ಸುದ್ದಿಗಳು

ಚಿತ್ರರಂಗದಲ್ಲಿ 15 ವರ್ಷ ಪೂರ್ಣಗೊಳಿಸಿದ ರೋರಿಂಗ್ ಸ್ಟಾರ್ ಶ್ರೀ ಮುರುಳಿ

‘ಚಂದ್ರಚಕೋರಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ರೋರಿಂಗ್ ಸ್ಟಾರ್ ಶ್ರೀ ಮುರುಳಿಯವರು ಮೊದಲ ಸಿನಿಮಾದಲ್ಲಿಯೇ ಯಶಸ್ವಿ ನಾಯಕ ಎಂದೆನಿಸಿಕೊಂಡರು.

ಬೆಂಗಳೂರು, ಆ.17 :ನಟಿಸಿದ ಮೊದಲ ಚಿತ್ರದಿಂದಲೇ ರೋರಿಂಗ್ ಸ್ಟಾರ್ ಮುರುಳಿ ಜನ ಮನ ಗೆದ್ದವರು. ಪಾರ್ವತಮ್ಮ ರಾಜ್ ಕುಮಾರ್ ಅವರ ಅಣ್ಣನ ಮಗನಾಗಿರುವ ಇವರು ಈಗಾಗಲೇ ಅನೇಕ ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸಿ ಇಂದಿಗೂ ಕೂಡ ಆದ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಸಿನಿ ಜೀವನಕ್ಕೆ 15 ವರ್ಷ

ಹೌದು, ರೋರಿಂಗ್ ಸ್ಟಾರ್ ಶ್ರೀ ಮುರುಳಿ ಸಿನಿಮಾ ಜೀವನಕ್ಕೆ ಇದೀಗ 15 ವರ್ಷ. 2003 ರಲ್ಲಿ ‘ಚಂದ್ರಚಕೋರಿ’ ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಕೊಟ್ಟ ಈ ನಟ ಮೊದಲ ಚಿತ್ರದಲ್ಲಿಯೇ  ‘ಈ ಹುಡುಗ ಮುಂದೆಯೂ ಒಳ್ಳೆ ಸಿನಿಮಾ ಮಾಡಬಹುದು’ ಎಂದೆನಿಸಿಕೊಂಡರು ಮತ್ತು ಸಿನಿಮಾ ಹಿನ್ನಲೆ ಇರುವ ಕುಟುಂಬದಿಂದ ಬಂದವರಾಗಿದ್ದರೂ ಸಹ ಕಲೆ ಅನ್ನುವುದು ಶ್ರದ್ದೆ ಇರುವವರಿಗೆ ಒಲಿಯುತ್ತದೆ ಅನ್ನುವುದನ್ನು ತೋರಿಸಿಕೊಟ್ಟರು.

ಗೆಲುವಿನ ಹಾದಿ

ಇನ್ನು ಇವರ 15 ವರ್ಷದ ಸಿನಿ ಪಯಣವನ್ನು, ವಿದ್ಯಾ ಶ್ರೀ ಮುರುಳಿಯವರು ತಮ್ಮ ಫೇಸ್ ಬುಕ್ ನಲ್ಲಿ ಹಾಕಿಕೊಂಡಿದ್ದಾರೆ. ತಮ್ಮದೇ ಆದ ಭಾಷೆಯಲ್ಲಿ ಪತಿಯ ಸಿನಿ ಪಯಣವನ್ನ ಬಿಚ್ಚಿಟ್ಟಿದ್ದಾರೆ. “ತಮ್ಮ ಪತಿ ಚಿತ್ರರಂಗಕ್ಕೆ ಕಾಲಿಟ್ಟು 15 ವರ್ಷ ಆಗಿದೆ. 15 ವರ್ಷದ ಹಿಂದೆ ಅವರಿಗಿದ್ದ ಉತ್ಸಾಹ, ಭಯ, ಹೆದರಿಕೆ ತಮಗಿನ್ನೂ ಚೆನ್ನಾಗಿ ನೆನಪಿದೆ. ಅವರ ಸೋಲು ಗೆಲುವಿನ ಹಾದಿಯಲ್ಲಿ ನೀವೆಲ್ಲರೂ ಜೊತೆಗಿದ್ದೀರಿ. ಅವರು ಒಳ್ಳೆಯ ಕೆಲಸ ಮಾಡಿದಾಗ ಬೆನ್ನು ತಟ್ಟಿದ್ದೀರಿ. ಅದೇ ಕಾರಣದಿಂದಾಗಿ ಅವರು ಸ್ವಲ್ಪ ಟೈಂ ತೆಗೆದುಕೊಂಡು ಒಳ್ಳೆಯ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನ ತಾನು ಪ್ರತಿದಿನ ನೋಡುವುದರಿಂದಲೇ ನಿಮ್ಮಲ್ಲಿ ಹೇಳುತ್ತಿದ್ದೇನೆ. ನೀವು ಥಿಯೇಟರ್ ಒಳಗೆ ಹೋದ್ರೆ, ನಿಮ್ಮ ಎಲ್ಲಾ ತೆಲೆನೋವುಗಳನ್ನ ಮರೆಸಿ ಮನರಂಜನೆ ಕೊಡಬೇಕು ಅನ್ನುವುದೇ ಅವರ ಉದ್ದೇಶ. ತಮ್ಮ ಮದುವೆ ಮುರುಳಿ ಜೊತೆ ಆಗಿದ್ದರೆ, ಅವರು ಮದುವೆ ಸಿನಿಮಾ ಜೊತೆಗೆ ಆಗಿದೆ. ಹೀಗಾಗಿ ದಯವಿಟ್ಟು ಅವರು ತಪ್ಪು ಮಾಡಿದಾಗ ತಿದ್ದಿ, ನಿಮ್ಮ ಪ್ರೀತಿಯನ್ನ ಅವರಿಗೆ ಸದಾ ನೀಡುತ್ತಿರಿ. ನೀವೆಲ್ಲಾ ಅವರ ಮೇಲೆ ಇಟ್ಟಿರುವ ಪ್ರೀತಿಗೆ ತಾನು ಎಂದೆಂದಿಗೂ ಆಭಾರಿ” ಅಂತ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

ಮುಂದಿನ ಚಿತ್ರ ‘ಭರಾಟೆ’

ಇನ್ನು ಮುರುಳಿ ಅನೇಕ ಸಿನಿಮಾಗಳನ್ನ ಕನ್ನಡಿಗರಿಗೆ ನೀಡಿದ್ದಾರೆ. ‘ಕಂಠಿ’, ‘ಯಶವಂತ್’, ‘ಸಿದ್ದು’, ‘ಶಂಭು’, ‘ಪ್ರೀತಿಗಾಗಿ’, ‘ಶಿವಮಣಿ’, ‘ಉಗ್ರಂ’, ‘ರಥಾವರ’, ‘ಮಫ್ತಿ’, ಹೀಗೆ ಒಂದಾದ ಮೇಲೊಂದರಂತೆ ಯಶಸ್ವಿ ಸಿನಿಮಾಗಳನ್ನು ಕೊಡುತ್ತಿರುವ ಇವರು, ಸದ್ಯ ‘ಭರಾಟೆ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರ ಕೂಡ ಸಾಕಷ್ಟು ನಿರೀಕ್ಷೆಯನ್ನು ಹುಟ್ಟಿಸಿದೆ. ಇವರ ಈ ಪಯಣ ಹೀಗೆ ಮುಂದುವರೆಯಲಿ. ಇನ್ನು ಸಾವಿರಾರು ಸಿನಿಮಾಗಳ ಸರದಾರರಾಗಲಿ ಅನ್ನುವುದು ನಮ್ಮ ಆಶಯ.

Tags

Related Articles