ಸುದ್ದಿಗಳು

ಮದುವೆ ನಂತರ ಮೇಘನಾ ಬರ್ತಡೇ !

ಕಳೆದ ಒಂದು ವಾರದಿಂದ ಚಿರು ಹಾಗೂ ಮೇಘನಾ ಮನೆಯಲ್ಲಿ ಮದುವೆ ಸಂಭ್ರಮ-ಸಡಗರ ಜೋರಾಗಿ ನಡೆದಿದೆ. ಇನ್ನೇನು ಮದುವೆ ಮುಗೀತು ಎನ್ನುವಷ್ಟರಲ್ಲಿಯೇ ಮೇಘನಾ ಬರ್ತಡೇ ಕೂಡ ಬಂದಿದೆ. ಹೀಗಾಗಿ ಮದುವೆಯ ಜೊತೆಗೆ ಮೇಘನಾ ಹುಟ್ಟುಹಬ್ಬ ಕೂಡ ಇದ್ದು ಮನೆಯಲ್ಲಿ ಸಂಭ್ರಮ ಇನ್ನು ಹೆಚ್ಚಿದೆ.

ನಟಿ ಮೇಘನಾ ರಾಜ್ ತಮ್ಮ 28ನೇ ವರ್ಷದ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಂಡಿದ್ದಾರೆ. ಮೇ 2 ಬುಧವಾರ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದಾದ ನಂತರ ಅಂದ್ರೆ ನಿನ್ನೆ ಮೇಘನಾ ಮದುವೆ ಬಳಿಕ ತನ್ನ ಪತಿಯ ಜೊತೆ ಮೊದಲ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಂಡಿದ್ದಾರೆ.

ಪ್ರತಿ ವರ್ಷ ಮೇಘನಾ ರಾಜ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿದ್ದರು. ಆದರೆ ಮದುವೆ ನಂತರ ಮೊದಲ ಬಾರಿಗೆ ಸರ್ಜಾ ಕುಟುಂಬ ಮತ್ತು ತಮ್ಮ ಕುಟುಂಬದ ಜೊತೆ ಆಚರಣೆ ಮಾಡಿಕೊಂಡಿದ್ದಾರೆ. ನಂತರ ಹುಟ್ಟುಹಬ್ಬದ ಪ್ರಯುಕ್ತ ನವಜೋಡಿ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆನ್ನಲಾಗಿದೆ.

ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ, ಭಾನುವಾರ ಸೇಂಟ್ ಆಂಟೋನಿ ಫ್ರೈಯರಿ ಚರ್ಚ್ ನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿದ್ದರು. ಬುಧವಾರ ಬೆಳಗ್ಗೆ 10:30 ರ ಮಿಥುನ ಲಗ್ನದಲ್ಲಿ ಚಿರು-ಮೇಘನಾ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಕೊಂಡಿದ್ದಾರೆ. ಸಿನಿಮಾ ಗಣ್ಯರು, ನಟ-ನಟಿಯರು ನವಜೋಡಿಗೆ ಬಂದು ಶುಭಾ ಹಾರೈಸಿದ್ದರು.

ಇನ್ನು ಮದುವೆ, ಹುಟ್ಟುಹಬ್ಬ ಎಲ್ಲಾ ಕಾರ್ಯಕ್ರಮವನ್ನು ಮುಗಿಸಿದ ಕೆಲವು ದಿನಗಳಲ್ಲಿಯೇ ಇಬ್ಬರ ಸಿನಿಮಾಗಳು ಸೆಟ್ಟೇರಲಿದ್ದು ಸಂಭ್ರಮಗಳ ಸಾಲಿಗೆ ಇದು ಕೂಡ ಆಗಲಿದೆ.

Tags