ಬಾಲ್ಕನಿಯಿಂದಸುದ್ದಿಗಳು

ಪೋಸ್ಟರ್, ಟೈಟಲ್, ಟ್ಯಾಗ್ ಲೈನ್, ಜೊತೆಗೆ ಮತ್ತೊಂದು ವಿಶೇಷ…!

ಚಂದನವನದಲ್ಲಿ ಪ್ರಪ್ರಥಮ ಬಾರಿಗೆ ಗಾಯಕನೊಬ್ಬನ ಹೆಸರು ಪೋಸ್ಟರ್ ನಲ್ಲಿ ಕಾಣಿಸಲಾಗಿದೆ…!?!

ವಿದ್ಯಮಾನ-ವಿಶ‍್ಲೇಷಣೆ

ಬೆಂಗಳೂರು, ಸೆ.3: “ಅಟ್ಟಯ್ಯ ವರ್ಸಸ್ ಹಂದಿಕಾಯೋಳು” ಎಂಬ ಹೆಸರಿನ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ಇಂದು ನಡೆಯಲಿದೆ.  ಅಚ್ಚ ಕನ್ನಡಿಗ, ಖ್ಯಾತ ಗಾಯಕ ವಿಜಯ್ ಪ್ರಕಾಶ್ ಒಂದು ಹಾಡನ್ನು ಹಾಡಿದ್ದು, ಯಶವಂತ್ ಭೂಪತಿ ಸಂಗೀತ ನೀಡಿದ್ದಾರೆ. ಪ್ರಥಮದಲ್ಲೇ ಇದರ ಪೋಸ್ಟರ್ ನೋಡಿ…, …ಈ ಚಿತ್ರದ ಟೈಟಲ್ ನ  ಎಡಕೊನೆಯ ಮೇಲೆ “ಹಿನ್ನೆಲೆ ಗಾಯನ ವಿಜಯ್ ಪ್ರಕಾಶ್” ಎಂದು ನಮೂದಿಸಲಾಗಿದೆ. ಸ್ಯಾಂಡಲ್ ವುಡ್ ಮಟ್ಟಿಗೆ ವಿಶ್ಲೇಷಿಸೋದಾದರೆ, ಇದೊಂದು ನವೀನ ಬೆಳವಣಿಗೆಯೇ ಸರಿ! ಬರೇ ಕಣ್ಣಿಗೆ ಇದೊಂದು ಪ್ರಚಾರದ ಗಿಮಿಕ್ ಎನಿಸಿದರೂ, ಇದರ ಹಿಂದೆ ಬಹಳಷ್ಟು ಸತ್ಯಗಳಡಗಿವೆ.

ನಮ್ಮ ಕನ್ನಡ ಚಿತ್ರರಂಗದಲ್ಲಿ ಪ್ರಪಪ್ರಥಮ ಬಾರಿಗೆ ಸಿನೆಮಾ ಪೋಸ್ಟರ್ ನಲ್ಲಿ ಸಂಗೀತಗಾರನ ಹೆಸರು ಬರುವಂತೆ ಬ್ರಾಂಡ್ ಆದವರೆಂದರೆ ಅದು ಹಂಸಲೇಖಾರವರದ್ದೇ ಹೆಸರು. ರವಿಚಂದ್ರನ್ ‘ಪ್ರೇಮಲೋಕ’ದ ಬಳಿಕ 2-3 ವರ್ಷದಲ್ಲೇ ಹತ್ತಿಪ್ಪತ್ತು ಚಿತ್ರಗಳು, ಸಾಲು ಸಾಲಾಗಿ ಅವರ ಸಂಗೀತದ ಪ್ರಭಾವದಿಂದ ಗಳಿಕೆ ಹೆಚ್ಚಿಸಿಕೊಂಡಾಗ, ಹಂಸಲೇಖಾ ಕೂಡಾ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಂಡಿದ್ದರು. ಮೊದಮೊದಲು ಹಂಸಲೇಖಾರ ಸುಂದರ ಸಹಿ ಪೋಸ್ಟರ್ ನಲ್ಲಿ ಕಾಣಿಸಿಕೊಂಡಿದ್ದೂ ಮರೆಯುವಂತಿಲ್ಲ.

ಆನಂತರ ಗುರುಕಿರಣ್, ಅರ್ಜುನ್ ಜನ್ಯರೂ ಇದೇ ಫಾರ್ಮುಲಾ ಫಾಲೋ ಮಾಡಿದ್ದರು.  ಜನ್ಯರ ಫೋಟೊ ಪೋಸ್ಟರ್ ಗೇರಲು ಹೆಚ್ಚು ಕಾಲ ಕಾಯಬೇಕಾಗಲಿಲ್ಲ.  ಪ್ರಾಯಶಃ  ತಮ್ಮ ಆರನೇ ಚಿತ್ರಕ್ಕೇ ಅವರಿದನ್ನು ಸಾಧಿಸಿದ್ದರು.

ಎರಡನೆಯದಾಗಿ , “ಅಟ್ಟಯ್ಯ ವರ್ಸಸ್ ಹಂದಿಕಾಯೋಳು” ಚಿತ್ರದ ಟ್ಯಾಗ್ ಲೈನ್ ಕೂಡಾ ವಿಚಿತ್ರವೆನಿಸುತ್ತದೆ. “ಸಂಭವಾಮಿ ಯುಗೇ ಯುಗೇ.., ಒಳ್ಳೇವ್ರಗೆಲ್ಲಾ ಹೊಗೆ ಹೊಗೆ..!!”

ಹಾಗೆ ನೋಡಿದರೆ, ಸಂಭವಾಮಿ ಯುಗೇ ಯುಗೇ.., ಶ್ರೀಮದ್ಭಗವದ್ಗೀತೆಯ  4ನೇ ಅಧ್ಯಾಯದಲ್ಲಿನ 8ನೇ ಶ‍್ಲೋಕವನ್ನು “…ಹಂದಿಕಾಯೋಳು “ ಚಿತ್ರದಲ್ಲಿ ಬಳಸಲಾಗಿದೆ. ಟೈಟಲ್ ಪ್ರಕಾರ ಹಳ್ಳಿಯೊಂದರ ಗದ್ದೆಗೆ ಬೇರೆಯವರ ಹಂದಿಗಳು ನುಗ್ಗಿದಾಗ ಶುರುವಾಗುವ ವ್ಯಾಜ್ಯವೇ ಕೊನೆಗೆ ಕ್ರೈಂ ಸ್ಟೋರಿಯಾಗಿ ಪರಿವರ್ತನೆಗೊಳ್ಳುದಂತೆ. ನಗರದಿಂದ ಬಂದ ಇಂಜಿನಿಯರ್ ಹುಡುಗ ಈ ಗೊಂದಲದಲ್ಲಿ ಸಿಕ್ಕಿಕೊಳ್ಳುತ್ತಾನೆ.

ಇದನ್ನು ನಿರೂಪಿಸುವಲ್ಲಿ ಗೀತೆಯಲ್ಲಿನ ಭಗವಾನ್ ಶ್ರೀಕೃಷ್ಣನ  ಉಕ್ತಿಯಂತೆ, ಯಾವಯಾವಾಗ  ಈ  ಜಗತ್ತಿನಲ್ಲಿ ಅಧರ್ಮ ತಲೆದೋರುವುದೋ, ಆವಾಗೆಲ್ಲಾ ದುಷ್ಟರ ಶಿಕ್ಷಣೆ ಮಾಡಿ , ಶಿಷ್ಟರ ರಕ್ಷಣೆಗೋಸ್ಕರ ಸ್ವತಃ ನಾನೇ (ಕೃಷ್ಣನೇ) ಅವತಾರವೆತ್ತಿ ಬರುವೆ…ಎಂದಿದೆ.

ಆದರೆ, ಇಲ್ಲಿನ ಟ್ಯಾಗ್ ಅದ್ಯಾಕೋ ಕೊಂಚ  ತಿರುಚಿಸಿಕೊಂಡಂತೆ ಭಾಸವಾಗಿದೆ. ಯುಗಯುಗದಲ್ಲೂ, ಕಾಲಕಾಲಕ್ಕೆ ಈ ಜಗತ್ತಿನಲ್ಲಿ ಜರುಗುತ್ತಿರುವುದೇನೆಂದರೆ, ಶಿಷ್ಟರಿಗೇ  ಶಿಕ್ಷಣೆ.., ಅರ್ಥಾತ್.., ಒಳ್ಳೆಯವರಿಗೇ ಶಿಕ್ಷೆ ಆಗುತ್ತಿದೆ, ಅದನ್ನೇ ಈ ವ್ಯಾಜ್ಯ  ಅಂದರೆ ಅಟ್ಟಯ್ಯ ವರ್ಸಸ್ ಹಂದಿಕಾಯೋಳುಸಾಬೀತು ಮಾಡುತ್ತೆ ಎಂಬ ಭಾವನೆ.

 ಇನ್ನು, ಕಳೆದ 5-6 ವರ್ಷಗಳಲ್ಲಿ ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್  ಕರ್ನಾಟಕ ಶಾಸ್ತ್ರೀಯ ಸಂಗೀತ-ಹಿಂದೂಸ್ತಾನೀ  ಶಾಸ್ತ್ರೀಯ ಸಂಗೀತ, ಅರೆ ಶಾಸ್ತ್ರೀಯ ಹಾಡುಗಳು, ಆಧುನಿಕತೆಯ ಸೂಸುವ  ಅಪ್ಪಟ  ಟಪ್ಪಾಂಗುಚ್ಚಿ ಗೀತೆಗಳು..,  ಹೀಗೆ ಸಕಲ ಜೋನರ್ ಗಳನ್ನೂ ಕರತಲಾಮಲಕ ಮಾಡಿಕೊಂಡು ನೂರಾರು ಹಾಡುಗಳಿಂದ ಲಕ್ಷಾಂತರ ಗೀತ’ಪ್ರಿಯ’ರನ್ನ ರಂಜಿಸುತ್ತಲೇ ಬಂದಿದ್ದಾರೆ. ಓರ್ವ ಸಿನೆಮಾದ ನಿರ್ಮಾಪಕನೋ ಯಾ ನಿರ್ದೇಶಕನೋ ತಮ್ಮ ಚಿತ್ರಕ್ಕೆ ವಿಜಯ್ ಪ್ರಕಾಶ್ ಹಾಡು ಇದ್ದರೇ ಸಿನೆಮಾ ಓಡುತ್ತೆಂದು ಭಾವಿಸುವುದೂ ವ್ಯಕ್ತವಾಗಲು ಶುರುವಾದಾಗ,  ಅವರೂ ಈ ಸಂಗೀತ ನಿರ್ದೇಶಕರುಗಳಂತೆ ತಮ್ಮ ಪಾಲನ್ನು ಪೋಸ್ಟರ್ ನಲ್ಲಿ ಹೆಸರು ಹಾಕಿಸಿಕೊಳ್ಳುವ ಮೂಲಕ ಸ್ಪಷ್ಟಪಡಿಸಿದರೆ ಅದು ಅವರ ವರ್ಚಸ್ಸು ಅಂಥಾದ್ದು ಎಂದೇ ತಿಳಿಯಬೇಕು.

ಇದು ಅಭೂತಪೂರ್ವ ಬೆಳವಣಿಗೆ. ಸದ್ಯದಲ್ಲೇ ಅವರ ಭಾವಚಿತ್ರವೂ ಪೋಸ್ಟರ್ ನಲ್ಲಿ ರಾರಾಜಿಸಲಿ ಎಂದು ಹಾರೈಸುತ್ತದೆ ಬಾಲ್ಕನಿ.

 -ಡಾ. ಸುದರ್ಶನ್ ಭಾರತೀಯ ಪಿ.ವಿ. 

Tags