ಚಿತ್ರ ವಿಮರ್ಶೆಗಳುಬಾಲ್ಕನಿಯಿಂದಸುದ್ದಿಗಳು

ಪ್ರಚಾರ-ವಿತರಣಾ ಕೊರತೆಗಳ ಸಂದಿಗ್ಧ ಪರಿಸ್ಥಿತಿಯನ್ನು ನೀಗಿಕೊಂಡು ಫೀನಿಕ್ಸ್ ನಂತೆ ಹೊರಹೊಮ್ಮಿದ “ಸಂದಿಗ್ಧ”!!!!

‘ಮನಸ್ಸಿದ್ದರೆ ಮಾರ್ಗ’ ನಾಣ್ಣುಡಿಯ ಮತ್ತೊಮ್ಮೆ ಸಾಬೀತುಪಡಿಸಿದ ನಿರ್ದೇಶಕ ಸುಚೇಂದ್ರ ಪ್ರಸಾದ್..!!

ಬಿಜಾಪುರ, ಡಿ.8: ಹೌದು..! . ಮೊನ್ನೆ ಮಂಗಳವಾರ ಬಿಜಾಪುರದ ಬೀದಿಬೀದಿಗಳಲ್ಲಿ ಹತ್ತಾರು ಶಾಲೆಗಳ ನೂರಾರು ಮಕ್ಕಳಿಂದ ಜಾಥಾ ಹೊರಟಿತ್ತು. ಅದು ‘’ಸಂಧಿಗ್ದ” ಜಾಥಾ! ಕರ್ನಾಟಕದ ಹೆಣ್ಣುಮಕ್ಕಳ ಹಕ್ಕುಗಳ ಸಂರಕ್ಷಣೆ ಕುರಿತಾಗಿ ಚಿತ್ರಿತ ಹೊಚ್ಚ ಹೊಸ ಸಿನೆಮಾ..‘’ಸಂದಿಗ್ಧ”!  ಈಗ್ಗೆ ಏಳೆಂಟು ತಿಂಗಳ ಹಿಂದೆ ಬಿಡುಗಡೆಗೆ ತಯಾರಾದರೂ ಹಣದ ಹಿಂದೇ ಬಿದ್ದಿರುವ ರಾಜಧಾನಿಯ ವಿತರಕರೂ-ಪ್ರದರ್ಶಕರೂ ತೋರಿದ ಅನಾದರದಿಂದಾಗಿ ಅನಾಥವಾಗಿಬಿಡುತ್ತಿದ್ದ ತಮ್ಮ ಕೂಸನ್ನು ದೂರದ ಬಿಜಾಪುರದಲ್ಲಿ ಒಂಭತ್ತು ತಿಂಗಳ ಆನಂತರ ಮರುಪ್ರಸವ ಮಾಡಿಸಿ  ಹೆಮ್ಮೆ-ಹೆಗ್ಗಳಿಕೆಯಿಂದ ನಿಟ್ಟುಸಿರಿಟ್ಟರು  ‘’ಸಂದಿಗ್ಧ” ರಚಯಿತ-ನಿರ್ದೇಶಕ ಕೆ.ಸುಚೇಂದ್ರ ಪ್ರಸಾದರು..!

ಮಾರಣೆಗೇ, ಅಂದರೆ ಬುಧವಾರದಂದು ಸಮಗ್ರ ಬಿಜಾಪುರ ಜಿಲ್ಲಾದ್ಯಂತ ಹತ್ತಾರು ಚಿತ್ರಮಂದಿರಗಳಲ್ಲಿ ಸಹಸ್ರ ಸಹಸ್ರ ಪುಟಾಣಿಗಳು, ಹೆಂಗೆಳೆಯರು, ಪೋಷಕರು, ಶಿಕ್ಷಣ ಇಲಾಖೆಯ ಸಕಲರೂ ‘ಸಂಧಿಗ್ದ” ವನ್ನು ವೀಕ್ಷಿಸಿದರು..!! ಕರುನಾಡ ಹೆಣ್ಣುಮಕ್ಕಳ ಪ್ರಸಕ್ತ ಸಾಮಾಜಿಕ ಹಿನ್ನಡೆಗೆ ಕಾರಣೀಭೂತವಾದ ಹಲವು ಹತ್ತು ಹಿರಿ-ಕಾರಣಗಳ ಹುಡುಕಿ ಕೈಗನ್ನಡಿಯಂತೆ ಅವುಗಳನ್ನು ಜನತೆಗೂ, ಅಧಿಕಾರೀ ವರ್ಗಕ್ಕೂ, ಸರಕಾರಕ್ಕೂ ತೋರಿಸಿ ತಮ್ಮ ಚಿತ್ರಕ್ಕೆ ಶಹಭಾಸ್ ಗಿರಿ ಪಡೆದರು ನಿರ್ದೇಶಕ ಸುಚೇಂದ್ರರು.

ಯಾವುದೇ ಸೃಜನಾತ್ಮಕ ಕಾರ್ಯಗಳಿಗೆ ಎಣೆಯಿಲ್ಲ..!  ಯಾವ ನಿರ್ಬಂಧಗಳೂ, ಕಟ್ಟುಪಾಡುಗಳೂ, ಕೊರತೆಗಳೂ, ಬಾಧಕಗಳೆಲ್ಲವುಗಳ ಮೀರಿ, ದಾಪುಗಾಲಿಕ್ಕುತಲೇ ಪೂರ್ವನಿರ್ದಿಷ್ಟಗುರಿಗಳ ಸಾಧಿಸಿ, ಕಾಲದ ಸ್ಥಿತ್ಯಂತರಗಳ  ಮೀರಿದ ಪರಾಕಾಷ್ಠತೆಯನ್ನೇರುತ್ತದೆ. ಅಂತೆಯೇ ಸದ್ಯ ಕರುನಾಡ ಹೆಣ್ಣುಮಕ್ಕಳ ಹಕ್ಕುಗಳಿಗೆ ಚ್ಯುತಿ ಬಂದ ವೇಳೆ, ದಶಕಗಳಿಂದ ನಡದೇಯಿರುವ ಅವ್ಯಾಹತ ದೌರ್ಜನ್ಯಗಳನ್ನು, ಹಲವು ದೃಷ್ಟಾಂತಗಳ ಮೂಲಕ ಒಂದು ಅಚ್ಚುಕಟ್ಟಾದ ಕಥಾನಕಗಳಲ್ಲಿ ಹೆಣೆದು, ಅವರ ಬವಣೆಯ ಸರಣಿಯನ್ನೇ  ಕ್ಯಾಮರಾ ಕಂಗಳಲ್ಲಿ ಸೆರೆ ಹಿಡಿದು ಸರಕಾರಕ್ಕೂ, ಸಮಾಜಕ್ಕೂ ಪ್ರಸ್ತುತಪಡಿಸುವಲ್ಲಿ ಗೆದ್ದಿದ್ದಾರೆ ಸುಚೇಂದ್ರ ಪ್ರಸಾದರು.

ನಿಜ..! ‘ಸಂದಿಗ್ಧ’, ರಾಷ್ಟ್ರಪ್ರಶಸ್ತಿ ವಿಜೇತ ನಟ-ನಿರ್ದೇಶಕ ಕೆ.ಸುಚೇಂದ್ರ ಪ್ರಸಾದರ ಬಹು ಚರ್ಚಿತ ಹೆಣ್ಣುಮಕ್ಕಳ ಹಕ್ಕು ಸಂರಕ್ಷಣೆ, ಅನುಷ್ಠಾನ, ಕೊರತೆಗಳ ಹೆಕ್ಕಿ ಹೆಕ್ಕಿ ತೋರಿಸಿ, ಮನಮುಟ್ಟಿದ ಸಿನೆಮಾ ಅದು. ಈಗ್ಗೆ ಹತ್ತೇ ಮಾಸಗಳ ಹಿಂದೆ ರಾಜಧಾನಿಯ  ಗಾಂಧೀ ಸ್ಮಾರಕ ನಿಧಿಯ ಸಭಾಂಗಣದಲ್ಲಿ ವಿಶೇಷ ಬಿಡುಗಡೆಯಾದಾಗ ನಡೆದ ಕವಿ-ಕೋವಿದರ-ಸಾಹಿತಿ-ಕಲಾವಿದರ ಭಾವಸ್ಪಂದನ..!!, ಚಿತ್ರ ನೋಡಿದಾನಂತರದ ಸಂವಾದದಲ್ಲಿ ಮಹತ್ತರವಾಗಿ ಅಭಿವ್ಯಕ್ತವಾಗಿತ್ತು…!!!

ಸಂವಾದದಲ್ಲಿ ಮಾತಾನಾಡುತ್ತಾ ಮೊದಲಿಗೆ  ಸುಚೇಂದ್ರರು  ಇಂದಿಲ್ಲಿಗೆ ಆಗಮಿಸಿ ಈ ನನ್ನ ಸಿನೆಮಾ ನೋಡಿದಿರಿ. ಧನ್ಯವಾದ ಹೇಳಲೋ, ಇಲ್ಲವೇ ಇಂಥಾಗಿದೆ ನಮ್ಮ ಹೆಣ್ಣುಮಕ್ಕಳ ಪರಿಸ್ಥಿತಿ ಎಂಬುದರ ಕುರಿತು ವಿಷಾದಿಸೋಣವೇ ಎಂದು ಮರುಗಿದ್ದರು ಈ ಸಮಾಜ ಸ್ಪಂದಕ ವ್ಯಕ್ತಿತ್ವ ಹೊತ್ತ ಸುಚೀ! ರಾಜಧಾನಿಯ ಸಾಹಿತ್ಯ ಲೋಕದ , ಸಿನೆಮಾ ಜಗತ್ತಿನ ಹೆಸರಾಂತ ವ್ಯಕ್ತಿಗಳೋ ಅಂದು ಸಾಮಾನ್ಯ ಪ್ರೇಕ್ಷಕರನ್ನೊಳಗೊಂಡಂತೆ ಉದ್ಗಾರದ ಮಳೆ ಸುರಿಸಿದ್ದರು, ಸುಚಿಯ ‘ಸಂದಿಗ್ಧ’ವೆಂಬ ಅನರ್ಘ್ಯ ಚಿತ್ರಕ್ಕೆ!

ಆದರೂ, ಈ ನಾಡಿನ, ಜನತೆಯ ದುರಾದೃಷ್ಟವೋ ಏನೋ..!, ಆ ಬಳಿಕ  ಎಂತೆಂಥಾದ್ದೋ  ‘ಕಿತ್ತು’ಹೋದ ಸಿನೆಮಾಗಳಿಗೆ ಯಾವತ್ತೂ ದೊರಕುವ ‘ಓಪನಿಂಗ್’ ಆಗಲಿ, ವಿತರಕರ-ಪ್ರದರ್ಶಕರ ಸ್ವಾಗತವಾಗಲೀ  ಈ ಮಕ್ಕಳ ಚಿತ್ರಕ್ಕೆ ದೊರಕದೆ ಇನ್ನೇನು ಸುಚೇಂದ್ರರ ಪರಿಶ್ರಮ ಕಮರಿತೇ ಎಂಬ ಭಯವಿಹ್ವಲತೆ ಆವರಿಸಿದ್ದಾಗಲೇ…,  ಛಲ ಬಿಡದ ತ್ರಿವಿಕ್ರಮನಂತೆ ಸುಚೇಂದ್ರ ಪ್ರಸಾದರು ತಮ್ಮ ಕೂಸನ್ನು ಉತ್ತರಕರ್ನಾಟಕದಂಚಿನ ಬಿಜಾಪುರದಲ್ಲಿ ಮೊನ್ನೆ ಬಿಡುಗಡೆಗೊಳಿಸಿದ್ದಾರೆ.

ಅಷ್ಟಕ್ಕೇ ನಿಲ್ಲದ ಸುಚೇಂದ್ರರು  ಆಫ್ರಿಕಾ ಖಂಡದ ತುತ್ತತುದಿಯ ಈಜಿಪ್ಟ್ ದೇಶದ ಕೈರೋ ಮಹಾನಗರವನ್ನು ಮುಟ್ಟುವ  ಅಲೆಗ್ಸಾಂಡ್ರಿಯಾ – ಕೈರೋ ಹೆದ್ದಾರಿಯ ಹಲವು ಬಸ್ಸುಗಳಲ್ಲಿಯೂ ಸದ್ಯ “ಸಂದಿಗ್ಧ” ಚಲನಚಿತ್ರ ಸದಾ ಬಿತ್ತರವಾಗುವಂತೆ ತಮ್ಮ ಪ್ರಯತ್ನದ ಸಾಫಲ್ಯತೆ ಅನುಭವಿಸಿದ್ದಾರೆ. ಅಲ್ಲಿಯೂ ಹೆಣ್ಣು ಮಕ್ಕಳ ಹಕ್ಕುಗಳ ಉಲ್ಲಂಘನೆ ಗಹನವಾಗಿಯೇ ಜರುಗಿರುವ ಕಾರಣ ಆಫ್ರಿಕಾ-ಈಜಿಪ್ಟ್ ಗಳಲ್ಲಿಯೂ  “ಸಂದಿಗ್ಧ” ಪ್ರಸ್ತುತ ಎಂಬುದು ಸುಚೇಂದ್ರರ ಅಂಬೋಣ. ಅಲ್ಲಿಗೆ “ಸಂದಿಗ್ಧ” ನಿರ್ಮಾತೃ ಸುಚೇಂದ್ರರ ತ್ರಿವಿಕ್ರಮ ಛಲದ-ಬಲದ ವ್ಯಾಪ್ತಿ-ಪರಿಣಾಮಗಳನ್ನೂ ಕೊಂಚ  ನೀವರಿತುಕೊಳ್ಳಬಹುದು..! ಅಂತೂ, ಸುಮಾರು ಎರಡು ವಾರಗಳ ಕಾಲ ಸಹಸ್ರಾರು ಪ್ರೇಕ್ಷಕರ ತನ್ನೊಡಲಿಗೆ ಸೆಳೆಯುವ ಮೂಲಕ ‘’ಸಂದಿಗ್ಧ” ಸಿನೆಮಾ ಪ್ರಸ್ತುತ ಸಮಾಜಕ್ಕೆ ಮತ್ತೆ ಸವಾಲಾಗಿ ನಿಂತಿದೆ.

ಇದೇ ಮೂಸೆಯಲ್ಲಿ ಮೂಡಿಬಂದ ಈ ವರುಷದ ಇತರ ಸಿನೆಮಾಗಳಾದ  ಸತ್ಯಪ್ರಕಾಶ್ ನಿರ್ದೇಶನದ “ಒಂದಲ್ಲ… ಎರಡಲ್ಲ…”,  ಕಾರ್ತೀಕ್ ಸರಗೂರರ “ಝೀರ್ಝಿಂಬೆ”, ಚಂಪಾ ಶೆಟ್ಟಿಯವರ “ಅಮ್ಮಚ್ಚಿ ಎಂಬ ನೆನಪು” ಇಂಥಾ ವಿಶಿಷ್ಟ ಸಿನೆಮಾಗಳ ಹಿಂದೋಡುವಿಕೆಗೆ ತಡೆಯೊಡ್ಡಿದ  ಅನುಕರಣೀಯ  ನಡೆ ಸುಚೇಂದ್ರ ಪ್ರಸಾದರದ್ದು..! ‘ಸಂದಿಗ್ಧ’ದ್ದು..!! ಇದು ಬರೇ ಒಂದು ಮುನ್ನಡೆಯಷ್ಟೆ. ‘ಸಂಧಿಗ್ದ’ದ ಮಟ್ಟಿಗೆ  ಇಂಥಾ ನಡೆಗಳು ಇನ್ನೂ 29 ಆಗಬೇಕಿದೆ. ಹೌದು ಬಿಜಾಪುರವನ್ನುಳಿದಂತೆ, ಬೆಂಗಳೂರೂ ಮೊದಲ್ಗೊಂಡು  ನಮ್ಮ ರಾಜ್ಯದ ಇತರ, ಸಕಲ ಜಿಲ್ಲೆಗಳಲ್ಲೂ ರಾಜ್ಯ ಮಕ್ಕಳ ಆಯೋಗ ಮುತುವರ್ಜಿ ವಹಿಸಿ ‘ಸಂದಿಗ್ಧ’ ದ ಬಿಡುಗಡೆಗೆ ಅಣಿಯಾಗಬೇಕಿದೆ. ಹಾಗಾದಲ್ಲಿ ಮಾತ್ರ ಸುಚೇಂದ್ರ ಪ್ರಸಾದರ ಶ್ರಮಕ್ಕೆ ಬೆಲೆದೊರೆತೀತು. ಒಂದು ಸಾಮಾಜಿಕ ಜಾಗೃತಿಗೆ ನಮ್ಮ ಜನತೆ ತನ್ನ ಕಣ್ಣು-ಕಿವಿ-ಮನಸ್ಸುಗಳನ್ನು ಒಡ್ಡೀತು..!! ಅದರ ಮೂಲಕ ‘ಸಂದಿಗ್ಧ’ ಕ್ಕೆ ದಕ್ಕಬೇಕಾದ ರಾಜ್ಯ-ರಾಷ್ಟ್ರ ಪ್ರಶಸ್ತಿಗಳೂ ದಕ್ಕಿಬಿಡಲಿ..! ಸುಚಿ ಯ ದಿಟ್ಟ ನಡೆಯನ್ನು ಸತ್ಯ, ಚಂಪಾ, ಕಾರ್ತೀಕ್ ಕೂಡಾ ಅನುಸರಿಸಲಿ..!!

ಚಿತ್ರನಿರ್ಮಾಣ  ಒಂದು ಸಂಕೀರ್ಣ ಪ್ರಕ್ರಿಯೆ. ಇದು ಪವರ್ ಫುಲ್ ಮಾಧ್ಯಮವೂ ಆದಕಾರಣ, ಕೇವಲ ಕೈಸುಟ್ಟುಕೊಳ್ಳಲೇನು ಸಿನೆಮಾ ತೆಗೆಯೋದು..??!!  ಸುಚೀಯವರದೇ ‘ಪ್ರಪಾತ’ ಚಿತ್ರ  ಇದೇ ಹಾದಿ ಹಿಡಿದು ಮತ್ತೆ, ಪುನಃ ಬಿಡುಗಡೆಯಾಗಲಿ…ಸಫಲವಾಗಲಿ..! ” .…ನಾನು ಗೆದ್ದೇ ಗೆಲ್ಲುವೆ..!” ಎನ್ನುವ ಸುಚೇಂದ್ರ ಪ್ರಸಾದರನ್ನು ಉಳಿದ ‘ಒಳ್ಳೇ ಚಿತ್ರ’ ನಿರ್ಮಾತೃಗಳೂ ಅನುಸರಿಸಲಿ. ಸರಕಾರವನ್ನೂ, ಜನತೆಯನ್ನೋ, ಇಲಾಖೆಗಳನ್ನೋ ಸಂಪರ್ಕಿಸಿ, ದುಂಬಾಲು ಬಿದ್ದು ತಮ್ಮ ಮೇರು ಕೃತಿಗಳನ್ನು ಸಹಸ್ರ ಜನ ಪ್ರೇಕ್ಷಕರು ನಾಡಿನ ಮೂಲೆಮೂಲೆಯಿಂದ ಬಂದು ಥಿಯೇಟರ್ ಗಳಲ್ಲಿ ನೋಡಲಿ. ಅಂಥಹುದೇ ಚಿತ್ರಗಳು ನಿರ್ಮಾಣವಾಗುತ್ತಿರಲಿ ಎಂಬುದು ಬಾಲ್ಕನಿಯ ಸದಾಶಯ…!

ಡಾ| ಸುದರ್ಶನ ಭಾರತೀಯ, 7022274686, editor@balkaninews.com

 

Tags