ಸುದ್ದಿಗಳು

ಡಾ.ರಾಜ್ ಕುಮಾರ್ ತಮ್ಮ ತಂದೆ ಜೊತೆ ಅಭಿನಯಿಸಿರುವ ಚಿತ್ರ ಯಾವುದು ಗೊತ್ತೆ?

ರಾಜ್ ಅವರು ತಮ್ಮ ಜೀವನದುದ್ದಕ್ಕೂ ಅವರ ತಂದೆಯನ್ನು ದೈವ ಸ್ವರೂಪ ಅಂತ ಅಂದುಕೊಂಡಿದ್ದರು. 

ಬೆಂಗಳೂರು, ಸೆ.06: ಹೌದು ಡಾ.ರಾಜ್ ಅವರ ಮೊದಲ ಚಿತ್ರ ಬೇಡರ ಕಣ್ಣಪ್ಪ ಅಂತ ಎಷ್ಟೋ ಮಂದಿ ತಿಳಿದ್ದಿದ್ದಾರೆ. ಆದರೆ ಅವರು ಬಾಲ ನಟರಾಗಿ ಅವರ ತಂದೆ ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಅವರ ಜೊತೆ ಬೆಳ್ಳಿತೆರೆಯನ್ನು ಹಂಚಿಕೊಂಡಿದ್ದಾರೆ. ಇವರ ಜೊತೆ ಅವರ ಪ್ರೀತಿಪಾತ್ರ ತಮ್ಮ ವರದಪ್ಪ, ತಂಗಿ ನಾಗಮ್ಮ ಸಹ, ಜೊತೆಯಲ್ಲಿ ಅಭಿನಯಿಸಿದ್ದಾರೆ. ಆ ಚಿತ್ರದ ಹೇಸರೆ “ಪ್ರಹ್ಲಾದ “. “ಅಖಂಡಾಸುರ” ಪಾತ್ರದಲ್ಲಿ ಸಿಂಗನಲ್ಲೂರು ಪುಟ್ಟಸ್ವಾಮಯ್ಯ 

ಹಿರಣ್ಯ ಕಶಿಪುವಿನ ಸೇನೆಯ ಆಳು “ಅಖಂಡಾಸುರ” ಪಾತ್ರದಲ್ಲಿ ರಾಜ್ ಅವರ ತಂದೆ ಅಭಿನಯಿಸಿದರೆ ಅದೇ ಚಿತ್ರದಲ್ಲಿ ಪ್ರಹ್ಲಾದನ ಜೊತೆಯಲ್ಲಿರುವ ಬಾಲ ಶಿಷ್ಯರುಗಳ ಪಾತ್ರಗಳಲ್ಲಿ ಮುತ್ತುರಾಜು, ವರದಪ್ಪ ,ನಾಗಮ್ಮ ಅಭಿನಯಿಸಿದ್ದಾರೆ. ಆ ಚಿತ್ರಕ್ಕೆ ತಮಿಳಿನ ಕೆ.ಸುಬ್ರಹ್ಮಣ್ಯಂ ಅವರ ನಿರ್ದೇಶನವಿದ್ದು  ಅವರೇ ನಿರ್ಮಾಪಕರಾಗಿರುತ್ತಾರೆ. ನಾಟಕದಲ್ಲಿ ಅದ್ಭುತ ಅಭಿನಯ ನೀಡಿ ಕಂಸ, ರಾವಣ, ಹಿರಣ್ಯಕಶಿಪು ಸೇರಿದಂತೆ ರೌದ್ರ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸುತ್ತಿದ್ದ ಮಹಾ ನಟರು ನಮ್ಮ ಪುಟ್ಟಸ್ವಾಮಯ್ಯ ಅವರು‌, ಅಂತರವನ್ನು ಗುಬ್ಬಿ ವೀರಣ್ಣ ನಾಟಕ ಕಂಪನಿಯಲ್ಲಿ ಕಲಾವಿದರನ್ನು  ಆಯ್ಕೆ ಮಾಡುವಾಗ ಆತನಿಗೆ ಏನು ಬರುವುದಿಲ್ಲ. ನೆಟ್ಟಗೆ ಸಂಭಾಷಣೆ ಹೇಳುವುದಕ್ಕೂ ಬರಲ್ಲ ಅಂತ ಚಾಡಿ ಹೇಳಿ ಅವರಿಗೆ ಸಿಗಬಹುದಾಗಿದ್ದ ದೊಡ್ಡ ಪಾತ್ರವನ್ನು ತಪ್ಪಿಸುತ್ತಾರೆ.

ಮುಂದಿನ ‍ಚಿತ್ರದಲ್ಲಿ ನನ್ನ ಮಗ ಮುತ್ತುರಾಜನಿಗೆ ಅವಕಾಶ ಕೊಡಿ 

ಆದರೆ ಅವರ ಹುಟ್ಟು ಪ್ರತಿಭೆಗೆ ಒಮ್ಮೆ ಹಾಡುವ ಅವಕಾಶ ಸಿಕ್ಕಾಗ ರಾಗ ಬದ್ದ ವಾಗಿ ಹಾಡಿ ಎಲ್ಲರನ್ನು ಮಂತ್ರ ಮುಗ್ಧ ಗೊಳಿಸಿದಾಗ ಸ್ವತಃ ಸುಬ್ರಹ್ಮಣ್ಯ ಅವರು ನೊಂದುಕೊಂಡು ನಿನ್ನಂತಹ ದೊಡ್ಡ ನಟನಿಗೆ ಚಿಕ್ಕ ಪಾತ್ರ ಕೊಟ್ಟನಲ್ಲ ಅಂತ ಬೇಸರಪಟ್ಟುಕೊಳ್ಳುತ್ತಾರೆ‌.ಅದಕ್ಕೆ ಅವರು ಹೋಗ್ಲಿ ಬಿಡಿ ಗುರುಗಳೆ, ಪಾಲಿಗೆ ಬಂದದ್ದು ಪಂಚಾಮೃತ ಆದರೆ ನಿಮ್ಮ ಮುಂದಿನ ‍ಚಿತ್ರದಲ್ಲಿ ನನ್ನ ಮಗ ಮುತ್ತುರಾಜನಿಗೆ ಅವಕಾಶ ಕೊಡಿ ಅಂತ ಕೇಳಿಕೊಳ್ಳುತ್ತಾರೆ.ತಮ್ಮ ಮಗ ಸಿನೆಮಾದಲ್ಲಿ ಅಭಿನಯಿಸುವದನ್ನು ನೋಡಬೇಕು, ಆತ ಪರ್ವತದೆತ್ತರ ಬೆಳೆಯುವುದನ್ನು ನೋಡಬೇಕು ಅಂತ  ಪುಟ್ಟಸ್ವಾಮಯ್ಯ ಅವರು ಕಂಡಿದ್ದ ಕನಸನ್ನು ಅಭಿಜಾತ ಕಲಾವಿದರಾದ ನಮ್ಮ ಅಣ್ಣಾವ್ರು ನನಸು ಮಾಡಿ, ಪ್ರಪಂಚದ ಚಲನಚಿತ್ರ ಇತಿಹಾಸದಲ್ಲಿ ದಾಖಲೆ ಬರೆದು ಅಜಾರಾಮರಾಗಿದ್ದಾರೆ. 

ಚಲನಚಿತ್ರರಂಗದ ಒಬ್ಬ ಆದರ್ಶ ವ್ಯಕ್ತಿ 

ಪುಟ್ಟಸ್ವಾಮಯ್ಯ ಅವರ ‘ಜೀವನ ನಾಟಕ’ ಚಿತ್ರದಲ್ಲೂ ಅಭಿಯಿಸಿದ್ದಾರೆ. ‘ಪ್ರಹ್ಲಾದ’ ಚಿತ್ರಕ್ಕಿಂತ ಮೊದಲು ‘ಜೀವನ ನಾಟಕ’  ಬಿಡುಗಡೆ ಆಗುತ್ತದೆ. ಪುಟ್ಟಸ್ವಾಮಯ್ಯ ಅವರು ಆ ಕಾಲಕ್ಕೆ  ವೃತ್ತಿ ರಂಗಭೂಮಿಯಲ್ಲಿ ದೊಡ್ಡ ಹೆಸರುಮಾಡಿದ್ದರು. ನಾಟಕ ಕಲಾವಿದರಾಗಿ ಮತ್ತು ಮೇಷ್ಟ್ರು ಆಗಿ ಶಿಸ್ತನ್ನು ರೂಢಿಸಿಕೊಂಡು, ಕಠಿಣ ದುಡಿಮೆಯಲ್ಲಿ ನಂಬಿಕೆಯಿಟ್ಟು ತಮ್ಮ ಸೋದರ ಮಾವ ಚಿನ್ನೇಗೌಡರ ಬಳಿ ನಾಟಕವನ್ನು ಕಲೆತು ಸಂಸ್ಕಾರ ಯುತರಾಗಿ, ಭಾವಜೀವಿಯಾಗಿ ಆ ಎಲ್ಲ ಜೀವನ ಮೌಲ್ಯಗಳನ್ನು ತಮ್ಮ ಮಕ್ಕಳಿಗೂ ಹೇಳಿ ಅವರು ಅನುಸರಿಸುವಂತೆ ಮಾಡಿ ಚಲನಚಿತ್ರರಂಗದಲ್ಲಿ ಒಬ್ಬ ಆದರ್ಶ ಯುತ ಮೇಲ್ಪಂಕ್ತಿಯನ್ನು ಹಾಕಿಕೊಟ್ಟು ಹೋಗಿದ್ದಾರೆ. ರಾಜ್ ಅವರು ತಮ್ಮ ಜೀವನದುದ್ದಕ್ಕೂ ಅವರ ತಂದೆಯನ್ನು ದೈವ ಸ್ವರೂಪ ಅಂತ ಅಂದುಕೊಂಡಿದ್ದರು.  ನನ್ನೆಲ್ಲಾ ಸಾಧನೆಗೆ ನನ್ನ ಹೆತ್ತವರ ಆಸೆ…ಕನಸು… ಅವರಿತ್ತ ಆಶೀರ್ವಾದ ಕಾರಣ ಅಂತ ಹೇಳುತ್ತಲೆ ಇದ್ದರು.ಪುಟ್ಟಸ್ವಾಮಯ್ಯ ಅವರನ್ನು ಹತ್ತಿರದಿಂದ ಕಂಡಿದ್ದ ಜಿ.ವಿ.ಅಯ್ಯರ್  ಪುಣ್ಯ ಪುರುಷ ಅವರು ಅಂತ ಹೇಳಿದ್ದಾರೆ.

ಸೂನಗಹಳ್ಳಿ ರಾಜು

Tags

Related Articles