾ ವರ್ಷಗಳ ಹಿಂದೆಯಷ್ಟೇ ಬಂದಿದ್ದ “ದಿಗ್ಗಜರು” ಚಿತ್ರದಲ್ಲಿ ಸ್ನೇಹದ ಮಹತ್ವವನ್ನು ಡಿ. ಬಾಬು ಅವರು ಹೇಳಿದ್ದರು. ಇದೀಗ “ಕುಚ್ಚಿಕೂ ಕುಚ್ಚಿಕು” ಚಿತ್ರದ ಮೂಲಕ ಸ್ನೇಹದ ಮತ್ತೊಂದು ಮಜಲನ್ನು ಹೇಳಿದ್ದು, “ರೇಸ್ ಬಿಟ್ವೀನ್ ಲವ್ ಆ್ಯಂಡ್ ಫ್ರೆಂಡ್ ಶಿಪ್” ಎಂಬ ಅಡಿಬರಹದಂತೆ ಚಿತ್ರವು ಪ್ರೀತಿ ಮತ್ತು ಸ್ನೇಹದ ಮಹತ್ವವನ್ನು ಪ್ರತಿಬಿಂಬಿಸಲಿದೆ. ಚಿತ್ರಕ್ಕೆ ಜೋಗಯ್ಯ ಖ್ಯಾತಿಯ ಎಮ್ ಯೂ ನಂದಕುಮಾರ್ ಅವರ ಛಾಯಾಗ್ರಹಣವಿದೆ.

ಜಯಣ್ಣಫಿಲ್ಮಂ ಬ್ಯಾನರ್ ನ ಹಂಚಿಕೆದಾರರಾದ ಜಯಣ್ಣ- ಭೋಗೇಂದ್ರರವರು ಈ ಚಿತ್ರದ ಬಿಡುಗಡೆಯ ಹಕ್ಕನ್ನು ಪಡೆದಿದ್ದು, ಸ್ವತಃ ಮೇಲುಸ್ತುವಾರಿಯನ್ನು ವಹಿಸಿಕೊಂಡು ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ.

 

@ sunil javali

Tags