ಸುದ್ದಿಗಳು

‘ಅಯೋಗ್ಯ’ ಸಿನಿಮಾ ಮೊದಲ ದಿನ ಹೇಗಿತ್ತು ಗೊತ್ತಾ..?

ಬೆಂಗಳೂರು, ಆ.17: ಊರಿನ ಜನರ ಕಣ್ಣಿಗೆ ಅಯೋಗ್ಯನಾದ್ರು ಹಳ್ಳಿಯ ಮೂಲ ಸೌಲಭ್ಯ, ಸೌಕರ್ಯಗಳಿಗಾಗಿ ಹೊರಾಡುತ್ತ, ಕೊನೆಗೆ ಹಳ್ಳಿಯ ಉದ್ದಾರಕ್ಕಾಗಿ ಗ್ರಾಮ ಪಂಚಾಯ್ತಿ ಸದಸ್ಯನಾಗಲು ಹೇಗೆಲ್ಲ ಸಮಸ್ಯೆಗಳನ್ನ ಎದುರಿಸ್ತಾನೆ ಅನ್ನೋ ವಿಷಯಗಳನ್ನಿಟ್ಟುಕೊಂಡು ಹಾಸ್ಯದ ರೂಪದಲ್ಲೇ ತಯಾರಾದ ಚಿತ್ರ ‘ಅಯೋಗ್ಯ’. ಇಂದು ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಗಿದ್ದು ಚಿತ್ರ ಯಾವ ರೀತಿ ಕಮಾಲ್ ಮಾಡ್ತಿದೆ ಅನ್ನೋದನ್ನು ಹೇಳ್ತಿವಿ ಈ ಸ್ಟೋರಿ ನೋಡಿ.

ಚಿತ್ರಕಥೆ

ಮನೆಗೊಂದು ಶೌಚಾಲಯವಿರಲಿ ಎಂಬುದು ನಮ್ಮ ದೇಶದ ಕಾನೂನು ಹೇಳುತ್ತೆ, ಆದರೆ ಈಗಲೂ ಕೂಡಾ ಎಷ್ಟೋ ಹಳ್ಳಿಗಳಲ್ಲಿ ಶೌಚಾಲಯವಿಲ್ಲದೆ ಜನರು ಪರದಾಡುತ್ತಿರುವುದನ್ನ ನಾವು ನೋಡಿದ್ದೇವೆ, ಇದೇ ಎಳೆಯನ್ನಿಟ್ಟುಕೊಂಡು ಊರಲ್ಲಿ ಎನು ಕೆಲಸವಿಲ್ಲದೆ ಅಯೋಗ್ಯನೆನಸಿಕೊಂಡು ತಿರುಗಾಡುವ ಒಬ್ಬ ಯುವಕ ಹಳ್ಳಿ ಜನರ ಶೌಚಾಲಯ ಕಟ್ಟುವುದಕ್ಕಾಗಿ ಹೋರಾಡುವುದು ಒಂದು ಕಡೆಯಾದರೆ, ಇದೇ ಜಿದ್ದಿನ ಮೇಲೆ ಊರಿನ ಗೌಡನ ವಿರುದ್ದ ಗ್ರಾಮ ಪಂಚಾಯ್ತಿ ಎಲೆಕ್ಷನ್‌ ಗೆ ನಿಂತುಕೊಂಡು ಅಯೋಗ್ಯ ಎನ್ನುತ್ತಿದ್ದ ಊರಿನ ಜನರ ಮನಸನ್ನ ಗೆಲ್ಲುವುದು ಇನ್ನೋಂದು ಕಡೆ, ಇವೆಲ್ಲವನ್ನ ನಿಭಾಯಿಸಿಕೊಂಡು ಗ್ರಾಮ ಪಂಚಾಯ್ತಿ ಎಲೆಕ್ಷನ್‌ ನಲ್ಲಿ ನಾಯಕ ಗೆಲ್ಲುತ್ತಾನಾ ಎಂಬುದು ಅಯೋಗ್ಯನ ಕಥೆ.ಹಾಸ್ಯಭರಿತ ಸಿನಿಮಾ

ಈ ಕತೆಯ ಎಳೆಯನ್ನು ಚಿತ್ರದುದ್ದಕ್ಕೂ ಹಾಸ್ಯಮಯ ರೂಪದಲ್ಲಿ ತೆಗೆದುಕೊಂಡು ಹೋಗುವಲ್ಲಿ ನಿರ್ದೇಶಕ ಮಹೇಶ್ ಎಡವಲಿಲ್ಲ, ನಾಯಕ ನಿನಾಸಂ ಸತೀಶ್ ಜೊತೆಯಲ್ಲಿ ಹಾಸ್ಯಕ್ಕೆ ಕೊರತೆ ಇಲ್ಲದಂತೆ ಪಾತ್ರಕ್ಕೆ ಜೀವ ತುಂಬಿರೋ ಶಿವರಾಜ್ ಕೆಆರ್ ಪೇಟೆ ಮತ್ತು ಗಿರೀಶ್ ಚಿತ್ರದುದ್ದಕ್ಕೂ ಪ್ರೇಕ್ಷಕರ ಮುಖದಲ್ಲಿ ನಗು ಮೂಡಿಸುವಲ್ಲಿ ಯಶಸ್ವಿಯಾಗುತ್ತಾರೆ.

ಅಯೋಗ್ಯನ ಪ್ರೀತಿ

ಎಂದಿನಂತೆ ಯಾವ ಚಿತ್ರದಲ್ಲಿ ಆಗಲಿ ತನಗೆ ಕೊಟ್ಟ ಪಾತ್ರಕ್ಕೆ ತನ್ನದೇ ಆದ ಖದರ್‌ನಲ್ಲಿ ನಟಿಸೋ ಖಳನಟ ರವಿಶಂಕರ್ ಊರಿನ ಗೌಡನಾಗಿ ತಮ್ಮ ಪಾತ್ರದ ಆರಂಭದಿಂದಲೇ ಪ್ರೇಕ್ಷಕರಿಂದ ಶೀಳ್ಳೆ ಚಪ್ಪಾಳೆಗಳನ್ನು ಗಿಟ್ಟಿಸಿಕೊಳ್ಳುತ್ತಾರೆ, ಇನ್ನೂ ಊರಿನ ಸಮಸ್ಯೆಗಳೆ ನೂರಾರು ಇರುವಾಗ ಇದರ ಮದ್ಯೆ ಅಯೋಗ್ಯನಿಗೆ ನಾಯಕಿ ರಚಿತಾರೊಂದಿಗೆ ಪ್ರೀತಿ ಶುರುವಾಗುತ್ತೆ, ಕೆಲಸವೇ ಇಲ್ಲದ ಒಬ್ಬ ಹುಡುಗ ತನ್ನ ಪ್ರೀತಿಯನ್ನು ಹೇಗೆ ಗೆಲ್ಲುತ್ತಾನೆ ಎನ್ನುವುದನ್ನು ಚಿತ್ರ ನೋಡಿದ್ರೇನೆ ನಿಮಗೆ ಎಂಜಾಯ್ ಮಾಡೋಕೆ ಸಾದ್ಯ.

ಒಟ್ಟಿನಲ್ಲಿ ಹದಿಮೂರು ವರ್ಷದಿಂದ ಚಿತ್ರರಂಗದಲ್ಲಿದ್ದು ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ಕಲಿತು ನಿರ್ದೇಶನಕ್ಕಿಳಿದಿರುವ ಮಹೇಶ್, ಹಳ್ಳಿ ಸೊಗಡಿನ ಕಥೆಯೊಂದಿಗೆ ಪ್ರೇಕ್ಷಕರನ್ನ ಮನರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ, ಚಿತ್ರವನ್ನು  ನೋಡಿದ ಪ್ರೇಕ್ಷಕರು ಕೂಡಾ ಅಷ್ಟೇ ಉತ್ತಮ ಪ್ರತಿಕ್ರಿಯೇ ಕೊಟ್ಟಿದ್ದು, ಚಿತ್ರವನ್ನು ನೋಡಿ ನಗುಮುಖದಿಂದ ಹೊರಬರುತ್ತಾರೆ.

 

Tags