ಚಿತ್ರ ವಿಮರ್ಶೆಗಳುಬಾಲ್ಕನಿಯಿಂದವಿಡಿಯೋಗಳುಸಂಬಂಧಗಳುಸುದ್ದಿಗಳು

‘ಸುರಿಯೋ ಕಣ್ಣೀರು..’: ಅಪರೂಪಕ್ಕೊಮ್ಮೆ ವಿಶಿಷ್ಟವಾದ ಚಿತ್ರಗೀತೆಯ ದೃಶ‍್ಯಕಾವ್ಯ!

ಸಂಗೀತ ನಿರ್ದೇಶಕನ ಹಾಡಿನ  ಸಂಯೋಜನೆಯ ಬಲದಿಂ  ಈ ಜನಪ್ರಿಯತೆ!!

“ದಿ ಟೆರರಿಸ್ಟ್ “ ಚಿತ್ರದ ನವನವೀನ  ಲಿರಿಕಲ್ ವಿಡಿಯೋ  ಒಂದೇ ದಿನದಲ್ಲಿ 13 ಸಾವಿರ ಸಿನಿಪ್ರೇಮಿಗಳ,  ಚಿತ್ರಗೀತೆಗಳ ರಸಿಕರ ಹೃದಯ ಗೆದ್ದಿದೆ. ಕಾರಣ, ರಾಗಿಣಿ ದ್ವಿವೇದಿಯಂತೂ ಅಲ್ಲ. ಅದು ಚಿತ್ರ ಸಂಗೀತ ನಿರ್ದೇಶಕ ಎಸ್. ಪ್ರದೀಪ್  ವರ್ಮಾ  ಅವರ ಇದೇ ಹಾಡಿನ  ಬಲದಿಂದಲೇ ಈ ಜನಪ್ರಿಯತೆ ಎಂದರೆ ಅದು ಖರೇನೇ..ಬಿಡ್ರೀ!

ಅಷ್ಟು ಸುಮಧುರ ಸಂಯೋಜನೆ ಅದು. ಇನ್ನು ಈ ಲಿರಿಕಲ್ ವಿಡಿಯೊ ಲಿರಿಕ್ಸ್ ಕೊಂಚ ನೋಡಿ.. ಹೆಚ್ಚೂ ಕಡಿಮೆ 10-12 ಸಾಲುಗಳ ಈ  ಸಾಹಿತ್ಯ ಓರ್ವ ತರುಣಿಯ ಒಡಲ ಆರ್ತನಾದ , ಮನದ ಭಾವುಕತೆಯ ಹೊರಹಾಕುವ ಬಗೆ ಇದೆಯಲ್ಲಾ..ಆ ನುಡಿಗಳೇ ಬಲು ಆಪ್ಯಾಯಮಾನವಾಗಿವೆ. ಮಹೇಶ್ ರಾಜ್ ಗೀತ ರಚನೆ ಮಾಡಿ, ಅನನ್ಯಾ ಭಟ್ ಹಾಡಿರುವ ಈ ಹೊಚ್ಚ ಹೊಸ  ಹಾಡು ಅದರ ಮಾಧುರ್ಯಕ್ಕೆ ಸದ್ಯದಲ್ಲೇ ಹೆಸರಾಗಲಿದೆ.

ಮೊದಲಿಗೆ ಒಂದು ಗಿಟಾರ್ ನ ತಂತಿ ಮೀಟುಗಳಿಗೆ ನಿಧಾನವಾಗಿ ಸ್ಪಂದಿಸುವ ಡಬ್ಬಲ್ ರೀಡ್ ಹಾರ್ಮೋನಿಯಮ್ ಸಂಗೀತದಲ್ಲಿ ತುಸು ತುಸುವಾಗಿಯೇ ನಿಮ್ಮ ಕಿವಿ, ಆನಂತರ ಮನ, ಮತ್ತೆ ಬುದ್ಧಿಗೂ ಇಳಿಯುವ  ಈ  ಸಂಗೀತ ಹಾಗೇ ನಿಮ್ಮೊಡನೇ ಒಂದಷ್ಟು ಕಾಲ ಉಳಿಯುವುದಂತೂ ಖರೇನಾ.. ಬರ‍್ರೀ..!!

ಸುರಿಯೋ ಕಣ್ಣೀರಾ ಒಮ್ಮೆ ನೋಡಿ ಹೋಗು..

ಇನ್ನೆಂದು ಸಿಗದಾ ದೂರಕೆ ನಾ… ಹೋಗುವೆ ಈಗ

ಕಾಣಿಸದೆ  ಸುರಿಯೋ ಕಣ್ಣೀರಾ ಕೊರಗೂ

ಕೇಳಿಸದೆ ಮನದಾ ಕೊನೆಯಾ ಕೂಗೂ

ಕ್ಷಣವೊಮ್ಮೇ …ಬಾ … ಈಗ..

ಈಗ ಶುರುವಾಗುತ್ತೆ ಹಾಡಿನ ಟೆಂಪೊ..! ….ಬಾ…ಎಂದಾ ಕ್ಷಣ ಚಪ್ಪಾಳೆ ಹೊಡೆದು …ಬಾ….ಎಂದು ಕರೆಯುವಂತೆ  ಡೋಲಕ್  ಜತೆಗೆ  ಒಮ್ಮಲೇ ಸಂಗೀತ ಸಂಯೋಜನೆ ಗರಿಗೆದರುತ್ತೆ.. ಚಿಕ್ಕದಾದರೂ ಚೊಕ್ಕ ಸಂಯೋಜನೆ ಇದಾಗಿದ್ದು ಒಂದೇ  ಹಾಡು-ಹಾಡಿನ ಸಂಯೋಜನೆ-ಪ್ರಸ್ತುತಿಯಲ್ಲಿ ಎರಡು-ಮೂರು ಜೋನರ್ ಗಳ ಸಮ್ಮಿಲನ ಕಾಣತೊಡಗುತ್ತದೆ..! ಇಷ್ಟು ದಿನ ಮಾದಕ ನೋಟದಲ್ಲಿ ನಟಿಸುತ್ತಿದ್ದ ರಾಗಿಣಿ ದ್ವಿವೇದಿ ಈ ಚಿತ್ರದಲ್ಲಿ ವಿಭಿನ್ನ ರೀತಿಯ ಪಾತ್ರವನ್ನು ಮಾಡಿದ್ದಾರೆ. ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಇಲ್ಲಿ ಮುಸ್ಲಿಂ ಪಾತ್ರಧಾರಿಯಾಗಿ ನಟಿಸಿದ್ದಾರೆ.

ಒಮ್ಮೆ ಹಿಂದೂಸ್ಥಾನೀ ಮೆಹಫಿಲ್ ನೊಳಗೆ “ಸೈಯ್ಯಾ..ಸೈಯ್ಯಾ..” ಎಂದು ಆರಂಭಿಸಿ, ಉಚ್ಚ ಸ್ಥಾಯಿಯಲ್ಲಿ ಶುರುವಾಗೋ ‘..ಸುರಿಯೋ..’ ಹಾಡು ನಿಜಕ್ಕೂ ಒಂದು ವಿರಹ ಗೀತೆಯೇ ಸರಿ..! ಈ ನಡುವೆ,  ಬಾಲ್ಕನಿ ಕಂಡ ಸತ್ಯವೇನೆಂದರೆ  ಮೊದಲರ್ಧದ ತನಕ ಹಾಡಿನ ಮೂಡ್ ಯಾ ಭಾವ ವಿರಹದ ತಾಪ ಸೂಸುವುದರಲ್ಲಿ ಸೋಲುತ್ತಿರುತ್ತದೆ. ಅರ್ಥಾತ್…! ಲಿರಿಕ್ಸ್ ಯಾ ಹಾಡಿನ ನುಡಿಗಳೋ  …..ಸುರಿಯೋ ಕಣ್ಣೀರಾ ಒಮ್ಮೆ ನೋಡಿ ಹೋಗು.., ..ಇನ್ನೆಂದು ಸಿಗದಾ ದೂರಕೆ ನಾ… ಹೋಗುವೆ ಈಗ, ..ಕಾಣಿಸದೆ  ಸುರಿಯೋ ಕಣ್ಣೀರಾ ಕೊರಗೂ.., ..ಕೇಳಿಸದೆ ಮನದಾ ಕೊನೆಯಾ ಕೂಗೂ…!!?? ಇವೆಲ್ಲವೂ ಗಾಯಕಿಯ ನಗುಮುಖದ , ಹರುಷ ತುಂಬಿದ ವಾಯ್ಸ್  ಯಾ ಕಂಠಸಿರಿಯಲ್ಲೇ ಬಿತ್ತರವಾಗುತ್ತಿರುತ್ತದೆ..! ಇದೇ ಪ್ರಸ್ತುತಿಯಲ್ಲಾದ ವಿರೋಧಾಭಾಸ..!?!

ಬಾ, ಬಾ .. ಬಾ .. ಬೇಗ…

ನೀ ಇರದೇ .. ನಗುವು ಹೇಗೆ

ಮನಸು ಮುರಿದ ಈ  ಕ್ಷಣವ ಮರೆತು

ನಾ ಹೇಗೆ ಬಾಳುವುದು..?  ಅಕ್ಷರಶಃ ಈ ಸ್ಥರದಿಂದಲೇ ನೈಜವಾದ  ಭಾವ ತುಂಬಿದ ಗಾಯನ ಶುರು. ಆದರೀಗ ಹಿನ್ನೆಲೆ ಸಂಗೀತವೋ  ಒಂದು  ಕವ್ವಾಲಿಯನ್ನು ಹೋಲುತ್ತಿರುತ್ತದೆ..!

ಮರಳಿ ಸಿಗದ ನಿನ್ನೊಲವ ನೆನೆದು

ದಿನ ಹೇಗೆ ಕಳೆಯುವುದು…?

ಇದೇ ನೋವು ದಿನವೂ ನನಗೇ…

ಮುಂದೆ ಬದುಕುವ  ಆಸೆನೇ,

ನನಗೇ ಇರದು, ನನಗೇ ಇರದು,

ನನಗೇ ಇರದು…ಸುರಿವಾ..???

ಏನೇ ಇರಲಿ, ಒಟ್ಟಾರೆ ಸಂಗೀತ –ಗಾಯನ ಕರ್ಣಾನಂದಕರವೂ  ಆಗಿದ್ದು ಇಂದಿನ ಅರ್ಥಹೀನ ಕಿರುಚಾಟ, ವಾದ್ಯಗಳ ಅಬ್ಬರಕ್ಕೆ ಅಪವಾದವಾಗಿದೆ. ಆನಂದ್ ಧ್ವನಿಸುರುಳಿ ಸಂಸ್ಥೆಯು ತನ್ನ ಯೂಟ್ಯೂಬ್ ಚಾನಲ್ ನಿಂದ ಬಿಡುಗಡೆ ಮಾಡಿರುವ ಈ ಹಾಡನ್ನು ಈಗಾಗಲೇ  ಕೇಳಿದ  13 ಸಹಸ್ರ ಸಂಗೀತ ರಸಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಿ. ಸಿ ಶೇಖರ್ ನಿರ್ದೇಶನ ಮಾಡಿರುವ ‘ದಿ ಟೆರರಿಸ್ಟ್’ ಚಿತ್ರವು ಈಗಾಗಲೇ ತನ್ನ ವಿಭಿನ್ನ ಪೊಸ್ಟರ್ ಹಾಗೂ ಟೀಸರ್ ಗಳಿಂದ ಸಿನಿ ಪ್ರೇಮಿಗಳ ಗಮನ ಸೆಳೆದಿದೆ. . “ಈ ಹಾಡಿನ ಹಿಂದಿರುವ ಕಲಾವಿದರ ಕೌಶಲ್ಯದ ಬಗ್ಗೆ ನಮ್ಮ ಚಿತ್ರ ರಸಿಕರಿಗೆ ತೋರಿಸಬೇಕಿತ್ತು. ಹೀಗಾಗಿ ಈ ಇಲ್ಲಿ ತಾಂತ್ರಿಕ ವರ್ಗದವರನ್ನು ತೋರಿಸಲಾಗಿದೆ” ಎಂದು ನಿರ್ದೇಶಕ ಪಿ.ಸಿ ಶೇಖರ್ ಹೇಳುತ್ತಾರೆ.

ಈ ಲಿರಿಕಲ್ ವಿಡಿಯೋದಲ್ಲಿ ಹಾಡನ್ನು ಹಾಡಿರುವ ಅನನ್ಯಾ ಭಟ್ ಸೇರಿದಂತೆ ಇತರೇ ತಾಂತ್ರಿಕ ವರ್ಗದವರನ್ನು ಇಲ್ಲಿ ತೋರಿಸಲಾಗಿದೆ. ಮನಮೋಹಕವಾಗಿ ಅನನ್ಯಾ ಕಾಣಿಸಿಕೊಂಡಿದ್ದಾರೆ...…ಕಂಠಸಿರಿಯ ತನ್ಮೂಲಕವೂ…!

-ಡಾ. ಸುದರ್ಶನ್  ಭಾರತೀಯ, editor@balkaninews.com

 

Tags