ಸುದ್ದಿಗಳು

ವರಮಹಾಲಕ್ಷ್ಮಿ ಹಬ್ಬದಂದು ತೆರೆಗೆ ಬರಲಿದೆ 8 ಕನ್ನಡ ಚಿತ್ರಗಳು…!

ಬೆಂಗಳೂರು, ಆ.21: ಶ್ರಾವಣಮಾಸದಲ್ಲಿ ಬರುವ ವರಮಹಾಲಕ್ಷ್ಮಿ ಹಬ್ಬದ ದಿನವೇ ಕನ್ನಡ ಚಿತ್ರರಂಗದಲ್ಲಿ ಒಟ್ಟು 8 ಸಿನಿಮಾಗಳು ತೆರೆ ಕಾಣಲಿದೆ. ಆಗಸ್ಟ್ 24ರಂದು ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ದಿನ ಸ್ಯಾಂಡಲ್ ವುಡ್ ನಲ್ಲಿಯೂ ಹಬ್ಬದ ವಾತಾವರಣ ಇರಲಿದೆ.

‘ಸರ್ಕಾರಿ ಹಿ.ಪ್ರಾ. ಶಾಲೆ; ಕಾಸರಗೋಡು ಕೊಡುಗೆ ರಾಮಣ್ಣ ರೈ’

ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಮಾಡಿರುವ ರಿಷಬ್ ಶೆಟ್ಟಿ ನಿರ್ದೇಶನದ ‘ಸರ್ಕಾರಿ ಹಿ.ಪ್ರಾ. ಶಾಲೆ; ಕಾಸರಗೋಡು ಕೊಡುಗೆ ರಾಮಣ್ಣ ರೈ’ ಆಗಸ್ಟ್ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಕರ್ನಾಟಕ – ಕೇರಳ ಗಡಿಭಾಗದಲ್ಲಿ ಕನ್ನಡ ಶಾಲೆಗಳ ಉಳಿವಿಗಾಗಿ ನಡೆಯುವ ಹೋರಾಟವನ್ನು ವರ್ಣಿಸಲಾಗಿದೆ. ಇದರಲ್ಲಿ ಅನಂತ್ ನಾಗ್ ನಟನೆ ಎಂದಿನಂತೆಯೇ ಅದ್ಭುತವಾಗಿ ಮೂಡಿ ಬಂದಿದೆ.

‘ಒಂದಲ್ಲಾ ಎರಡಲ್ಲ’

‘ರಾಮಾ ರಾಮಾ ರೇ’  ಚಿತ್ರದ ಖ್ಯಾತಿಯ ಸತ್ಯಪ್ರಕಾಶ್ ‘ಒಂದಲ್ಲಾ ಎರಡಲ್ಲ’ ಚಿತ್ರ ನಿರ್ದೇಶಿಸಿದ್ದು,. ಮುಗ್ಧತೆಯನ್ನೇ ಚಿತ್ರದ ಬಂಡವಾಳವನ್ನಾಗಿಸಿದ್ದಾರೆ. ಈ ಚಿತ್ರಕ್ಕೆ ವಾಸುಕಿ ವೈಭವ್ ಮತ್ತು ನೋಬಿನ್ ಪೌಲ್ ಸಂಗೀತ ನಿರ್ದೇಶನ ಮಾಡಿದ್ದಾರೆ.

‘ಲೈಫ್ ಜೊತೆ ಒಂದ್ ಸೆಲ್ಪಿ’

ಪ್ರೇಮ್ ಮತ್ತು ಪ್ರಜ್ವಲ್ ದೇವರಾಜ್ ಮುಖ್ಯಪಾತ್ರ ನಿರ್ವಹಿಸಿರುವ ‘ಲೈಫ್ ಜೊತೆ ಒಂದ್ ಸೆಲ್ಪಿ’ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದಲ್ಲಿ ಶ್ರೀಮಂತರ ಮನೆಯ ಹುಡುಗನಾಗಿ ಪ್ರಜ್ವಲ್ ಪಾತ್ರ ಮಾಡಿದ್ದಾರೆ.

‘ಮುಕ್ತಿ’

ಅಂತೆಯೇ ಪಿ.ಕೆ. ರಾಮಮೂರ್ತಿ ನಿರ್ವಿುಸಿರುವ ‘ಮುಕ್ತಿ’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕೆ.ಶಂಕರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ.

‘ಧೂಳಿಪಟ’

ಆಗಸ್ಟ್ 24ಕ್ಕೆ ‘ಧೂಳಿಪಟ’ ಚಿತ್ರ ಬಿಡುಗಡೆಯಾಗುತ್ತಿದ್ದು, ಶಿರಿಗಣ್ಣನವರ್, ಗಿರೀಶ್, ನಾಗರಾಜ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.

‘ಮೇ 1′

ನಿರ್ದೇಶಕ ನಾಗೇಂದ್ರ ಅರಸ್. ಕಾರ್ತಿಕ್ ಜಯರಾಂ (ಜೆಕೆ) ಮುಖ್ಯಭೂಮಿಕೆಯಲ್ಲಿರುವ ‘ಮೇ 1’ರ ಚಿತ್ರದಲ್ಲಿ ನಾಯಕಿಯಾಗಿ ರಕ್ಷಾ ಸೋಮಶೇಖರ್ ನಟಿಸಿದ್ದಾರೆ. ಈಗಾಗಲೇ ಚಿತ್ರದಲ್ಲಿ ಆಂಗ್ರಿ ಯಂಗ್​ವ್ಯಾನ್ ಲುಕ್​ನಲ್ಲಿ ಜೆಕೆ ಕಾಣಿಸಿಕೊಂಡಿದ್ದಾರೆ.

‘ಕವಿ’

ಈ ಹಿಂದೆ ಹಲವು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಎಂ.ಎಸ್. ತ್ಯಾಗರಾಜು.  ‘ಕವಿ’ ಚಿತ್ರದ ಮೂಲಕ ಚೊಚ್ಚಲ ನಿರ್ದೇಶನಕ್ಕಿಳಿದಿದ್ದಾರೆ. ಇದು ಕೂಡಾ ಶುಕ್ರವಾರ ಬಿಡುಗಡೆಯಾಗಲಿದೆ.

‘ಗುಡ್​ಬೈ’

ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ಸುದ್ದಿ ಮಾಡಿರುವ ರವಿಚಂದ್ರನ್ ಅವರು ‘ಗುಡ್​ಬೈ’ ಚಿತ್ರದ ಮೂಲಕ ನಾಯಕನಾಗಿ ನಟಿಸುವುದರ ಜತೆಗೆ ಚಿತ್ರದ ನಿರ್ದೇಶನವನ್ನೂ ಮಾಡಿದ್ದಾರೆ. ರಮಾದೇವಿ ವೆಂಕಟೇಶ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

Tags