ಸುದ್ದಿಗಳು

ಸ್ವಾತಂತ್ರ್ಯ ದಿನದಂದು ಗಂಡು ಮಗುವಿಗೆ ಜನ್ಮ ನೀಡಿದ ‘ನಂದಿತಾ’…!

 

ಸ್ವಾತಂತ್ರ್ಯ ದಿನದಂದೇ  ತಾಯಿಯಾಗಿ ಸಾಂಸಾರಿಕ ಸ್ವಾತಂತ್ರ್ಯಕ್ಕೆ ನಾಂದಿ ಹಾಡಿದ  ನಂದಿತಾ

ಬೆಂಗಳೂರು, ಆ.17: ತನ್ನ ಹಾಡಿನ ಮೂಲಕವೇ ಸಾವಿರಾರು ಜನರನ್ನು ಸೆಳೆದವರು ನಂದಿತಾ. ನನ್ನ ಪ್ರೀತಿಯ ಹುಡುಗಿ, ಇಂತಿ ನಿನ್ನ ಪ್ರೀತಿಯ, ಆಪ್ತಮಿತ್ರ, ದುನಿಯಾ ಮುಂತಾದ ಸಿನಿಮಾಗಳಿಗೆ ಹಿನ್ನಲೆ ಗಾಯಕಿಯಾಗಿ ಹಾಡಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿರುವ  ನಂದಿತಾ ಈಗ ತಮ್ಮ ವೈಯಕ್ತಿಕ ಜೀವನದಿಂದ ಸುದ್ದಿಯಲ್ಲಿದ್ದಾರೆ. ಹೌದು, ನಂದಿತಾ ಅವರು ಗಂಡು ಮಗುವಿಗೆ ಜನ್ಮ ನೀಡುವುದರ ಮೂಲಕ ತಾಯಿಯಾಗಿದ್ದಾರೆ.. ಅದರಲ್ಲಿಯೂ ಆಗಸ್ಟ್ 15 ರಂದು ನಂದಿತಾ ಗಂಡು ಮಗುವಿಗೆ ಜನ್ಮ ನೀಡಿದ್ದು, ಸ್ವಾತಂತ್ರ್ಯ ದಿನಾಚರಣೆಯಂದೇ ಜನಿಸಿದ ಅಪರೂಪದ ಮಗು ಇದಾಗಿದೆ. ಸದ್ಯ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದು, ಕುಟುಂಬದವರೆಲ್ಲರೂ ತುಂಬಾ ಖುಷಿಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಹಿನ್ನಲೆ ಗಾಯಕಿ ನಂದಿತಾ ಅವರು ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ರಾಕೇಶ್ ಎಂಬುವವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಸ್ವಾತಂತ್ರ್ಯ ದಿನದಂದೇ ಮಗು ಜನಿಸಿರುವುದು ಇಬ್ಬರ ಮುಖದಲ್ಲಿಯೂ ನಗು ಮನೆಮಾಡಿದೆ. ಗಂಡು ಮಗು ಜನಿಸಿರುವ ಸಿಹಿ ವಿಷಯವನ್ನು ಗಾಯಕಿ ನಂದಿತಾ ತನ್ನ ಫೇಸ್ ಬುಕ್ ಖಾತೆಯ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಜತೆಗೆ ಸ್ವಾತಂತ್ರ್ಯೋತ್ಸವ ಹಾಗೂ ನಾಗರಪಂಚಮಿಯ ಶುಭಾಶಯಗಳನ್ನೂ ತಿಳಿಸಿದ್ದಾರೆ.  ಇದಕ್ಕೆ ಸಾವಿರಾರು ಅಭಿಮಾನಿಗಳು ಲೈಕ್ ಮತ್ತು ಕಾಮೆಂಟ್ ಮಾಡಿದ್ದು, ನಂದಿತಾ ಮತ್ತು ರಾಕೇಶ್ ಅವರಿಗೆ ಅಭಿನಂದನೆಯನ್ನು ಸಲ್ಲಿಸಿ, ಶುಭಹಾರೈಸಿದ್ದಾರೆ. ಸಿನಿ ತಾರೆಯರೂ ನಂದಿತಾಗೆ ಅಭಿನಂದನೆ ಹೇಳಿದ್ದಾರೆ.

 

ಸ್ವಾತಂತ್ರ್ಯೋತ್ಸವದ ದಿನ ಜನಿಸಿರುವ ಲಕ್ಕಿ ಮಗು:

ನಂದಿತಾ ಅವರ ಮಗು ಸ್ವಾತಂತ್ರ್ಯೋತ್ಸವದ ದಿನವೇ ಜನಿಸಿದ್ದು, ಆ ಮಗು ಲಕ್ಕಿ ಎಂದು ಅಭಿಮಾನಿಗಳೆಲ್ಲಾ ಹೇಳುತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ್ತ ಸಿಕ್ಕ ದಿವಸ ಮಗುವಿಗೆ ಜನ್ಮ ನೀಡಿರುವುದರಿಂದ ಮಗುವಿನ ತಾಯಿ ನಂದಿತಾ ಅವರೂ ಭಾರೀ ಸಂತಸದಲ್ಲಿದ್ದಾರೆ. ಸ್ವಾತಂತ್ರ್ಯ ದಿನದೊಂದಿಗೆ ಈ ಬಾರಿ ನಾಗರಪಂಚಮಿ ಹಬ್ಬವೂ ಬಂದಿದ್ದು, ಮಗು ಮತ್ತಷ್ಟು ಅದೃಷ್ಟವಂತ ಎಂದು ನಂದಿತಾ ಅಭಿಮಾನಿಗಳು ಸಂತಸದಿಂದ ಹಾರೈಸಿದ್ದಾರೆ.ಹಬ್ಬ ಚಿತ್ರದ ಮೂಲಕ ಹಿನ್ನಲೆ ಗಾಯನ ಕ್ಷೇತ್ರಕ್ಕೆ ಪ್ರವೇಶ:

ಗಾಯಕಿ ನಂದಿತಾ ಅವರು ರಾಜೇಂದ್ರ ಬಾಬು ನಿರ್ದೇಶನದ ಹಬ್ಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಪಡೆದಿದ್ದು, ಕೆಲವೇ ವರ್ಷಗಳಲ್ಲಿ ಸ್ಟಾರ್ ಸಿಂಗರ್ ಆಗಿ ಬೆಳೆದರು. ಲಕ್ಷ ರೂಪಾಯಿ ಸಂಪಾದಿಸುತ್ತಿದ್ದ ಸಾಫ್ಟ್ ವೇರ್ ಇಂಜಿನಿಯರಿಂಗ್ ತನ್ನ ಉದ್ಯೋಗ ವನ್ನು ತ್ಯಜಿಸಿ, ಹಾಡುಗಾರಿಕೆಯನ್ನು  ತನ್ನ ವೃತ್ತಿ ಹಾಗೂ ಪ್ರವೃತ್ತಿಯನ್ನಾಗಿಸಿಕೊಂಡವರು ನಂದಿತಾ. ‘ನನಗಿಷ್ಟ’ ಚಿತ್ರಕ್ಕೆ ಸಂಗೀತ ನಿರ್ದೇಶಕಿಯಾಗಿಯೂ ಕೆಲಸ ಮಾಡಿರುವ ಇವರು, ಕನ್ನಡ ಗಾಯನ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ನಾಲ್ಕು ಬಾರಿ ರಾಜ್ಯ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿರುವ ನಂದಿತಾ, ವೃತ್ತಿ ಬದುಕಿನಷ್ಟೇ ಅಚ್ಚುಕಟ್ಟಾಗಿ ಸಂಸಾರವನ್ನೂ ನಿಭಾಯಿಸುತ್ತಿದ್ದಾರೆ.  ಹಿನ್ನೆಲೆ ಗಾಯನದಿಂದ ಹೆಸರು, ಹಣ ಎರಡನ್ನೂ ಪಡೆದುಕೊಂಡು ತಮ್ಮ ಗುರು ಹಂಸಲೇಖರ ಉತ್ತೇಜನಕ್ಕೆ ಶರಣಾಗಿ ಗಾಯನ ಲೋಕದಲ್ಲಿ ನಂದಿತಾ ಬಹುವಂದಿತರಾದರು. ಇವರಿಗೆ 20 ವರ್ಷಗಳಿಗೂ ಅಧಿಕ ಅನುಭವವಿದೆ.

Tags

Related Articles