ಚಿತ್ರ ವಿಮರ್ಶೆಗಳುಸಂಬಂಧಗಳುಸುದ್ದಿಗಳು

ಒಂದಲ್ಲಾ… ಎರಡಲ್ಲಾ… ಈ ಹಂಬಲಕೆ ಕೊನೆಯಿಲ್ಲಾ..!

ನಾಯಕ-ನಾಯಕಿ ಆಧಾರಿತವೇನಲ್ಲಾ…, ಇದು ಶುದ್ಧ ವಿಷಯಾಧಾರಿತ ಚಿತ್ರ

 

ನಾವು ನೋಡಿದ ಸಿನೆಮಾ                                                                   ಬೆಳ್ಳಿ ತೆರೆ ವಿಮರ್ಶೆ

 

  • ಹೆತ್ತವರ ಹಂಬಲದ ಮಗ..!, ಮಗುವಿಗೆ ಹಸುವಿ ನ ಹಂಬಲ..!!
  • ಇನ್ನು ಈ ಚಿತ್ರದ ಹೊಸತನದ ಹಂಬಲಕೆ ಮನಸೋತ ಜನ..!!!
  • ಒಂದಲ್ಲಾ… ಎರಡಲ್ಲಾ… ಈ ಹಂಬಲಕೆ ಕೊನೆಯಿಲ್ಲಾ..! ..ಮೊದಲು…?…ಮೊದಲೇಯಿಲ್ಲಾ..!!
  • ಚಿತ್ರವಿಡೀ ಎರಡೇ ಕೂಗು..ಸಮೀರ ಸಿಕ್ಕಿದ್ನಾ…?! ನನ್ನ ಭಾನು ನೋಡಿದ್ಯಾ…?!
  • ಭೂಮಿ ತುಂಬ ಚಿಕ್ಕದಿದೆ…ಬದುಕಿಲ್ಲಿ ದೊಡ್ಡದಿದೆ…ಯಾಕೆ ಯೋಚನೆ..?!
  • ದೈನಂದಿನ ಜೀವಿತಕ್ಕೆ ಜಾತಿ-ಮತ-ಧರ್ಮಗಳ ಅಡ್ಡಗಾಲಿಲ್ಲ ಎಂದು ಸಾಬೀತು
ಚಿತ್ರ             : ಒಂದಲ್ಲಾ… ಎರಡಲ್ಲಾ…!

ನಿರ್ದೇಶಕ   : ಡಿ. ಸತ್ಯಪ್ರಕಾಶ್

ನಿರ್ಮಾಪಕ : ಉಮಾಪತಿ ಶ್ರೀನಿವಾಸ ಗೌಡ

ಬ್ಯಾನರ್     : ಕನ್ನಡ ಕಲರ್ ಸಿನೆಮಾಸ್

ನಾಯಕ(ರು) : 20 ಮಂದಿ ಪೋಷಕ ನಟರು

ನಾಯಕಿ                  :  ‘ಭಾನು’ ಎಂಬ ಹಸು

ಬಾಲ್ಕನಿ  ರೇಟಿಂಗ್ :  * * * * * * * *  (8/10)

ಭಾರತೀಯ ಸಮಾಜದ ಪ್ರಸಕ್ತ  ಓರೆಕೋರೆಗಳ  ಬದಿಗೊತ್ತಿ ಅಪ್ಪಟ ಮಾನವೀಯ ಮೌಲ್ಯಗಳ  ಎತ್ತಿಹಿಡಿದ ಕಥಾವಸ್ತು ಇಲ್ಲಿದೆ ಬನ್ನಿ! ಬುದ್ಧಿ ತಿಳಿದಾಗಿನಿಂದ ಸದಾ ಈ ನಮ್ಮ ದೇಶದಲ್ಲಿ ಹಿಂದೂ-ಮುಸ್ಲಿಂ -ಸಿಖ್‍-ಇಸಾಯೀ ಏಕ್ ಹೈ…ಎಂಬ ಘೋಷಣೆ ಕಿವಿಗಡಚಿಕ್ಕಿದೆ! ಸ್ವಾತಂತ್ರ್ಯಾನಂತರ ಕಳೆದ ಏಳು ದಶಕಗಳಲ್ಲಿ ವಿವಿಧ ಸಮುದಾಯಗಳ  ಐಕ್ಯತೆ ಮರೀಚಿಕೆಯಾಗೇ ಸಾಗಿದೆ!!

ಮತ್ತದು ಸಾಕಾರವಾದದ್ದು ಎಲ್ಲಿ..?? ಇಲ್ಲೇ..ಈ ಸಿನೆಮಾದಲ್ಲೇ…ಹೌದೌದು..! ಒಂದಲ್ಲಾ..ಎರಡಲ್ಲಾ ಚಲನಚಿತ್ರದಲ್ಲೇ.. ‘ಮಾನವ ಜಾತಿ ತಾನೊಂದೆವಲಂ ಎಂದ ‘ವಿಕ್ರಮಾರ್ಜುನ ವಿಜಯ’ದ ಕರ್ತೃ ಆದಿಕವಿ ಪಂಪನ ಘೋಷದಂತೆ ಇಲ್ಲಿ ನಮ್ಮ ಸಮಾಜದ ಮೂರೂ ಕೋಮಿನವರು ಸೌಹಾರ್ದದಿಂದ ನಡೆದುಕೊಳ್ಳುವುದ ಕಂಡು ಅಮಿತಾನಂದವಾಗಬಹುದು. .! ಚಿತ್ರವಿಡೀ ಎರಡೇ ಕೂಗು..ಸಮೀರ ಸಿಕ್ಕಿದ್ನಾ..ಎಂದಾ ಏಳೆಂಟು ವಯಸ್ಸಿನ ಪುಟ್ಟ ಹುಡುಗನ ಕುಟುಂಬದವರ ಹೊಯ್ಲು, ನನ್ನ ಭಾನು ನೋಡಿದ್ಯಾ.. ಎಂದು ತನ್ನ ಮನೆಯ ಹಸುವನ್ನು ಹುಡುಕುತ್ತಾ ಹಪಹಪಿಸುವ ಪುಟ್ಟ ಸಮೀರ್.ನಿಜ ಕಣ್ರೀ! ಈ ಬದುಕು ಕೇವಲ ಒಂದೈದಾರು ದಶಕಗಳ ನಾಟಕ ಎಂಬ ಸತ್ಯ ಗೊತ್ತಾಗ್ಯೂ ನಾವು ಪ್ರೀತಿ-ಮಮತೆ-ನಂಬಿಕೆ-ವಿಶ‍್ವಾಸಗಳ ಪರಸ್ಪರ ಹಂಚದೇ ಸುಮ್ಮನೇ ಹುಟ್ಟಿ ಬಳಿಕ ಸತ್ತೂ ಹೋದರೆ ಈ ವಿಶಾಲ ಪ್ರಕೃತಿಯೊಡನೆ ಇಷ್ಟು ಕಾಲ ಜೀವಿಸಿ, ಸಹಯೋಗ ಅನುಭವಿಸಿ ಕಲಿತ ಪಾಠವಾದರೂ ಏನು..? ದೊರೆತ ಫಲವಾದರೂ ಏನು..?? ಆ ನಿಟ್ಟಿನಲ್ಲಿ ಮೂಡಿದ ಈ ಸಹಜ, ಸುಂದರ, ಸರಳ ಕಥಾಹಂದರ , ಅದನ್ನು ಚೊಕ್ಕವಾಗಿ ನಿಭಾಯಿಸಿ, ನಿರೂಪಿಸಿ, ನಿರ್ದೇಶಿಸಿ ಸೂತ್ರಧಾರರೂ ಆದ ಕಡೂರು ದತ್ತಾತ್ರಿ ಸತ್ಯಪ್ರಕಾಶ್ ತಮ್ಮ ಉತ್ತಮ ಚಿತ್ರಕಥೆಯನ್ನೇ ಈ ಬಾರಿ ನಾಯಕನನ್ನಾಗಿಸಿಬಿಟ್ಟಿದ್ದಾರೆ.

ಸುಮಾರು 22 ಮಾಸಗಳ ಹಿಂದೆ ಚಂದನವನದ ಬೆಳ್ಳಿತೆರೆಗೆ ಲಗ್ಗೆಯಿಟ್ಟಿದ್ದ “ರಾಮಾ ರಾಮಾರೇ..” ನೆನಪೇ ಇನ್ನೂ ಮಾಸಿಲ್ಲ. ಅದೂ ವೈರುಧ್ಯಗಳ ಕೆರೆಯಾಗಿತ್ತು. ಇಲ್ಲೂ ವೈರುಧ್ಯಗಳೇ…!

ಯಾವುದೇ ಜೋನರ್ ಗೆ ತಮ್ಮನ್ನು ಅಲವತ್ತುಕೊಳ್ಳದಿರುವಂತೆ ಕಾಪಾಡಿಕೊಳ್ಳುವ ಸತ್ಯ ಬರೇ ಸ್ಕ್ರಿಪ್ಟ್ ಗೆಂದೇ ಎರಡು ವರ್ಷ ಕೃಷಿಮಾಡಿದ್ದಾರಂತೆ..! ಅದನ್ನೇ ಹೀರೋ ಮಾಡಿಟ್ಟು ಸುಮಾರು 18-20 ಪೋಷಕ ನಟರಿಂದಲೇ ಕಥಾಹಂದರವನ್ನು ಹರವಿ,  ಮೈಚಾಚಿ ಕೂತ ಪ್ರೇಕ್ಷಕನ ಕಣ್ಣು-ಕಿವಿಗಳಿಗೆ ಸುರಿಯುತ್ತಿರುತ್ತಾರೆ. ನಡುನಡುವೆ ಸ್ವಾಭಾವಿಕವಾಗಿಯೇ ಅವರು ತಂದೊಡ್ಡುವ ಗೋವಿನ ಮೇಲಿನ ಮಮತೆ, ಹಿಂದೂ –ಮುಸಲ್ಮಾನ-ಕ್ರೈಸ್ತರ ನಡುವಣ ಸಹಜ ಬಂಧುತ್ವ, ಸುಪ್ತ ಮಾನವೀಯ ಮೌಲ್ಯಗಳನ್ನು ಆದರ್ಶಪ್ರಾಯವಾಗಿಸಿವೆ.

ಪುಟ್ಟ ಬಾಲಕ ರೋಹಿತ್ ಸಮೀರನಾಗಿ , ಇತರ ಪಾತ್ರಗಳಾದ ಡೇವಿಡ್,  ರಾಜಣ್ಣ, ಶಿವಯ್ಯ, ಲಕ್ಷ್ಮಿ, ರಫೀಕ್, ಸಮೀರನ ಅಪ್ಪ-ಅಮ್ಮ, ಅಕ್ಕ, ತಾತ, ಮಾತು ಮಾತಿಗೆ ನನ್ನ ಮಗನ ‘ಮೆನೀ ಹ್ಯಾಪೀ ರಿಟರ್ನ್ಸ್ ಆಫ್ ದಿ ಡೇ’ ಎನ್ನುವ ಲೇವಾದೇವಿ ನಂದಗೋಪಾಲ, ಅವನ ಹೆಂಡತಿ, ಮಗ, ಸಮೀರನನ್ನು ಚುನಾವಣಾ ರ್ಯಾಲಿಯಲ್ಲಿ ‘ಕರು’ವಾಗಿಸುವಾತ, ಹುಲಿ ಹೀಗೆ ಸಕಲ ಪೋಷಕ ಕಲಾವಿದರಲ್ಲೂ ನಟನೆ ಬದಿಗಿರಿಸಿ, ಸತ್ವಯುತ ಸಹಜ ವರ್ತನೆ ಕ್ಯಾಮೆರಾ ಮುಂದೆ ಮಾಡಿಸುವಲ್ಲಿ ಸತ್ಯ ನಿಜಕ್ಕೂ ಪ್ರಕಾಶಮಾನವಾಗಿದ್ದಾರೆ. ಡೇವಿಡ್ ತನ್ನ ಬಾರದ ಮಗನ ಬರುವಿಕೆಗೆ ತೋರುವ ಕಾತರ, ಕೊನೆಗೊಮ್ಮೆ ವಾಸ್ತವದೊಡನೆ ಮಾಡಿಕೊಳ್ಳುವ ಸಂಜೋತಾ ಅಪ್ಯಾಯಮಾನ!

ಒಂದಲ್ಲಾ… ಎರಡಲ್ಲಾ… ಈ ಹಂಬಲಕೆ ಕೊನೆಯಿಲ್ಲಾ..! ..ಮೊದಲು…? …ಮೊದಲೇಯಿಲ್ಲಾ..!! ಇರುವ ಒಂದೆರಡೇ ಹಾಡುಗಳು ಸಾಂದರ್ಭಿಕವಾಗಿ, ದೃಶ‍್ಯೀಕರಣಕ್ಕೆ ಹಾಸುಹೊಕ್ಕಾಗಿ ಸೇರಿಕೊಂಡಿವೆ. ‘ಯಾರು ಕರೆದೋರೂ..ಅವರೇ ನಿನ್ನೋರು..’ ಹಿತವಾಗಿ ಶುರುವಾಗುತ್ತೆ. ಕರ್ಕಶ ಧ್ವನಿಗಳ ಭರಾಟೆಯಿಲ್ಲಿಲ್ಲ.  ‘ಐಸುಪೈಸುರೀ…ಹುಡುಕಿದ್ರೆ ದೇವ್ರೆ ಸಿಗ್ತಾನಂತೆ..’ ನವ ಸಂದೇಶ ನೀಡುತ್ತಾ ಪ್ರೇಕ್ಷಕನ ಜೊತೆ ಹೊರಗೂ, ಮನೆವರೆಗೂ ಸೇರಿಕೊಳ್ಳುತ್ವೆ..!

ಒಂದು ಹೋಬಳಿ ಯಾ ತಾಲ್ಲೂಕಿನ ಪೇಟೆಯಲ್ಲಿ ಬಿಂಬಿತವಾಗುವ ವಿದ್ಯಮಾನಗಳು. ಒಂದು ಹಸುವಿನೊಂದಿಗೆ ಪುಟ್ಟ ಹುಡುಗನ ಅವಿನಾಭಾವ ಸಂಪ್ರೀತಿ, ಅದು ಕಳೆದುಹೋದಾಗ ಅರಸಿಹೋಗುವಲ್ಲಿ ಸ್ವತಃ ಅವನನ್ನೇ ಕಳೆದುಹೋದನೇನೋ ಎಂದರಸುವ ಕುಟುಂಬದವರು, ಈ ನಡುವಿನ ನವಿರಾದ ಹಾಸ್ಯ, ನಗು, ದೊಂಬರಾಟ ಎಲ್ಲವೂ ಸಹಜವೋ ಎಂದು ಕಾಂಬ ನಿರೂಪಣೆಗೆ ಹ್ಯಾಟ್ಸಾಫ್ ಎನ್ನದಿದ್ರೇ ಹೇಗೆ..?!!

ಇತ್ತೀಚಿನ ದಿನಮಾನಗಳಲ್ಲಿ ‘ಹೀರೋಯಿಸಂ’ ಗೆ ಆದ್ಯತೆ ಕೊಟ್ಟೂ ಕೊಟ್ಟೂ ಮಾನವೀಯತೆಗೆ ಎಳ್ಳು-ನೀರು ಬಿಟ್ಟ ಪರಿಸ್ಥಿತಿ ಸರ್ವವೇದ್ಯ..! ಸ್ಯಾಂಡಲ್ ವುಡ್ ಮೊದಲ್ಗೊಂಡು ಭಾರತದ ಸಕಲ ಭಾಷಾ ‘ವುಡ್’ ಗಳಲ್ಲೂ ಇದೇ  ಗೋಳು. ಪವರ್ ಫುಲ್ ಮಾಧ್ಯಮವಾದ ಸಿನೆಮಾದಿಂದ ಪ್ರೇರಿತವಾದ ಸಮಾಜ, ನಮ್ಮ ಯುವಜನತೆ ಮತ್ಹೇಗೆತಾನೇ ವರ್ತಿಸಬಹುದು ಎಂಬ ಭೀತಿ! ಅದೇ ವೇಳೆ ತಾನು ಬೆಳೆದ ಪರಿಸರದಲ್ಲಿ ಕಂಡುಬಂದ ಧನಾತ್ಮಕ ಪ್ರವೃತ್ತಿಗಳನ್ನೇ ಹೆಣೆದ್ಹೆಣೆದು ದೈನಂದಿನ ಜೀವಿತಕ್ಕೆ ಜಾತಿ-ಮತ-ಧರ್ಮಗಳ ಅಡ್ಡಗಾಲಿಲ್ಲ ಎಂದು ಸಾಬೀತುಪಡಿಸುವ ಹೊಸತನ ಸೂಸುವ ಚಿತ್ರವಾಗಿ ‘ಒಂದಲ್ಲ..ಎರಡಲ್ಲ..’ ಕನ್ನಡ ಕಲರ್ ಸಿನೆಮಾಸ್ ಬ್ಯಾನರ್ ನಲ್ಲಿ ತೆರೆಕಂಡಿದೆ. ಈ ಹಿಂದೆ ಸುದೀಪರ ‘ಹೆಬ್ಬುಲಿ’ ನಿರ್ಮಿಸಿದ ಸ್ಮಿತಾ ಉಮಾಪತಿ ‘ಎರಡಲ್ಲ..’ ವನ್ನೂ ಕೋಟಿ, ಅರೆಕೋಟಿಗೂ ಮೀರದಂತೆ ಖರ್ಚಿಸಿ, ತೆರೆಕಾಣಿಸಿದ್ದಾರೆ.

‘ಒಂದಲ್ಲ..’ ಬಹಳ ಕೌತುಕ ಹುಟ್ಟಿಸಿ ಬಿಡುಗಡೆ ಆದರೂ ಮೊದಲ ವಾರದ ಮೂರೂ ದಿನ ನಮ್ಮದೇ ‘ಕನ್ನ’ ಡಿಗರ ಬಲು ಕುಟಿಲತೆಗಳ ಬಹು ಮಸೆತಗಳಿಗೆ ಬಲಿಯಾಗಿ ಸಾಲಿಡ್ ಓಪನಿಂಗ್ ಪಡೆದುಕೊಳ್ಳಲಿಲ್ಲವಾದರೂ ಕನ್ನಡ ಜನತೆ ಇಷ್ಟಪಟ್ಟು ನೋಡುವ ‘ರಿಲೀಫ್ ಸಿನೆಮಾ’ ಇದಾಗಿ ಚೇತರಿಸಿಕೊಂಡು ಯಶಸ್ಸಿನೆಡೆಗೆ ಮತ್ತೆ ಮುನ್ನುಗ್ಗುತ್ತಿದೆ. ಬಾಲ್ಕನಿ ವತಿಯಿಂದ ಇಂಥಾ ಸುಯತ್ನಕ್ಕೆ ಶುಭಕಾಮನೆಗಳು.   https://youtu.be/7ANWDeuZGGY

ಬಿಗ್ ಬಾಸ್ ಖ್ಯಾತಿಯ ನವನಾಯಕ ಜೆ.ಕೆ. ಬಾಲ್ಕನಿಯೊಡನೆ ತಮ್ಮ ಅನಿಸಿಕೆಗಳ ಹಂಚಿಕೊಂಡಿದ್ದು ಹೀಗೆ: ‘ಒಂದಲ್ಲ ಎರಡಲ್ಲ..’ ಅದರ ಟೈಟಲ್ನಿಂದ, ಚಿತ್ರೀಕರಣದ ಶೈಲಿಯಿಂದ ವಿಭಿನ್ನತೆ ತೋರಿದೆ. ಚಿತ್ರಕಥೆಯನ್ನೇ ಹೀರೋ ಮಾಡಿಸಿ  ಸಿಂಪಲ್ಲಾಗಿ  ನಮ್ಮನ್ನು ರಂಜಿಸಿದ್ದು ಬಹಳ ಇಷ್ಟವಾಯ್ತು. ನನಗೂ ಇಂಥಾ ಸಿನೆಮಾಗಳಲ್ಲಿ ನಟಿಸೋ ಆಸೆ. ನಾವೆಲ್ಲಾ ಇವುಗಳಿಗೆ ಬೆಂಬಲಿಸಬೇಕು…!

-ಡಾ. ಸುದರ್ಶನ ಭಾರತೀಯ, 7022274686, pvsb2222@gmail.com

Tags