ಸುದ್ದಿಗಳು

‘ದಿ ವಿಲನ್’ ನಂತರ ಮತ್ತೆ ಒಂದಾಗಿ ಸಿನಿಮಾ ಮಾಡಲಿದ್ದಾರೆ ಶಿವಣ್ಣ-ಸುದೀಪ್..!!!

ನಿರ್ದೇಶಕ ಪ್ರೇಮ್ ಹೇಳಿದಂತೆ ‘ಕಲಿ’ ಚಿತ್ರಕ್ಕೆ ಮತ್ತೆ ಜೀವ ಬಂದಿದೆ.

ಇತ್ತೀಚಿಗಷ್ಟೆ ‘ದಿ ವಿಲನ್’ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ನಡೆದಿದ್ದು, ಈ ವೇಳೆ ‘ಕಲಿ’ ಚಿತ್ರದ ಬಗ್ಗೆ ನಿರ್ಮಾಪಕ ಆರ್. ಮನೋಹರ್ ಮಾತನಾಡಿದ್ದಾರೆ.

ಬೆಂಗಳೂರು, ಆ.21: ಜೋಗಿ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಚಿತ್ರಕ್ಕೂ ಮುನ್ನ ಸದ್ದು ಮಾಡಿದ್ದು ‘ಕಲಿ’ ಚಿತ್ರ. ಆರ್ .ಮನೋಹರ್ ಅವರ ನಿರ್ಮಾಣದಲ್ಲಿಯೇ ಚಿತ್ರದ ನಿರ್ದೇಶನಕ್ಕೆ ಕೈ ಹಾಕಿದ್ದರು ಪ್ರೇಮ್. ‘ದಿ ವಿಲನ್’ ಚಿತ್ರದ ಜೋಡಿಯೇ ಇಲ್ಲಿಯೂ ಇತ್ತು. ಆದರೆ ಅನಿವಾರ್ಯ ಕಾರಣಗಳಿಂದ ಈ ಚಿತ್ರ ಅಲ್ಲಿಗೆ ನಿಂತು ಬಿಟ್ಟಿತು.

ಮತ್ತೆ ಒಂದಾಗಲಿದೆ ‘ದಿ ವಿಲನ್’ ಜೋಡಿ

ಕನ್ನಡದ ಬಹು ಕೋಟಿ ಬಂಡವಾಳದ ಅತೀ ಅದ್ದೂರಿ ಸಿನಿಮಾ ಅಂತ ಬಿಂಬಿತವಾಗಿದ್ದು ‘ಕಲಿ’ ಚಿತ್ರ. ಆಗಿನ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರು ‘ಕಲಿ’ ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡುವ ಚಿತ್ರತಂಡಕ್ಕೆ ಶುಭಾಶಯಗಳನ್ನು ಕೋರಿದ್ದರು. ಆದರೆ ಈ ಚಿತ್ರ ಕೆಲ ಕಾರಣಗಳಿಂದ ನಿಂತುಕೊಂಡ ನಂತರ ಮತ್ತೆ ‘ದಿ ವಿಲನ್’ ನಲ್ಲಿ ಶಿವಣ್ಣ ಮತ್ತು ಸುದೀಪ್ ರನ್ನು ಒಂದಾಗಿಸಿದ್ದರು ನಿರ್ದೇಶಕ ಪ್ರೇಮ್. ಇದೀಗ ಮತ್ತೆ ‘ಕಲಿ’ಗೆ ಜೀವ ಬಂದಿದ್ದು, ನಿರ್ಮಾಪಕ ಆರ್. ಮನೋಹರ್ ಅವರೇ ಈ ಚಿತ್ರವನ್ನು ಮುಂದುವರೆಸಿ, ಮತ್ತೊಮ್ಮೆ ಈ ಜೋಡಿಗಳನ್ನು ಒಂದಾಗಿಸಲಿದ್ದಾರೆ.

‘ಕಲಿ’ ಚಿತ್ರದ ಬಗ್ಗೆ

“‘ಕಲಿ’ ಚಿತ್ರವು ಹೆಚ್ಚು ಗ್ರಾಫಿಕ್ಸ್ ತಂತ್ರಜ್ಞಾನವನ್ನು ಒಳಗೊಂಡು ಸಿದ್ದಗೊಳ್ಳಬೇಕಿರುವ ಸಿನಿಮಾ. ಈ ಚಿತ್ರವನ್ನು ತೆಲುಗಿನ ‘ಬಾಹುಬಲಿ’ ಗೆ ಸರಿ ಸಮವಾಗಿ ಮಾಡಬೇಕಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ಈ ಚಿತ್ರವನ್ನು ಮಾಡುತ್ತೀನಿ. ಈ ಚಿತ್ರಕ್ಕೂ ಪ್ರೇಮ್ ಅವರೇ ನಿರ್ದೇಶನ ಮಾಡಲಿದ್ದಾರೆ. ನಾಲ್ಕು ಭಾಷೆಗಳಲ್ಲಿ ಈ ಚಿತ್ರ ಮೂಡಿ ಬರಲಿದ್ದು, ಇದೊಂದು ಐತಿಹಾಸಿಕ ಚಿತ್ರವಾಗಲಿದೆ. ಈ ಚಿತ್ರದಲ್ಲೂ ತಾಯಿಯ ಮಮತೆ ಇರಲಿದೆ” ಎಂದು ನಿರ್ಮಾಪಕ ಆರ್ ಮನೋಹರ್ ಅವರು ಹೇಳಿದ್ದಾರೆ.

ಬಹುನಿರೀಕ್ಷಿತ ಸಿನಿಮಾ ‘ದಿ ವಿಲನ್’

‘ದಿ ವಿಲನ್’ ಚಿತ್ರವು ಬಹು ನಿರೀಕ್ಷೆಯನ್ನು ಮೂಡಿಸಿದ್ದು, ಚಿತ್ರದ ಹಾಡುಗಳು ಕೇಳುಗರಿಂದ ಮೆಚ್ಚುಗೆಗೆ ಪಾತ್ರವಾಗಿವೆ. ಎಲ್ಲವೂ ಅಂದುಕೊಂಡಂತಾದರೆ ಇದೇ ವರಮಹಾಲಕ್ಷ್ಮಿ ಹಬ್ಬದಂದು ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ.

Tags