ಸುದ್ದಿಗಳು

‘ಕಪಟ ನಾಟಕ ಪಾತ್ರಧಾರಿ’ಗೆ ಜೊತೆಯಾದ ಸಂಗೀತಾ ಭಟ್

ಕ್ರಿಶ್ ನಿರ್ದೇಶನದ ಕಪಟ ನಾಟಕ ಪಾತ್ರಧಾರಿಯನ್ನು ಆದಷ್ಟು ಬೇಗನೆ ಕಣ್ತುಂಬಿಕೊಳ್ಳುವ ತಹತಹ ಪ್ರೇಕ್ಷಕರಲ್ಲಿ ಮೂಡಿಕೊಂಡು ತಿಂಗಳುಗಳೇ ಕಳೆದಿವೆ. ಇದೀಗ ಆ ಕ್ಷಣಗಳು ಹತ್ತಿರಾಗಿವೆ. ಇದೇ ನವೆಂಬರ್ 8 ರಂದು ಈ ಚಿತ್ರ ರಾಜ್ಯಾದ್ಯಂತ ತೆರೆ ಕಾಣಲಿದೆ.

ಆಟೋ ಡ್ರೈವರ್ ಒಬ್ಬನ ಸುತ್ತ ಹೆಣೆಯಲ್ಪಟ್ಟಿರುವ ಚೆಂದದ ಕಥೆ ಹೊಂದಿರುವ ಈ ಸಿನಿಮಾದ ನಾಯಕ ಬಾಲು ನಾಗೇಂದ್ರ. ‘ಹುಲಿರಾಯ’ ಖ್ಯಾತಿಯ ಬಾಲು ಈ ಮೂಲಕ ಮತ್ತೊಂದು ವಿಭಿನ್ನವಾದ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ತಯಾರಿ ನಡೆಸಿದ್ದಾರೆ. ಅವರಿಗೆ ನಾಯಕಿಯಾಗಿ ಸಂಗೀತಾ ಭಟ್ ಸಾಥ್ ಕೊಟ್ಟಿದ್ದಾರೆ.

‘ಎರಡನೇ ಸಲ’ ಎಂಬ ಚಿತ್ರದ ಮೂಲಕವೇ ಹೆಸರು ಮಾಡಿದ್ದವರು ಸಂಗೀತಾ ಭಟ್. ಈ ಚಿತ್ರದ ಮೂಲಕವೇ ತಮ್ಮ ನಟನಾ ಚಾತುರ್ಯವನ್ನು ಅನಾವರಣಗೊಳಿಸಿದ್ದ ಅವರು ಆ ನಂತರದಲ್ಲಿಯೂ ಒಂದಷ್ಟು ಚಿತ್ರಗಳಲ್ಲಿ ನಟಿಸಿದ್ದರು. ನಟನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅವರು ಕಪಟ ನಾಟಕ ಪಾತ್ರಧಾರಿಯಲ್ಲಿ ಚೆಂದದ್ದೊಂದು ಪಾತ್ರವನ್ನು ತಮ್ಮದಾಗಿಸಿಕೊಂಡಿದ್ದೂ ಕೂಡಾ ಈ ಬಲದಿಂದಲೇ.

ಕ್ರಿಶ್ ಈ ಪಾತ್ರವನ್ನು ಸಂಗೀತಾ ಭಟ್ ಅವರೇ ನಿರ್ವಹಿಸಬೇಕೆಂಬ ಇರಾದೆಯನ್ನು ಆರಂಭದಿಂದಲೂ ಹೊಂದಿದ್ದರಂತೆ. ಅದಕ್ಕೆ ಸರಿಯಾಗಿ ಸಂಗೀತಾ ಕೂಡಾ ಖುಷಿಯಿಂದಲೇ ಒಪ್ಪಿಕೊಂಡು ಈ ಪಾತ್ರವನ್ನು ಆವಾಹಿಸಿಕೊಂಡಂತೆ ನಟಿಸಿದ್ದಾರಂತೆ.

ಇಲ್ಲಿ ಬಾಲು ನಾಗೇಂದ್ರ ಆಟೋ ಡ್ರೈವರ್ ಆಗಿ ಬಣ್ಣ ಹಚ್ಚಿದರೆ ಸಂಗೀತಾ ಭಟ್ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುವ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಪ್ರೇಮ ಸಲ್ಲಾಪಗಳು ಈಗಾಗಲೇ ಹಾಡುಗಳ ಮೂಲಕ ಜಾಹೀರಾಗಿವೆ. ಈ ಪಾತ್ರ ಸಂಗೀತಾರ ಇದುವರೆಗಿನ ಸಿನಿಮಾ ಜರ್ನಿಯಲ್ಲಿಯೇ ಸ್ಪೆಷಲ್. ಈಗ ಇದರ ಒಂದಷ್ಟು ಚಹರೆಗಳನ್ನು ಮಾತ್ರವೇ ಚಿತ್ರ ತಂಡ ಬಯಲು ಮಾಡಿದೆ. ಆದರೆ ಇಡೀ ಕಥೆಯ ದಿಕ್ಕು ಬದಲಿಸುವಷ್ಟು ಶಕ್ತಿಶಾಲಿಯಾಗಿ ಈ ಕ್ಯಾರೆಕ್ಟರ್ ಮೂಡಿ ಬಂದಿದೆಯಂತೆ. ಈ ಕಾರಣದಿಂದಲೇ ವಿದೇಶದಲ್ಲಿದ್ದರೂ ಕೂಡಾ ಸಾಮಾಜಿಕ ಜಾಲತಾಣಗಳ ಮೂಲಕ ಸಂಗೀತಾ ಚಿತ್ರತಂಡಕ್ಕೆ ಸಾಥ್ ಕೊಡುತ್ತಿದ್ದಾರೆ.

ರಿಷಿಗೆ ಜೋಡಿಯಾಗಲಿರುವ ಡಿಂಪಲ್ ಕ್ವೀನ್

#SangeethaBhat #KapataNatakaPaatadhaari #BaluNagendra  #FilmNews #KannadaSuddigalu

Tags