ಸುದ್ದಿಗಳು

ನಿನ್ನೊಲುಮೆಯಿಂದಲೇ ಜೋಗುಳ ಹಾಡಿದ ಲವಲವಿಕೆಯ ಕಿನ್ನರಿ…!

ಬೆಂಗಳೂರು, ಮಾ.15:

ಬಂದೇ ಬರುತಾವ ಕಾಲ ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಪರಿಚಿತರಾದ ಈ ಬೆಡಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ವಿಟ್ಲದವರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಿನ್ನರಿ ಧಾರಾವಾಹಿಯಲ್ಲಿ ಸುಧಾ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದ ಜ್ಯೋತಿ ರೈ ಸದ್ಯ ಸುಧಾಮ್ಮ ಎಂದೇ ಚಿರಪರಿಚಿತ. ಕರ್ನಾಟಕದಾದ್ಯಂತ ಸುಧಾ ಎಂದೇ ಗುರುತಿಸಲ್ಪಡುವ ಜ್ಯೋತಿ ರೈ ಅಭಿನಯದ ಮಗದೊಂದು ಧಾರಾವಾಹಿ ‘ಜೋ ಜೋ ಲಾಲಿ’ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಜೋ ಜೋ ಲಾಲಿ ಯಲ್ಲಿ ರುಕ್ಮಿಣಿ ಪಾತ್ರಕ್ಕೆ ಜೀವ ತುಂಬುತ್ತಿರುವ ಜ್ಯೋತಿ ರೈ ನಟನಾ ಕ್ಷೇತ್ರಕ್ಕೆ ಬಂದು ಹತ್ತು ವರುಷಗಳಾಗಿವೆ.

ನಟನೆಯ ಕುರಿತು ಏನೊಂದು ಕನಸು ಕಂಡಿರದ ಜ್ಯೋತಿ ರೈ ಗೆ ಇದು ಬಯಸದೇ ಬಂದ ಅವಕಾಶ. ಅಚಾನಕ್ ಆಗಿ ದೊರೆತ ಅವಕಾಶವನ್ನು ಒಲ್ಲೆ ಎನ್ನದ ಜ್ಯೋತಿ ಇಂದು ಕಿರುತೆರೆ ವೀಕ್ಷಕರ ಕಣ್ಮಣಿಯಾಗಿಬಿಟ್ಟಿದ್ದಾರೆ. ತಮ್ಮ ಅಮೋಘ ನಟನೆಯ ಮೂಲಕ ಮನೆ ಮಾತಾಗಿದ್ದಾರೆ.

ತುಂಬಾ ಚೆನ್ನಾಗಿದ್ದೀಯಾ, ಸೀರಿಯಲ್ ನಟಿಯಾಗಬಹುದು ಎಂದು ಸಂಬಂಧಿಕರು, ಸ್ನೇಹಿತರು ಹೇಳುತ್ತಿದ್ದರೂ ಜ್ಯೋತಿ ರೈ ಅದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಮುಂದೆ ನಟನೆಯ ಬಗ್ಗೆ ಯಾವುದೇ ತರಬೇತಿ ಪಡೆಯದ ಅವರು ‘ಬಂದೇ ಬರುತಾವ’ ಕಾಲ ದ ಆಡಿಶನ್ ಗೆ ಹೋದರು. ಅದೃಷ್ಟ ಎಂಬಂತೆ ಸೆಲೆಕ್ಟ್ ಕೂಡಾ ಆದರು. ಹಾಗೆ ಸಾಗಿದ ಅವರ ಕಲಾ ಪಯಣಕ್ಕೆ ಈಗ ಹತ್ತರ ಸಂಭ್ರಮ.ಮುಂದೆ ‘ಪ್ರೇರಣಾ’, ‘ಗೆಜ್ಜೆಪೂಜೆ’, ‘ರಥಸಪ್ತಮಿ’, ‘ಅನುರಾಗ ಸಂಗಮ’, ‘ನಿನ್ನೊಲುಮೆ’, ‘ಜೋಗುಳ’, ‘ಲವ್ ಲವಿಕೆ’ ಧಾರಾವಾಹಿಗಳಲ್ಲಿ ಅಭಿನಯಿಸಿರುತ್ತಾರೆ. ತೆಲುಗಿನ ‘ಕನ್ಯಾದಾನ’ ಧಾರಾವಾಹಿಯಲ್ಲಿ ನಟಿಸುವ ಮೂಲಕ ಪರಭಾಷೆಯಲ್ಲೂ ಮಿಂಚಿದ್ದಾರೆ. ‘ಜೋಗುಳ’ ಧಾರಾವಾಹಿಯಲ್ಲಿ ಬಾಡಿಗೆ ತಾಯಿ ದೇವಕಿ ಪಾತ್ರವನ್ನು ಜನ ಇಂದಿಗೂ ಮರೆತಿಲ್ಲ. ದೇವಕಿ ಎಂದೇ ಪರಿಚಿತವಾಗಿಬಿಟ್ಟಿದ್ದರು. ಇಂದು ದೇವಕಿ ಯ ಜೊತೆಗೆ ಸುಧಾ ಎಂದೂ ಗುರುತಿಸುವಂತಾಗಿದೆ. ಕಾರಣ ದೇವಕಿ ಹಾಗೂ ಸುಧಾ ಪಾತ್ರಗಳು ಅಷ್ಟರ ಮಟ್ಟಿಗೆ ಮೋಡಿ ಮಾಡಿಬಿಟ್ಟಿದೆ.

ಹೆಚ್ಚಾಗಿ ಸೌಮ್ಯ ಸ್ವಭಾವದ ಪಾತ್ರಗಳಲ್ಲಿ ನಟಿಸಿರುವ ಜ್ಯೋತಿ ರೈ “ ಅಭಿನಯದಲ್ಲಿ ನೆಗೆಟಿವ್ ಪಾತ್ರಕ್ಕೆ ಪ್ರಾಮುಖ್ಯತೆ ಜಾಸ್ತಿ. ಮಾತ್ರವಲ್ಲ ಅಲ್ಲಿ ಅಭಿನಯಕ್ಕೂ ಅವಕಾಶ ಜಾಸ್ತಿ. ಪಾಸಿಟಿವ್ ಪಾತ್ರಗಳಲ್ಲಿ ಅಭಿನಯಕ್ಕೆ ಅವಕಾಶವಿಲ್ಲ. ಒಂದೇ ರೀತಿ ಸಾಗುತ್ತಿರುತ್ತದೆ. ಆದರೆ ನೆಗೆಟಿವ್ ಪಾತ್ರಗಳಲ್ಲಿ ಪಾತ್ರ ಒಂದೇ ಇದ್ದರೂ ನಟನೆಯಲ್ಲಿ ವೈವಿಧ್ಯವಿರುತ್ತದೆ. ಅಂತಹ ಪಾತ್ರ ದೊರೆತರೆ ಖಂಡಿತವಾಗಿಯೂ ನಟಿಸುತ್ತೇನೆ “ ಎನ್ನುತ್ತಾರೆ.

ಇಂತಿಪ್ಪ ಕಿರುತೆರೆಯ ಜನಪ್ರಿಯ ನಟಿ ಜ್ಯೋತಿ ರೈ ಈಗಾಗಲೇ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡಾಗಿದೆ. ‘ಸ್ಟೈಲ್ ಕಿಂಗ್’ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿರುವ ಕರಾವಳಿ ಚೆಲುವೆ ‘ಸೂಪರ್ ರಂಗ’ ಸಿನಿಮಾದಲ್ಲಿ ನಟಿಸಿರುತ್ತಾರೆ. ಅವರ ಅಭಿನಯದ ಮತ್ತೊಂದು ಚಿತ್ರ ‘ಗಂಧದ ಕುಡಿ’ ಇನ್ನೇನು ಬಿಡುಗಡೆಯಾಗಬೇಕಿದೆ.

“ ನಟನೆ ಎಂಬುದು ತರಬೇತಿ ಮೂಲಕ ಕಲಿಯುವಂತದ್ದು ಅಲ್ಲ. ಮತ್ತು ಕಲಿತು ಮುಗಿಯುವಂಥದ್ದೂ ಅಲ್ಲ. ಯಾವುದೇ ಪಾತ್ರವಾಗಲೀ ಪಾತ್ರಕ್ಕೆ ತಕ್ಕುದಾದ ಅಭಿನಯವನ್ನು ಮುಖದಲ್ಲಿ ವ್ಯಕ್ತಪಡಿಸಬೇಕು. ಯಾವ ಭಾವನೆ, ನಟನೆಯ ಹಿಂದಿನ ಅರ್ಥವೇನು ಎಂಬುದು ನಟನೆಯನ್ನು ನೋಡಿದ ತಕ್ಷಣ ಜನರಿಗೆ ತಿಳಿಯಬೇಕು “ ಎಂದು ಹೇಳುತ್ತಾರೆ ಜ್ಯೋತಿ ರೈ. ಮನೆಯ ಬೆಂಬಲವೇ ತನ್ನ ಸಾಧನೆಗೆ ಕಾರಣ ಎನ್ನುವ ಜ್ಯೋತಿ ರೈ ಅವರ ಬಣ್ಣದ ಬದುಕು ಕಲರ್ ಫುಲ್ ಆಗಿ ಸಾಗಲಿ ಎಂದು ಬಾಲ್ಕನಿ ನ್ಯೂಸ್ ಶುಭ ಹಾರೈಸುತ್ತದೆ.

                                                                                                      –  ಅನಿತಾ ಬನಾರಿ

ನಟನಾ ಲೋಕದ ತ್ರಿಪುರ ಸುಂದರಿ ಅರ್ಚನಾ ಜೋಯಿಸ್

#balkaninews #jyothirai #serialactressjyothirai #jyothiraimovies #jyothiraiserials #kannadaserials

Tags