ಸುದ್ದಿಗಳು

ಕನ್ನಡದ ಟಾಪ್ ರಿಮೇಕ್ ನಿರ್ದೇಶಕರಿವರು…!!!

ರಿಮೇಕ್ ಮಾಡಿ ತಪ್ಪಲ್ಲಾ, ಹಾಗಂತಾ ಎಲ್ಲಾ ಚಿತ್ರಗಳನ್ನು ರಿಮೇಕ್ ಮಾಡಬೇಡಿ

ಬೆಂಗಳೂರು,ಸ.11: ಕನ್ನಡದಲ್ಲಿ ರಿಮೇಕ್ ಚಿತ್ರ ನಿರ್ದೇಶಕರು ಯಾರು..? ಎಂದು ಯೋಚನೆ ಪ್ರಶ್ನಿಸಿಕೊಂಡರೆ ಸಾಕು, ತಟ್ಟನೇ ಕಣ್ಮುಂದೆ ಎಸ್ ಮಹೇಂದರ್ ,ವಿ ರವಿಚಂದ್ರನ್, ಎಸ್ ನಾರಾಯಣ್, ನಂದ ಕಿಶೋರ್, ಮಾದೇಶ್, ಸುದೀಪ್.. ಸೇರಿದಂತೆ ಹಲವಾರು ನಿರ್ದೇಶಕರ ಹೆಸರುಗಳು ನೆನಪಿಗೆ ಬರುತ್ತವೆ.

ಡೈರಕ್ಟರ್ ಟಚ್

ಯುವ ನಿರ್ದೇಶಕರು, ಹೊಸತನ, ತಾಜಾತನ ಕನ್ನಡ ಸಿನಿಮಾಗಳಲ್ಲಿ ಇತ್ತೀಚೆಗೆ ಹೆಚ್ಚಾಗಿ ಕಾಣಬಹುದು. ಇದರ ಜೊತೆಗೆ ಬೇರೆ ಭಾಷೆಯಲ್ಲಿ ಸದ್ದು ಮಾಡಿದ ಚಿತ್ರಗಳನ್ನು ರಿಮೇಕ್ ಮಾಡುವ ಸಂಸ್ಕೃತಿಯೂ ಮುಂದುವರಿದಿದೆ.
ರಿಮೇಕ್ ಚಿತ್ರಗಳನ್ನು ಮಾಡಿ.. ಹಾಗಂತಾ ಅಲ್ಲಿ ಹಿಟ್ ಆದಂತ ಎಲ್ಲಾ ಚಿತ್ರಗಳನ್ನು ಕನ್ನಡಕ್ಕೆ ತರುವುದಾದರೂ ಏಕೆ..? ಹಾಗೊಂದು ವೇಳೆ ತಂದರೂ ಸಹ, ಆಯಾ ಚಿತ್ರದ ನಿರ್ದೇಶಕರು ತಮ್ಮ ತನವನ್ನು ತೋರಿಸದೇ, ಪರಭಾಷಾ ಚಿತ್ರಗಳಲ್ಲಿದ್ದಂತೆ ಕನ್ನಡದಲ್ಲಿಯೂ ತೋರಿಸುವುದು ಎಷ್ಟರ ಮಟ್ಟಿಗೆ ಸರಿ..

ರಿಮೇಕ್ ಮಾಡಿದರೆ..??

ರಿಮೇಕ್ ಮಾಡಿದರೆ ಸ್ವಂತಿಕೆ ಕಡಿಮೆಯಾಗುತ್ತದೆ ಅಂತ ಹೇಳುವುದಿಲ್ಲಾ. ಆದರೆ ನಿರ್ದೇಶಕ ಗುರುಪ್ರಸಾದ್ ಹೀಗೆ ಹೇಳುತ್ತಾರೆ, ‘ರಿಮೇಕ್ ಮಾಡಿ ಗೆಲ್ಲುವುದಕ್ಕಿಂತ ಸ್ವಮೇಕ್ ಮಾಡಿ ಸೋಲುವುದೇ ಮುಖ್ಯ’ ಅಂತ.

ಇನ್ನು ವಿ. ರವಿಚಂದ್ರನ್ ರವರು ಬಹಳಷ್ಟು ಚಿತ್ರಗಳನ್ನು ರಿಮೇಕ್ ಮಾಡಿದ್ದರೂ ಅದರಲ್ಲೊಂದು ತಮ್ಮತನ (ಡೈರಕ್ಟರ್ ಟಚ್) ತೋರಿಸುತ್ತಿದ್ದರು. ಆದರೆ ಸುದೀಪ್, ನಂದಕಿಶೋರ್ ರಂತಹ ನಿರ್ದೇಶಕರು ಅಲ್ಲಿಂದ ನೇರವಾಗಿ ಬಟ್ಟಿ ಇಳಿಸಿರುತ್ತಾರೆ.

ರಿಮೇಕ್ ಚಿತ್ರಗಳೆಲ್ಲವೂ ಗೆಲ್ಲಲ್ಲ

ಮತ್ತೊಂದು ಅಚ್ಚರಿಯ ಮಾತೆಂದರೆ, ಬೇರೆ ಭಾಷೆಯಲ್ಲಿ ಹಿಟ್ ಆದಂತಹ ಚಿತ್ರಗಳು ನಮ್ಮ ಸಂಸ್ಕೃತಿಗೆ ಒಗ್ಗುತ್ತವೆಯೇ ಎಂಬುದನ್ನು ಅರಿತು ಇಲ್ಲಿ ರಿಮೇಕ್ ಮಾಡಬೇಕಾಗುತ್ತದೆ. ಹಾಗಂತಾ ಅಲ್ಲಿ ಹಿಟ್ ಆಗಿದ್ದವೆಲ್ಲಾ ಇಲ್ಲಿ ಹಿಟ್ ಆಗುತ್ತವೆ ಎಂಬ ಮಾತನ್ನು ನಂಬಲಾಗುವುದಿಲ್ಲ.

ಇನ್ನು ನಿರ್ದೇಶಕರಂತೆಯೇ ಕನ್ನಡದ ಹಲವಾರು ನಟರು ತಾವಾಗಿಯೇ ನಾವು ರಿಮೇಕ್ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದಿದ್ದಾರೆ. ಆದರೆ “ಒಳ್ಳೆಯ ಕಥೆಗಳಿರುವ ಸಿನಿಮಾ ಬಂದಾಗ ರಿಮೇಕ್ ಮಾಡುವುದರಲ್ಲಿ ತಪ್ಪೇನಿಲ್ಲ’ ಎಂದು ಶಿವರಾಜ್ ಕುಮಾರ್ ಹೇಳುತ್ತಾರೆ.

ಒಳ್ಳೆಯ ಚಿತ್ರಗಳು ಬರಲಿ

ಕನ್ನಡ ಚಿತ್ರೋದ್ಯಮ ನಿಧಾನವಾಗಿ ಬೆಳೆಯುತ್ತಿದೆ, ಬಿಗ್ ಸ್ಟಾರ್ ಗಳ ಚಿತ್ರ ಕರ್ನಾಟಕ ಹೊರತಾಗಿ ಬೇರೆ ನಗರಗಳಲ್ಲೂ ಮತ್ತು ವಿದೇಶದಲ್ಲೂ ಬಿಡುಗಡೆಯಾಗುತ್ತಿವೆ. ಕಳೆದ ಐದು ವರ್ಷಗಳಲ್ಲಿ ಬಾಕ್ಸಾಫೀಸಿನಲ್ಲಿ ಸದ್ದು ಮಾಡುತ್ತಿರುವ ಚಿತ್ರಗಳ ಸಂಖ್ಯೆಯೂ ಗಣನೀಯವಾಗಿ ಸುಧಾರಿಸುತ್ತಿದೆ. ರಿಮೇಕಾಗಲಿ, ಸ್ವಮೇಕಾಗಲಿ ಪ್ರೇಕಕ್ಷಕನನ್ನು ಬೋರು ಹೊಡೆಸದಿದ್ದರೆ ಸಾಕು, ಚಿತ್ರ ಹಿಟ್ ಆಗುವುದಂತೂ ಗ್ಯಾರಂಟಿ.

ಆದಷ್ಟು ರಿಮೇಕ್ ಕಡಿಮೆಯಾಗಲಿ

ಕನ್ನಡದಲ್ಲಿಯೂ ಅನೇಕ ಪ್ರತಿಭಾವಂತ ಬರಹಗಾರರಿದ್ದಾರೆ. ಹೀಗಾಗಿ ಅಂಥವರನ್ನು ಬಳಸಿಕೊಂಡು ಒಳ್ಳೆಯ ಗುಣಮಟ್ಟದ ಚಿತ್ರಗಳನ್ನು ಇಲ್ಲಿಯೇ ತಯಾರಿಸಬಹುದು. ಪರಭಾಷೆಯಿಂದ ನಾವು ರಿಮೇಕ್ ಮಾಡುವ ಸಂಪ್ರದಾಯವನ್ನು ಆದಷ್ಟು ಬೇಗನೇ ಕಡಿಮೆ ಮಾಡಿ ನಮ್ಮ ಚಿತ್ರಗಳು ಪರಭಾಷೆಗಳಿಗೆ ರಿಮೇಕ್ ಆಗುವಂತೆ ನೋಡಿಕೊಳ್ಳಬೇಕು.

Tags