ಸುದ್ದಿಗಳು

ಟಗರು ಜೊತೆಗೆ, ಯಶಸ್ವಿ 25, 50 ದಿನಗಳನ್ನು ಪೂರೈಸಿದ ಚಿತ್ರಗಳು

ಇಂದು ಟಗರು ಚಿತ್ರವು ಯಶಸ್ವಿ 25 ನೇ ವಾರವನ್ನು ಪೂರೈಸುತ್ತಿದೆ. ಅದರೊಂದಿಗೆ ಹೊಸಬರ ಚಿತ್ರಗಳಾದ ‘ಟ್ರಂಕ್’ , ದಯಾಳ್ ಪದ್ಮನಾಭನ್ ಅವರ ‘ಆ ಕರಾಳ ರಾತ್ರಿ’ ಮತ್ತು ಶ್ರೀನಿ ಅವರ ‘ಕೆಲವು ದಿನಗಳ ನಂತರ’ ಚಿತ್ರಗಳು ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದ್ದು, ಯಶಸ್ವಿಯಾಗಿ ಪ್ರದರ್ಶಿತಗೊಳ್ಳುತ್ತಿವೆ.

ಬೆಂಗಳೂರು, ಆ. 10: ಸದ್ಯ ಗಾಂಧಿನಗರದಲ್ಲಿ ಬಿಡುಗಡೆಯಾದ ಚಿತ್ರಗಳು ಒಂದು ವಾರ, ಎರಡು ವಾರ ನಿಂತುಕೊಳ್ಳುವುದೇ ಕಷ್ಟವಾಗಿರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಬಿಡುಗಡೆಯಾದಾಗಿನಿಂದ ಭರ್ಜರಿ ಕಲೆಕ್ಷನ್, ಜೊತೆಗೆ ಯಶಸ್ವಿ ನೂರಾ ಎಪ್ಪತೈದು ದಿನಗಳನ್ನು ಪೂರೈಸಿದೆ ‘ಟಗರು’ ಚಿತ್ರ. ಈ ವರ್ಷ ಬಿಡುಗಡೆಯಾಗಿ ಯಶಸ್ವಿಯಾಗಿರುವ ಚಿತ್ರಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿ ನಿಂತುಕೊಂಡಿದೆ. ಅದರೊಂದಿಗೆ ಹೊಸಬರ ಚಿತ್ರಗಳಾದ ‘ಟ್ರಂಕ್’ , ದಯಾಳ್ ಪದ್ಮನಾಭನ್ ಅವರ ‘ಆ ಕರಾಳ ರಾತ್ರಿ’ ಮತ್ತು ಶ್ರೀನಿ ಅವರ ‘ಕೆಲವು ದಿನಗಳ ನಂತರ’ ಚಿತ್ರಗಳು ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದ್ದು, ಯಶಸ್ವಿಯಾಗಿ ಪ್ರದರ್ಶಿತಗೊಳ್ಳುತ್ತಿವೆ.

ಕೆಲವು ದಿನಗಳ ನಂತರ: ಜೂನ್ 22 ರಂದು ತೆರೆಕಂಡ ಈ ಚಿತ್ರವು ಇಂದಿನ ಯುವ ಜನತೆಯ ಸಮಸ್ಯೆಗಳ ಕುರಿತಂತೆ ಪ್ರಸ್ತುತ ಪಡಿಸುತ್ತದೆ. ಈ ಚಿತ್ರವು ಇಂದು ಯಶಸ್ವಿ 50 ದಿನಗಳನ್ನು ಪೂರೈಸಿದೆ. ಚಿತ್ರಮಂದಿರದ ಅಭಾವಗಳ ನಡುವೆಯೂ ಈ ಚಿತ್ರವು 50 ದಿನಗಳನ್ನು ಪೂರೈಸಿರುವುದು ಚಂದನವನಕ್ಕೆ ಸ್ವಲ್ಪ ಮಟ್ಟಿಗೆ ರಿಲೀಫ್ ತಂದಿದೆ.

ಇದೇ ಮೊದಲ ಬಾರಿಗೆ ಶ್ರೀನಿ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ಶುಭಾಪೂಂಜಾ, ‘ಮಜಾ ಟಾಕೀಸ್’ ಪವನ್, ‘ಕಾಮಿಡಿ ಕಿಲಾಡಿಗಳು ಖ್ಯಾತಿಯ ‘ ಲೋಕೇಶ್, ದ್ರವ್ಯಶೆಟ್ಟಿ, ಜಗದೀಶ್, ರಮ್ಯ ವರ್ಷಿಣಿ , ಸೋನು ಪಾಟೀಲ್ ಹಾಗೂ ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದ ನಿರ್ದೇಶಕರಾದ ಶರಣಯ್ಯ ಅಭಿನಯಿಸಿದ್ದಾರೆ. ಮುತ್ತುರಾಜ್, ವಸಂತ್ ಕುಮಾರ್ ಮತ್ತು ಚಂದ್ರಕುಮಾರ್ ಅವರುಗಳು ಜಂಟಿಯಾಗಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.

ಟ್ರಂಕ್ : ರಿಶಿಕಾ ಶರ್ಮ ನಿರ್ದೇಶನದ ಈ ಚಿತ್ರವು ಜುಲೈ 13 ರಂದು ಬಿಡುಗಡೆಯಾಗಿತ್ತು. ಚಿತ್ರವು ಯಶಸ್ವಿ ಪ್ರದರ್ಶನ ಕಾಣುತ್ತಿದ್ದರೂ ಸಹ ಚಿತ್ರಮಂದಿರಗಳ ಸಮಸ್ಯೆಗಳನ್ನು ಈ ಚಿತ್ರವೂ ಸಹ ಎದುರಿಸಿತ್ತು. ಆದರೆ ನಮ್ಮ ಪ್ರೇಕ್ಷಕರು ಈ ಚಿತ್ರವನ್ನು ಕೈ ಬಿಡಲಿಲ್ಲ. ಹಲವಾರು ಸಮಸ್ಯೆಗಳ ನಡುವೆಯೂ ಈ ಚಿತ್ರ ಯಶಸ್ವಿ 25 ದಿನಗಳನ್ನು ಪೂರೈಸಿ, 50 ನೇ ದಿನಗಳತ್ತ ಪಯಣ ಬೆಳೆಸಿದೆ. ಚಿತ್ರದಲ್ಲಿ ನಿಹಾಲ್ ರಜಪೂತ್, ವೈಶಾಲಿ ದೀಪಕ್ ಸೇರಿದಂತೆ ಇತರರು ಅಭಿನಯಿಸಿದ್ದಾರೆ.

ಆ ಕರಾಳ ರಾತ್ರಿ: ದಯಾಳ್ ಪದ್ಮನಾಭನ್ ನಿರ್ದೇಶನದ ಈ ಚಿತ್ರವೂ ಸಹ ಜುಲೈ 13 ರಂದು ತೆರೆ ಕಂಡಿತ್ತು. ಈ ಚಿತ್ರವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಚಿತ್ರದಲ್ಲಿ ಜೆ.ಕೆ, ಅನುಪಮಾ ಗೌಡ, ನವೀನ ಕೃಷ್ಣ ಸೇರಿದಂತೆ ಹಲವಾರು ಪ್ರತಿಭೆಗಳು ಚಿತ್ರದಲ್ಲಿ ಅಭಿನಯಿಸಿದ್ದರು. ಈ ಚಿತ್ರಕ್ಕೂ ಚಿತ್ರಮಂದಿರಗಳ ಸಮಸ್ಯೆ ಎದುರಾಗಿತ್ತು.

ಹೊಸ ರೀತಿಯ ಪ್ರಯೋಗ, ಹೊಸತನದ ಕಥನ ಶೈಲಿಗಳ ಚಿತ್ರಗಳನ್ನು ಕನ್ನಡದ ಪ್ರೇಕ್ಷಕರು ಯಾವ ಕಾರಣಕ್ಕೂ ಕೈ ಬಿಡುವುದಿಲ್ಲವೆಂಬ ವಿಚಾರ ಈ ಚಿತ್ರಗಳ ಮೂಲಕ ಮತ್ತೊಮ್ಮೆ ಸಾಬೀತಾಗಿದೆ. ಆದರೂ ಎಷ್ಟೋ ಹೊಸಬರ ಚಿತ್ರಗಳು ಚಿತ್ರಮಂದಿರಗಳ ಸಮಸ್ಯೆಯಿಂದ ಬಳಲುತ್ತಿವೆ. ಕೆಲವೊಂದು ಚಿತ್ರಗಳು ತೆರೆ ಕಂಡ ಮರುವಾರವೇ ಚಿತ್ರಮಂದಿರಗಳಿಂದ ಹೊರ ಹೋಗುತ್ತಿವೆ. ಇದೀಗ ಯಶಸ್ವಿ ಓಟವನ್ನು ಮುಂದುವರೆಸಿರುವ ಈ ಮೂರು ಚಿತ್ರಗಳಿಗೂ ಚಿತ್ರಮಂದಿರಗಳ ಸಮಸ್ಯೆಯಾಗಿತ್ತು. ಆದರೂ ಸಹ ಚಿತ್ರತಂಡದವರು ದೃತಿಗೆಡದೇ ತಮ್ಮ ಚಿತ್ರಗಳನ್ನು ಪ್ರದರ್ಶನ ಮಾಡಿದರು. ಅವರೆಲ್ಲರ ಶ್ರಮದಿಂದ ಈ ಚಿತ್ರಗಳು ಇಪ್ಪತ್ತೈದು ಮತ್ತು ಐವತ್ತು ದಿನಗಳನ್ನು ಪೂರೈಸಿವೆ.

ಒಂದಂತೂ ನಿಜಾ, ಒಳ್ಳೆಯ ಕತೆಗಳಿರುವ , ಸದಭಿರುಚಿಯ ಚಿತ್ರಗಳನ್ನು ನಮ್ಮ ಪ್ರೇಕ್ಷಕರು ಯಾವತ್ತೂ ಬಿಡುವುದಿಲ್ಲ ಎಂಬುವುದಕ್ಕೆ ಈ ಚಿತ್ರಗಳೇ ನಿರ್ದೇಶನಗಳಾಗಿವೆ. ಈ ಚಿತ್ರತಂಡಗಳಿಂದ ಮತ್ತೊಂದಿಷ್ಟು ಚಿತ್ರಗಳು ಬರಲಿ ಎಂಬುದು ನಮ್ಮ ಹಾರೈಕೆ.

Tags

Related Articles