ಚಿತ್ರ ವಿಮರ್ಶೆಗಳುಬಾಲ್ಕನಿಯಿಂದಸುದ್ದಿಗಳು

‘ಸವರ್ಣ ದೀರ್ಘ ಸಂಧಿ’: ರೌಡಿಸಂ ವ್ಯಾಕರಣದೊಂದಿಗೆ ನಗುವಿನ ಸಮೀಕರಣ

ಚಿತ್ರ : ಸವರ್ಣ ಧೀರ್ಘ ಸಂಧಿ

ಕಲಾವಿದರು: ವೀರೇಂದ್ರ ಶೆಟ್ಟಿ, ಕೃಷ್ಣಾ, ಪದ್ಮಜಾ ರಾವ್, ಕೃಷ್ಣ ಅಡಿಗ, ನಿರಂಜನ ದೇಶಪಾಂಡೆ ಹಾಗೂ ಮುಂತಾದವರು

ರಚನೆ, ನಿರ್ದೇಶನ : ವೀರೇಂದ್ರ ಶೆಟ್ಟಿ

ರೇಟಿಂಗ್: 3.5/ 5

ಸಿದ್ದಸೂತ್ರಗಳ ಬಿರುಗಾಳಿಗೆ ಎದೆಯೊಡ್ಡುತ್ತಲೇ ಆಗಾಗ ಹೊಸ ಅಲೆಯ ಚಿತ್ರಗಳ ತಂಗಾಳಿ ಬೀಸುತ್ತಿರುತ್ತದೆ. ಇಂಥಾ ಚಿತ್ರಗಳನ್ನು ಜನ ಸ್ಟಾರ್ ಸಿನಿಮಾಗಳ ಅಬ್ಬರದಾಚೆಗೂ ನೋಡಿ ಗೆಲ್ಲಿಸುತ್ತಾರೆ. ಅದೇ ಹಾದಿಯಲ್ಲಿ ಸಾಗಿ ಬಂದಿರುವ ‘ಸವರ್ಣ ದೀರ್ಘ ಸಂಧಿ’ ಚಿತ್ರ ಇದೀಗ ಬಿಡುಗಡೆಯಾಗಿದೆ. ವೀರೇಂದ್ರ ಶೆಟ್ಟಿ ನಿರ್ದೇಶನ ಮಾಡಿ ನಾಯಕನಾಗಿಯೂ ನಟಿಸಿರುವ ಈ ಸಿನಿಮಾದ ಹೊಸತನಕ್ಕೆ, ರೌಡಿಸಂ ವ್ಯಾಕರಣದೊಂದಿಗೆ ನಗುವಿನ ಸಮೀಕರಣ ಮಾಡಿದ ಕಲಾತ್ಮಕ ರೀತಿಗೆ ಪ್ರೇಕ್ಷಕರು ಮಾರು ಹೋಗಿದ್ದಾರೆ.

‘ಸವರ್ಣದೀರ್ಘ ಸಂಧಿ’ ಎಂಬ ಹೆಸರೇ ಒಂದು ಸಿನಿಮಾ ಶೀರ್ಷಿಕೆಯಾಗಿ ಭಿನ್ನವಾಗಿ ಕಾಣುತ್ತದೆ. ಇದು ಕನ್ನಡ ವ್ಯಾಕರಣದ ಸಂಧಿಯೊಂದರ ಹೆಸರು. ಇಂಥಾ ವ್ಯಾಕರಣ ಸಂಬಂಧಿ ಶೀರ್ಷಿಕೆಯ ಈ ಚಿತ್ರ ಗ್ಯಾಂಗ್‍ ಸ್ಟರ್ ಕಥೆಯನ್ನೊಳಗೊಂಡಿದೆ ಎಂದರೆ ಪ್ರೇಕ್ಷಕರು ಅದು ಹೇಗೆ ಈ ಚಿತ್ರದತ್ತ ಕುತೂಹಲಗೊಳ್ಳದಿರಲು ಸಾಧ್ಯ? ಸಿನಿಮಾ ವ್ಯಾಕರಣವನ್ನು ಚೆನ್ನಾಗಿಯೇ ಅರಿತಿರುವ ವೀರೇಂದ್ರ ಶೆಟ್ಟಿ ಆರಂಭದಿಂದಲೂ ಥರ ಥರದಲ್ಲಿ ಕುತೂಹಲ ಕಾಯ್ದಿಟ್ಟುಕೊಂಡೇ ಬಂದಿದ್ದರು. ಇದೀಗ ಅದಕ್ಕೆ ತಕ್ಕುದಾದ ಹೂರಣದೊಂದಿಗೇ ‘ಸವರ್ಣದೀರ್ಘ ಸಂಧಿ’ ತೆರೆ ಕಂಡಿದೆ.

ಯಾವ ಹಿನ್ನೆಲೆಯೂ ಇಲ್ಲದ ಮುದ್ದಣ್ಣ ಎಂಬ ಪಾತ್ರ ಈ ಚಿತ್ರ ಕೇಂದ್ರ ಬಿಂದು. ಅದಕ್ಕೆ ನಿರ್ದೇಶಕ ವೀರೇಂದ್ರ ಶೆಟ್ಟಿಯವರೇ ಜೀವ ತುಂಬಿದ್ದಾರೆ. ಶಾಲಾ ಕಾಲೇಜುಗಳ ಪರಿಚಯವೂ ಇಲ್ಲದ್ದ ಮುದ್ದಣ್ಣ ಅದು ಹೇಗೋ ಮಾಡಿ ವ್ಯಾಕರಣವನ್ನು ಕಲಿತುಕೊಂಡಿರುತ್ತಾನೆ. ಓದಿದ ಆಸಾಮಿಗಳಿಗೇ ಕಬ್ಬಿಣದ ಕಡಲೆಯಂತಾಗೋ ವ್ಯಾಕರಣದಲ್ಲಿ ಪಂಟರ್ ಆಗಿರುತ್ತಾನೆ. ಈ ನಡುವೆ ಅದು ಹೇಗೋ ರೌಡಿಯೊಬ್ಬನ ಗ್ಯಾಂಗು ಸೇರಿಕೊಳ್ಳುವ ಮುದ್ದಣ್ಣನ ಮಜವಾದ ಯಾತ್ರೆ ಅಲ್ಲಿಂದಲೇ ಶುರುವಾಗುತ್ತದೆ.

ಹೀಗೆ ರೌಡಿಸಂ ಗಿಳಿಯೋ ಮುದ್ದಣ್ಣನ ಸ್ಟೈಲೇ ಬೇರೆ. ಆತ ಯಾವ ಕಾರಣಕ್ಕೂ ಒಳ್ಳೆಯವರಿಗೆ ಕಾಟ ಕೊಡುವುದಿಲ್ಲ. ಯಾರು ಸಮಾಜ ಕಂಟಕವಾಗಿರುತ್ತಾರೋ ಅವರನ್ನು ಮಾತ್ರವೇ ಟಾರ್ಗೆಟ್  ಮಾಡಿ ತಂದೂ ತಂದು ರುಬ್ಬುತ್ತಿರುತ್ತಾನೆ. ಈ ರುಬ್ಬೋ ವಿಚಾರದಲ್ಲಿಯೂ ಕೂಡಾ ಮುದ್ದಣ್ಣ ಬಲೇ ಡಿಫರೆಂಟು. ವ್ಯಾಕರಣ ಸಂಬಂಧಿ ಪ್ರಶ್ನೆಗಳನ್ನು ಕೇಳಿ ಅದಕ್ಕೆ ಸರಿ ಉತ್ತರ ಕೊಡದಿದ್ದರೆ ಹೀನಾಮಾನ ತದುಕುತ್ತಾನೆ. ಇದೆಲ್ಲವೂ ಬಿದ್ದೂ ಬಿದ್ದು ನಗುವ ಧಾಟಿಯಲ್ಲಿಯೇ ಸಂಭವಿಸುತ್ತದೆ. ಹೀಗಿರುವ ಮುದ್ದಣ್ಣನಿಗೆ ಮನೋರಮೆ ಎನ್ನುವ ಹುಡುಗಿ ಸಿಗುವ ಮೂಲಕ ಕಥೆಗೆ ಪ್ರೇಮದ ಛಾಯೆಯೂ ಬರುತ್ತದೆ.

ಇದೆಲ್ಲವನ್ನೂ ಕೂಡಾ ನಗುವಿನ ಧಾಟಿಯಲ್ಲಿಯೇ ನಿರ್ದೇಶಕರು ಕಟ್ಟಿ ಕೊಟ್ಟಿದ್ದಾರೆ. ಎಲ್ಲಿಯೂ ದೃಶ್ಯಗಳು ಬಿಗುವು ಕಳೆದುಕೊಳ್ಳದಂತೆ, ನಗು ಮಾಸಲಾಗದಂತೆ ಎಚ್ಚರ ವಹಿಸಿಯೇ ಇಡೀ ಚಿತ್ರವನ್ನು ರೂಪಿಸಿದ್ದಾರೆ. ವೀರೇಂದ್ರ ಶೆಟ್ಟಿ ಈ ಹಿಂದೆ ತುಳು ಭಾಷೆಯಲ್ಲಿ ‘ಚಾಲಿಪೋಲಿಲು’ ಎಂಬ ಚಿತ್ರವನ್ನು  ನಿರ್ದೇಶನ ಮಾಡಿ ಗೆದ್ದಿದ್ದರು. ಆದರೆ ನಾಯಕ ನಟನಾಗಿ ಅವರಿಗೆ ಇದು ಮೊದಲ ಅನುಭವ. ಅದರಲ್ಲಿಯೂ ಅವರು ಗೆದ್ದಿದ್ದಾರೆ.

ನಾಯಕಿ ಕೃಷ್ಣಾ ಅವರಂತೂ ಮಹತ್ವಪೂರ್ಣವಾದ ನಟನೆ ನೀಡಿದ್ದಾರೆ. ಮನೋಮೂರ್ತಿ ಸಂಗೀತದಲ್ಲಿ ಮೂಡಿ ಬಂದಿರುವ ಹಾಡುಗಳೂ ಕೂಡಾ ‘ಸವರ್ಣದೀರ್ಘ ಸಂಧಿ’ಯ ನಗುವಿಗೆ ಮಾಧುರ್ಯ ತುಂಬಿವೆ. ಕುಟುಂಬ ಸಮೇತರಾಗಿ ಕೂತು ನೋಡಿ ಎಂಜಾಯ್ ಮಾಡುವಂತೆ ಈ ಚಿತ್ರ ಮೂಡಿ ಬಂದಿದೆ.

‘ಸವರ್ಣ ದೀರ್ಘ ಸಂಧಿ’ಯಲ್ಲಿ ಹಾಡುಗಳ ಹಬ್ಬ!

#savarnadheergasandhi #savarnadheergasandhireview #savarnadheergasandhisongs #savarnadheergasandhitrailer #savarnadheergasandhicollection

Tags