ಸುದ್ದಿಗಳು

ತೀರದ ಥಿಯೇಟರ್ ಸಮಸ್ಯೆ!

ಕನ್ನಡ ಚಿತ್ರರಂಗದಲ್ಲಿ ಮೇಲ್ನೋಟಕ್ಕೆ ಕೆಲವು ಸಮಸ್ಯೆಗಳು ಗೋಚರಿಸಿದರೂ ಒಳಗೆ ಸಾವಿರಾರು ಸಮಸ್ಯೆಗಳಿಂದ ಚಿತ್ರರಂಗದ ನಿರ್ಮಾಪಕರು, ಕಲಾವಿದರು,ತಂತ್ರಜ್ಙರು ನಲುಗಿ ಜರ್ಝರಿತರಾಗಿ ಹೋಗಿದ್ದಾರೆ.

ಈ ತರದ ಅನೇಕ ಸಮಸ್ಯೆಗಳಲ್ಲಿ ಇತ್ತೀಚೆಗೆ ಅತೀ ಮುಖ್ಯವಾದ ಸಮಸ್ಯೆ ಎಂದರೆ ಚಿತ್ರಮಂದಿರಗಳದ್ದು.ಈಗಿನ ಪರಿಸ್ಥಿತಿ ಯಲ್ಲಿ ಒಬ್ಬ ನಿರ್ಮಾಪಕ ಸಿನಿಮಾ ಮಾಡುವ ಆಸಕ್ತಿ,ಅಭಿರುಚಿಯಿಂದ ಹಣ ಹೊಂದಿಸಿ ಸಿನಿಮಾ ಮಾಡಿ ಬಿಡುತ್ತಾನೆ…ಆದರೆ ಅವನಿಗೆ ನಿಜವಾದ ಸಮಸ್ಯೆ ಆರಂಭವಾಗೋದು ತಾನು ಮಾಡಿದ ಸಿನಿಮಾವನ್ನು ತೆರೆಗೆ ತರುವ ಸಂದರ್ಭದಲ್ಲಿ.ಹೌದು ಗಾಂಧಿನಗರಿಗರ ಪ್ರಕಾರ ಇಲ್ಲಿ ಒಂದು ಸಿನಿಮಾ ನಿರ್ಮಾಣ ಮಾಡೋದು ಸುಲಭ. ಆದರೆ ಆ ಸಿನಿಮಾವನ್ನು ತೆರೆಗೆ ತರುವುದು ದೊಡ್ಡ ತಲೆನೋವಿನ ವಿಷಯ. ಅದಕ್ಕೆ ಕಾರಣ ಮುಖ್ಯವಾಗಿ ಚಿತ್ರಮಂದಿರಗಳ ಸಮಸ್ಯೆ.

ಕನ್ನಡದಲ್ಲಿ ಕಮ್ಮಿಯೆಂದರು ವಾರಕ್ಕೆ ಮೂರರಿಂದ ನಾಲ್ಕು ಸಿನಿಮಾಗಳು ತೆರೆಗೆ ಬರಲು ಸಿದ್ಧವಾಗಿ ನಿಂತಿರುತ್ತವೆ.ಅವುಗಳಲ್ಲಿ ಹಳಬರ ಮತ್ತು ಹೊಸಬರ ಸಿನಿಮಾಗಳು ಕೂಡ ಸೇರಿರುತ್ತವೆ. ಒಂದು ವೇಳೆ ಯಾರದ್ದಾದರೂ ಸ್ಟಾರ್ ಸಿನಿಮಾ ಇತ್ತೆಂದರೆ ಆ ಕೆಲವು ವಾರ ಹೊಸ ನಿರ್ಮಾಪಕರು ಚಿತ್ರಮಂದಿರಗಳ ಕಡೆ ತಲೆನೂ ಹಾಕಲು ಸಾಧ್ಯವಿಲ್ಲ.

ಇಂತಹ ಸಂದರ್ಭದಲ್ಲಿ ಒಟ್ಟಾರೆಯಾಗಿ ನೋಡುವುದಾದರೆ ಇಡೀ ನಮ್ಮ ರಾಜ್ಯದಲ್ಲಿ ಇರೋದು ಕೇವಲ 900 ಚಿತ್ರಮಂದಿರಗಳು.ಅವುಗಳಲ್ಲಿ ಎಲ್ಲಾ ಚಿತ್ರಮಂದಿರಗಳಲ್ಲೂ ಕನ್ನಡ ಸಿನಿಮಾ ಹಾಕುತ್ತಾರೆ ಅಂದುಕೊಂಡರೆ ಅದಕ್ಕಿಂತ ಮೂರ್ಖತನ ಬೇರೊಂದಿಲ್ಲ. ಇರುವ ಅಷ್ಟು ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾ ಹಾಕುವುದು ಕೇವಲ ಅರ್ಧದಷ್ಟು ಮಾತ್ರ.

ಇನ್ನುಳಿದವು ಬೇರೆ ಭಾಷೆಯ ಸಿನಿಮಾಗಳಿಗೆ ಮೀಸಲು. ಹೀಗಿರುವಾಗ  ನಮ್ಮ ಬೆಂಗಳೂರಿನಲ್ಲಿ ಮೊದಲು 80 ಕ್ಕೂ ಹೆಚ್ಚು ಚಿತ್ರಮಂದಿರಗಳಿದ್ದವು ಆದರೆ ಕಾಲ ಕಳೆದಂತೆ ಕೆಲವು ಕಾರಣಗಳಿಂದ ಮುಖ್ಯ ಭಾಗದಲ್ಲಿದ್ದ ಕಲ್ಪನ,ಮೆಜೆಸ್ಟಿಕ್,ಪಲ್ಲವಿ,ಸಾಗರ್,ಕೆಂಪೇಗೌಡ,ಕಿನೋ,ಕಪಾಲಿ ಹೀಗೆ ಹಲವು ನಶಿಸಿ ಈಗ ಉಳಿದಿರೋದು ಕೇವಲ 60 ಚಿತ್ರಮಂದಿರಗಳು ಹಾಗು 30 ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ಅಷ್ಟೆ.

ಇಲ್ಲೂ ಕೂಡ ಇರುವ ಒಟ್ಟು 90  ಚಿತ್ರಮಂದಿರಗಳಲ್ಲೂ ಕನ್ನಡ ಸಿನಿಮಾಗಳು ಪ್ರದರ್ಶನಗೊಳ್ಳುವುದಿಲ್ಲ.ಇನ್ನು ರಾಜ್ಯದ ಇಷ್ಟು ಚಿತ್ರಮಂದಿರಗಳು ಕೆಲವು ವಿತರಕರ ಕೈಯಲ್ಲಿರುತ್ತವೆ. ಅವರು ಮುಂಗಡ ಹಣ ಕೊಟ್ಟೋ ಅಥವ ಲೀಸ್ ಆಧಾರದ ಮೇಲೆ ಎಲ್ಲಾ 900 ಚಿತ್ರಮಂದಿರಗಳನ್ನು ತಮ್ಮ ವಶದಲ್ಲಿಟ್ಟುಕೊಂಡಿರುತ್ತಾರೆ. ಹಾಗಾಗಿ ಯಾರಾದರು ಹೊಸ ನಿರ್ಮಾಪಕ ತನ್ನ ಸಿನಿಮಾ ರಿಲೀಸ್ ಮಾಡಬೇಕೆಂದರೆ ಇವರ ಬಳಿ ಹೋಗಲೇಬೇಕು.

ಅವರುಗಳ ಅನುಮತಿಯಿಲ್ಲದೆ ನೇರವಾಗಿ  ಚಿತ್ರಮಂದಿರಗಳ ಮಾಲೀಕರ ಬಳಿ ತೆರಳಿ ಮಾತಾಡಿ ಸಿನಿಮಾ ರಿಲೀಸ್ ಮಾಡಲು ಸಾಧ್ಯವೇ ಇಲ್ಲ.ಇನ್ನು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ಶೇರಿಂಗ್ ಆಧಾರದ ಮೇಲೆ ಇದ್ದರೂ ಅಲ್ಲಿ ಟಿಕೇಟ್ ಬೆಲೆ ದುಬಾರಿಯಾದ್ದರಿಂದ ಮಧ್ಯಮ ವರ್ಗದ ಜನ ಆ ಕಡೆ ಬರಲು ಮನಸ್ಸು ಮಾಡುವುದಿಲ್ಲ.ಆದ್ದರಿಂದ ಮಧ್ಯಮ ವರ್ಗದ ಪ್ರೇಕ್ಷಕನಿಗೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳೇ ಅನುಕೂಲಕರವಾಗಿವೆ.

ಸಮಸ್ಯೆ ಇದೇ ರೀತಿ ಮುಂದುವರೆದರೆ  ಮುಂದೆ ಕನ್ನಡ ಚಿತ್ರಗಳನ್ನು ನಿರ್ಮಿಸಲು ಯಾರೂ ಮುಂದೆ ಬರುವುದಿಲ್ಲ. ಆದ್ದರಿಂದ ಇತ್ತೀಚೆಗೆ ಕೇರಳ ಸರ್ಕಾರ ತನ್ನ ರಾಜ್ಯದಲ್ಲಿ ಸರ್ಕಾರದ ವತಿಯಿಂದ ನೂರು ಚಿತ್ರಮಂದಿರಗಳನ್ನು ನಿರ್ಮಿಸುವುದಾಗಿ ಘೋಷಣೆ ಮಾಡಿರುವುದು ನಿಜಕ್ಕೂ ಸಂತಸದ ವಿಷಯ.

ಅದೇ ರೀತಿ ನಮ್ಮ ರಾಜ್ಯದಲ್ಲೂ ಸರ್ಕಾರ ಅದೇ ಮಾದರಿಯಲ್ಲಿ ಯೋಚನೆ ಮಾಡಿ ಕೆಲವು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ನಿರ್ಮಿಸುವ ಯೋಜನೆ ಹಾಕಿಕೊಂಡರೆ ನಿಜವಾಗಲೂ ಈಗ ಇರುವ ದೊಡ್ಡ ಸಮಸ್ಯೆಯೊಂದು ಬಗೆಹರಿಯಬಹುದು. ಆಗ ಹೊಸ ಹೊಸ ನಿರ್ಮಾಪಕರು ಚಿತ್ರರಂಗಕ್ಕೆ ಬಂದು ಒಳ್ಳೊಳ್ಳೆ ಸಿನಿಮಾಗಳನ್ನು ನಿರ್ಮಿಸಬಹುದು.ಇದರತ್ತ ಸರ್ಕಾರ ಗಮನಹರಿಸಲಿ ಎಂಬುದೇ ನಮ್ಮೆಲ್ಲರ ಒಕ್ಕೋರಲಿನ ವಿನಂತಿ.

 

ಲೇಖನ: ನಾಗೇಶ್ ಕಾರ್ತಿಕ್

 

 

 

 

 

 

 

Tags

Related Articles

Leave a Reply

Your email address will not be published. Required fields are marked *

Close