ಸುದ್ದಿಗಳು

ರಕ್ಷಿತ್ ಶೆಟ್ಟಿ ಸಿನಿಮಾಗೆ ನಿರ್ಮಾಣ ಮಾಡಲಿರುವ ಕೆ.ಮಂಜು…..

‘ಪಡ್ಡೆಹುಲಿ’ ಚಿತ್ರದಲ್ಲಿ ಬ್ಯುಸಿಯಾಗಿರುವ ನಿರ್ಮಾಪಕ ಕೆ. ಮಂಜು ತಮ್ಮ ನಿರ್ಮಾಣದ ಮುಂದಿನ ಚಿತ್ರದ ಬಗೆಗೊಂದು ಹೊಸ ಸುದ್ದಿಯನ್ನು ಹರಿಯ ಬಿಟ್ಟಿದ್ದಾರೆ. ಅದರ ಪ್ರಕಾರವಾಗಿ ಹೇಳೋದಾದರೆ ಅವರು ರಕ್ಷಿತ್ ಶೆಟ್ಟಿ ನಾಯಕನಾಗಿರೋ ಚಿತ್ರವೊಂದನ್ನು ಸದ್ಯದಲ್ಲಿಯೇ ನಿರ್ಮಾಣ ಮಾಡಲಿದ್ದಾರಂತೆ.

ಮಂಜು ಬ್ಯಾನರ್ ನಲ್ಲಿ ರಕ್ಷಿತ್

ಈಗಾಗಲೇ ಈ ಬಗೆಗಿನ ಎಲ್ಲ ರೀತಿಯ ಮಾತುಕತೆಗಳೂ ಪಕ್ಕಾ ಆಗಿವೆಯಂತೆ. ‘ಶ್ರೀಮನ್ನಾರಾಯಣ’ ಸೇರಿದಂತೆ ಮತ್ತೊಂದು ಚಿತ್ರವಾದ ನಂತರ ಈ ಚಿತ್ರದಲ್ಲಿ ನಟಿಸಲು ರಕ್ಷಿತ್ ಕೂಡಾ ಒಪ್ಪಿಕೊಂಡಿದ್ದಾರೆ. ಹಾಗಾದರೆ ಈ ಚಿತ್ರವನ್ನು ಯಾರು ನಿರ್ದೇಶನ ಮಾಡಲಿದ್ದಾರೆಂಬುದು ಬಹು ಮುಖ್ಯವಾದ ಪ್ರಶ್ನೆ. ಇದನ್ನೂ ಕೂಡಾ ಮಂಜು ಅವರೇ ಜಾಹೀರು ಮಾಡಿದ್ದಾರೆ.

ಮತ್ತೊಮ್ಮೆ ಒಂದಾಗಲಿರುವ ‘ವಾಸ್ತುಪ್ರಕಾರ’ ಜೋಡಿ

ಈ ಚಿತ್ರವನ್ನು ಯೋಗರಾಜ ಭಟ್ಟರು ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ ‘ವಾಸ್ತು ಪ್ರಕಾರ’ ಚಿತ್ರದಲ್ಲಿ ರಕ್ಷಿತ್ ಶೆಟ್ಟಿಯನ್ನು ನಾಯಕನಾಗಿ ನಟಿಸುವಂತೆ ಮಾಡಿದ್ದ ಯೋಗರಾಜಭಟ್ಟರು ಅವರೊಂದಿಗಿನ ಎರಡನೇ ಚಿತ್ರಕ್ಕೆ ರೆಡಿಯಾಗುತ್ತಿದ್ದಾರಂತೆ. ಈಗಾಗಲೇ ಕಥೆಯೊಂದನ್ನು ಮಾಡಿ ಅದನ್ನು ಮಂಜು ಅವರಿಗೂ ಹೇಳಿದ್ದಾರಂತೆ. ಆ ಕಥೆ ಇಷ್ಟವಾದ ನಂತರವೇ ಈ ಚಿತ್ರದ ಬಗ್ಗೆ ಮಂಜು ವಿವರ ನೀಡಿದ್ದಾರೆ.

ಅತ್ತ ಯೋಗರಾಜ ಭಟ್ಟರು ಪಂಚತಂತ್ರ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತ ರಕ್ಷಿತ್ ಕೂಡಾ ಎರಡೆರಡು ಚಿತ್ರಗಳಲ್ಲಿ ಕಳೆದು ಹೋಗಿದ್ದಾರೆ. ನಿರ್ಮಾಪಕ ಮಂಜುಗೆ ತಮ್ಮ ಮಗನ ಪಡ್ಡೆಹುಲಿಯದ್ದೇ ಧ್ಯಾನ. ಈ ಮೂವರೂ ಕೊಂಚ ಬಿಡುವು ಮಾಡಿಕೊಂಡ ತಕ್ಷಣವೇ ಈ ಚಿತ್ರದ ಉಳಿದ ವಿವರಗಳು ಸಿಗಲಿವೆ.

Tags