ಸುದ್ದಿಗಳು

ಮರಳಿ ಬಂದ ‘ಸುವರ್ಣ ಸುಂದರಿ’..!

ಬೆಂಗಳೂರು, ಆ.21: ‘ಬಾಹುಬಲಿ’ ಚಿತ್ರದ ನಂತರ ಅದರಂಥಾದ್ದೇ ಅದ್ದೂರಿತನದೊಂದಿಗೆ ಬಿಡುಗಡೆಯ ಹೊಸ್ತಿಲಲ್ಲಿರುವ ಚಿತ್ರ `ಸುವರ್ಣ ಸುಂದರಿ’. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ನಿರ್ಮಾಣಗೊಂಡಿರೋ ಈ ಭರ್ಜರಿ ಬಜೆಟ್  ಚಿತ್ರದ ಮೂಲಕ ಬಹುಭಾಷಾ ತಾರೆ ಜಯಪ್ರದಾ ಕನ್ನಡಕ್ಕೆ ಮತ್ತೆ ಮರಳಿದ್ದಾರೆ!

ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಸುತ್ತಾಡಿ ಇಂದಿನ ಕಾಲಮಾನದವರೆಗೆ ಪ್ರಯಾಣ ಬೆಳೆಸೋ ಕಥೆ ಹೊಂದಿರುವ ಈ ಚಿತ್ರ ಸೂಕ್ಷ್ಮವಾಗಿ ಪುನರ್ಜನ್ಮದ ಕಥನವನ್ನೂ ಹೊಂದಿದೆ. ಎಸ್ ಟೀಮ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರ  ತೆಲುಗು ಮತ್ತು ಕನ್ನಡದಲ್ಲಿ ಬಾಹುಬಲಿಯಂಥಾದ್ದೇ ಭಾರೀ ನಿರೀಕ್ಷೆ ಮೂಡಿಸಿಲು ಸಜ್ಜಾಗಿದೆ.

ಭರ್ಜರಿಯಾಗಿ ಮುಂದುವರೆಯುತ್ತಿರುವ ಚಿತ್ರೀಕರಣ

‘ಬಾಹುಬಲಿ’ ಚಿತ್ರ ಜನಮನ ಸೂರೆಗೊಂಡಿದ್ದಕ್ಕೆ ಅದರಲ್ಲಿನ ಗ್ರಾಫಿಕ್ಸ್ ಕೈಚಳಕವೂ ಮೂಲ ಕಾರಣ. ಆದರೆ ಕನ್ನಡದಂಥಾ ಸೀಮಿತ ಮಾರುಕಟ್ಟೆಯಿರೋ ಚಿತ್ರರಂಗದಲ್ಲಿ ಅಂಥಾ ಅದ್ದೂರಿ ಚಿತ್ರ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂಬಂಥಾ ವಾತಾವರಣವಿತ್ತು. ಆದರೆ ‘ಸುವರ್ಣ ಸುಂದರಿ’  ಚಿತ್ರ ಅದನ್ನು ಸುಳ್ಳು ಮಾಡಿದೆ ಎಂಬುದು ಚಿತ್ರತಂಡದ ಖಚಿತ ಅಭಿಪ್ರಾಯ. ಯಾಕೆಂದರೆ ಈ ಚಿತ್ರದಲ್ಲಿಯೂ ಶೇಕಡ ನಲವತ್ತರಷ್ಟು ಭಾಗ ಅದ್ಭುತವಾದ ಗ್ರಾಫಿಕ್ಸ್ ನಿಂದ ತುಂಬಿದೆ. ಎಲ್ಲಿಯೂ ಅಸಹಜ ಅನ್ನಿಸದಂತೆ ಇದನ್ನು ಕ್ರಿಯೇಟ್ ಮಾಡಲು ಕೋಟಿ ಕೋಟಿ ಖರ್ಚು ಮಾಡಲಾಗಿದೆ.ಮೋಷನ್ ಪೋಸ್ಟರ್

ಈಗಾಗಲೇ ಈ ಚಿತ್ರದ ಮೋಷನ್ ಪೋಸ್ಟರ್ ನನ್ನು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಬಿಡುಗಡೆ ಮಾಡಿದ್ದಾರೆ. ಶಿವಣ್ಣ ಬಿಡುಗಡೆ ಮಾಡಿರುವ ಮೋಷನ್ ಪೋಸ್ಟರ್ ಸುವರ್ಣ ಸುಂದರಿಯ ಅಸಲೀ ಅದ್ದೂರಿತನವನ್ನು ಧ್ವನಿಸುವಂತಿದೆ. ಟೀಸರ್ ಮತ್ತು ಟ್ರೈಲರ್ ಗಳನ್ನು ಸಿದ್ಧಪಡಿಸುವ ಕೆಲಸ ಭರದಿಂದ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಅದೂ ಕೂಡಾ ಬಿಡುಗಡೆಯಾಗಲಿದೆ.

ಈ ಚಿತ್ರದ ಮೂಲಕವೇ ತುಂಬಾ ವರ್ಷಗಳ ನಂತರ ಜಯಪ್ರದಾ ಅವರು ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ಡಾ.ರಾಜ್‍ಕುಮಾರ್ ಅವರಿಗೆ ಜೋಡಿಯಾಗಿ ನಟಿಸುತ್ತಲೇ ಕನ್ನಡದ ಪ್ರೇಕ್ಷಕರನ್ನು ಆವರಿಸಿಕೊಂಡಿದ್ದವರು ಜಯಪ್ರದಾ. ‘ಕವಿರತ್ನ ಕಾಳಿದಾಸ’ ಚಿತ್ರದಲ್ಲಿನ ಅವರ ಮೋಹಕ ಅಭಿನಯವನ್ನು ಯಾರೂ ಮರೆಯಲು ಸಾಧ್ಯವೇ ಇಲ್ಲ.ಹಾಗೆ ಕನ್ನಡದಲ್ಲಿಯೂ ಅಪಾರ ಅಭಿಮಾನಿಗಳನ್ನು ಹೊಂದಿರುವ ಜಯಪ್ರದಾ ಭಿನ್ನವಾದ ಮುಖ್ಯ ಪಾತ್ರದಲ್ಲಿ ‘ಸುವರ್ಣ ಸುಂದರಿ’ ಸಿನಿಮಾದ ಮೂಲಕ ಮತ್ತೆ ಬಂದಿದ್ದಾರೆ. ರಿಯಲ್ ಆಗಿಯೂ ಎವರ್‌ ಗ್ರೀನ್ ಸುಂದರಿಯಾಗಿರುವ ಜಯಪ್ರದಾ ಈ ಚಿತ್ರದ ಮುಖ್ಯ ಆಕರ್ಷಣೆ.

ಚಿತ್ರತಂಡ

ಈ ಚಿತ್ರಕ್ಕೆ ತೆಲುಗು ಸಿನಿಮಾಗಳಿಗೆ ಕಥೆಯ ರಚನೆಯಲ್ಲಿ ಅನುಭವ ಪಡೆದಿರುವ ಎಂ ಎಸ್ ಎನ್ ಸೂರ್ಯ ಕಥೆ ಬರೆದು ನಿರ್ದೇಶಿಸಿದ್ದಾರೆ. ಸರಿಸುಮಾರು ನಲವತ್ತು ಭಾಗದಷ್ಟು ಅದ್ದೂರಿ ಫ್ಲಾಷ್ ಬ್ಯಾಕ್‍ನೊಂದಿಗೆ ಅದ್ಭುತ ಗ್ರಾಫಿಕ್ಸ್ ತಂತ್ರಜ್ಞಾನ ಅಳವಡಿಸಿಕೊಂಡಿರುವ ಈ ಚಿತ್ರದಲ್ಲಿ ರಾಮ್, ಸಾಕ್ಷಿ, ಪೂರ್ಣ, ಡಾ ಜಯಪ್ರದಾ, ಮಹಮ್ಮದ್ ಖಾನ್, ಸಾಯಿಕುಮಾರ್, ಅವಿನಾಶ್ ಮತ್ತಿತರರು ನಟಿಸಿದ್ದಾರೆ. ಸಾಯಿ ಕಾರ್ತಿಕ್ ಅವರ ಸಂಗೀತ, ಯಲ್ಲುಮಹಂತಿ ಈಶ್ವರ್ ಅವರ ಛಾಯಾಗ್ರಹಣ, ಎಸ್ ಟೀಮ್ ನಿರ್ಮಾಣ, ಪ್ರವೀಣ್ ಪುಡಿ ಸಂಕಲನ ಈ ಚಿತ್ರಕ್ಕಿದೆ. ಎಂ.ಎಲ್ ಲಕ್ಷ್ಮಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

Tags